Min read

ಕ್ರೈಮ್‌ ರಿಪೋರ್ಟರ್ ಕಂಡಂತೆ ಐಪಿಎಸ್ ಅಧಿಕಾರಿ ಎನ್‌.ಎಸ್‌. ಮೇಘರಿಕ್

Complete information about the career of IPS officer N S Megharik mrq

Synopsis

ರಾಜಸ್ಥಾನ ಮೂಲದ ಎನ್‌.ಎಸ್‌. ಮೇಘರಿಕ್ ಅವರು 1987ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿ ಮೂರೂವರೆ ದಶಕಗಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆ ಎಲ್ಲರಿಗೂ ಮಾದರಿಯಾಗಿತ್ತು. ಅವರ ಸೇವಾವಧಿಯ ಕೆಲ ನೆನಪುಗಳು ಇಲ್ಲಿವೆ.

- ಗಿರೀಶ್ ಮಾದೇನಹಳ್ಳಿ

ರಾಜಸ್ಥಾನ ಮೂಲದ ಎನ್‌.ಎಸ್‌. ಮೇಘರಿಕ್ ಅ‍ವರು 1987ನೇ ಸಾಲಿನ ಐಪಿಎಸ್ ಅಧಿಕಾರಿ. ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಡಿಜಿಪಿ, ಕಾರಾಗೃಹ ಇಲಾಖೆಯ ಮುಖ್ಯಸ್ಥ, ಬೆಂಗಳೂರು ನಗರ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಎಡಿಜಿಪಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಹೀಗೆ ಮೂರೂವರೆ ದಶಕಗಳು ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಮೇಘರಿಕ್ ಅವರು ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆ ಎಂಬ ಗುಣಗಳನ್ನು ಸಾರ್ವಜನಿಕವಾಗಿ ಕಾಣುವ ಆಭರಣದಂತೆ ಧರಿಸಿಕೊಂಡು ಓಡಾಡಲಿಲ್ಲ. ಅವುಗಳು ಅವರ ನಡೆ-ನುಡಿಗಳಲ್ಲಿ ಶೋಭಿಸಿದವು. ತಾವು ನಿರ್ವಹಿಸಿದ ಪ್ರತಿ ಹುದ್ದೆಯ ಘನತೆ ಹೆಚ್ಚಿಸಿದರು. ಕಾನೂನು ಮೀರದ ಅವರು, ಎಂದಿಗೂ ಸ್ವಹಿತಾಸಕ್ತಿಗೆ ರಾಜಿ ಆಗಲಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿ ನೋವಿಗೂ ಮಿಡಿದರು. ಆಡಳಿತದಲ್ಲೂ ಛಾಪು ಮೂಡಿಸಿದರು. ಸಿಐಡಿ, ಸಿಬಿಐ, ಎಸಿಬಿಯಂತಹ ತನಿಖಾ ಸಂಸ್ಥೆಗಳಲ್ಲಿ ಸಹ ಅವರ ಹೆಜ್ಜೆ ಗುರುತುಗಳಿವೆ. ರಾಜ್ಯ ಪೊಲೀಸ್ ಇಲಾಖೆಯ ಕಂಡ ಅಪರೂಪ ಅಧಿಕಾರಿಯ ಸೇವಾವಧಿಯ ಕೆಲ ನೆನಪುಗಳ ಹೀಗಿವೆ.

ಡಿಸಿಪಿ ಅವಮಾನಿಸಿದ್ರು, ಆಯುಕ್ತರಾಗಿ ಗೌರವ ಪಡೆದ್ರು
ಎರಡೂವರೆ ದಶಕಗಳ ಹಿಂದೆ ಪೂರ್ವ ವಿಭಾಗದ ಡಿಸಿಪಿ ಆಗಿದ್ದಾಗ ಮೇಘರಿಕ್‌ರವರು ಸಕಾರಣವಿಲ್ಲದೆ ಹಿರಿಯ ಅಧಿಕಾರಿಯೊಬ್ಬರ ದುರಾಗ್ರಹಕ್ಕೆ ತುತ್ತಾದರು. ಡಿಸಿಪಿಯಾದ ಎರಡ್ಮೂರು ದಿನಗಳಲ್ಲೇ ಅಸಮಾಧಾನ ಮೂಡಿತು. ಒಂದು ದಿನ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಅಹಂ ತೋರಿಸಿದ ಹಿರಿಯ ಅಧಿಕಾರಿ, ಮರುದಿನವೇ ಮೇಘರಿಕ್‌ರವರಿಗೆ ವರ್ಗಾವಣೆ ಆದೇಶ ತಂದು ಕೈಗಿತ್ತರು. ಅಂದು ತನ್ನ ಜಾತಿಯ ಆಡಳಿತ ಪಕ್ಷದ ಪ್ರಬಲ ರಾಜಕಾರಣಿಯ ಆಶೀರ್ವಾದ ಕಾರಣಕ್ಕೆ ಇಲಾಖೆಯಲ್ಲಿ ಅಧಿಕಾರಿ ಪವರ್‌ಫುಲ್ ಆಗಿದ್ದರು. ಹೀಗೆ ಬೇಸರದಿಂದ ಡಿಸಿಪಿ ಹುದ್ದೆ ತೊರೆದಿದ್ದ ಮೇಘರಿಕ್ ಅವರಿಗೆ ದಶಕಗಳ ಬಳಿಕ ಕಮಿಷನರ್ ಪದವಿ ಒಲಿಯಿತು. ಅರ್ಹತೆಗೆ ಎಂದಿಗೂ ಗೌರವ ಪುರಸ್ಕಾರ ಇರುತ್ತದೆ ಎಂದು ತೋರಿಸಿದರು. ಕಮೀಷನರೇಟ್‌ ಆಡಳಿತಕ್ಕೆ ಹೊಸತನ ತಂದು ಚರಿತ್ರೆ ಬರೆದರು.

ತಿಂಡಿ ಊಟ ಬಿಲ್ 1200 ರು. ಹಣ ಕೊಟ್ಟರು
2016ರ ಅಕ್ಟೋಬರ್‌ 16ರಂದು ಶಿವಾಜಿನಗರದ ಸ್ಥಳೀಯ ಆರ್‌ಆರ್‌ಎಸ್‌ ನಾಯಕ ರುದ್ರೇಶ್ ಕೊಲೆಯಾಗಿತ್ತು. ಆ ದಿನವಿಡೀ ಕಮರ್ಷಿಯಲ್ ಸ್ಟ್ರೀಟ್‌ ಠಾಣೆಯಲ್ಲೇ ಮೊಕ್ಕಾಂ ಹೂಡಿ ಹಂತಕರ ಪತ್ತೆ ಕಾರ್ಯಾಚರಣೆ ಹಾಗೂ ಬಂದೋಬಸ್ತ್‌ ಮೇಲುಸ್ತುವಾರಿಯನ್ನು ಖುದ್ದು ಆಯುಕ್ತ ಮೇಘರಿಕ್ ನಡೆಸಿದ್ದರು. ಠಾಣೆಯಲ್ಲೇ ಅವರೊಂದಿಗೆ ಹೆಚ್ಚುವರಿ ಆಯುಕ್ತರಾದ ಚರಣ್ ರೆಡ್ಡಿ ಹಾಗೂ ಹಿತೇಂದ್ರ ಕೂಡ ಇದ್ದರು. ಮಧ್ಯಾಹ್ನ ಊಟ, ತಿಂಡಿ ಹಾಗೂ ಕಾಫಿ ತರಿಸಿಕೊಂಡು ಅಲ್ಲೇ ಅಧಿಕಾರಿಗಳ ಜತೆ ಆಯುಕ್ತರು ಸೇವಿಸಿದ್ದರು. ನನಗೆ ರಾತ್ರಿ 10.30ರಲ್ಲಿ ಆಯುಕ್ತರು ಠಾಣೆಯಲ್ಲೇ ಇರುವ ವಿಚಾರ ಗೊತ್ತಾಗಿ ಕೊಲೆ ಪ್ರಕರಣದ ಆಪ್‌ಡೇಟ್ ಕೇಳಲು ಹೋಗಿದ್ದೆ. ಆಗಷ್ಟೇ ಅವರು ಸಹ ಠಾಣೆಯಿಂದ ಹೊರಡಲು ಅನುವಾಗಿದ್ದರು.

ತಮಗೆ ಬೆಳಗ್ಗೆಯಿಂದ ರಾತ್ರಿವರೆಗೆ ಊಟೋಪಚಾರ ನೋಡಿಕೊಂಡ ಕಾನ್‌ಸ್ಟೇಬಲ್‌ನನ್ನು ಕರೆದ ಆಯುಕ್ತರು, ಬಿಲ್ ಎಷ್ಟಾಯಿತು ಎಂದರು. ಅದಕ್ಕೆ ಆ ಕಾನ್‌ಸ್ಟೇಬಲ್‌, ಬೇಡ ಸರ್ ಪರವಾಗಿಲ್ಲ ಎಂದು ಗೋಣಾಡಿಸಿದ. ಅಲ್ರೀ ದುಡ್ಡು ಕೊಡದೆ ಊಟ ಕಾಫಿ-ತಿಂಡಿ ಕೊಡೋದಕ್ಕೆ ಅದೇನು ನಿಮ್ಮ ಮನೇನಾ ಅಂತ ದಬಾಯಿಸಿದರು. ತಾವೇ ಊಟೋಪಚಾರದ ಖರ್ಚು ಲೆಕ್ಕ ಹಾಕಿ 1200 ರುಪಾಯಿ ಕೊಟ್ಟು ಠಾಣೆಯಿಂದ ಹೊರಟರು. ಆಗ ಬಾಗಿಲಿನಲ್ಲಿ ನನ್ನನ್ನು ಕಂಡು ಏನ್ರೀ ಇಷ್ಟೊತ್ತಿನಲ್ಲಿ ಹುಡುಕಿಕೊಂಡು ಬಂದಿದ್ದೀರಿ. ಏನೂ ಸ್ಕೂಪ್ ಇಲ್ಲ ಬಿಡಿ ಅಂತ ತಮಾಷೆ ಮಾಡಿ ಕಾರು ಹತ್ತಿದರು.

ವಾಸ್ತು ಸರಿಯಿಲ್ಲವೆಂದಿದ್ದ ಚೇಂಬರ್‌ನಲ್ಲೇ ಕುಳಿತರು
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿದೆಯಲ್ಲ ಆರಂಭದಲ್ಲಿ ವಾಸ್ತು ದೋಷಕ್ಕೆ ತುತ್ತಾಗಿತ್ತು. ಆ ಕಟ್ಟಡವು ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಕಮಿಷನರ್ ಆಗಿ ಬಂದವರು ಮಾತ್ರ ಪುರಾತನ ಕಾಲದ ಹಳೇ ಚೇಂಬರ್ ಬಿಡಲು ಹಿಂದೇಟು ಹಾಕುತ್ತಿದ್ದ ಬಗ್ಗೆ ಚರ್ಚೆ ನಡೆದಿತ್ತು. ಒಂದು ದಿನ ಆಯುಕ್ತರ ಕಚೇರಿಗೆ ಬೀಟ್‌ ಹೋದವನು ಮೇಘರಿಕ್ ಅವರನ್ನು ಭೇಟಿಯಾದೆ. ಇಳಿ ಮಧ್ಯಾಹ್ನವೇ ಜೋರು ಮಳೆ. ಆಯುಕ್ತರ ಚೇಂಬರ್‌ ಸೂರಿನಲ್ಲಿ ಹನಿಗಳು ತೊಟ್ಟಿಕ್ಕುತ್ತಿದ್ದವು. ಮಳೆ ಹನಿ ಬಿದ್ದ ಜಾಗದಲ್ಲಿ ಬಕೆಟ್‌ ಇಡುತ್ತಿದ್ದ ತಮ್ಮ ಸಹಾಯಕನನ್ನು ಮೇಘರಿಕ್ ನೋಡಿದರು. ಹೊಸ ಬಿಲ್ಡಿಂಗ್ ಶಿಫ್ಟ್ ಆಗ್ತೀನ್ರೀ ಅಂದ್ರು. ಸರ್‌ ಅಲ್ಲಿ ವಾಸ್ತು ದೋಷ ಅಂತಾರೆ ಅಂದೇ. ಏನ್ರೀ ವಾಸ್ತು ದೋಷ ಅಂದ್ರೇ, ದೋಷ ನಾವು ಮಾಡುವ ಕೆಲಸದಲ್ಲಿರಬಾರದಷ್ಟೇ ಎಂದು ನಗಾಡಿದರು. ಇದಾದ ಮೂರೇ ದಿನದಲ್ಲೇ ಹೊಸ ಚೇಂಬರ್‌ನಲ್ಲಿ ಮೇಘರಿಕ್ ಠಳಾಯಿಸಿದರು. ಒಂದೂವರೆ ವರ್ಷ ಉತ್ತಮ ಆಡಳಿತ ನೀಡಿದರು. ವಾಸ್ತು ದೋಷಕ್ಕೆ ಹೆದರಿದವರು ವರ್ಷಕ್ಕೆ ವರ್ಗವಾಗಿದ್ದು ವಿಪರ್ಯಾಸ.

ಅಮಾವಾಸೆ ದಿನ ಮನೆ ಖಾಲಿ ಮಾಡಿದ್ರು
ಅಮಾವಾಸ್ಯೆ ಹಿಂದಿನ ದಿನ ಕಮಿಷನರ್ ಹುದ್ದೆಯಿಂದ ಮೇಘರಿಕ್ ಅವರನ್ನು ವರ್ಗಾವಣೆ ಮಾಡಲಾಯಿತು. ತಮ್ಮ ಕಚೇರಿ ಸಿಬ್ಬಂದಿಯನ್ನು ಕರೆದು ನಾಳೆ ತಮ್ಮ ಅಧಿಕೃತ ಸರ್ಕಾರಿ ನಿವಾಸ ಖಾಲಿ ಮಾಡಬೇಕು ಎಂದು ಅವರು ಸೂಚಿಸಿದರು. ಈ ಮಾತಿಗೆ ಸಿಬ್ಬಂದಿ, ಸರ್ ನಾಳೆ ಮಂಗಳವಾರ ಅಮಾವಾಸ್ಯೆ ಬೇರೆ ಇದೆ. ನಾಡಿದ್ದು ಮಾಡೋಣ ಎಂದರಂತೆ. ಯಾವುದ್ರೀ ಅಮಾವಾಸ್ಯೆ. ಅದೂ ತಿಂಗಳಲ್ಲೊಂದು ದಿನವಷ್ಟೇ ಬಿಡಿ ಎಂದು ನಕ್ಕಿದರಂತೆ. ಮರುದಿನವೇ ಮನೆ ಖಾಲಿ ಮಾಡಿದರು.

ಸೈಟ್‌ ಮಾರಿದ್ರು, ನಿವೃತ್ತಿ ಹಣದಲ್ಲಿ ಫ್ಲ್ಯಾಟ್ ಖರೀದಿಸಿದ್ರು
ಒಂದು ದಿನ ಇಳಿ ಸಂಜೆ ಆಯುಕ್ತರಾಗಿದ್ದಾಗ ಮೇಘರಿಕ್ ರವರ ಜೊತೆ ಅನೌಪಾಚಾರಿಕ ಮಾತುಕತೆ ನಡೆದಿತ್ತು. ನಿವೃತ್ತಿ ಬಳಿಕ ಬೆಂಗಳೂರಿನಲ್ಲೇ ಉಳಿಯುತ್ತೇನೆ. ಅದಕ್ಕೆ ಒಂದು ಫ್ಲ್ಯಾಟ್‌ ನೋಡ್ತಾ ಇದ್ದೀನಿ ಅಂದ್ರು. ಸರ್ ಯಾರಾದರೂ ಚಾರ್ಲಿ (ಇನ್ಸ್‌ಪೆಕ್ಟರ್‌)ರವರಿಗೆ ಹೇಳಿ ಒಳ್ಳೆಯ ಫ್ಲ್ಯಾಟ್‌ ಕೊಡಿಸುತ್ತಾರೆ ಅಂದೆ. ನಾನು ಹೇಳಿದರೆ ಬಿಲ್ಡರ್ ಜತೆ ಕಚೇರಿಗೆ ಬಂದು ಫ್ಲ್ಯಾಟ್‌ ಖರೀದಿ ವ್ಯವಹಾರ ಮುಗಿಸಿ ಇನ್ಸ್‌ಪೆಕ್ಟರ್ ಹೋಗುತ್ತಾರೆ. ಆದರೆ ನಾನು ದುಡ್ಡು ಕೊಟ್ಟು ಫ್ಲ್ಯಾಟ್ ಖರೀದಿಸಿದರೂ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಡೀಲ್ ಮಾಡಿ ಕೊಡಿಸಿದ ಅಂತಾರೆ. ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳ ಸಹಾಯ ಪಡೆಯೋದು ನನಗೆ ಸರಿ ಕಾಣಲ್ಲ ಕಣ್ರೀ ಅಂದ್ರು. ತರುವಾಯ ಸಿಐಡಿ ಡಿಜಿಪಿಯಾಗಿ ನಿವೃತ್ತರಾದ ಬಳಿಕ ಬಂದ ಹಣದಲ್ಲಿ ಯಲಹಂಕ ಸಮೀಪ ಫ್ಲ್ಯಾಟ್ ಖರೀದಿಸಿದರು. ಮೂರೂವರೆ ದಶಕ ಐಪಿಎಸ್ ಅಧಿಕಾರಿಯಾಗಿ ಎಸ್ಪಿಯಿಂದ ಡಿಜಿಪಿ ಹುದ್ದೆವರೆಗೆ ಸೇವೆ ಸಲ್ಲಿಸಿದರೂ ಒಂದು ಮನೆ ಮಾಡಿಕೊಳ್ಳದ ಅಪ್ಪಟ ಪ್ರಾಮಾಣಿಕ. ಸರ್ಕಾರ ಮಂಜೂರು ಮಾಡಿದ್ದ ಬಿಡಿಎ ನಿವೇಶನವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಾಟ ಮಾಡಿದ್ದರು. ನೆನಪಿರಲಿ ಈಗ ಕೆಲ ಸಾಮಾನ್ಯ ಕಾನ್‌ಸ್ಟೇಬಲ್‌ಗಳ ಮನೆಗಳೇ ಅರಮನೆಗಳಾಗಿವೆ.

ಮಗನಿಗೆ ಸರ್ ಅನ್ನಬಾರದು ಎಂದು ತಾಕೀತು
ಒಂದು ದಿನ ಅವರ ಪುತ್ರ ಹೇಳಿದ ಕಾರಣಕ್ಕೆ ಹೋಟೆಲ್‌ನಿಂದ ವಾಕಿ (ಸಹಾಯಕ) ತಿಂಡಿ ಪಾರ್ಸಲ್‌ ತಂದಿದ್ದಾರೆ. ಅದನ್ನು ನೋಡಿದ ಮೇಘರಿಕ್ ಅವರು, ಯಾರಿಗೆ ಇರು ಪಾರ್ಸಲ್ ಅಂತ ಕೇಳಿದಾಗ ಸರ್ ಹೇಳಿದ್ರು ಎಂದರು. ಯಾವ ಸರ್ ಅಂದಿದ್ದಾರೆ. ಆಗ ಅವರ ಮಗನ ಹೆಸರನ್ನು ವಾಕಿ ಹೇಳಿದಾಗ ಮೇಘರಿಕ್‌ರವರಿಗೆ ಕೋಪ ಬಂದಿದೆ. ಕೂಡಲೇ ಮಗನನ್ನು ಕರೆಸಿ ಆತನ ಎದುರಿನಲ್ಲೇ ವಾಕಿಗೆ ನೀವು ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ನೌಕರ ಪಡೆದಿದ್ದೀರಿ. ಏನೂ ಅಲ್ಲದ ಈತನಿಗೆ ನನ್ನ ಮಗ ಅನ್ನುವ ಕಾರಣಕ್ಕೆ ಸರ್ ಅಂತ ಕರೆಯಬೇಡಿ. ಹಾಗೆ ಆತ ಹೇಳಿದ ಕೆಲಸ ಸಹ ಮಾಡಬಾರದು ಎಂದು ಫರ್ಮಾನು ಹೊರಡಿಸಿದ್ದರಂತೆ. ಅದೇ ಕಮಿಷನರೇಟ್‌ ಅಂಗಳದಲ್ಲಿ ಅಪ್ಪನ ಹೆಸರಿನಲ್ಲಿ ದರ್ಬಾರ್‌ ನಡೆಸಿದ ಮಕ್ಕಳಿದ್ದಾರೆ.

ಕ್ಯಾಪ್‌ ದುಡ್ಡು ಕೊಟ್ಟಿದ್ದು ನೋಡಿ ವ್ಯಾಪಾರಿ ಅಚ್ಚರಿ
ಆಯುಕ್ತರಾದ ಮರುದಿನ ಮೇಘರಿಕ್ ಅವರಿಗೆ ಹೊಸ ಕ್ಯಾಪ್ ಖರೀದಿಸಬೇಕಿತ್ತು. ಆಗ ಉಪ್ಪಾರಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಅವರನ್ನು ಸಂಪರ್ಕಿಸಿ ಒಳ್ಳೆಯ ಕ್ಯಾಪ್ ಕಳುಹಿಸಿ ಕೊಡುವಂತೆ ಆಯುಕ್ತರ ಕಚೇರಿ ಸಿಬ್ಬಂದಿ ಹೇಳಿದರು. ಸರಿ ಆಯುಕ್ತರು ಹೇಳಿದ್ದಾರೆ ಅಂದ್ಮೇಲೆ ಇನ್ಸ್‌ಪೆಕ್ಟರ್‌, ಖಾಕಿ ಸಮವಸ್ತ್ರಗಳ ಮಾರಾಟಕ್ಕೆ ಹೆಸರುವಾಸಿಯಾದ ಅಂಗಡಿಯಿಂದ ಏಳೆಂಟು ಒಳ್ಳೆಯ ಕ್ಯಾಪ್‌ಗಳನ್ನು ಆರಿಸಿ ಕಳುಹಿಸಿದರಂತೆ. ಅದರಲ್ಲೊಂದು ಆರಿಸಿಕೊಂಡ ಮೇಘರಿಕ್ ಅವರು, ಆ ಕ್ಯಾಪ್ ಬೆಲೆ ಎಷ್ಟು ಎಂದು ವಿಚಾರಿಸಿದರಂತೆ. ಆಗ ಇನ್ಸ್‌ಪೆಕ್ಟರ್‌ ಬಿಡಿ ಸರ್ ಪರವಾಗಿಲ್ಲ ಎಂದಿದ್ದಾರೆ. ಕ್ಯಾಪ್‌ನ ಬೆಲೆ 800 ರು ಹಣ ಕೊಟ್ಟ ಆಯುಕ್ತರು, ಕೊನೆಗೆ ಆ ಬಟ್ಟೆ ಅಂಗಡಿ ಮಾಲೀಕನಿಗೆ ಕರೆ ಮಾಡಿ ಹಣ ತಲುಪಿತಾ ಎಂದು ಖುದ್ದು ವಿಚಾರಿಸಿದರಂತೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಹಿರಿಯ ಅಧಿಕಾರಿಯೊಬ್ಬರು ಕ್ಯಾಪ್ ಖರೀದಿಸಿ ದುಡ್ಡು ಕೊಟ್ಟಿದ್ದು ಎಂದು ಅಚ್ಚರಿಪಟ್ಟರಂತೆ ಆತ.

ಜೈಲು ಸಿಬ್ಬಂದಿಗೆ ಬಹುಮಾನ
ಕಾರಾಗೃಹ ಇಲಾಖೆ ಮುಖ್ಯಸ್ಥರಾದಾಗ ಆ ಇಲಾಖೆಯ ಗ್ರಹಗತಿ ಸರಿಯಿರಲಿಲ್ಲ. ಆಗಷ್ಟೇ ವಿವಾದದ ಬಿರುಗಾಳಿ ಎದ್ದು ತಣ್ಣಗಾಗಿತ್ತು. ಆ ಇಲಾಖೆ ಹೊಣೆಗಾರಿಕೆಯನ್ನು ಮೇಘರಿಕ್‌ರವರ ಹೆಗಲಿಗೆ ಹಾಕಿತು ಸರ್ಕಾರ. ಸೆರೆಮನೆಗಳಲ್ಲಿ ಸಹ ಸ್ವಚ್ಥತಾ ಅಭಿಯಾನ ಶುರುವಾಯಿತು. ಪೊಲೀಸ್ ಇಲಾಖೆಯ ಮಾದರಿಯಲ್ಲಿ ವಲಯಗಳನ್ನು ರಚಿಸಿ ಆಡಳಿತದಲ್ಲಿ ಬದಲಾವಣೆ ತಂದರು. ಅಷ್ಟೇ ಅಲ್ಲ, ವಿಶೇಷ ದಿನಗಳಲ್ಲಿ ಉತ್ತಮ ಕೆಲಸ ಮಾಡಿದ ಕಚೇರಿ ಸಿಬ್ಬಂದಿಗೆ 2 ರಿಂದ 5 ಸಾವಿರ ರು ವರೆಗೆ ನಗದು ಬಹುಮಾನ ನೀಡಿ ಬೆನ್ನುತಟ್ಟಿದರು. ಜೈಲುಗಳ ಮುಖ್ಯಸ್ಥರ ಸಭೆ ಕರೆದು 50 ರಿಂದ 70 ಸಾವಿರ ರು ನಗದು ಹಣ ಕೊಟ್ಟು ತುರ್ತು ಸಂದರ್ಭದಲ್ಲಿ ಬಳಸುವಂತೆ ಹೇಳಿದ್ದರು. ಇಲಾಖೆಯಲ್ಲಿ ರಹಸ್ಯ ನಿಧಿ ದುರ್ಬಳಕೆ ತಡೆದರು.

ಕಾರು-ಸಿಬ್ಬಂದಿ ವಾಪಸ್ ಕಳುಹಿಸಿದ್ರು
ನಿವೃತ್ತಿ ಮುನ್ನ ದಿನವೇ ತಮ್ಮ ಸಿಬ್ಬಂದಿ ಹಾಗೂ ಕಾರನ್ನು ಸರ್ಕಾರಕ್ಕೆ ಮೇಘರಿಕ್ ಮರಳಿಸಿದ್ದರು. ನಿವೃತ್ತರಾದ ನಂತರ ಅವರು ಕಾರು ಖರೀದಿಸಿದರು. ಸೇವಾ ನಿಯಮ ಹಾಗೂ ಕಾನೂನು ಉಲ್ಲಂಘಿಸಿ ಸಣ್ಣದೊಂದು ಸೌಲಭ್ಯವನ್ನು ಅವರು ಪಡೆದ ನಿದರ್ಶನವಿಲ್ಲ. ಎಷ್ಟೋ ಬಾರಿ ತಿಂಗಳಿಗೆ ನಿಗದಿಪಡಿಸಿದ್ದಷ್ಟೇ ಲೀಟರ್‌ ಪೆಟ್ರೋಲ್ ಅನ್ನು ಅವರು ಬಳಸಿದ್ದರು. ಅದಕ್ಕಿಂತ ಒಂದು ಲೀಟರ್ ಕೂಡ ಹೆಚ್ಚು ಬಳಸುತ್ತಿರಲಿಲ್ಲ ಎಂದು ಅವರ ಕಾರು ಚಾಲಕರು ಹೇಳುತ್ತಿದ್ದರು.

ಮಗಳಿಗೆ ಸೀಟು ಕೊಡಲಿಲ್ಲ, ಚಾಲಕನಿಗೆ ಕೊಡಿಸಿದ್ರು
ಡಿಸಿಪಿ ಆಗಿದ್ದಾಗ ಅ‍ವರ ಮಗಳಿಗೆ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಸೀಟು ನಿರಾಕರಿಸಿದ್ದರಂತೆ. ಆದರೆ ಆಯುಕ್ತರಾಗಿದ್ದಾಗ ಅದೇ ಕಾಲೇಜಿಗೆ ಅವರ ಕಾರು ಚಾಲಕನ ಮಗಳಿಗೆ ಪ್ರವೇಶಕ್ಕೆ ತುಂಬಾ ಹಿಂಜರಿಕೆಯಿಂದ ಶಿಫಾರಸು ಪತ್ರ ಕೊಟ್ಟಿದ್ದರಂತೆ. ಆ ಪತ್ರ ನೋಡಿದ ಆಡಳಿತ ಮಂಡಳಿ, ನಾವು ನಿಮ್ಮ ಸಾಹೇಬ್ರು ಮಗಳಿಗೆ ಸೀಟ್ ಕೊಟ್ಟಿರಲಿಲ್ಲ ಎಂದು ನೆನಪಿಸಿದ್ದರಂತೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳದ ಪುಟ್ಟ ಉದಾಹರಣೆ ಇದೂ.

ಮಂತ್ರಿ ಪಿಎಗೆ ತಾಕೀತು ಮಾಡಿದ್ದ ಆಯುಕ್ತರು
ಮೇಘರಿಕ್ ಅವರು ಕಮೀಷನರ್ ಆಗಿದ್ದಾಗ ಕಾನ್‌ಸ್ಟೇಬಲ್ ವರ್ಗಾವಣೆಗೆ ಮಂತ್ರಿಯೊಬ್ಬರು ಶಿಫಾರಸು ಪತ್ರ ಕಳುಹಿಸಿದ್ದರು. ನಾನು ಸಹ ಅವರ ಚೇಂಬರ್‌ನಲ್ಲೇ ಇದ್ದೆ. ಕಡತಗಳ ಪರಿಶೀಲಿಸುವಾಗ ಈ ಪತ್ರ ನೋಡಿದ ಕೂಡಲೇ ಮೇಘರಿಕ್‌ ಅವರು, ಆ ಮಂತ್ರಿ ಪಿಎಗೆ ಕರೆ ಮಾಡಿ ಅಲ್ರೀ ಕಾನ್‌ಸ್ಟೇಬಲ್‌ ವರ್ಗಾವಣೆಗೆ ಪತ್ರ ಕೊಡೋದು ಆ ಮಂತ್ರಿ ಹುದ್ದೆಗೆ ಘನತೆ ಅಲ್ಲ. ನೀವು ನೇರವಾಗಿ ನನ್ನ ಬಳಿಗೆ ಅವರನ್ನು ಕಳುಹಿಸಿ ಎಂದು ತಾಕೀತು ಮಾಡಿದರು. ಈ ಮಾತು ಕೇಳಿ ಅರೆಕ್ಷಣ ನಾನು ಅವಾಕ್ಕಾಗಿದ್ದು ನಿಜ.

ಲಕ್ಷ ರು ವೈಯಕ್ತಿಕ ನೆರವು
ತಮ್ಮ ಅಧಿಕಾರಿ-ಸಿಬ್ಬಂದಿ ಯೋಗ ಕ್ಷೇಮ ವಿಚಾರದಲ್ಲಿ ಮೇಘರಿಕ್ ಮುತುವರ್ಜಿ ವಹಿಸುತ್ತಿದ್ದರು. ಎಸಿಬಿ ಮುಖ್ಯಸ್ಥರಾಗಿದ್ದಾಗ ಸಿಬ್ಬಂದಿಗೆ ಹೆಚ್ಚುವರಿ ತಿಂಗಳ ವೇತನ ನೀಡದ ಬಗ್ಗೆ ತಾವೇ ಖುದ್ದು ಫೈಲ್‌ ತೆಗೆದುಕೊಂಡು ಹೋಗಿ ಸರ್ಕಾರದ ಮಂಜೂರಾತಿ ಪಡೆದು ಬಂದಿದ್ದರು. ಕೊರೋನಾ ಸೋಂಕು ಬಾಧಿತರಾಗಿ ಅವರ ಕಚೇರಿ ಸಹಾಯಕ ರಫೀಕ್ ಮೃತಪಟ್ಟ ಸಂಗತಿ ತಿಳಿದು ನೊಂದ ಅವರು, ಮರುದಿನ ಅವರ ಕುಟುಂಬದವರನ್ನು ಭೇಟಿಯಾಗಿ 1 ಲಕ್ಷ ರು ವೈಯಕ್ತಿಕ ನೆರವು ಕೊಟ್ಟು ಸಾಂತ್ವನ ಹೇಳಿದ್ದರು.

Latest Videos