Asianet Suvarna News Asianet Suvarna News

Subhash Chandra Bose ಬದುಕೇ ವಿಸ್ಮಯ, ಚೇತೋಹಾರಿ!

ಗಾಂಧೀಜಿಯವರ ಸತ್ಯಾಗ್ರಹಗಳಿಗಿಂತ ನೇತಾಜಿಯವರ ಕ್ರಾಂತಿಕಾರಿ ಚಿಂತನೆಗಳು ಬ್ರಿಟಿಷರ ನಿದ್ದೆ ಕೆಡಿಸಿದ್ದವು. ಭಾರತೀಯರ ಮೇಲೆ ಹಿಡಿತಕ್ಕೆ ಭಾರತೀಯ ಸೈನಿಕರನ್ನೇ ಬಳಸಿಕೊಳ್ಳುತ್ತಾ ಬಂದಿದ್ದ ಬ್ರಿಟಿಷರಿಗೆ ನೇತಾಜಿ ಸೈನಿಕರಲ್ಲಿ ತುಂಬುತ್ತಾ ಬಂದ ರಾಷ್ಟ್ರೀಯವಾದದ ಕಲ್ಪನೆಯಿಂದಾಗಿ ಮುಂದೆ ಆಡಳಿತ ನಡೆಸುವುದು ಕಠಿಣವೆಂಬ ಅರಿವಾದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಸ್ವಾಭಾವಿಕವಾಯಿತು.

Major Kushvanth Kolibailu pens down Subhas Chandra Bose vision and achievements vcs
Author
Bangalore, First Published Jan 23, 2022, 2:47 PM IST

ಮೇಜರ್ ಡಾ|| ಕುಶ್ವಂತ್ ಕೋಳಿಬೈಲು 

ವಿಶ್ವಯುದ್ಧದಲ್ಲಿ ಅಂ.ರಾ. ಚಿತ್ರಣವನ್ನು ವೇಗವಾಗಿ ಗ್ರಹಿಸುತ್ತಿದ್ದ ಬೋಸ್ ಭಾರತದ ಅಗತ್ಯಕ್ಕೆ ತಕ್ಕಂತೆ ತಮ್ಮ ವರಸೆ ಬದಲಿಸುತ್ತಿದ್ದರು. 

ಕಡಿಮೆ ಪ್ರತಿರೋಧವಿರುವ ಹಾದಿಯಲ್ಲಿ ತಲೆಬಾಗಿ ನಡೆದು ಯಾವುದೋ ಸ್ಥಾನ ಅಲಂಕರಿಸುವುದಕ್ಕಿಂತ, ನನ್ನ ಹೃದಯವು ಒಪ್ಪುವ ಹೋರಾಟದ ಹಾದಿಯನ್ನು ತುಳಿಯಲು ನಿರ್ಧರಿಸಿದ್ದೇನೆ. ‘ಭಾರತೀಯ ಸಿವಿಲ್ ಸರ್ವೀಸಸ್ ಎಂಬ ಬ್ರಿಟಿಷ್ ವ್ಯವಸ್ಥೆಯ ಬಂಗಾರದ ಸರಪಳಿಯೊಳಗೆ ಬಂಧಿಯಾದರೆ ಭಾರತವನ್ನು ಬ್ರಿಟಿಷರ ದಾಸ್ಯದಿಂದ ವಿಮುಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ನನ್ನ ಈ ನಿರ್ಧಾರದಿಂದ ನಿಮಗೆ ಬೇಸರವಾಗಬಹುದು’ ಎಂಬ ಸಾಲುಗಳಿದ್ದ ಪತ್ರವನ್ನು ೧೯೨೧ರ ಏಪ್ರಿಲ್‌ನಲ್ಲಿ ಮನೆಯವರಿಗೆ ಬರೆದಾಗ ಸುಭಾಷ್ ಚಂದ್ರ ಬೋಸರಿಗೆ ಕೇವಲ ೨೪ ವರ್ಷವಾಗಿತ್ತು. ಕೇವಲ ೪೮ ವರ್ಷ ಬದುಕಿದ ಬೋಸ್ ಅವರ ಸಾವು ಎಷ್ಟು ನಿಗೂಢವೋ, ಅವರ ಬದುಕು ಅದಕ್ಕಿಂತ ಸಾವಿರ ಪಾಲು ವಿಸ್ಮಯಕಾರಿ ಮತ್ತು ಚೇತೋಹಾರಿ.

Subhash Chandra Bose @ 125: ದಾಸ್ಯವನ್ನು ಧಿಕ್ಕರಿಸಿ ನಿಂತ ನೇತಾಜಿ ನಮಗೆ ಈಗಲೂ ಸ್ಪೂರ್ತಿ

ನೇತಾಜಿ ದೂರದೃಷ್ಟಿ
ಇಂದು ಅವರ ೧೨೫ನೇ ಜಯಂತಿಯಂದು ಅವರನ್ನು ಸ್ಮರಿಸಿಕೊಳ್ಳುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವವು ಅವರ ಸಮಕಾಲೀನ ನಾಯಕರಿಗಿಂತ ಹೇಗೆ ವಿಭಿನ್ನ ಮತ್ತು ಆ ಕಾಲಘಟ್ಟದಲ್ಲಿ ಅವರ ನಿಲುವುಗಳು ಎಷ್ಟು ದೂರದೃಷ್ಟಿಯನ್ನು ಹೊಂದಿದ್ದವು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರ ಅಕಾಲಿಕ ಮರಣವನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಕಷ್ಟವಾಗುತ್ತದೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಗಾಂಧೀಜಿಯವರ ಅಹಿಂಸಾ ವಾದವಿರಬಹುದು ಅಥವಾ ನೆಹರೂರವರು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅಳವಡಿಸಿಕೊಂಡ ಆಲಿಪ್ತ ನಿಲುವುಗಳಿರಬಹುದು; ನಾವು ಆ ನಾಯಕರ ನಿಲುವುಗಳ ಆಧಾರದ ಮೇಲೆ ಅವರ ಮೌಲ್ಯಮಾಪನವನ್ನು ಈ ದಿನ ಮಾಡುತ್ತೇವೆ ಮತ್ತು ಅವರ ವಿಚಾರಗಳ ತೂಕವನ್ನು ಅಳೆಯುತ್ತೇವೆ. ಆದರೆ ನೇತಾಜಿಯವರನ್ನು ನಾವು ಅವರ ಭಾಷಣ ಮತ್ತು ಬರವಣಿಗೆಗಳಿಂದ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳ ಹಿಂದಿದ್ದ ದೃಢತೆ ಮತ್ತು ದೃಷ್ಟಿಕೋನದ ಆಧಾರದ ಮೇಲೆ ನಾವು ಅವರ ವ್ಯಕ್ತಿತ್ವವನ್ನು ಗ್ರಹಿಸಬೇಕು.

Major Kushvanth Kolibailu pens down Subhas Chandra Bose vision and achievements vcs

ದೇಶದ ಜನಪ್ರಿಯ ನಾಯಕ
ಸಂಪ್ರದಾಯಸ್ಥ ತುಂಬು ಕುಟುಂಬದಲ್ಲಿ ಜನಿಸಿದ ನೇತಾಜಿಯವರು ಭಾರತದಲ್ಲಿ ಕಾನ್ವೆಂಟ್ ಶಿಕ್ಷಣವನ್ನು ಪಡೆದು ನಂತರ ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರೂ ಅವರು ಹೃದಯದಿಂದ ಎಂದೂ ಪಾಶ್ಚಾತ್ಯರಾಗಲಿಲ್ಲ. ಗಾಂಧಿ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದ ನೇತಾಜಿಯವರು ಅವರನ್ನು ರಾಷ್ಟ್ರಪಿತರೆಂದು ಮೊದಲ ಬಾರಿಗೆ ಕರೆದವರಾದರೂ ಗಾಂಧೀಜಿಯವರ ಎಲ್ಲಾ ನಿಲುವುಗಳನ್ನು ಒಪ್ಪುತ್ತಿರಲಿಲ್ಲ. ವಿದೇಶದಿಂದ ಮರಳಿ ಕಾಂಗ್ರೆಸ್ಸಿಗನಾಗಿ ಸಕ್ರಿಯವಾಗಿ ಕೆಲಸ ಮಾಡಿದ ನೇತಾಜಿಯವರು ೧೯೩೮ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ವಿರುದ್ಧ ಮಹಾತ್ಮ ಗಾಂಧೀಜಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಪಟ್ಟಾಭಿ ಸೀತಾರಾಮಯ್ಯ ಕಣಕ್ಕಿಳಿದಿದ್ದರು. ಕೇವಲ ಅಹಿಂಸೆ ಮತ್ತು ಶಾಂತಿ ಮಾತುಕತೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲವೆಂಬ ನಿಲುವಿನಿಂದಾಗಿ ಗಾಂಧೀಜಿಯವರ ಜೊತೆಗೆ ಸೈದ್ಧಾಂತಿಕ ವಿರೋಧವನ್ನು ಕಟ್ಟಿಕೊಂಡರೂ, ಗಾಂಧೀಜಿ ಅಷ್ಟು ಪ್ರಭಾವಿಯಾಗಿದ್ದ ಕಾಲದಲ್ಲೂ ಬೋಸರ ಗೆಲುವನ್ನು ಸ್ವತಃ ಗಾಂಧೀಜಿಯವರಿಗೂ ತಡೆಯಲಾಗಲಿಲ್ಲ. ಮುತುರಮಾಲಿಂಗಂ ತೇವರ್ ನಾಯಕತ್ವದಲ್ಲಿ ದಕ್ಷಿಣದ ರಾಜ್ಯಗಳ ಬೆಂಬಲವನ್ನು ಪಡೆದು ಕಾಂಗ್ರೆಸ್ ಅಧ್ಯಕ್ಷರಾದ ಬೋಸರು ಆ ಕಾಲಮಾನದಲ್ಲಿ ಗಾಂಧೀಜಿ ನಂತರ ದೇಶವ್ಯಾಪಿ ಜನಪ್ರಿಯತೆ ಮತ್ತು ಜನಬೆಂಬಲ ಪಡೆದಿದ್ದ ಏಕೈಕ ಜನನಾಯಕರಾಗಿದ್ದರು.

Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

ಅಸಾಧಾರಣ ಬುದ್ಧಿವಂತ
ಗಾಂಧೀಜಿ ಮತ್ತು ನೆಹರೂ ಸಹಿತ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅನೇಕ ಅಗ್ರಗಣ್ಯ ನಾಯಕರೆಲ್ಲರೂ ವಿದೇಶದಲ್ಲಿ ಶಿಕ್ಷಣವನ್ನು ಪಡೆದವರು ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಜ್ಞಾನ ಉಳ್ಳವರಾಗಿದ್ದರು. ಆದರೆ ನೇತಾಜಿಯಷ್ಟು ಸ್ಪಷ್ಟವಾಗಿ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಅರ್ಥಮಾಡಿಕೊಂಡ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಸಂಘಟನೆಗಳ ಮೂಲಕ ಬ್ರಿಟಿಷರನ್ನು ವಿಭಿನ್ನ ರೀತಿಗಳಲ್ಲಿ ಇಕ್ಕಟ್ಟಿಗೆ ಸಿಕ್ಕಿಸಬಹುದೆಂಬ ಜಾಣ್ಮೆ ಬೇರೆ ಯಾವ ನಾಯಕರಿಗೂ ಇರಲಿಲ್ಲವೆಂಬುದು ಸ್ಪಷ್ಟ. ಬೋಸರು ಕಟ್ಟಿದ ಸಂಘಟನೆಗಳು ಎಂದಿಗೂ ಜರ್ಮನಿ ಮತ್ತು ಜಪಾನಿನ ಸೇನೆಯ ಅಡಿಯಾಳುಗಳಾಗದೆ ಭಾರತದ ಸ್ವಾತಂತ್ರ್ಯದ ದೃಷ್ಟಿಯಿಂದ ಮಾತ್ರ ಕೆಲಸ ಮಾಡುವ ಸ್ವಾತಂತ್ರ್ಯ ಸಂಘಟನೆಗಳಾಗಿ ಕೊನೆಯ ತನಕವೂ ಉಳಿದವು. ಬ್ರಿಟಿಷರ ಶತ್ರು ರಾಷ್ಟ್ರಗಳ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದ ಬೋಸರು ವಿಶ್ವಯುದ್ಧದ ಸಮಯದಲ್ಲಿ ಗಾಳಿ ಯಾವ ಕಡೆಗೆ ಬೀಸುತ್ತಿದೆಯೆಂಬ ವಿಚಾರಗಳನ್ನು ಇತರ ಭಾರತೀಯ ನಾಯಕರಿಗಿಂತ ಚೆನ್ನಾಗಿ ಅರಿತಿದ್ದರು. ೨ನೇ ವಿಶ್ವಯುದ್ಧದ ಮೊದಲಿನ ವರ್ಷಗಳಲ್ಲಿ ಇಂಗ್ಲೆಂಡ್ ಮೇಲೆ ಜರ್ಮನಿಯ ದಾಳಿ ಎಷ್ಟು ತೀವ್ರವಾಗಿತ್ತೆಂದರೆ, ೧೯೪೦ರಲ್ಲಿ ಫ್ರಾನ್ಸ್ ಬಿದ್ದ ನಂತರ ಇಂಗ್ಲೆಂಡನ್ನು ಜರ್ಮನಿ ವಶಪಡಿಸಿಕೊಳ್ಳುವ ಎಲ್ಲಾ ಸಂಭವಗಳಿತ್ತು. ಆ ಸಮಯದಲ್ಲಿ (೧೯೪೧-೧೯೪೩) ಜರ್ಮನಿಯಲ್ಲಿದ್ದ ಬೋಸರು ಇಂಗ್ಲೆಂಡ್ ಒಂದು ವೇಳೆ ಜರ್ಮನಿಗೆ ಶರಣಾದರೆ ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಳ್ಳಲು ಜರ್ಮನಿಯ ಜೊತೆಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದರು. ಜರ್ಮನ್ನರು ಸೆರೆಹಿಡಿದಿಟ್ಟ ಬ್ರಿಟಿಷ್ ಸೇನೆಯ ಭಾರತೀಯ ಸೈನಿಕರನ್ನು ಸಂಘಟಿಸಿದ ನೇತಾಜಿಯವರು ‘ಫ್ರೀ ಇಂಡಿಯಾ ಸೆಂಟರ್’ ಸಂಸ್ಥೆಯನ್ನು ಬರ್ಲಿನ್‌ನಲ್ಲಿ ಸ್ಥಾಪಿಸಿದರು.

ಭಾರತಕ್ಕೆ ತಕ್ಕಂಥ ವರಸೆ
೧೯೪೩ರಲ್ಲಿ ಜರ್ಮನ್ನರು ರಷ್ಯಾದ ಜೊತೆಗಿನ ಯುದ್ಧದಲ್ಲಿ ಹಿನ್ನಡೆ ಅನುಭವಿಸಿದ ನಂತರ ಜರ್ಮನಿಯು ಬ್ರಿಟಿಷರನ್ನು ಮಣಿಸಲು ಸಾಧ್ಯವಾಗದ ದುರ್ಬಲ ಹಂತಕ್ಕೆ ತಲುಪಿದ ಸಮಯದಲ್ಲಿ, ಸಬ್ ಮೆರಿನ್‌ನಲ್ಲಿ ಜಪಾನಿಗೆ ಬಂದಿಳಿದ ನೇತಾಜಿಯವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟಲು ಜಪಾನಿನ ಸಹಾಯವನ್ನುಯಾಚಿಸಿದರು. ನೇತಾಜಿಯವರಿಗೆ ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸುವ ಗುರಿ ಮುಖ್ಯವಾಗಿದ್ದ ಕಾರಣ ವಿಶ್ವಯುದ್ಧದ ಸಂದರ್ಭದಲ್ಲಿ ಬದಲಾಗುತ್ತಿದ್ದ ಅಂತಾರಾಷ್ಟ್ರೀಯ ಚಿತ್ರಣವನ್ನು ವೇಗವಾಗಿ ಗ್ರಹಿಸುತ್ತಿದ್ದ ಅವರು, ಭಾರತದ ಅಗತ್ಯಕ್ಕೆ ತಕ್ಕಂತೆ ತಮ್ಮ ವರಸೆಯನ್ನು ಬದಲಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ನಾವು ನೇತಾಜಿಯವರ ಸಾಮರ್ಥ್ಯವನ್ನು ಅವರ ಕಾರ್ಯಗಳ ವೇಗ ಮತ್ತು ವೈಖರಿಯಿಂದ ಮಾತ್ರ ಅರಿಯಬಹುದಾಗಿದೆ.

Major Kushvanth Kolibailu pens down Subhas Chandra Bose vision and achievements vcs

ತಿಮ್ಮಯ್ಯ ಸೋದರ ನೇತಾಜಿ ಪಡೆಗೆ
ಜಪಾನಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಮ್ಮ ವಶಕ್ಕೆ ಪಡೆದಾಗ ನೇತಾಜಿಯವರು ಆ ದ್ವೀಪಗಳಿಗೆ ಶಹೀದ್ ಮತ್ತು ಸ್ವರಾಜ್ ಎಂದು ಮರುನಾಮಕರಣ ಮಾಡಿದರು. ಜಪಾನಿಯರು ಈಶಾನ್ಯ ಭಾರತದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಪ್ರಾಬಲ್ಯ ಸಾ ಧಿಸಿದಾಗ ತ್ರಿವರ್ಣ ಧ್ವಜವನ್ನು ಮಣಿಪುರದ ಮೈರಾಂಗಿನಲ್ಲಿ ಐಎನ್‌ಎ ಸೈನಿಕರು ಹಾರಿಸಿ ಸಂಚಲನ ಸೃಷ್ಟಿಸಿದರು. ಜಪಾನಿನ ಪ್ರಾಬಲ್ಯ ಜಾಸ್ತಿಯಾಗುತ್ತಿದ್ದಂತೆ ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರು ನೇತಾಜಿಯವರ ಆರ್ಮಿಯ ಕಡೆಗೆ ಒಲವನ್ನು ಬೆಳೆಸಿಕೊಳ್ಳತೊಡಗಿದರು. ಜನರಲ್ ತಿಮ್ಮಯ್ಯನವರ ಹಿರಿಯ ಸಹೋದರರಾಗಿದ್ದ ಪೊನ್ನಪ್ಪನವರು ನೇತಾಜಿಯವರ ಕರೆಗೆ ಓಗೊಟ್ಟು ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿದರು. ಆ ಕಾಲಘಟ್ಟದಲ್ಲಿ ಗಾಂಧೀಜಿಯವರ ಸತ್ಯಾಗ್ರಹಗಳಿಗಿಂತ ನೇತಾಜಿ ಅವರ ಕ್ರಾಂತಿಕಾರಿ ಚಿಂತನೆಗಳು ಬ್ರಿಟಿಷರ ನಿದ್ದೆಯನ್ನು ಹೆಚ್ಚು ಕೆಡಿಸಿದ್ದವು. ಭಾರತೀಯರ ಮೇಲೆ ಹಿಡಿತ ಸಾಧಿಸಲು ಭಾರತೀಯ ಸೈನಿಕರನ್ನೇ ಬಳಸಿಕೊಳ್ಳುತ್ತಾ ಬಂದಿದ್ದ ಬ್ರಿಟಿಷರಿಗೆ ನೇತಾಜಿಯವರು ಸೈನಿಕರಲ್ಲಿ ತುಂಬುತ್ತಾ ಬಂದ ರಾಷ್ಟ್ರೀಯವಾದದ ಕಲ್ಪನೆಯಿಂದಾಗಿ ಮುಂದೆ ಆಡಳಿತ ನಡೆಸುವುದು ಕಠಿಣವೆಂಬ ಅರಿವಾದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಸ್ವಾಭಾವಿಕವಾಯಿತು.

ಮಹಿಳಾ ರೆಜಿಮೆಂಟ್ ಸ್ಥಾಪನೆ
೧೯೪೫, ಆಗಸ್ಟ್ ೧೮ರಂದು ನೇತಾಜಿಯವರಿದ್ದ ವಿಮಾನವು ತೈವಾನಿನಲ್ಲಿ ಅಪಘಾತಕ್ಕೆ ಈಡಾಗದಿದ್ದರೆ ಬಹುಶಃ ನೇತಾಜಿಯವರು ಜಪಾನಿಗೆ ವಿಶ್ವಯುದ್ಧದಲ್ಲಿ ಹಿನ್ನಡೆಯಾಗಿದೆಯೆಂದು ಕೈಕಟ್ಟಿ ಕುಳಿತುಕೊಳ್ಳುತ್ತಿರಲಿಲ್ಲ. ಅವರು ರಷ್ಯಾದ ಸಹಕಾರದಿಂದ ತಮ್ಮ ಹೋರಾಟವನ್ನು ಮುಂದುವರಿಸಲು ಚಿಂತನೆ ಮಾಡಿದ್ದರು. ನೇತಾಜಿಯವರ ದೂರದೃಷ್ಟಿಗಿದ್ದ ಒಂದೆರಡು ಉದಾಹರಣೆಗಳನ್ನು ನಾವು ಅವರ ಇಂಡಿಯನ್ ನ್ಯಾಷನಲ್ ಆರ್ಮಿಯ ಕಾರ್ಯವೈಖರಿಯಿಂದ ಗಮನಿಸಬಹುದು. ಕೇವಲ ಮಹಿಳೆಯರೇ ಇದ್ದ ಒಂದು ಸಂಪೂರ್ಣ ರೆಜಿಮೆಂಟನ್ನು ತಯಾರುಗೊಳಿಸಿ ಅದಕ್ಕೆ ‘ಝಾನ್ಸಿ ರಾಣಿ ರೆಜಿಮೆಂಟ್’ ಎಂದು ಹೆಸರಿಟ್ಟಿದ್ದರು. ಇಂದಿಗೂ ಭಾರತ ಸೇರಿದಂತೆ ಕೆಲವು ದೇಶಗಳು ಹೆಣ್ಣುಮಕ್ಕಳನ್ನು ಯುದ್ಧ ಭೂಮಿಗೆ ಕಳುಹಿಸಲು ಹಿಂದೆ ಮುಂದೆ ಯೋಚಿಸುತ್ತಿರುವಾಗ ಅವರು ಆ ಕಾಲಮಾನದಲ್ಲಿ ತೆಗೆದುಕೊಂಡ ನಿರ್ಧಾರ ಅಭಿನಂದನಾರ್ಹ. ದೇಶದ ಕೆಲವು ಭಾಗಗಳಲ್ಲಿ ಕೋಮು ಗಲಭೆಗಳಾಗುತ್ತಿದ್ದರೂ ಇಂಡಿಯನ್ನ್ಯಾ ಷನಲ್ ಆರ್ಮಿಯಲ್ಲಿದ್ದ ಹಿಂದೂ-ಮುಸ್ಲಿಂ ಭಾವೈಕ್ಯತೆ ಕೂಡ ನೇತಾಜಿ ಅವರ ನಾಯಕತ್ವಕ್ಕೆ ಮತ್ತು ಅವರ ನಾಯಕತ್ವದ ಮೇಲೆ ಎರಡೂ ಧರ್ಮದವರಿಗಿದ್ದ ವಿಶ್ವಾಸಕ್ಕೆ ಸಾಕ್ಷಿ. ನೇತಾಜಿಯವರು ಜೀವಂತವಾಗಿದ್ದರೆ ದೇಶವಿಭಜನೆಗೆ ಖಂಡಿತವಾಗಿಯೂ ಅಡ್ಡಗಾಲು ಹಾಕುತ್ತಿದ್ದರು ಮತ್ತು ಜಿನ್ನಾರವರ ಯೋಜನೆಗಳನ್ನು ವಿಫಲಗೊಳಿಸುತ್ತಿದ್ದರು.

ಸಮಾಜವಾದದ ಪ್ರತಿಪಾದನೆ
ನೇತಾಜಿ ಕೇವಲ ದೇಶವನ್ನು ಸ್ವಾತಂತ್ರ್ಯಗೊಳಿಸುವ ಕನಸನ್ನು ಮಾತ್ರ ಕಾಣಲಿಲ್ಲ, ಬದಲಿಗೆ ಸ್ವಾತಂತ್ರ್ಯದ ನಂತರ ಈ ವಿಶಾಲ, ಬಹು ಸಂಸ್ಕೃತಿಗಳ ದೇಶದಲ್ಲಿ ಆಡಳಿತ ನಡೆಸುವ ಸಂಕೀರ್ಣತೆಗಳ ಬಗೆಗೂ ಚಿಂತಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕನಿಷ್ಠ ಎರಡು ದಶಕಗಳ ತನಕವಾದರೂ ನಮ್ಮ ಜನರಿಗೆ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮತದಾರರಿಗೆ ಇರಬೇಕಾದ ಪ್ರಬುದ್ಧತೆ ಮತ್ತು ಜನಪ್ರತಿನಿಧಿಗಳಿಗಿರಬೇಕಾದ ಜವಾಬ್ದಾರಿ ಅರ್ಥವಾಗುವ ತನಕ ಭಾರತದಲ್ಲಿ ಸಮಾಜವಾದದ ಆಧಾರದ ಮೇಲೆ ಕೆಲಸ ಮಾಡುವ ಸರ್ಕಾರವಿರ ಬೇಕೆಂಬ ಆಶಯ ಅವರಿಗಿತ್ತು. ೧೯೩೦ರ ದಶಕದಲ್ಲಿ ಟರ್ಕಿಯಂತಹ ಮುಸ್ಲಿಂ ದೇಶವನ್ನು ಜಾತ್ಯತೀತ, ಪ್ರಗತಿಪರ ಮತ್ತು ಲಿಂಗಸಮಾನತೆಯಿರುವ ದೇಶ ಮಾಡಲು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡ ಟರ್ಕಿಯ ಮೊದಲ ಅಧ್ಯಕ್ಷರಾಗಿದ್ದ ಫೀಲ್ಡ್ ಮಾರ್ಶಲ್ ಕೇಮಲ್ ಅಟಾಟರ್ಕ್ ಅವರ ಕಾರ್ಯ ಶೈಲಿಯಿಂದ ನೇತಾಜಿಯವರು ಪ್ರಭಾವಿತರಾಗಿದ್ದರು. ವಿಶ್ವದ ಅನೇಕ ದೇಶಗಳನ್ನು ಸುತ್ತುತ್ತಾ ಅಲ್ಲಿಯ ನಾಯಕರನ್ನು ಮತ್ತು ಅವರ ಆಡಳಿತ ಕ್ರಮವನ್ನು ನೇತಾಜಿಯವರು ಗಮನಿಸುತ್ತಿದ್ದ ಕಾರಣಕ್ಕೆ ಅವರಿಗೆ ಆಡಳಿತ ನಡೆಸುವಾಗ ಬರುವ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಅವರ ಸಮಕಾಲೀನ ನಾಯಕರಿಗಿಂತ ಹೆಚ್ಚಿನ ಅರಿವಿತ್ತು. ನಡು ರಾತ್ರಿಯಲ್ಲಿ ಒಂಟಿ ಹೆಣ್ಣೊಬ್ಬಳು ನಿರ್ಭಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕೆಂಬ ಸರಳ ಆಶಯ ಆಗಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರದ್ದಾಗಿತ್ತು. ಇಂದಿನ ತನಕವೂ ಸಾಧ್ಯವಾಗದ ಅಂತಹ ಉದಾರ ಆಶಯಗಳನ್ನು ನನಸಾಗಿಸಲು ಬೇಕಾದ ಪ್ರಖರವಾದ ಪ್ರತಿಭೆ ಮತ್ತು ಸಾಮರ್ಥ್ಯ ಭಾರತರತ್ನ ಸುಭಾಷ್ ಚಂದ್ರ ಬೋಸರಿಗಿತ್ತು

Follow Us:
Download App:
  • android
  • ios