ಕತೆ ಹೇಳಿ ನಗಿಸಿ ನಲಿಸಿದ ಅಂತಾರಾಷ್ಟ್ರೀಯ ಅಜ್ಜಿ ಸುಧಾಮೂರ್ತಿ!
ಅತೀ ದೊಡ್ಡ ಸಾಹಿತ್ಯೋತ್ಸವ ಜೈಪುರ ಲಿಟರೇಚರ್ ಫೆಸ್ಟಿವಲ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಸುಧಾಮೂರ್ತಿ ತಾವು ಅಂತಾರಾಷ್ಟ್ರೀಯ ನಾನಿ ಎಂದೇ ಮಾತು ಆರಂಭಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದರು. ಹೌಸ್ ಫುಲ್ ಸಾಹಿತ್ಯೋತ್ಸವದ ಸೊಗಸನ್ನು ಕತೆಗಾರ ಜೋಗಿ ಅಕ್ಷರರೂಪಕ್ಕಿಳಿಸಿದ್ದಾರೆ.
ಜೋಗಿ, ಕನ್ನಡಪ್ರಭ
ನಾನು ನ್ಯಾಷನಲ್ ನಾನಿ!
ಸುಧಾಮೂರ್ತಿ ತನ್ನನ್ನು ಹಾಗೆ ಕರೆದುಕೊಳ್ಳುತ್ತಿದ್ದಂತೆ ನಿರೂಪಕಿ ಮಂದಿರಾ ನಾಯರ್, ನೀವು ಇಂಟರ್ನ್ಯಾಷನಲ್ ನಾನಿ ಎಂದರು. ಕೇಳುಗರ ಚಪ್ಪಾಳೆಯಲ್ಲಿ ಮುಂದಿನ ಮಾತುಗಳು ಮುಳುಗಿಹೋದವು.
ಶುಕ್ರವಾರ ಮುಂಜಾನೆಯ ಮೊದಲ ಗೋಷ್ಠಿಯಲ್ಲಿ ಸ್ಕೂಲ್ ಟೀಚರ್ ಸುಧಾಮೂರ್ತಿ ನಲವತ್ತು ನಿಮಿಷಗಳ ಕ್ಲಾಸ್ ತೆಗೆದುಕೊಂಡರು. ತಮಾಷೆ, ಗಂಭೀರ ಸಲಹೆ, ಆಪ್ತಸಲಹೆ, ಎಚ್ಚರಿಕೆ, ವ್ಯಂಗ್ಯ- ಎಲ್ಲವೂ ಸೇರಿದ್ದ ಗೋಷ್ಠಿಗೆ ಹಿಂದೆಂದೂ ಕಂಡಿರದಷ್ಟು ಕೇಳುಗರು ಸಾಕ್ಷಿಯಾದರು. ಗೋಷ್ಠಿಯ ಚಪ್ಪರವನ್ನೂ ದಾಟಿ, ಇಡೀ ಪ್ರದೇಶವನ್ನೇ ವ್ಯಾಪಿಸಿದ್ದ ಸುಧಾಮೂರ್ತಿ ಅಭಿಮಾನಿಗಳು ನಿಂತುಕೊಂಡು ಅವರ ತುಂಟತನ ತುಂಬಿದ್ದ ಮಾತುಗಳನ್ನು ಕೇಳಿಸಿಕೊಂಡರು.
ಹೆಣ್ಣುಮಕ್ಕಳೇ ದಾರಿದೀಪ ಎಂದು ಮಾತು ಆರಂಭಿಸಿದ ಸುಧಾಮೂರ್ತಿ, ಗಂಡು ಮಕ್ಕಳಿಗಿಂತ ಹೆಣ್ಮಕ್ಕಳೇ ಯಾವತ್ತಿದ್ದರೂ ಉತ್ತಮ. ಅದನ್ನು ನಾನು ಇಂಜಿನಿಯರಿಂಗ್ ಓದುವಾಗಲೇ ಸಾಧಿಸಿ ತೋರಿಸಿದ್ದೆ. ನಾನು ಅತ್ಯುತ್ತಮ ಅರ್ಥಶಾಸ್ತ್ರಜ್ಞೆ ಅಲ್ಲ, ಆದರೆ ಬಂಡವಾಳ ಹೂಡಿಕೆಯಲ್ಲಿ ನಾನೇ ಎತ್ತಿದ ಕೈ. ಹತ್ತು ಸಾವಿರ ಬಂಡವಾಳ ಹೂಡಿದ ಇನ್ಙೋಸಿಸ್ ಇವತ್ತು ಹೇಗೆ ಬೆಳೆದಿದೆ ನೋಡಿ ಎಂದು ಹೇಳುತ್ತಾ ಕೇಳುಗರ ಮೆಚ್ಚುಗೆ ಪಡೆದರು.
ಜೈಪುರದಲ್ಲಿ ಜೋಗಿ; ಸಾಹಿತ್ಯೋತ್ಸವದ ಟಿಟ್ ಬಿಟ್ಸ್
ನಾಯಿ ಇರುವವರು ಅದೃಷ್ಟವಂತರು, ಪುಣ್ಯವಂತರು. ಹೆಣ್ಮಕ್ಕಳು ಇರುವವರೂ ಅಷ್ಟೇ ಅದೃಷ್ಟವಂತರು. ನಿಶ್ಯರ್ತ ಪ್ರೀತಿ ಮತ್ತು ವಿಧೇಯತೆ ನೀಡುವುದು ನಾಯಿಗೆ ಮಾತ್ರ ಸಾಧ್ಯ. ನನಗೆ ನಲವತ್ತೈದು ವರ್ಷವಾಗಿದ್ದಾಗ ನನ್ನ ಮಗಳು ನನಗೆ ನಾನೇನು ಆಗಬೇಕು ಅನ್ನುವುದನ್ನು ಹೇಳಿಕೊಟ್ಟಳು. ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ. ಇನ್ಫೋಸಿಸ್ನಲ್ಲಿ ನನಗೆ ಕೆಲಸ ಇರಲಿಲ್ಲ. ಈಗ ನೀನು ಸಮಾಜ ಸೇವೆ ಮಾಡಬೇಕು ಅನ್ನುವುದನ್ನು ಮಗಳು ಹೇಳಿದಾಗಲೇ ನನಗೆ ಹೊಸ ಸಾಧ್ಯತೆಯ ಅರಿವಾದದ್ದು. ಆಗಾಗ ನಾವು ಮಕ್ಕಳ ಮಾತು ಕೇಳುತ್ತಿರಬೇಕು ಎಂದು ಸುಧಾಮೂರ್ತಿ ಹೇಳಿದರು.
ನಾನು ಐವತ್ತೆರಡನೇ ವಯಸ್ಸಿಗೆ ಇಂಗ್ಲಿಷಿನಲ್ಲಿ ಬರೆಯಲು ಆರಂಭಿಸಿದೆ. ಭಾಷೆ ಕೇವಲ ಚಾಲಕನ ಕೆಲಸ ಮಾಡುತ್ತದೆ. ನೀವು ಯಾವ ಭಾಷೆಯಲ್ಲಿ ಬೇಕಿದ್ದರೂ ಬರೆಯಬಹುದು. ನಿಮಗೆ ಹೇಳುವುದಕ್ಕೆ ಏನಾದರೂ ಇರಬೇಕು. ನಮ್ಮ ಕತೆಗಳೆಲ್ಲ ನಮ್ಮ ಬಾಲ್ಯದ ಅನುಭವದಿಂದ ಹುಟ್ಟುತ್ತದೆ ಎಂದು ಹೇಳುತ್ತಾ ಅವರು ಬಾಲ್ಯದಲ್ಲಿ ತಾವು ಕಂಡು ಅನುಭವಿಸಿದ ಘಟನೆಗಳನ್ನು ಹೇಳಿ ಕೇಳುಗರನ್ನು ರಂಜಿಸಿದರು.
ಸರಳವಾಗಿ ಬದುಕಿ, ಸರಳತೆಗೆ ಕಟ್ಟುಪಾಡುಗಳಿಲ್ಲ, ಬೇರೆಯವರಿಗೆ ಸಹಾಯ ಮಾಡಿ ಮತ್ತು ಸಣ್ಣಸಣ್ಣ ಸಂಗತಿಗಳನ್ನೂ ಸಂತೋಷ ಹುಡುಕಿಕೊಳ್ಳಿ. ಅದೇ ಜೀವನ ಎಂದು ಹೇಳಿದ ಸುಧಾಮೂರ್ತಿ, ನಾನು ಕೊಂಚ ಅತಿಯಾಗಿಯೇ ಉಪದೇಶ ಮಾಡುತ್ತೇನೆ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡರು.
ನೀವು ಸುಧಾಮೂರ್ತಿ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ, ನಾರಾಯಣ ಮೂರ್ತಿಯನ್ನು ಮದುವೆ ಆಗಿದ್ದರಿಂದ ಸುಧಾಮೂರ್ತಿಯಾದೆ ಎಂದ ಅವರು, ತಮ್ಮ ಅಳಿಯ ಬ್ರಿಟನ್ನಿನ ಪ್ರಧಾನಿ ಆಗಿದ್ದಕ್ಕೆ ಸಂತೋಷವಿದೆ. ಅವರು ಆ ದೇಶಕ್ಕಾಗಿ ಸೇವೆ ಮಾಡುತ್ತಿದ್ದಾರೆ, ನಾನು ಇಲ್ಲಿಯ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾನೆ, ನನ್ನ ಕೆಲಸ ನನಗಿದೆ. ಅಧಿಕಾರ ಮತ್ತು ಅಂತಸ್ತುಗಳು ಬಂದು ಹೋಗುವ ಸಂಗತಿ. ಸಂಬಂಧ ಮಾತ್ರ ಶಾಶ್ವತ ಎಂದು ಸುಧಾಮೂರ್ತಿ ವಿವರಿಸಿದರು.
ನಾವು ನೋಡೋ ಜಾಗ ಕಣ್ಣಲ್ಲಿ ಸೆರೆಯಾಗಲಿ, ಫೋಟೋ ಕಮ್ಮಿಯಾಗಲಿ, ಪ್ರವಾಸವೆಂದರೆ ಹೀಗಿರಬೇಕು
ಐವತ್ತು ನಿಮಿಷಗಳ ಗೋಷ್ಠಿಯ ಉದ್ದಕ್ಕೂ ನಗು, ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಕೂಡಿ ಲವಲವಿಕೆಯಿಂದ ನಡೆಯಿತು.
ಹೌಸ್ ಫುಲ್ ಹೌಸ್ ಫುಲ್
ಸಾಮಾನ್ಯವಾಗಿ ಜೈಪುರ ಸಾಹಿತ್ಯೋತ್ಸವದ ಎರಡನೆಯ ದಿನ ಕೇಳುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಮೂರನೆಯ ದಿನದಿಂದ ಏರುತ್ತಾ ಹೋಗುತ್ತದೆ. ಆದರೆ ಈ ಬಾರಿ ಮೊದಲ ದಿನಕ್ಕಿಂತ ಹೆಚ್ಚು ಮಂದಿ ಪ್ರವಾಹದಂತೆ ನುಗ್ಗಿ ಬಂದರು. ಪ್ರತಿಯೊಂದು ಗೋಷ್ಠಿಯೂ ಕುಳಿತು, ನಿಂತು ಕೇಳುವವರಿಂದ ತುಂಬಿಹೋಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದ ಸಾಹಿತ್ಯಾಸಕ್ತರಿಂದಾಗಿ ಜೈಪುರದ ಹೋಟೆಲುಗಳೆಲ್ಲ ತುಂಬಿ ತುಳುಕುತ್ತಿದ್ದವು. ಸಂಜೆ ಹೊತ್ತಿಗೆ ರಸ್ತೆಯಲ್ಲಿ ಗುಳೇ ಹೊರಟಂತೆ ಜನ ಗುಂಪುಗುಂಪಾಗಿ ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿತ್ತು.
ಸೂಪರ್ ಸ್ಟಾರ್ ಶಶಿ ತರೂರ್
ರ್ಜೈಪುರ ಸಾಹಿತ್ಯೋತ್ಸವದಲ್ಲಿ ತುಂಬಿ ತುಳುಕುವ ಗೋಷ್ಠಿಯೆಂದರೆ ಶಶಿ ತರೂರ್ರದು. ಈ ಸಲವೂ ಅದು ಸುಳ್ಳಾಗಲಿಲ್ಲ. ಮೊದಲ ದಿನ ಅವರು ಭಾಗವಹಿಸಿದ್ದ ಮೂರೂ ಗೋಷ್ಠಿಗಳು ತುಂಬಿ ಹರಿದವು. ಎರಡನೆಯ ದಿನದ ಮೊದಲ ಗೋಷ್ಠಿಯೂ ಶಶಿ ತರೂರ್ ಅವರಿಂದಾಗಿಯೇ ತುಂಬಿಹೋಗಿತ್ತು.
ಅಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದ ಮತ್ತೊಂದು ಗೋಷ್ಠಿಯಲ್ಲಿ ಪತ್ರಕರ್ತ ರವೀಶ್ ಕುಮಾರ್ ಮಾತಾಡಿದರು. ಬ್ಲಾಗರ್ ಆಗಿ ಜೈಪುರಕ್ಕೆ ಬಂದಿದ್ದ ರವೀಶ್, ಈ ವರ್ಷ ತಮ್ಮ ಹೊಸ ಪುಸ್ತಕದೊಂದಿಗೆ ಬಂದಿದ್ದರು. ಯೂಟ್ಯೂಬರ್ ಆಗಿಯೂ ಹೆಸರಾಗಿರುವ ರವೀಶ್ ಭಯದ ಸ್ವರೂಪದ ಕುರಿತು ಮಾತಾಡಿದರು.
ಜೋಗಿಯವರ ಹೊಸ ಪುಸ್ತಕ 'ಸಾವು' ಬಿಡುಗಡೆ: ಅನೇಕ ಗಣ್ಯರು ಭಾಗಿ!
ಐರ್ಲೆಂಡಿನ ಮಹಿಳೆಯರು
ಐರ್ಲೆಂಡಿನಲ್ಲಿ ಐವರು ಮಹಿಳೆಯರು ಸೇರಿಕೊಂಡು ತಮಗಿಷ್ಟವಾದ ಕಾದಂಬರಿಗಳನ್ನು ಓದುತ್ತಾ, ಆ ಕುರಿತು ಚರ್ಚಿಸುವ ಪುಟ್ಟ ಗುಂಪೊಂದನ್ನು ಸೃಷ್ಟಿಸಿಕೊಂಡಿದ್ದರು. ಆ ಗುಂಪಿನ ಮೂವರು ಸದಸ್ಯರು ಈ ಸಲದ ಸಾಹಿತ್ಯೋತ್ಸವಕ್ಕೆ ಬಂದಿದ್ದರು. ಸುಮಾರು ಎಪ್ಪತ್ತು ವಯಸ್ಸಿನ ಈ ಮೂವರು ಅತ್ಯುತ್ಸಾಹದಿಂದ ಚರ್ಚೆಗಳಲ್ಲಿ ಪಾಲ್ಗೊಂಡದ್ದೂ ಅಲ್ಲದೇ, ಭಾರತೀಯ ಲೇಖಕರ ಕೃತಿಗಳನ್ನು ಕೊಂಡು ಓದುವ ಉತ್ಸಾಹದಲ್ಲಿದ್ದರು.
ಜಸ್ಟ್ ಆಸ್ಕಿಂಗ್ ರವೀಶ್ ಕುಮಾರ್
ನಿರೂಪಕ, ಪತ್ರಕರ್ತ ಮತ್ತು ಲೇಖಕ ರವೀಶ್ ಕುಮಾರ್ ಗೋಷ್ಠಿಗೆ ಜನವೋ ಜನ. ಭಯದ ಕುರಿತು ಮಾತಾಡುತ್ತಾ ರವೀಶ್ ಮತಹಾಕಿದವರು ಕೇವಲ ಮತದಾರರಲ್ಲ. ನಾವು ಮತ ಹಾಕಿದವರನ್ನು ಪ್ರಶ್ನಿಸುವ ಹಕ್ಕು ನಮಗಿದೆ. ಭಯವಿಲ್ಲದೇ ಪ್ರಶ್ನಿಸಬೇಕು ಎಂದರು. ಆದರೆ ಜನ ಇವತ್ತು ಹೆದರುತ್ತಾರೆ. ಇಷ್ಟವಾದರೂ ನನ್ನ ಟ್ವೀಟ್ಗಳನ್ನು ರೀಟ್ವೀಟ್ ಮಾಡಲು ಹೆದರುತ್ತಾರೆ. ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಧೀಶರು ಕೂಡ ಹೆದರುತ್ತಾರೆ.ಇದು ಭಯದ ಕಾಲ ಎಂದು ರವೀಶ್ ತಮಾಷೆಯಾಗಿ ಹೇಳಿದರು.
ದಾಂಪತ್ಯಗೀತ
ಜಾವೇದ್ ಅಖ್ತರ್, ಶಬಾನಾ ಆಜ್ಮಿ ಮತ್ತು ಗುಲ್ಜಾರ್ ಎರಡು ಪ್ರತ್ಯೇಕ ಗೋಷ್ಠಿಗಳಲ್ಲಿ ಯುವಜನರ ಮನಸ್ಸು ಗೆದ್ದರು. ಗಜಲ್ ಅಂದರೇನು ಅನ್ನುವುದನ್ನು ಸೊಗಸಾಗಿ ವರ್ಣಿಸಿದ ಜಾವೇದ್ ಶಬಾನಾ ಜೋಡಿ, ಹಲವು ಗಜಲ್ಗಳನ್ನು ಓದಿ ಹೇಳಿ, ಅದನ್ನು ಸವಿಯುವ ಕ್ರಮವನ್ನು ವಿವರಿಸಿತು. ನಾನು ಗುಲಾಬಿ ಕೇಳಿದರೆ ಅಖ್ತರ್ ಹೂಗುಚ್ಚವನ್ನೇ ತರುತ್ತಿದ್ದರು ಎಂದು ಶಬಾನಾ ಹೇಳಿದರೆ, ಸಗಟು ಕೊಂಡರೆ ಅಗ್ಗಕ್ಕೆ ಕೊಡುತ್ತಾರೆ ಎಂಬ ಕಾರಣಕ್ಕೆ ಹಾಗೆ ಮಾಡುತ್ತಿದ್ದೆ ಎಂದು ಅಖ್ತರ್ ಕಾಲೆಳೆದರು.
ಗುಲ್ಜಾರ್ ಕವಿತೆ ಓದಿ ಮನಸೆಳೆದರು. ಕವಿತೆ ನನಗೆ ಚಾದರ. ಅದನ್ನು ಹೊದ್ದಾಗಲೇ ನನಗೆ ಸುಖ. ಕವಿತೆಯನ್ನು ಸೆಳೆದು ತೆಗೆದರೆ ನಾನು ಬೆತ್ತಲೆಯಾಗಿ ನಿಂತಂತೆ ಅನ್ನಿಸುತ್ತದೆ ಎಂಬ ಸಾಲುಗಳು ಚಪ್ಪಾಳೆ ಪಡೆದವು.