ಟಿಸಿಎಸ್, ಎಕ್ಸೆಂಚರ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿ ಉದ್ಯೋಗ ತೊರೆದು ಕೇವಲ 11,000 ರೂಪಾಯಿಗೆ ಆರಂಭಿಸಿದ ಉದ್ಯಮ ಇದೀಗ ತಿಂಗಳಿಗೆ 3.5 ಲಕ್ಷ ರೂಪಾಯಿ ಆದಾಯ ನೀಡುತ್ತಿದೆ.

ಗುರುಗ್ರಾಂ(ನ.24) ಕಾರ್ಪೋರೇಟ್ ಉದ್ಯೋಗ ತೊರೆದು ಸ್ವಂತ ಉದ್ಯಮ ಆರಂಭಿಸಲು ಧೈರ್ಯ ಬೇಕು. ಕಾರಣ ಉತ್ತಮ ವೇತನ ಸಿಗುವ ಕೆಲಸ ತೊರೆದು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ಹೀಗೆ ಉದ್ಯೋಗ ತೊರೆದು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಕಂಡವರ ಸಾಲಿಗೆ ಗುರುಗ್ರಾಂನ ಮಹಿಳಾ ಟೆಕ್ಕಿ ಶ್ರುತಿ ಕುಂದನ್ ಸೇರಿಕೊಂಡಿದ್ದಾರೆ. ಜೆನ್‌ಪ್ಯಾಕ್ಟ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಹಾಗೂ ಎಕ್ಸೆಂಚರ್ ಕಂಪನಿಗಳಲ್ಲಿ ಉತ್ತಮ ವೇತನಕ್ಕೆ ಕೆಲಸ ಮಾಡಿದ್ದಳು. ಕಾರ್ಪೋರೇಟ್ ಕೆಲಸ ಬಿಟ್ಟು ಸ್ವಂತ ಉದ್ಯಮ ಮಾಡಬೇಕೆಂಬ ಕನಸಿಗೆ ಧೈರ್ಯ ಮಾಡಿ ಹೆಜ್ಜೆ ಇಟ್ಟಿದ್ದಾಳೆ. ಹಲವರು ಬೇಡ ಎಂದೇ ಹೇಳಿದ್ದರು, ಆದರೆ ನಿರ್ಧಾರ ಬದಲಿಸಿದೆ ಮುನ್ನುಗ್ಗಿದ್ದಾಳೆ. ಕೇವಲ 11 ಸಾವಿರ ರೂಪಾಯಿ ಬಂಡವಾಳದಲ್ಲಿ ಆರಂಭಿಸಿದ ಉದ್ಯಮ ಇದೀಗ ತಿಂಗಳಿಗೆ 3.5 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾಳೆ.

7 ವರ್ಷ ಕಾರ್ಪೋರೇಟ್ ಉದ್ಯೋಗಕ್ಕೆ ರಾಜೀನಾಮೆ

ಬರೋಬ್ಬರಿ 7 ವರ್ಷ ಕಾರ್ಪೋರೇಟ್ ಉದ್ಯೋಗದಲ್ಲಿದ್ದ ಶ್ರುತಿ ಕುಂದನ್ 2023ರಲ್ಲಿ ಕೆಲಸಕ್ಕೆ ರಾಜೀನಾಮೆ ಕ್ಯಾಂಡಲ್ ಬ್ಯೂಸಿನೆಸ್ ಆರಂಭಿಸಿದ್ದಳು. ಕೇವಲ 11,000 ರೂಪಾಯಿ ಬಂಡವಾಳದಲ್ಲಿ ಹ್ಯಾಂಡ್ ಮೇಡ್ ಕ್ಯಾಂಡಲ್ ಉದ್ಯಮ ಆರಂಭಿಸಿದ್ದಳು. ಎಲ್ಲರ ಸಲಹೆ ಬಳಿಕ ತನ್ನಲ್ಲೇ ಭಯ ಆವರಿಸಿದ್ದು ಸುಳ್ಳಲ್ಲ. ಹೀಗಾಗಿ ಹೆಚ್ಚು ಹೂಡಿಕೆ ಮಾಡಲಿಲ್ಲ, ಜೊತೆಗೆ ಸಣ್ಣದಾಗಿ ಆರಂಭಿಸಿ ಪ್ರಯೋಗ ಮಾಡುವ ಪ್ಲಾನ್‌ನಲ್ಲಿದ್ದರು. ಆರಂಭದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹ್ಯಾಂಡ್ ಮೇಡ್ ಕ್ಯಾಂಡಲ್ ತಯಾರಿಸಿದ ಬಳಿಕ ಮಾರಾಟ ಮಾಡುವುದು, ಮಾರ್ಕೆಟಿಂಗ್ ಸವಾಲಾಗಿ ಪರಿಣಮಿಸಿತ್ತು. ಶ್ರುತಿ ಕುಂದನ್ ಯಶಸ್ಸಿನ ಸಾಧನೆ ಕುರಿತು ಸೋನಲ್ ಶುಕ್ಲಾ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.

ಪತಿ ಪ್ರಣವ್ ಶ್ರೀ ಬೆಂಬಲದೊಂದಿಗೆ ಮೇಣ, ಮೌಲ್ಡ್ ಸೇರಿದಂತೆ ಇತರ ಕಚ್ಚಾ ಸಾಮಾಗ್ರಿಗಳ ತರಿಸಿಕೊಂಡಿದ್ದಾಳೆ. ಬಳಿಕ ತನ್ನ ಇನ್‌ಸ್ಟಾಗ್ರಾಂ ಖಾತೆ ಮೂಲಕ ಉದ್ಯಮದ ಪ್ರಮೋಶನ್ ಆರಂಭಿಸಿದ್ದಾಳೆ. ಕೆಲ ದಿನಗಳಲ್ಲಿ 700 ಕ್ಯಾಂಡಲ್ ಆರ್ಡರ್ ಬಂದಿದೆ. ಅದು ದುಬೈನಿಂದ. ತಕ್ಷಣವೇ ಒಪ್ಪಿಕೊಂಡು ಹ್ಯಾಂಡ್ ಮೇಡ್ ಕ್ಯಾಂಡಲ್ ತಯಾರಿಸಿ ಪ್ಯಾಕೇಜಿಂಗ್ ಮಾಡಿ ಕಳುಹಿಸಿದ್ದಾಳೆ. ಇಲ್ಲಿಂದ ಶ್ರುತಿ ಕುಂದನ್ ಯಶಸ್ಸಿನ ಪಣಯ ಆರಂಭಗೊಂಡಿತು.

38 ಲಕ್ಷ ರೂಪಾಯಿ ವ್ಯವಹಾರ

ಹಂತ ಹಂತವಾಗಿ ಶ್ರುತಿ ಕುಂದನ್ ಉದ್ಯಮ ಬೆಳೆಯಿತು. ಆರ್ಡರ್ ಹೆಚ್ಚಾಯಿತು. ಒಬ್ಬಳಿಗೆ ನಿರ್ವಹಣೆ ಮಾಡಲು ಕಷ್ಟವಾಯಿತು. ಜೊತೆಗೆ ಮನೆಯಲ್ಲಿ ಎಲ್ಲವನ್ನು ಮಾಡುವುದು ಅಸಾಧ್ಯವಾಯಿತು. ಹೀಗಾಗಿ ಗುರುಗ್ರಾಂನಲ್ಲಿ 1200 ಚದರ ಅಡಿ ವಿಸ್ತೀರ್ಣದ ಕಚೇರಿ ಹಾಗೂ ಪ್ರೊಡಕ್ಷನ್ ಕೇಂದ್ರ ಆರಂಭಗೊಂಡಿತು. ಇದೀಗ 2025ರ ಎಪ್ರಿಲ್‌ನಿಂದ 2026ರ ಫೆಬ್ರವರಿ ವರೆಗೆ ಬರೋಬ್ಬರಿ 38 ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದಾರೆ. ಇದರೊಂದಿಗೆ ತಿಂಗಳ ಆದಾಯ 3 ರಿಂದ 5 ಲಕ್ಷ ರೂಪಾಯಿ, ಇನ್ನು ಹಬ್ಬ ಸೇರಿದಂತೆ ಕೆಲ ವಿಶೇಷ ತಿಂಗಳಲ್ಲಿ 10 ರಿಂದ 11 ಲಕ್ಷ ರೂಪಾಯಿ ಆದಾಯ ಪಡೆದಿದ್ದಾಳೆ. ಯಶಸ್ವಿ ಉದ್ಯಮಿಯಾಗಿ ಶ್ರುತಿ ಕಂದನ್ ಬೆಳೆದಿದ್ದಾರೆ.