’ಕಾಶ್ಮೀರ’ ಹೆಸರಿನ ಹಿಂದಿದೆ ಈ ಋಷಿ ಮುನಿಯ ಕಥೆ
ಕಾಶ್ಮೀರದ ಕುರಿತ ವಿವಾದ ಗೊತ್ತು? ಕಾಶ್ಮೀರ ಸುಂದರ ತಾಣ ಅನ್ನುವುದೂ ಗೊತ್ತು? ಕಾಶ್ಮೀರಕ್ಕೂ ಭಾರತಕ್ಕೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ಭಾರತಕ್ಕೆ ಕಾಶ್ಮೀರ ಯಾಕೆ ಮುಖ್ಯ? ಕರ್ನಾಟಕಕ್ಕೂ ಕಾಶ್ಮೀರಕ್ಕೂ ಇರುವ ಸಂಬಂಧ ಏನು? ಅದನ್ನಿಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ.
ಈಗಿನ ಮನ್ವಂತರದಲ್ಲಿ, ಸಪ್ತರ್ಷಿಗಳಲ್ಲಿ ಒಬ್ಬರು ಕಶ್ಯಪ. ಬ್ರಹ್ಮನ ಮೊಮ್ಮಗ. ಇವರ ತಂದೆಯಾದ ಮಹರ್ಷಿ ಮರೀಚಿ, ಬ್ರಹ್ಮನ ಮಾನಸ ಪುತ್ರರು. ಪ್ರಜಾಪತಿ ದಕ್ಷ ತನ್ನ ಹದಿಮೂರು ಹೆಣ್ಣುಮಕ್ಕಳನ್ನು ಕಶ್ಯಪ ಮುನಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾರೆ.
ಕಶ್ಯಪ ಗೋತ್ರ ಆರಂಭವಾಗುವುದೇ ಇಲ್ಲಿಂದ. ಇವರ ಸಂತಾನದಲ್ಲಿ, ದೇವತೆಗಳು, ದೈತ್ಯರು, ದಾನವರು, ನಾಗಾಗಳು, ಮಾನವರು ಎಲ್ಲಾ ಪಂಗಡಗಳ ಜೀವಿಗಳು ಸೇರಿರುತ್ತಾರೆ.
ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ ’ಸತೀಸರ’ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವ ಸತಿಯರಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರಿಗ ಬಳುವಳಿಯಾಗಿ ಕೊಟ್ಟಿದ್ದರಂತೆ. ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ.
ಆಗ ಕಶ್ಯಪರು ಅವರ ಮಗ ’ಅನಂತ ನಾಗ’ನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರ ಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ (ಇಂದಿನ ಕ್ಯಾಸ್ಪಿಯನ್ ಸಮುದ್ರ) ಕರೆಯುತ್ತಾರೆ.
ನಂತರ ವಿಷ್ಣು ಆ ಜಲೋಧ್ಭವ ರಾಕ್ಷಸರ ಸಂಹಾರ ಮಾಡುತ್ತಾರೆ. ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದವ್ಯಾಸಂಗಕ್ಕೆಂದೇ ವಿಶೇಷವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ.ಅದನ್ನು ’ಕಶ್ಯಪರ ಮೈರಾ’-ಕಶ್ಯಪ ಪುರ-ಕ್ರಮೇಣ ಕಾಶ್ಮೀರದ ಉದ್ಭವವಾಗುತ್ತದೆ.
ಈ ಸುಂದರ ಕಾಶ್ಮೀರವನ್ನು ನೋಡಲು ಮುಂದೆ ಗೌರಿಯೂ ಗಣೇಶನ ಜೊತೆ ಹಿಮಚ್ಚಾದಿತ ಪರ್ವತಮಾರ್ಗವಾಗಿ ಬರುತ್ತಿದ್ದಳು. ಅದನ್ನು ‘ಗೌರೀ ಮಾರ್ಗ’ ಎಂದು ಕರೆಯುತ್ತಿದ್ದರು. ಅದೂ ಸಹಾ ಇಸ್ಲಾಮೀಕರಣಗೊಂಡು ‘ಗುಲ್ಮಾರ್ಗ’ ವಾಗಿದೆ.
’ನೀಲಮತಿ ಪುರಾಣ’ ಮತ್ತು ಅದರ ಆಧಾರಿತ ’ರಾಜತರಂಗಿಣಿ’ ಇವು ಕಾಶ್ಮೀರದ ಪೌರಾಣಿಕ ಮತ್ತು ಐತಿಹಾಸಕದ ದಾಖಲೆಗಳು. ಹನ್ನೆರಡನೇ ಶತಮಾನದಲ್ಲಿ ’ಕಲ್ಹಣ’ ಎಂಬ ಪಂಡಿತರು ಬರೆದ ಗ್ರಂಥಗಳ ಸರಮಾಲೆ ವಿಶ್ವದೆಲ್ಲೆಡೆ ಬಹಳ ಕುತೂಹಲ ಮತ್ತು ಆಸ್ಥೆಯಿಂದ ಅಭ್ಯಸಿಸಲಾಗುತ್ತಿದೆ.
- ವಿಂಗ್ ಕಮಾಂಡರ್ ಸುದರ್ಶನ