ಕಡು ಬಡತನದಲ್ಲಿ ಜೀವಿಸುತ್ತಿದ್ದ ಅಜ್ಜಿಯೊಬ್ಬಳು ತನ್ನ ಮನೆಯ ಬಾಗಿಲಿಗೆ 3.5 ಕೆ.ಜಿ ತೂಕದ ಕಲ್ಲನ್ನು ಅಡ್ಡಲಾಗಿ ಇಡುತ್ತಿದ್ದಳು. ಆಕೆ ಮರಣಹೊಂದಿದ ನಂತರ ಆ ಕಲ್ಲು ಸುಮಾರು 10 ಕೋಟಿ ರೂ. ಬೆಲೆಬಾಳುವ 70 ಮಿಲಿಯನ್ ವರ್ಷಗಳಷ್ಟು ಹಳೆಯ ಆಂಬರ್ ಕಲ್ಲು ಎಂದು ತಿಳಿದುಬಂದಿದೆ.
ಕೆಲವೊಮ್ಮೆ ಅದೃಷ್ಟ ನಮ್ಮ ಮನೆಯಲ್ಲಿಯೇ ಅಡಗಿ ಕುಳಿತಿರುತ್ತದೆ, ಇಲ್ಲವೇ ನಮ್ಮ ಸುತ್ತಲೂ ಇರುತ್ತದೆ. ಆದರೆ ಆ ಅದೃಷ್ಟವನ್ನು ಅನುಭವಿಸುವ ಹಣೆಬರಹ ಇಲ್ಲದಿದ್ದರೆ ಅದು ನಮ್ಮ ಬಳಿಯೇ ಇದ್ದರೂ ಅದು ನಮಗೆ ತಿಳಿಯುವುದೇ ಇಲ್ಲ. ವಿಧಿಯ ಲೀಲೆ ಅದೇ ರೀತಿ ಆಗಿರುವ ಕಾರಣ, ಯಾರ ಪಾಲಿಗೆ ಏನು ಬರೆದಿರುತ್ತದೆಯೋ, ಅದನ್ನಷ್ಟೇ ಅನುಭವಿಸಲು ಸಾಧ್ಯ ಎನ್ನುವ ಮಾತಿಗೆ ಸಾಕ್ಷಿಯಾಗಿ ನಿಂತಿದೆ ಈ ಸ್ಟೋರಿ. ಕಡು ಬಡತನದಲ್ಲಿಯೇ ಬೆಂದು ಹೋಗಿ, ಕೊನೆಗೆ ಅದೇ ಬಡತನದಲ್ಲಿಯೇ ಕೊನೆಯುಸಿರೆಳೆದ ಅಜ್ಜಿಯ ಸ್ಟೋರಿ ಇದು. ಆಕೆ ಸತ್ತ ಮೇಲೆ ತಿಳಿದದ್ದು, ಅವಳು ದಿನನಿತ್ಯವೂ ಬಳಸುತ್ತಿದ್ದ ವಸ್ತುವೊಂದು ಸುಮಾರು 10 ಕೋಟಿ ಬೆಲೆ ಬಾಳುವಂಥದ್ದಾಗಿತ್ತು ಎನ್ನುವುದು!
ಇದು ನಡೆದಿರುವುದು ರೊಮೇನಿಯಾದ ರಾಜಧಾನಿ ಬುಖಾರೆಸ್ಟ್‌ನಲ್ಲಿ. ಈ ಸ್ಟೋರಿ ಇದೀಗ ಮತ್ತೆ ವೈರಲ್ ಆಗುತ್ತಿದೆ. ಇಲ್ಲಿಯ ಅಜ್ಜಿಯೊಬ್ಬಳು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಳು. ಮಧ್ಯಮ ಕುಟುಂಬವಳಾಗಿದ್ದ ಈ ಅಜ್ಜಿಯ ಮನೆಯನ್ನು ಒಮ್ಮೆ ಕಳ್ಳರು ಲೂಟಿ ಮಾಡಿ ಎಲ್ಲವನ್ನೂ ಹೊತ್ತೊಯ್ದಾಗ ಏನೂ ಇಲ್ಲದ ಈಕೆ ಬಡವಳಾಗಿಯೇ ಜೀವನ ಮಾಡಬೇಕಾದ ಸ್ಥಿತಿ ಬಂದಿತ್ತು. ಅವಳು ತನ್ನ ಮನೆಯ ಬಾಗಿಲು ಮುಚ್ಚಿಕೊಳ್ಳಬಾರದು ಎನ್ನುವ ಕಾರಣಕ್ಕೆ ಅಡ್ಡಲಾಗಿ ಒಂದು ಕಲ್ಲನ್ನು ಇಟ್ಟಿರುತ್ತಿದ್ದಳು. ಅದು ಸುಮಾರು 3.5 ಕೆ.ಜಿ ತೂಕದ ಕಲ್ಲು. ಅದೇ ಕಲ್ಲನ್ನು ಅಡ್ಡಲಾಗಿ ಇಟ್ಟು ದಿನವೂ ಮಲಗುತ್ತಿದ್ದಳು. ಆದರೆ ಆಕೆಯ ಪಾಲಿಗೆ ಅದೊಂದು ಕಲ್ಲಾಗಿತ್ತು, ಕೇವಲ ಕಲ್ಲು ಮಾತ್ರ. ಅದರ ಬೆಲೆಯೇ ಆಕೆಗೆ ತಿಳಿದಿರಲಿಲ್ಲ. ಬಹುಶಃ ಆಕೆಗೆ ಅದರ ಬೆಲೆ ತಿಳಿದಿದ್ದರೆ ಜೋಪಡಿಯಿಂದ ಐಷಾರಾಮಿ ಬಂಗಲೆಯಲ್ಲಿ ಆಕೆ ಕೋಟ್ಯಧಿಪತಿಯಾಗಿ ಬದುಕಬಹುದಿತ್ತು.
ವಿಧಿಯಾಟವೇ ಬೇರೆಯಾಗಿತ್ತು
ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕಡು ಬಡತನದಲ್ಲಿಯೇ ಅಜ್ಜಿ ಕೊನೆಯುಸಿರೆಳೆದಳು. ನಂತರ ಆಕೆಯ ಅಂತಿಮ ಸಂಸ್ಕಾರ ಮಾಡಲು ಬಂದವರ ಕಣ್ಣಿಗೆ ಆ ಕಲ್ಲು ಬಿದ್ದಿದೆ. ಅದು ಅಮೂಲ್ಯವಾಗಿರುವ ಕಲ್ಲು ಎಂದು ಒಬ್ಬರಿಗೆ ತಿಳಿಯುತ್ತಲೇ ಅದರ ವರದಿಯನ್ನು ಸರ್ಕಾರಕ್ಕೆ ಮಾಡಿದರು. ಬಳಿಕ, ನಡೆದ ಸಂಶೋಧನೆಯಿಂದ ಅಚ್ಚರಿ ಬಹಿರಂಗಗೊಂಡಿತು. ಅದು ಸುಮಾರು 9-10 ಕೋಟಿ ರೂ. ಬೆಲೆ ಬಾಳುವ ಕಲ್ಲು ಎನ್ನುವುದು ತಿಳಿಯಿತು. ವರದಿಗಳ ಪ್ರಕಾರ, ಅಜ್ಜಿಗೆ ಆ ಕಲ್ಲು ನದಿಯ ದಡದಲ್ಲಿ 30-40 ವರ್ಷಗಳ ಹಿಂದೆಯೇ ಸಿಕ್ಕಿತ್ತು. ಮನೆಯ ಬಾಗಿಲು ಪದೇ ಪದೇ ತೆಗೆದುಕೊಳ್ಳುವ ಕಾರಣ, ಆ ಕಲ್ಲನ್ನು ಅಡ್ಡಲಾಗಿ ಇಡಲು ಆಕೆ ತಂದಿದ್ದಳು. ಕೊನೆಗೆ ಅದು ಆಂಬರ್ ಕಲ್ಲು ಎಂದು ಪತ್ತೆಯಾಗಿದೆ. ಇದು ವಿಶ್ವದ ಅತ್ಯಂತ ಅಮೂಲ್ಯ ಕಲ್ಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಕೆಂಪು ಕಲ್ಲು ಸುಮಾರು 70 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಸಹ ಕಂಡುಹಿಡಿಯಲಾಗಿದೆ. ಮರಗಳಿಂದ ಸ್ರವಿಸುವ ಗಮ್ ಸಂಗ್ರಹದಿಂದ ಆಂಬರ್ ರೂಪುಗೊಳ್ಳುತ್ತದೆ. ಇದು ಹೆಚ್ಚಾಗಿ ಚಿನ್ನ ಅಥವಾ ಕೆಂಪು ಬಣ್ಣದ್ದಾಗಿರುತ್ತದೆ. ಅಂತಹ ಕಲ್ಲುಗಳು ರೊಮೇನಿಯಾದ ಕೋಲ್ಟಿಯಲ್ಲಿ ಕಂಡುಬರುತ್ತವೆ.
100 ವರ್ಷಗಳಿಗೂ ಹೆಚ್ಚು ಕಾಲ ಉತ್ಖನನ
ಆಂಬರ್ ಅನ್ನು ಕಂಡುಹಿಡಿಯಲು 100 ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿ ಉತ್ಖನನ ನಡೆಸಲಾಗುತ್ತಿದೆ. ಆ ಮಹಿಳೆಯ ಮನೆಯಲ್ಲಿರುವ ಕಲ್ಲನ್ನು ರುಮೆನೈಟ್ ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ಆ ಮಹಿಳೆಯ ಮನೆಯನ್ನು ಒಮ್ಮೆ ಕಳ್ಳತನ ಮಾಡಲಾಗಿತ್ತು. ಕಳ್ಳರು ಅನೇಕ ಬೆಲೆಬಾಳುವ ವಸ್ತುಗಳನ್ನು ಕದ್ದರು, ಆದರೆ ಈ ಕಲ್ಲು ಬಾಗಿಲಲ್ಲೇ ಇತ್ತು. ಅದು ಎಷ್ಟು ಬೆಲೆಬಾಳುತ್ತದೆ ಎಂದು ಕಳ್ಳರಿಗೂ ಊಹಿಸಲು ಸಾಧ್ಯವಾಗಲಿಲ್ಲ. 1991 ರಲ್ಲಿ ಮಹಿಳೆಯ ಮರಣದ ನಂತರ, ಆಕೆಯ ಸಂಬಂಧಿಕರು ಆ ಕಲ್ಲನ್ನು ತೆಗೆದುಕೊಂಡರು. ಅದರಲ್ಲಿ ಏನಾದರೂ ವಿಶೇಷತೆ ಇದೆ ಮತ್ತು ಅದನ್ನು ಮಾರಾಟ ಮಾಡುವ ಮೂಲಕ ಸ್ವಲ್ಪ ಆದಾಯವನ್ನು ಗಳಿಸಬಹುದು ಎಂದು ಅವರು ನಂಬಿದ್ದರು. ಅವರು ಅದನ್ನು ರೊಮೇನಿಯನ್ ಸರ್ಕಾರಕ್ಕೆ ಮಾರಾಟ ಮಾಡಿದರು, ನಂತರ ಅದನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಯಿತು. ಕಲ್ಲಿನ ಮೇಲಿನ ಸಂಶೋಧನೆಯು ಅದು ಸುಮಾರು 38 ರಿಂದ 70 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಬಹಿರಂಗಪಡಿಸಿತು. ಮಿಚಿಗನ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಒಬ್ಬ ವ್ಯಕ್ತಿ ಆ ಕಲ್ಲನ್ನು ಮೆಟ್ಟಿಲು ಕಲ್ಲಾಗಿ ಬಳಸುತ್ತಿದ್ದ. ನಂತರ, ಅದು $100,000 ಮೌಲ್ಯದ್ದಾಗಿದೆ ಎಂದು ಕಂಡುಹಿಡಿಯಲಾಯಿತು.


