ಇದು ಬರೀ ಕಾಶ್ಮೀರವಲ್ಲ, ಶಾರದಾ ದೇವಿಯ ಕಾಶ್ಮೀರ!
ಕಾಶ್ಮೀರದ ಕುರಿತ ವಿವಾದ ಗೊತ್ತು? ಕಾಶ್ಮೀರ ಸುಂದರ ತಾಣ ಅನ್ನುವುದೂ ಗೊತ್ತು? ಕಾಶ್ಮೀರಕ್ಕೂ ಭಾರತಕ್ಕೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ಭಾರತಕ್ಕೆ ಕಾಶ್ಮೀರ ಯಾಕೆ ಮುಖ್ಯ? ಕರ್ನಾಟಕಕ್ಕೂ ಕಾಶ್ಮೀರಕ್ಕೂ ಇರುವ ಸಂಬಂಧ ಏನು? ಅದನ್ನಿಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಅದೇನು ಎಂಬುದನ್ನು ಇಲ್ಲಿದೆ ಓದಿ.
ಶಾರದಾದೇವಿಯನ್ನು ಸ್ತುತಿಸುವುದೇ ’ಕಾಶ್ಮೀರ ಪುರವಾಸಿನಿ’ ಎಂದು. ಕಾಶ್ಮೀರದ ಲಿಪಿಯ ಹೆಸರೇ ಶಾರದಾ. ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು ಗೊತ್ತೇ? ಶಾರದ ಪೀಠ!
’ಕಾಶ್ಮೀರ’ ಹೆಸರಿನ ಹಿಂದಿದೆ ಈ ಋಷಿ ಮುನಿಯ ಕಥೆ
ಅಂದೊಮ್ಮೆ ಇಡೀ ಕಾಶ್ಮೀರವನ್ನೇ ’ಶಾರದ ದೇಶ’ ಎಂದು ಕರೆಯುತ್ತಿದ್ದರು. ಇಷ್ಟಿಲ್ಲದಿದ್ದರೆ ಶಂಕರಾಚಾರ್ಯರು ಕಾಶ್ಮೀರಕ್ಕೆ ಏಕೆ ಹೋಗುತ್ತಿದ್ದರು. ಅಲ್ಲಿಯ ಕೃಷ್ಣಗಂಗೆ ನದಿಯ ತೀರದಲ್ಲಿರುವ ಶಾರದ ಪೀಠದ ಸೊಬಗನ್ನು ನೋಡಿ, ಅದೇ ತರಹದ ಇನ್ನೊಂದು ಶಾರದ ದೇವಸ್ಥಾನವನ್ನು ತುಂಗಭಧ್ರಾ ನದಿಯ ತೀರದ ಶೃಂಗೇರಿಯಲ್ಲಿ ಸ್ಥಾಪಿಸಲು ಪ್ರೇರಣೆ ಸಿಕ್ಕಿದ್ದು ಆ ಕಾಶ್ಮೀರದ ಶಾರದ ಪೀಠದಿಂದ. ಶಾರದಾ ದೇವಿಯ ಶ್ರೀಗಂಧದ ಮೂಲ ವಿಗ್ರಹವನ್ನು ಕಾಶ್ಮೀರದಿಂದಲೇ ಶೃಂಗೇರಿಗೆ ತರಲಾಗಿತ್ತಂತೆ.
ಕಾಶ್ಮೀರಕ್ಕೆ ತಮ್ಮ ಕೆಲವು ಶಿಷ್ಯರೊಂದಿಗೆ ಹೋದ ಹೊಸತರಲ್ಲಿ ಶಂಕರಾಚಾರ್ಯರು ಒಬ್ಬ ಕಾಶ್ಮೀರಿ ಪಂಡಿತರ ಅತಿಥಿಯಾಗಿದ್ದರಂತೆ. ಮೊದಲ ದಿನವೇ ಅವರ ಪಾಂಡಿತ್ಯಕ್ಕೆ ಬೆರಗಾದ ಪಂಡಿತ ದಂಪತಿಗಳು ಅವರನ್ನು ಇನ್ನಷ್ಟುದಿನಗಳು ತಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡರಂತೆ.
ಸಂತೋಷ ಸಮೃದ್ಧಿಗೆ ಪೂಜಾ ಗೃಹಕ್ಕೆ ವಾಸ್ತು ಟಿಪ್ಸ್...
ಅದಕ್ಕೆ ಒಪ್ಪಿಕೊಂಡ ಶಂಕರಾಚಾರ್ಯರು ಒಂದು ಶರತ್ತು ಹಾಕುತ್ತಾರೆ. ಅದೇನೆಂದರೆ ನಮ್ಮ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು. ಇದು ಪಂಡಿತ ದಂಪತಿಗಳಿಗೆ ಸ್ವಲ್ಪ ಅವಮಾನಿತವಾಗಿ ಕಂಡರೂ ಅವರಿಷ್ಟಎಂದು ಅಡುಗೆಗೆ ಬೇಕಾದ ದವಸ ಧಾನ್ಯಗಳನ್ನು, ಪಾತ್ರೆ ಕಟ್ಟುಗೆಗಳನ್ನು ಕೊಟ್ಟು ವಿರಮಿಸುತ್ತಾರೆ.
ಆದರೆ ಅಡುಗೆ ಮಾಡಲು ಬೇಕಾದ ಬೆಂಕಿಯನ್ನು ಕೊಡಲು ಮರೆತು ಬಿಡುತ್ತಾರೆ. ಇನ್ನೊಮ್ಮೆ ಅವರನ್ನು ಕರೆದು ತೊಂದರೆ ಕೊಡುವುದರ ಬದಲು ಹಾಗೇ ಹಸಿದ ಹೊಟ್ಟೆಯಲ್ಲೇ ಮಲಗಿ ಬಿಡುತ್ತಾರೆ. ಬೆಳಗ್ಗೆದ್ದು ಪಂಡಿತ ದಂಪತಿಗಳು ಬಂದು ನಮಸ್ಕರಿಸಿ ಮಾತನಾಡಿಸುವಾಗ ಅಡುಗೆಯ ಪದಾರ್ಥಗಳೆಲ್ಲಾ ಹಾಗೇ ಇರುವುದನ್ನು ನೋಡಿ ಏಕೆಂದು ವಿಚಾರಿಸುತ್ತಾರೆ. ಆಗ ಅವರ ಶಿಷ್ಯರುಗಳು ಬೆಂಕಿ ಇಲ್ಲದ್ದರಿಂದ ಅಡುಗೆ ಮಾಡಲಾಗಲಿಲ್ಲ ಎಂದು ಹೇಳುತ್ತಾರೆ. ತಕ್ಷಣ ಆ ಗೃಹಿಣಿ ಅಲ್ಲೇ ಇದ್ದ ನೀರನ್ನು ಕಟ್ಟಿಗೆಯ ಮೇಲೆ ಚಿಮುಕಿದಾಕ್ಷಣ ಬೆಂಕಿ ಉರಿಯ ತೊಡಗುತ್ತದೆ.
ಈ ಪ್ರಸಂಗದಿಂದ ಶಂಕರಾಚಾರ್ಯರಿಗೆ ತಾವಿನ್ನೂ ತುಂಬಾ ಕಲಿಯುವುದಿದೆ ಈ ಶಾರದ ದೇಶದಲ್ಲಿ ಎನಿಸಿ ಹಲವುದಿನಗಳ ಕಾಲ ಅಲ್ಲೇ ನೆಲೆಸುತ್ತಾರೆ. ಅವರು ನೆಲಸಿದ ಬೆಟ್ಟಈಗಲೂ ’ಶಂಕರಾಚಾರ್ಯ ಬೆಟ್ಟ’ ಎಂದು ಪ್ರಸಿದ್ಧ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದು ಶ್ರೀನಗರದ ನಟ್ಟನಡುವೆ , ’ದಾಲ್ ’ಸರೋವರದ ಪಕ್ಕದಲ್ಲಿದೆ.
ಬೆಂಗಳೂರಿನ 800 ವರ್ಷ ಇತಿಹಾಸದ ದ್ರೌಪದಿ ದೇಗುಲ!
ಅಂದಿನ ಶಾರದಾ ಪೀಠ, ದುರದೃಷ್ಟವಶಾತ್ ಈಗ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಭಾಗದಲ್ಲಿದೆ. ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಸಿಗುತ್ತಿಲ್ಲ. ಶಾರದಾ ದೇವಸ್ಥಾನ ಶಿಥಿಲಗೊಂಡು ದಿನೇ ದಿನೇ ಧರೆಗುರುಳುತ್ತಿದೆ.
ವಿಶಿಷ್ಟಾದ್ವೈತ ಸಿದ್ಧಾಂತ ನಾಥಮುನಿಯಿಂದ ಪ್ರಾರಂಭವಾದುದು ಎಂದು ಉಲ್ಲೇಖವಿದೆ, ಅದನ್ನು ಯಮುನಾಚಾರ್ಯರು ವಿಸ್ತರಿಸಿದರು ಮತ್ತು ರಾಮಾನುಜರು ಬ್ರಹ್ಮ ಸೂತ್ರದ ಚೌಕಟ್ಟಿನಲ್ಲಿ ಪ್ರತಿಪಾದಿಸಿ, ‘ಶ್ರೀ ಭಾಷ್ಯಂ’ ಎನ್ನುವ ಮೇರುಗ್ರಂಥವನ್ನು ಸೃಷ್ಟಿಸಿದರು. ಇದೇ ವೈಷ್ಣವರ ಮೂಲಗ್ರಂಥ.
ಇಂತಹದ್ದೊಂದು ಗ್ರಂಥವನ್ನು ಸೃಷ್ಟಿಸಲು ರಾಮಾನುಜರು ತಮ್ಮ ಶಿಷ್ಯ ಕುರುತ್ತಾಳ್ವಾರ್ (ಕುರೇಸಿ) ಜೊತೆಗೂಡಿ ಬ್ರಹ್ಮಸೂತ್ರವನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗಿದ್ದರು. ಅವರಿಗಾಗಲೇ ಅರವತ್ತು ವರ್ಷ ಆಗ.
ಹೀಗೆ ಶಾರದಾದೇವಿಯ ಕೃಪಾಕಟಾಕ್ಷ ಅನಾದಿಕಾಲದಿಂದಲೂ ಕಾಶ್ಮೀರದ ಮೇಲಿರುವಾಗ ಕಾಶ್ಮೀರ ಇನ್ನಾರದಾಗಲು ಸಾಧ್ಯ?
- ವಿಂಗ್ ಕಮಾಂಡರ್ ಸುದರ್ಶನ್