Prof BA Vivek Rai Turns 75: ಸಂವಹನ ನಡೆಸುವುದು ಶಕ್ತಿಯಲ್ಲ, ಹೊಸತು ದಾಟಿಸುವುದು ಮುಖ್ಯ
ಕನ್ನಡ ಪ್ರಾಧ್ಯಾಪಕ, ಸಾಹಿತಿ, ಜಾನಪದ ವಿದ್ವಾಂಸ, ಸಂಶೋಧಕ ಎಲ್ಲವೂ ಆಗಿರುವ ಪ್ರೊಫೆಸರ್ ಬಿ ಎ ವಿವೇಕ್ ರೈ ಅವರಿಗೆ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಅವರ ಒಡನಾಡಿ ಸಿಎನ್ ರಾಮಚಂದ್ರನ್ ಸಂಪಾದಕತ್ವದ ‘ಒಡನಾಟದ ನೆನಪುಗಳು’ ಮತ್ತು ವಿವೇಕ್ ರೈಯವರ ಕೃತಿಗಳಾದ ‘ಕ್ಯಾಮೆರಾ ಕಣ್ಣಿನಿಂದ ಜರ್ಮನಿ’, ‘ಹೊತ್ತಗೆಗಳ ಹೊಸ್ತಿಲಲ್ಲಿ’, ‘ಸ್ಲಾವೊಮೀರ್ ಮ್ರೋಜೆಕ್ ಕತೆಗಳು’, ‘ಎ ಹ್ಯಾಂಡ್‌ಬುಕ್ ಆಫ್ ಕನ್ನಡ ಪ್ರೊಸೋಡಿ’ ಮಂಗಳೂರಿನಲ್ಲಿ ಬಿಡುಗಡೆ ಆಗುತ್ತಿವೆ. ಈ ಹೊತ್ತಲ್ಲಿ ಅವರ ಜೊತೆ ಮಾತುಕತೆ.
ರಾಜೇಶ್ ಶೆಟ್ಟಿ
1. ಈ ಪಯಣದಲ್ಲಿ ಮಂಗಳೂರು, ಜರ್ಮನಿ, ಹಂಪಿ, ಮೈಸೂರು, ಪೋಲೆಂಡ್ ಹೀಗೆ ಹಲವು ಊರು ದಾಟಿ ಬಂದಿದ್ದೀರಿ. ಈ ಊರುಗಳು ಬೀರಿದ ಪ್ರಭಾವ ಎಷ್ಟು?
ನಾನು ಹುಟ್ಟಿದ್ದೂ ಪುತ್ತೂರು ಸಮೀಪದ ಪುಣಚ ಎಂಬ ಹಳ್ಳಿಯಲ್ಲಿ. ನನ್ನ ಹೈಸ್ಕೂಲು, ಕಾಲೇಜು ವಿದ್ಯಾಭ್ಯಾಸ ನಡೆದಿದ್ದು ಪುತ್ತೂರಿನಲ್ಲಿ. ಆಗ ಕಾರಂತರು ಪುತ್ತೂರಿನಲ್ಲಿ ಕ್ರಿಯಾಶೀಲರಾಗಿದ್ದ ಕಾಲ. ಸಾಂಸ್ಕೃತಿಕವಾಗಿ ಆ ಊರು ಚೆನ್ನಾಗಿದ್ದ ಕಾಲ. ನನ್ನ ವಿದ್ಯಾಭ್ಯಾಸದ ಕಾಲ ಆಗಿದ್ದರಿಂದ ದೊಡ್ಡ ಪ್ರಭಾವ ಬೀರಿತು. ಅಲ್ಲಿ ನೋಡಿದ ಯಕ್ಷಗಾನ ಪ್ರಸಂಗಗಳು ಇನ್ನೂ ನನ್ನ ನೆನಪಲ್ಲಿವೆ. ಅಲ್ಲಿಂದ ಮಂಗಳೂರಿಗೆ ಬಂದೆ. ಎಂಎ ಓದಿದೆ. ನಂತರ ಕೊಣಾಜೆಯಲ್ಲಿ ಕನ್ನಡ ಪ್ರಾಧ್ಯಾಪಕನಾದೆ. ಅಲ್ಲಿನ ಸಿಟಿ ಬಸ್ಸುಗಳ ಓಡಾಟ, ನದಿ ದಂಡೆಯ ನಡೆದಾಟ, ಸಮುದ್ರ ತೀರದ ಸಂಜೆಗಳು ಈಗಲೂ ನೆನಪಲ್ಲಿವೆ. ಮಂಗಳೂರು ಇಷ್ಟುದೊಡ್ಡದಾಗಿ ಬೆಳೆದರೂ ನಂಗೆ ಒಂದು ಸಣ್ಣ ಹಳ್ಳಿಯಾಗಿವೆ ಕಾಣಿಸುತ್ತದೆ. ಅನಂತರ ಹಂಪಿಗೆ ಹೋದೆ. ಅಲ್ಲಿನ ಹಳ್ಳಿಗಳು, ಜನರು ನನ್ನ ಜಗತ್ತು ವಿಸ್ತರಿಸಿದರು. ಜರ್ಮನಿ ನನಗೆ ಬಹಳ ಕಲಿಸಿತು. ಅಲ್ಲಿನ ಜನರ ಪ್ರೀತಿ ಕೊಟ್ಟಿತು. ಅಲ್ಲಿ ನಾನು ಅಡುಗೆಯಿಂದ ಹಿಡಿದು ಫೋಟೋಗ್ರಫಿ ತನಕ ಎಲ್ಲವನ್ನೂ ಕಲಿತೆ. ಹೀಗೆ ಒಂದೊಂದು ಊರಿನಲ್ಲಿ ಅಲ್ಲಿನ ಮನುಷ್ಯರು, ನಿಸರ್ಗದ ಒಡನಾಟದಿಂದ ಜಗತ್ತು ವಿಸ್ತಾರವಾಗಿದೆ.
2. ಒಬ್ಬ ವ್ಯಕ್ತಿ ಬೇರೆ ಬೇರೆ ಪಾತ್ರ ನಿಭಾಯಿಸುವುದು ಹೇಗೆ ಸಾಧ್ಯವಾಯಿತು?
ನಾನು ಮೇಷ್ಟು್ರ ಅನ್ನುವುದೇ ನನಗೆ ಬಹಳ ಇಷ್ಟ. ಶಿಕ್ಷಕ ವೃತ್ತಿ ನನಗೆ ಸುಖ ಮತ್ತು ಎಲ್ಲವನ್ನೂ ಕೊಟ್ಟಿದೆ. ಮೇಷ್ಟಾ್ರಗಿದ್ದಾಗ ನಾನು ಜಗತ್ತನ್ನು ತಿಳಿದುಕೊಳ್ಳುವುದಕ್ಕೆ ಓದುತ್ತಿದ್ದೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ, ಸಾಂಸ್ಕೃತಿಕ ಮಾನ ವಿಜ್ಞಾನ, ಓರಲ್ ಹಿಸ್ಟರಿ ಹೀಗೆ ಎಲ್ಲಾ ಓದುತ್ತಾ ಹೋದಂತೆ ಪಾತ್ರಗಳು ಬದಲಾದವು. ಮೂಲದಲ್ಲಿ ನಾನು ಮೇಷ್ಟು್ರ. ವಿದ್ಯಾರ್ಥಿಯಾಗಿ ಕಲಿಯುತ್ತಾ ಹೋಗಿದ್ದರಿಂದ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ನನ್ನ ವಿದ್ವಾಂಸ ಎಂದರೆ ನನಗೆ ಸರಿ ಹೋಗುವುದಿಲ್ಲ. ಅದರಲ್ಲಿ ಪೂರ್ಣತ್ವ ಇಲ್ಲ. ವಿದ್ಯಾರ್ಥಿ ಅನ್ನುವುದೇ ಹೆಚ್ಚು ಸರಿ.
ನನಗೆ 75 ವರ್ಷ ಆಗಿದೆ ಅನ್ನುವುದು ದೊಡ್ಡ ವಿಚಾರ ಅಲ್ಲ. ನಾನು ಪಡೆದ ಅನುಭವವನ್ನು, ನನಗೆ ದಕ್ಕಿದ್ದನ್ನು ಹೊರಜಗತ್ತಿಗೆ ಎಷ್ಟುದಾಟಿಸಿದ್ದೇನೆ ಅನ್ನುವುದು ಮುಖ್ಯ. ನಾನು ಒಬ್ಬ ಮೇಷ್ಟು್ರ. ನನಗೆ ದಕ್ಕಿದ್ದು ಹೆಚ್ಚು ವಿದ್ಯಾರ್ಥಿಗಳಿಗೆ ಕೊಟ್ಟಿದ್ದೇನೆ. ಸಾರ್ವಜನಿಕ ವಲಯಕ್ಕೆ ಅಷ್ಟೇನೂ ಕೊಟ್ಟಿಲ್ಲ ಅನ್ನುವ ಭಾವ ನನ್ನದು. ಮುಂದಿನ ದಿನಗಳಲ್ಲಿ ಒಬ್ಬ ಸಾಹಿತಿಯಾಗಿ ಸಾರ್ವಜನಿಕ ಜಗತ್ತಿಗೆ ಹೆಚ್ಚು ನೀಡಲು ಯತ್ನಿಸುತ್ತೇನೆ.
3. ನಿಮ್ಮ ಶಿಕ್ಷಣ ವೃತ್ತಿ ಆರಂಭದ ಕಾಲಘಟ್ಟಕ್ಕೂ ಈಗಿನ ಸಂದರ್ಭಕ್ಕೂ ಎಷ್ಟುವ್ಯತ್ಯಾಸ?
ಆಗ ಅಧ್ಯಯನಕ್ಕಾಗಿ ಪುಸ್ತಕ ಓದಬೇಕಿತ್ತು. ಮೇಷ್ಟು್ರ-ವಿದ್ಯಾರ್ಥಿಗಳ ಒಡನಾಟ ತುಂಬಾ ಚೆನ್ನಾಗಿತ್ತು. ಈಗ ಪುಸ್ತಕ ಓದುವ ಪ್ರಮಾಣ ಕಡಿಮೆಯಾಗಿದೆ. ಮೇಷ್ಟು್ರ-ವಿದ್ಯಾರ್ಥಿಗಳ ಒಡನಾಟವೂ ಮೊದಲಿನಂತೆ ತೀವ್ರವಾಗಿಲ್ಲ. ಶಿಕ್ಷಕರು ವಿದ್ಯಾರ್ಥಿಗಳ ಪ್ರಶ್ನೆ ಸ್ವೀಕರಿಸಿ ಅದರ ಮೂಲಕ ಹೊಸ ಮಗ್ಗುಲಲ್ಲಿ ಯೋಚಿಸುವಂತಾಗಬೇಕು. ಏಕಮುಖವಾಗಿ ಉಪನ್ಯಾಸ ಕೊಡುವುದು ಅಷ್ಟೇನೂ ಸರಿಯಾದ ಕ್ರಮ ಅಲ್ಲ.
ಎಷ್ಟೊಂದ್ ಜನ; ಇಲ್ಲಿ ಯಾರು ನನ್ನೋರು!4. ಈ ಕಾಲದ ವಿದ್ಯಾರ್ಥಿಗಳು, ಯುವ ಸಾಹಿತಿಗಳು ಯಾವ ದಿಕ್ಕಿನಲ್ಲಿ ನಡೆಯಬೇಕು ಅನ್ನಿಸುತ್ತದೆ?
ನಾನೂ ಅಂತರ್ಜಾಲ ಬಳಸುತ್ತೇನೆ. ಅಂತರ್ಜಾಲ ಬಳಸಿಕೊಂಡು ಸಂವಹನ ನಡೆಸುವುದಷ್ಟೇ ಶಕ್ತಿಯಲ್ಲ. ಅಂತರ್ಜಾಲ ಬಳಸಿಕೊಂಡು ಹೊಸ ಕಲ್ಪನೆಯನ್ನು, ಹೊಸ ಪರಿಕಲ್ಪನೆಯನ್ನು ಹಂಚಿಕೊಳ್ಳುವಂತೆ ಆಗಬೇಕು. ಹೊಸ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಹೊಸ ವಿಚಾರ ತಲುಪಿಸಬೇಕು. ನಾನು ಒಮ್ಮೆ ಮನುಷ್ಯ ಮತ್ತು ಸಸ್ಯಗಳ ಸಂಬಂಧದ ಬಗ್ಗೆ ಸಂಶೋಧನೆ ಮಾಡುವಾಗ ಪಶ್ಚಿಮ ಘಟ್ಟದಲ್ಲಿ ಮಲೆಕುಡಿಯರ ಬದುಕನ್ನು ನೋಡುತ್ತಾ ತುಂಬಾ ಕಲಿತಿದ್ದೆ. ಸಂಶೋಧನೆ ಎನ್ನುವುದು ಮೂಲಭೂತವಾಗಿ ಯಾರಿಗೂ ಕಾಣದಿರುವ ಸಂಗತಿಗಳನ್ನು ಹುಡುಕಿ ತೆಗೆದು ಜಗತ್ತಿಗೆ ತಿಳಿಸುವುದು. ಆ ಕೆಲಸವನ್ನು ನಾವು ಈಗ ಮಾಡಬೇಕಾಗಿದೆ. ದಿಗಂತವನ್ನು ವಿಸ್ತರಿಸಬೇಕಿದೆ. ಹೊಸ ವಿಚಾರಗಳನ್ನು ಕನ್ನಡದಲ್ಲಿ ತಿಳಿಯುವಂತಹ ಜಗತ್ತು ವಿಸ್ತಾರ ಆಗಬೇಕಿದೆ.
ಸಾಹಿತ್ಯ ಅಕಾಡೆಮಿಗೂ ಜ್ಞಾನಪೀಠ ಪ್ರಶಸ್ತಿಗೂ ಸಂಬಂಧ ಇಲ್ಲ: ಚಂದ್ರಶೇಖರ ಕಂಬಾರ5. ಈ ಪಯಣದಲ್ಲಿ ಕಲಿತಿದ್ದೇನೆ, ಗಳಿಸಿದ್ದೇನು? ತೃಪ್ತಿ ಉಂಟಾ?
ತೃಪ್ತಿ ಉಂಟು ಎಂದರೆ ಉಂಟು, ಇಲ್ಲ ಎಂದರೆ ಇಲ್ಲ. ಈಗಲೂ ನಾನೊಬ್ಬ ವಿದ್ಯಾರ್ಥಿ. ಹೊಸತನ್ನು ಓದಿದಾಗ ಈಗಲೂ ನನಗೆ ರೋಮಾಂಚನ ಆಗುತ್ತದೆ. ಪ್ರಯಾಣ ಅನ್ನುವುದು ಭೌತಿಕವಾಗಿ ಮಾತ್ರ ಆಗಬೇಕಿಲ್ಲ. ಮಾನಸಿಕವಾಗಿ ತಿಳುವಳಿಕೆಯ ಪ್ರಯಾಣವೂ ಸಾಧ್ಯ. ಜನರ ಒಡನಾಟದಿಂದ ಅವರ ಜಗತ್ತಿನಲ್ಲಿ ಪ್ರಯಾಣ ಸಾಧ್ಯ. ಒಬ್ಬ ದೊಡ್ಡ ವಿಜ್ಞಾನಿಯ ಸಹಯೋಗದಿಂದ ಕಲಿಯುವುದು ಕೂಡ ದೊಡ್ಡ ಪ್ರಯಾಣವೇ. ಹೊಸತನ್ನು ಕಲಿಯುತ್ತಾ ಹೋಗಬೇಕು. ಪೋಲೆಂಡ್‌ಗೆ ಹೋಗಿದ್ದಾಗ ಅಲ್ಲಿನ ಸ್ಥಳೀಯ ಕತೆಗಾರನ ಪುಸ್ತಕ ಇಂಗ್ಲಿಷಿಗೆ ಅನುವಾದ ಆಗಿದ್ದರೆ ಕೊಡಿ ಎಂದಿದ್ದೆ. ಅದೇ ಇವತ್ತು ಬಿಡುಗಡೆ ಆಗುತ್ತಿರುವ ‘ಸ್ಲಾವೊಮೀರ್ ಮ್ರೋಜೆಕ್ ಕತೆಗಳು’ ಪುಸ್ತಕ. ಅದನ್ನು ಓದಿ ಅಲ್ಲಿನ ಜನರ ರಾಜಕೀಯ ಕ್ಷೋಭೆ, ನೋವುಗಳು ಅರ್ಥ ಮಾಡಿಕೊಂಡಿದ್ದೇನೆ. ಪ್ರಯಾಣ ಅನ್ನುವುದು ಮುಂದಕ್ಕೆ ಮಾತ್ರ ಹೋಗುವುದಲ್ಲ. ಹಿಂದಕ್ಕೂ ಹೋಗಬಹುದು. ಮನಸ್ಸು ಮುಕ್ತವಾಗಿದ್ದಷ್ಟೂಪ್ರಯಾಣದ ಸಾಧ್ಯತೆ ಹೆಚ್ಚು.