ಶತಾವಧಾನಿ ಡಾ. ಆರ್ ಗಣೇಶರು ಸ್ವಯಮಾಚಾರ್ಯ ಮಾರ್ಗದಲ್ಲಿ ಹತ್ತಾರು ಶಾಸ್ತ್ರ-ಕಲೆಗಳನ್ನು ಕರಗತ ಮಾಡಿಕೊಂಡ 'ಸಂಸ್ಕೃತಿಯ ಪ್ರಹರಿ'. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಇವರು, 1200ಕ್ಕೂ ಹೆಚ್ಚು ಅವಧಾನಗಳು  ಮೂಲಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಎಚ್ ಎ ವಾಸುಕಿ, ಸಂಸ್ಕೃತಿ ಚಿಂತಕರು

ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರ ಮಾತುಗಳಲ್ಲಿ ಬಣ್ಣಿಸುವುದಾದರೆ ಇವರು "ವಿದ್ವಲ್ಲೋಕದ ವಿಸ್ಮಯ" ಮಾತ್ರವಲ್ಲ, "ಸಂಸ್ಕೃತಿಯ ಪ್ರಹರಿ" ಕೂಡ. ಈ ಎರಡು ಪದಪುಂಜಗಳಲ್ಲಿ ರಾಮಸ್ವಾಮಿಗಳು ಶತಾವಧಾನಿ ಡಾ. ಆರ್ ಗಣೇಶರ ವ್ಯಕ್ತಿತ್ವವನ್ನಷ್ಟೇ ಅಲ್ಲ ವಿದ್ವಚ್ಚಾರಿತ್ರ್ಯವನ್ನೇ ಹಿಡಿದಿಟ್ಟಿದ್ದಾರೆ ಎಂಬುದು ಗಣನೀಯ.

ಇಂದು ಹತ್ತಾರು ಶಾಸ್ತ್ರ-ಕಲೆಗಳ ವಿಷಯದಲ್ಲಿ ಕಡೆಯ ಮಾತು ಎಂಬಂತಿರುವ ಗಣೇಶರು ಅವುಗಳಲ್ಲಿ ಯಾವುದನ್ನೂ ಗುರುಮುಖೇನ ಅಥವಾ ವಿಶ್ವವಿದ್ಯಾಲಯಗಳಿಗೆ ಹೋಗಿ ಕಲಿಯಲಿಲ್ಲ; ಕಲಿತದ್ದೆಲ್ಲ ಸ್ವಯಮಚಾರ್ಯಮಾರ್ಗದಲ್ಲೇ. ಇದು ವಿಸ್ಮಯದ ಮಾತಾಯಿತು. ಇನ್ನು ಪ್ರಹರಿ ಎಂದರೆ ದ್ವಾರಪಾಲಕ ಎಂದರ್ಥ.

"ಸನಾತನ ಭಾರತೀಯ ಕಲೆ-ಸಂಸ್ಕೃತಿ" ಎಂಬ ಮೌಲ್ಯಸೌಧದಲ್ಲಿ ನೆಮ್ಮದಿಯನ್ನು ಕಾಣುತ್ತಿರುವ ಹಲವರಿಗೆ ಗಣೇಶರು ನಮ್ಮ ಕಲೆ-ಮೌಲ್ಯಗಳನ್ನು ಕಾಯುತ್ತಿದ್ದಾರೆ ಎಂಬ ನೆಮ್ಮದಿ. ಕಾವ್ಯ-ಸಂಗೀತ-ನೃತ್ಯ-ಚಿತ್ರ-ಶಿಲ್ಪಾದಿಗಳಲ್ಲಿ ತೊಡಗಿಸಿಕೊಂಡವರಿಗೆ ಇವರು ಸೌಂದರ್ಯಮಾರ್ಗದರ್ಶಿ. ಸಂಸ್ಕೃತ-ಕನ್ನಡ-ತೆಲುಗು ಮುಂತಾದ ಹಲವು ಭಾಷೆಗಳಲ್ಲಿ ಇವರು ಉನ್ನತಸ್ತರದ ಸೃಷ್ಟಿಶೀಲ ಆಶುಕವಿ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ವಿಸ್ಮೃತಪ್ರಾಯವಾಗಿದ್ದ ಅವಧಾನಕಲೆಯನ್ನು ಉಜ್ಜೀವನಗೊಳಿಸಿ ಅದನ್ನು ಶಿಖರಾಗ್ರಕ್ಕೆ ಮುಟ್ಟಿಸಿದ ಅಶೇಷ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಒಬ್ಬರು ಉನ್ನತಸ್ತರದ ಸೃಷ್ಟಿಶೀಲ ಕವಿಯಾಗಿರಬಹುದು ಅಥವಾ ಉನ್ನತಸ್ತರದ ವಾಗ್ಮಿಯಾಗಿರಬಹುದು ಅಥವಾ ಉನ್ನತಸ್ತರದ ಲೇಖಕರಾಗಿರಬಹುದು; ಆದರೆ ಗಣೇಶರು ಈ ಮೂರೂ ಮಾರ್ಗಗಳಲ್ಲಿ ಉನ್ನತರು.

ವಿಜ್ಞಾನ-ತಂತ್ರಜ್ಞಾನಗಳಲ್ಲಿ ಭಾರತದ ಸರ್ವೋಚ್ಚ ವಿದ್ಯಾಸ್ಥಾನಗಳಲ್ಲೊಂದಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ರಾಮಯ್ಯ ಹಾಗು ಆರ್.ವಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರೂ ಕೂಡ ಗಣೇಶರ ಒಲವು ಎಂದೆಂದಿಗೂ ಇದ್ದದ್ದು ಕಾವ್ಯ-ಕಲೆಗಳಲ್ಲಿಯೇ.

ವಿಶ್ವವೇ ವಸ್ತುಗರ್ಭವಾಗಿರುವ ಅವಧಾನದಂತಹ ಕಲೆಗೆ ವಿಶ್ವಕುತೂಹಲಿಯಾಗದೆ ಸಾಧ್ಯವಿಲ್ಲ ಎಂಬುದು ಅದು ಹೇಗೋ ಗಣೇಶರಿಗೆ ಮನ ಮುಟ್ಟಿತ್ತು ಎನಿಸುತ್ತದೆ. ವಿಜ್ಞಾನ-ತಂತ್ರಜ್ಞಾನಗಳ ಪ್ರವೇಶ ಇದ್ದೇ ಇತ್ತು; ಇಂದಿಗೂ ಇದೆ. ಒಟ್ಟೊಟ್ಟಿಗೇ ವಿಸ್ತಾರವಾದ ವ್ಯಾಪ್ತಿಯಲ್ಲಿ ಭಾರತೀಯ ಶಾಸ್ತ್ರ-ಕಲೆ-ಆಚರಣೆಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡರು. ಸೌಂದರ್ಯಮೀಮಾಂಸೆ ಅಥವಾ ಅಲಂಕಾರಶಾಸ್ತ್ರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದರು. ಅದರ ಬೆಳಕಿನಲ್ಲಿ ಎಲ್ಲ ಕಲೆಗಳ ಅಂತರಾಳವನ್ನೇ ಹಿಡಿದು ಅಪೂರ್ವವಾದ ಸಮಗ್ರತೆಯನ್ನು ಸಾಧಿಸಿಕೊಂಡರು.

ಮಹಾನುಭಾವರಾದ ಡಿ. ವಿ. ಗುಂಡಪ್ಪನವರಿಂದ ಗಾಢವಾಗಿ ಪ್ರಭಾವಿತರಾಗಿರುವ ಗಣೇಶರು ಅವರ ಲೋಕದೃಷ್ಟಿಯನ್ನೇ ಮಾರ್ಗದರ್ಶನಕ್ಕಾಗಿ ನೆಚ್ಚಿಕೊಂಡರು. ಹೀಗೆ ಸ್ವಯಮಾಚಾರ್ಯಮಾರ್ಗದಲ್ಲಿ ಆಧುನಿಕತೆಯನ್ನು ತೊರೆಯದೆ ಸನಾತನತೆಯನ್ನು ಉಳಿಸಿಕೊಂಡ ಕಾರಣವೇ ಗಣೇಶರ ಕಾವ್ಯ-ಭಾಷಣ-ಬರೆಹಗಳಲ್ಲಿ ಅಪರೂಪದ ಸತ್ಯ-ಸೌಂದರ್ಯಗಳ ಸುವರ್ಣಪಾಕದ ಆಕರ್ಷಣೆಯಿದೆ.

ಇಂತಹ ಗಣೇಶರು 1200ಕ್ಕೂ ಹೆಚ್ಚು ಅವಧಾನಗಳನ್ನು ಮಾಡಿ ರಸಿಕರನ್ನು ರಂಜಿಸಿದ್ದಾರೆ; ಸಾವಿರಾರು ಗಂಟೆಗಳಷ್ಟು ಪ್ರಮಾಣದ ಮೌಲಿಕವಾದ ಭಾಷಣಗಳನ್ನು ನೀಡಿದ್ದಾರೆ; 75ಕ್ಕೂ ಹೆಚ್ಚು ಮೌಲಿಕವಾದ ಗ್ರಂಥಗಳನ್ನು ಬರೆದಿದ್ದಾರೆ. ಒಟ್ಟಂದದಲ್ಲಿ ಹೇಳಬೇಕಾದರೆ, ಗಣೇಶರು ಒಂದು ವಿಶ್ವವಿದ್ಯಾಲಯವು ಮಾಡಬೇಕಾದಷ್ಟು ಕೆಲಸಗಳನ್ನು ಏಕಾಂಗಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನೂ ಮಾಡುತ್ತಲಿದ್ದಾರೆ ಕೂಡ.

ಇಂತಹ ಮಹನೀಯರಿಗೆ ಈ ಬಾರಿಯ ಪದ್ಮಭೂಷಣ ಪ್ರಶಸ್ತಿ ಸಂದಿರುವುದು ಕನ್ನಡಿಗರಾದ ನಮಗೆಲ್ಲ ಸಂತಸದ ಸಂಗತಿ. ಇಂತಹ ಮಹನೀಯರಿಗೆ ಸಂದಿದೆ ಎಂಬ ಕಾರಣದಿಂದ ಪ್ರಶಸ್ತಿಯ ಘನತೆಯೂ ಹೆಚ್ಚಿದೆ. ಗಣೇಶರು ಪ್ರಶಸ್ತಿಗಳನ್ನು ಅರಸಿದವರಲ್ಲ; ಆದರೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಕೇಂದ್ರ ಸರ್ಕಾರದ ಬಾದರಾಯಣ ವ್ಯಾಸ ಪುರಸ್ಕಾರ - ಹೀಗೆ ಹತ್ತು ಹಲವು ಪ್ರಶಸ್ತಿಗಳು ಅದಾಗಲೇ ಗಣೇಶರನ್ನು ಅರಸಿಕೊಂಡು ಬಂದಿವೆ. ಈ ಸಾಲಿಗೆ ಇಂದಿನಿಂದ ಪದ್ಮಭೂಷಣ ಕೂಡ ಸೇರುತ್ತದೆ. ಈ ಸಂದರ್ಭದಲ್ಲಿ ಗಣೇಶರನ್ನು ನಾವೆಲ್ಲರೂ ಆದರಾಭಿಮಾನಗಳಿಂದ ಅಭಿನಂದಿಸುತ್ತೇವೆ. ಭಾರತೀಯ ಸಾಹಿತ್ಯ-ಸಂಸ್ಕೃತಿಗಳಿಗೆ ಅವರ ಸೇವೆ ಹೀಗೆಯೇ ಮುಂದುವರೆಯುತ್ತಿರಲಿ.