ಸರ್ಜಿಕಲ್‌ ಸ್ಟ್ರೈಕ್‌ ರೂವಾರಿಯ ಅಂತರಂಗದ ಮಾತು; ಕರ್ನಲ್‌ Harpreet Sandhu ಜತೆಗೊಂದು ಇಳಿಸಂಜೆ

ಸೈನ್ಯ, ಅದರ ಕಾರ್ಯವೈಖರಿ, ಕಗ್ಗಾಡುಗಳಲ್ಲಿ ಶತ್ರು ಸೈನ್ಯದ ಜೊತೆಗಿನ ವೀರಾವೇಶದ ಹೋರಾಟ ಇತ್ಯಾದಿಗಳ ಬಗ್ಗೆ ಸಾಮಾನ್ಯರ ಕುತೂಹಲ ಹಿಮಾಲಯದಷ್ಟಿದೆ. ಆದರೆ ಸೈನ್ಯದಲ್ಲಿ ಅತ್ಯಂತ ಕಠಿಣ ಸಂದರ್ಭದ ಹೋರಾಟಗಳಿಗಾಗಿ ರೂಪುಗೊಂಡ ಪ್ಯಾರಾ ಕಮಾಂಡೋ ಸ್ಪೆಷಲ್‌ ಫೋರ್ಸ್‌ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆ ಬಗ್ಗೆ ಬೆಳಕು ಚೆಲ್ಲುವ ಚಂದದ ಲಹರಿ ಇದು.

Colonel Harpreet Sandhu shares his experience of surgical strike execution and precise planning vcs

-ಮೇಜರ್‌ ಡಾ ಕುಶ್ವಂತ್‌ ಕೋಳಿಬೈಲು, ಮಡಿಕೇರಿ

2016ರ ಸೆಪ್ಟೆಂಬರ್‌ 18ರಂದು ಉರಿ ಬ್ರಿಗೇಡ್‌ ಮೇಲೆ ನಡೆದ ದಾಳಿ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ನಡೆದ ಆ ಕಾರ್ಯಾಚರಣೆಯ ರೂಪುರೇಷೆಯನ್ನು ತಯಾರಿಸಿ ಆ ಸರ್ಜಿಕಲ್‌ ಸ್ಟೆ್ರೖಕನ್ನು ಯಶಸ್ವಿಯಾಗಿ ಆಯೋಜಿಸಿದ ತಂಡದ ಮುಖ್ಯಸ್ಥ ಕರ್ನಲ್‌ ಹರ್ಪೀತ್‌ ಸಂಧು ಅವರಿಗೆ ಯುದ್ಧ ಸೇವಾ ಮೆಡಲ್‌ ನೀಡಿದ ಮುಖ್ಯಾಂಶಗಳನ್ನು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಎಲ್ಲಿಯೂ ಪ್ರಕಟವಾಗಿಲ್ಲ. ಡೆಡ್‌ ಆರ್‌ ಅಲೈವ್‌ ವಿ ಆಲ್‌ ವಿಲ್‌ ಕಮ್‌ ಬ್ಯಾಕ್‌ ಎಂಬ ಆತ್ಮವಿಶ್ವಾಸದೊಂದಿಗೆ ಗಡಿಯಾಚೆಗೂ ಮಿಂಚಿನ ದಾಳಿ ಮಾಡುವ ಈ ವೀರರು ಸಾವನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಆದರೆ ನಿತ್ಯ ಸಾವನ್ನು ವಂಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಅಂಥ ಕರ್ನಲ್‌ ಹಪ್ರೀರ್‍ತ್‌ ಸಂಧು ಜತೆ ಕಳೆದ ಒಂದು ಇಳಿಸಂಜೆಯ ಅನುಭವ ಇಲ್ಲಿದೆ.

ನನ್ನ ಕತೆ ಓದಿ ಹೀಗೆಂದರು:

‘ಗಣಿ ಬೋಪಣ್ಣನನ್ನು ನೀನು ಸಾಯಿಸಬಾರದಿತ್ತು’ ಎಂದು ಕರ್ನಲ್‌ ಹರ್ಪೀತ್‌ ಸಂಧು ಸರ್‌ ವಿಷಾದದಿಂದ ನನ್ನತ್ತ ನೋಡಿದಾಗ ಅವರು ಕಥೆ ಕಾದಂಬರಿಗಳಲ್ಲೂ ಪ್ಯಾರಾ ಕಮಾಂಡೋ ವಿಫಲವಾಗುವುದನ್ನು ಸಹಿಸುವುದಿಲ್ಲವೆಂಬುದು ನನಗೆ ಅರಿವಾಯಿತು. ಇತ್ತೀಚೆಗೆ ಮಡಿಕೇರಿಗೆ ಬಂದಿದ್ದ 2016ರ ಸರ್ಜಿಕಲ್‌ ಸ್ಟೆ್ರೖಕಿನ ರೂವಾರಿ ಪ್ಯಾರಾ ಕಮಾಂಡೊ ಸ್ಪೆಷಲ್‌ ಫೋರ್ಸಸ್‌ ತಂಡದ ಆ ದಿನಗಳ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಹರ್ಪೀತ್‌ ಸಂಧು ಅವರಿಗೆ ನಾನು ನನ್ನ ‘ಗಣಿ ಬೋಪಣ್ಣ’ ಕಥೆಯನ್ನು ಹಿಂದಿ ಇಂಗ್ಲಿಷ್‌ ಜೊತೆಗೆ ಕೊಂಚ ಪಂಜಾಬಿ ಮಿಶ್ರ ಮಾಡಿಕೊಂಡು ರಾಜಾ ಸೀಟಿನ ಬಳಿಯ ಗೆಸ್ಟ್‌ಹೌಸಿನಲ್ಲಿ ಆ ರಾತ್ರಿ ಹೇಳುತ್ತಾ ಕುಳಿತಿದ್ದೆ. ನಾನು ಸೇವೆಯಲ್ಲಿದ್ದಾಗ ನನಗೆ ಜ್ಯೂನಿಯರ್‌ ಆಗಿದ್ದ ಸ್ಪೆಷಲ್‌ ಫೋರ್ಸಸ್‌ನ ಪ್ಯಾರ ಕಮಾಂಡೊ ಮಿತ್ರರು ಸಿಕ್ಕಾಗ ನಾವು ಬೇಕಾಬಿಟ್ಟಿಮಾತನಾಡಬಹುದು. ಆದರೆ ಹೇಳಿ ಕೇಳಿ ಕರ್ನಲ್‌ ಸಂಧು ಸರ್‌ ಸೇವೆಯಲ್ಲಿ ಮತ್ತು ಸಾಧನೆಯಲ್ಲಿ ಬಹಳ ಹಿರಿಯರಾಗಿರುವ ಕಾರಣ ಅವರು ಮನಸ್ಸು ಬಿಚ್ಚಿ ಮಾತನಾಡುವ ಮುನ್ನ ನಾನು ಪ್ರಶ್ನೆಗಳ ಸುರಿಮಳೆಗೈದರೆ ಅದು ಅನುಚಿತವಾಗುತ್ತದೆಯೆಂಬ ಕಾರಣದಿಂದ ನಾನು ನನ್ನ ಕೈಯಲ್ಲಿದ್ದ ಮಧುವಿನ ಮೇಲೆ ಜಾಸ್ತಿ ಗಮನ ಕೇಂದ್ರೀಕರಿಸಿದೆ. ಅವರು ಏನನ್ನು ಮಾಡಿದರೂ ಅತೀ ಶ್ರದ್ಧೆಯಿಂದ ಮಾಡುವವರೆಂಬುದನ್ನು ಅವರು ಚಿಕನ್‌ ಮತ್ತು ಪೋರ್ಕನ್ನು ಬಾರ್ಬಿಕ್ಯೂವಿನಲ್ಲಿ ಬೇಯಿಸುತ್ತಿರುವ ಶೈಲಿಯಿಂದಲೇ ಗಮನಿಸಬಹುದಾಗಿತ್ತು.

Subhash Chandra Bose ಬದುಕೇ ವಿಸ್ಮಯ, ಚೇತೋಹಾರಿ!

ಸರ್ಜಿಕಲ್‌ ಸ್ಟೆ್ರೖಕ್‌ ದಿನಗಳ ನೆನೆದರು:

ನಮ್ಮ ಪ್ಯಾರಾ ಕಮಾಂಡೋಗಳು ಪಾಕಿಸ್ಥಾನದೊಳಗೆ ನುಗ್ಗಿ ಕಾರ್ಯಾಚರಣೆ ನಡೆಸುವುದು ಇದೇ ಮೊದಲ ಸಲವಲ್ಲ. ಆದರೆ ಈ ಮಟ್ಟಿಗಿನ ಮಾದ್ಯಮದಲ್ಲಿನ ಪ್ರಚಾರ ಮತ್ತು ಸಮಾಜ ನಮ್ಮ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಇತ್ತೀಚಿನ ದಿನಗಳ ಬೆಳವಣಿಗೆ. ಈ ಕಾರಣಗಳಿಂದಾಗಿ ಸೇನೆಯ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಒತ್ತಡವಿರುತ್ತದೆ. ಉರಿ ದಾಳಿಗೆ ಪ್ರತೀಕಾರ ಪಡೆಯಲೇ ಬೇಕೆಂದು ದೇಶವೇ ಪಣತೊಟ್ಟಾಗ ಆ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಯು ಆ ಕಾರ್ಯಾಚರಣೆಯ ಸಂದರ್ಭದಲ್ಲಿ ಒಳಗಾದ ಒತ್ತಡದ ಪ್ರಮಾಣ ನಮಗೆ ಊಹಿಸಲು ಮಾತ್ರ ಸಾಧ್ಯ. ಆದರೆ ಕರ್ನಲ್‌ ಹರ್ಪೀತ್‌ ಸಂಧು ಅವರು ಕೈಗೊಳ್ಳಲಿದ್ದ ಸರ್ಜಿಕಲ್‌ ಸ್ಟೆ್ರೖಕ್‌ ಒಂದು ವೇಳೆ ವಿಫಲವಾಗಿ ನಮ್ಮ ಕಡೆಯ ಒಂದೇ ಒಂದು ಸೈನಿಕ ಮೃತ ಪಟ್ಟಿದ್ದರೂ ಅಥವಾ ಸೆರೆಸಿಕ್ಕಿದ್ದರೂ ನಮ್ಮ ಸೇನೆಗೆ ವಿಶ್ವ ಮಟ್ಟದಲ್ಲಿ ಮುಖಭಂಗವಾಗುತ್ತಿತ್ತು.

ತಮ್ಮ ಹುಡುಗರು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿ, ತಮಗೆ ಶುಭ ಸಂದೇಶವನ್ನು ರವಾನಿಸಿದ ಕ್ಷಣವನ್ನು ಅವರು ಮಡಿಕೇರಿಯ ಚಳಿಯಲ್ಲಿ ಮೆಲುಕು ಹಾಕುತ್ತಾ ರೋಮಾಂಚಿತರಾದರು. ಒಮ್ಮೆ ರೆಜಿಮೆಂಟಿನ ಕಮಾಂಡ್‌ ಮುಗಿಸಿ ಹೊರಬಿದ್ದ ನಂತರ ಮೇಲಿನ ರಾರ‍ಯಂಕಿಗೆ ಬಡ್ತಿ ಸಿಕ್ಕಿದರೂ ಒಂದು ಯಶಸ್ವಿ ಕಾರ್ಯಾಚರಣೆಯಲ್ಲಿರುವ ಕಿಕ್ಕು ಹೆಡ್‌ ಕ್ವಾಟರಿನಲ್ಲಿ ಕುಳಿತು ಫೈಲುಗಳನ್ನು ತಿರುವಿಹಾಕುವುದರಲ್ಲಿ ಸಿಗುವುದಿಲ್ಲವೆಂಬ ಭಾವ ಅವರ ಮಾತಿನಲ್ಲಿತ್ತು.

SG Siddaramayya turns 75: ಎಸ್‌ಜಿ ಸಿದ್ದರಾಮಯ್ಯನವರ ಆತ್ಮಕಥನ ಯರೆಬೇವು!

ಅವರದು ಸಕಾರಾತ್ಮಕ ನಿಲುವು:

ನಮ್ಮ ಚರ್ಚೆ ನಿಧಾನವಾಗಿ ಬೇರೆ ವಿಷಯಗಳತ್ತ ತಿರುಗಿತು. ಸೇನೆಯ ಫೈಟಿಂಗ್‌ ಆರ್ಮಿನಲ್ಲಿ ಹೆಣ್ಣು ಮಕ್ಕಳ ನೇಮಕಾತಿಯ ಬಗ್ಗೆ, ಇಂದಿನ ದಿನಗಳಲ್ಲಿ ನಮ್ಮ ಸೈನಿಕರು ಕೂಡ ನಗರಗಳ ಕಾನ್ವೆಂಟ್‌ ಶಿಕ್ಷಣ ಪಡೆದವರಾಗಿರುವುದರಿಂದ ಅವರು ಸೇನೆಯ ಶಿಷ್ಟಾಚಾರ ಮತ್ತು ರೀತಿ ರಿವಾಜುಗಳಿಗೆ ಹೊಂದಿಕೊಳ್ಳುವುದರ ಬಗ್ಗೆ ಚರ್ಚೆಗಳಾದವು. ಇಂದಿನ ದಿನ ಹೆಚ್ಚಿನ ಹೆಣ್ಣು ಮಕ್ಕಳು ಉದ್ಯೋಗದಲ್ಲಿರುವ ಕಾರಣ ಒಬ್ಬ ಮಿಲಿಟರಿ ಅಧಿಕಾರಿ ಅಥವಾ ಸೈನಿಕ ತನ್ನ ಕೌಟುಂಬಿಕ ಜೀವನವನ್ನು ನಿರ್ವಹಿಸುವಲ್ಲಿರುವ ಸವಾಲುಗಳ ಬಗೆಗೂ ಕರ್ನಲ್‌ ಸಂಧು ತಮ್ಮ ನಿಲುವುಗಳನ್ನು ಮುಂದಿಟ್ಟರು.

Prof BA Vivek Rai Turns 75: ಸಂವಹನ ನಡೆಸುವುದು ಶಕ್ತಿಯಲ್ಲ, ಹೊಸತು ದಾಟಿಸುವುದು ಮುಖ್ಯ

ಸಮಾಜದಲ್ಲಿ ಆಗುತ್ತಿರುವ ಯಾವ ಬದಲಾವಣೆಗಳೂ ಒಳ್ಳೆಯದಲ್ಲವೆಂಬ ಅಸಹನೆಯನ್ನು ಅನೇಕ ಬಾರಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹಿರಿಯರು ವ್ಯಕ್ತ ಪಡಿಸುತ್ತಾರೆ. ಆದರೆ ಸುಮಾರು ಮುನ್ನೂರು ವರ್ಷಗಳ ಇತಿಹಾಸ ಮತ್ತು ಪರಂಪರೆಯ ಹಿನ್ನಲೆಯಿರುವ ಭಾರತೀಯ ಸೇನೆಯಲ್ಲಿರುವ ಕರ್ನಲ್‌ ಸಂಧುರವರು ಈಗಿನ ಸೈನಿಕರು ಹೇಗೆ ತಾಂತ್ರಿಕವಾಗಿ ಹೆಚ್ಚು ಚತುರರಿದ್ದಾರೆ ಮತ್ತು ಹೇಗೆ ಹೆಚ್ಚು ಒತ್ತಡವನ್ನು ನಿಭಾಯಿಸಬಲ್ಲರು ಎಂದು ವಿಚಾರವನ್ನು ವ್ಯಕ್ತ ಪಡಿಸಿದಾಗ, ಪ್ರತಿಯೊಂದು ವಿಷಯದ ಬಗೆಗೂ ಅವರಿಗಿರುವ ಸಕಾರಾತ್ಮಕ ನಿಲುವುಗಳು ನನಗೆ ಗೋಚರಿಸಿದವು. ಅಂತರಾಷ್ಟ್ರೀಯ ವಿಚಾರಗಳಿಂದ ಹಿಡಿದು ಯುದ್ಧದ ಶೈಲಿ ಬದಲಾದ ಕಾರಣ ಮುಂದೆ ಸೇನೆಯಲ್ಲಿ ಬರಬಹುದಾಗ ನವೀಕರಣಗಳ ಕುರಿತು ತಮ್ಮ ವಿಚಾರಗಳನ್ನು ಮುಂದಿಟ್ಟರು. ಸುಮಾರು ನಡುರಾತ್ರಿಯ ತನಕ ನಡೆದ ನಮ್ಮ ಮಾತುಕತೆಯಲ್ಲಿ ಯಾವುದೇ ವ್ಯಕ್ತಿ ಅಥವಾ ವಿಷಯದ ಬಗ್ಗೆ ಕರ್ನಲ್‌ ಸಂಧುರವರ ಬಾಯಲ್ಲಿ ಒಂದೇ ಒಂದು ನಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ.

ಈ ಪ್ಯಾರಾ ಕಮಾಂಡೊಗಳೇ ಹೀಗೆ, ಅವರು ಯಾವಾಗಲೂ ಎಲ್ಲರಿಗಿಂತ ಒಂದು ಅಂತಸ್ತು ಮೇಲಿರಲು ಬಯಸುತ್ತಾರೆ. ಇವರ ಟ್ರೆತ್ರೖನಿಂಗಿನಲ್ಲಿ ಇಪ್ಪತ್ತು ಕೇಜಿ ತೂಕದ ಬ್ಯಾಗನ್ನು ಹೊತ್ತು ಕೈಯಲ್ಲಿ ರೈಫಲ್‌ ಹಿಡಿದು ಹೇಗೆ ನಲವತ್ತು ಕಿಲೋಮೀಟರ್‌ ದೂರವನ್ನು ಕ್ರಮಿಸುತ್ತಾರೊ ಹಾಗೆಯೆ ಇವರ ಪಾರ್ಟಿಗಳು ಸೂರ್ಯೋದಯದ ತನಕವೂ ಕೆಲವೊಮ್ಮೆ ನಡೆಯುತ್ತದೆ. ಪ್ರತಿಯೊಂದು ಮಿತಿಯನ್ನು ಮೀರಬೇಕೆಂದು ಭಾವಿಸಿರುವ ಹಠಮಾರಿಗಳಿವರು.

ನನ್ನ ಬಗ್ಗೆ ರಹಸ್ಯವೇನೂ ಉಳಿದಿಲ್ಲ:

ನಮ್ಮ ಈ ಭೇಟಿಯ ಬಗ್ಗೆ ಬರೆಯಲೋ ಅಥವಾ ಬೇಡವೋ ಎಂದು ಅವರ ಮುಂದೆ ಕುಳಿತು ಯೋಚಿಸುತ್ತಿದ್ದೆ. ಬಹುಶಃ ಅವರು ಇನ್ನೂ ತಮ್ಮ 4 ಪ್ಯಾರಾ ಸ್ಪೆಷಲ್‌ ಫೋರ್ಸಸ್‌ ತಂಡದ ಭಾಗವಾಗಿ ಮುಂದೆ ಇಂತಹಾ ಕಾರ್ಯಾಚರಣೆಗಳನ್ನು ನಿಭಾಯಿಸುವ ಸ್ಥಾನದಲ್ಲಿದ್ದರೆ, ಇಂತವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಬಾರದು ಮತ್ತು ಇಂತವರ ಕೆಲಸಗಳಷ್ಟೇ ಸದ್ದು ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಈಗ ಸಂಧು ಸರ್‌ ಅವರ ಸೇವಾ ಹಿರಿತನದಿಂದಾಗಿ ಅವರು ಹೆಡ್‌ ಕ್ವಾರ್ಟರ್ಸಿನಲ್ಲಿ ಡೆಸ್ಕ್‌ ಜಾಬಿನಲ್ಲಿರುವ ಕಾರಣದಿಂದಲೊ ಎನೋ ತಮ್ಮದೇ ಶೈಲಿಯಲ್ಲಿ ‘ನನ್ನ ಹೆಸರು ಹೊಡೆದರೆ ಸಾಕು, ಗೂಗಲ್ಲಿನಲ್ಲಿಯೂ ಮಾಹಿತಿ ಬರುತ್ತದೆ. ನೀನು ನನ್ನ ಬಗ್ಗೆ ಬರೆದರೆ, ಸೋರಬಹುದಾಗ ಯಾವ ಗೌಪ್ಯ ಮಾಹಿತಿಯೂ ಇಲ್ಲ’ ಎಂದು ಕೊನೆಯ ಪೆಗ್‌ ತಯಾರಿಸಿದರು. ಈಗಷ್ಟೇ ಸ್ಕೂಲ್‌ ಮುಗಿಸಿ ಕಾಲೇಜಿಗೆ ಕಾಲಿಟ್ಟಅವರ ಮಗಳ ಕಡೆ ಬೊಟ್ಟು ಮಾಡುತ್ತಾ ‘ಒಂದು ಕಾಲದಲ್ಲಿ ರೆಜಿಮೆಂಟಿನ ಎಂಟುನೂರು ಹುಡುಗರ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದ ನನಗೀಗ ಇವಳೊಬ್ಬಳನ್ನು ರಕ್ಷಣೆ ಮಾಡಲು ಯಾರ ಅಗತ್ಯವೂ ಇಲ್ಲ’ ಎಂದು ನಕ್ಕರು. ಸಂಧು ಸರ್‌ ಮಗಳು ಬಾಕ್ಸಿಂಗ್‌ ಪಟುವಾದ ಕಾರಣ ಆರ್ಮಿ ತಂಡದ ಬಾಕ್ಸರುಗಳ ಜೊತೆ ನಿತ್ಯ ತರಬೇತಿ ಮಾಡುತ್ತಾಳೆಂದು ಅವಳ ಹವ್ಯಾಸಗಳನ್ನು ವಿಚಾರಿಸಿದಾಗ ನನಗೆ ಹೇಳಿದ್ದಳು. ಅಪ್ಪನಂತೆ ಪ್ಯಾರಕಮಾಂಡೊಗಳ ಮಕ್ಕಳ ಆಯ್ಕೆಗಳೂ ತೀರಾ ವಿಭಿನ್ನ !

Latest Videos
Follow Us:
Download App:
  • android
  • ios