ಜಿಟಿಎ 6 ವಿಡಿಯೋ ಗೇಮ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 35000 ಕೋಟಿ ರೂ. ಆದಾಯ ಗಳಿಸಿ ಇತಿಹಾಸ ಸೃಷ್ಟಿಸಿದೆ. ಈ ಗೇಮ್ ನಿರ್ಮಾಣದಲ್ಲಿ ಬೆಂಗಳೂರಿನ 1600 ಡೆವಲಪರ್ಗಳು ಶ್ರಮಿಸಿದ್ದು, ಹಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಇದು ಹಿಂದಿಕ್ಕಿದೆ.
ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ ರಾಕ್ಸ್ಟಾರ್ ಗೇಮ್ ನಿರ್ಮಾಣದ ಜನಪ್ರಿಯ ವಿಡಿಯೋ ಗೇಮ್ ಜಿಟಿಎ 6 (ಗ್ರ್ಯಾಂಡ್ ಥೆಫ್ಟ್ ಆಟೋ 6) ಗಳಿಕೆಯಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ 24 ಗಂಟೆಯಲ್ಲಿಯೇ ಜಗತ್ತಿನಾದ್ಯಂತ 35000 ಕೋಟಿ ರು. ಆದಾಯ ಗಳಿಸಿದೆ.
ಅಂದಾಜು 35000 ಕೋಟಿ ರು. ಆದಾಯ
ನ.19ರ ಮಧ್ಯರಾತ್ರಿ ಗೇಮಿಂಗ್ ಬಿಡುಗಡೆಯಾಗಿತ್ತು. ಸುಮಾರು 9300 ಕೋಟಿ ರು. ವೆಚ್ಚದಲ್ಲಿ ತಯಾರಾಗಿದ್ದ ಈ ಗೇಮ್ ಒಂದೇ ದಿನದಲ್ಲಿ ವೆಚ್ಚಕ್ಕಿಂತ ಅಂದಾಜು 4 ಪಟ್ಟು ಲಾಭ ಗಳಿಸಿದೆ. ಕೇವಲ ಮೊದಲ ದಿನವೇ ಮಾರಾಟದಿಂದ ಗಳಿಸಿದ ಅಂದಾಜು 35000 ಕೋಟಿ ರು. ಆದಾಯವು ಹಾಲಿವುಡ್ ಸಿನಿಮಾಗಳ ಆದಾಯ ದಾಖಲೆಯನ್ನು ಮೀರಿಸಿದೆ. ವಿಶ್ವದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿರುವ ಅವೆಂಜರ್ಸ್: ಎಂಡ್ಗೇಮ್ ( 27,000 ಕೋಟಿ ರು.)ಗಿಂತಲೂ ಅಧಿಕ.
ಈ ಬೃಹತ್ ಗೇಮ್ ನಿರ್ಮಾಣದ ಹಿಂದೆ ಕರ್ನಾಟಕದ ಪಾತ್ರವೂ ಇದ್ದು, ರಾಕ್ಸ್ಟಾರ್ ಇಂಡಿಯಾದ ಬೆಂಗಳೂರು ಕಚೇರಿಯ ಸುಮಾರು 1600 ವೆಬ್ ಡೆವಲಪರ್ಗಳು ಇದರಲ್ಲಿ ಭಾಗಿಯಾಗಿದ್ದರು.
ಹಳೆ ಆವೃತ್ತಿಯಲ್ಲಿದೆ ಕನ್ನಡ ಸಾಂಗ್
ಜಿಟಿಎದ ಎರಡನೇ ಆವೃತ್ತಿಯಲ್ಲಿ ವಿನೋದ್ ರಾಜ್ಕುಮಾರ್ ನಟನೆಯ ಕನ್ನಡ ಸಿನಿಮಾ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಸಿನಿಮಾದ ‘ನೀವೇ ನನ್ನ ತಾಯಿ ತಂದೆ’ ಹಾಡು ಸೇರಿಕೊಂಡಿದೆ. 2005ರಲ್ಲಿ ಈ ಆವೃತ್ತಿ ಪ್ರಸಾರವಾಗಿತ್ತು. ಜಿಟಿಎ ಗೇಮ್ನಲ್ಲಿ ಒಂದು ಕಲ್ಪಿತ ರೇಡಿಯೋ ಸ್ಟೇಷನ್ ಇದೆ. ಆ ಸ್ಟೇಷನ್ ಹೆಸರು ರೇಡಿಯೋ ಡೆಲ್ ಮುಂಡೋ ಎಂದು, ಅಲ್ಲಿನ ಆರ್ಜೆ ಹೆಸರು ಗವಾಸ್ಕರ್, ಆತ ರೇಡಿಯೋ ಡೆಲ್ ಮುಂಡೋ ಹಾಡುಗಳನ್ನು ಪ್ರಸಾರ ಮಾಡುತ್ತಾನೆ. ಜಿಟಿಎ ಗೇಮಿನಲ್ಲಿ ವಾಹನ ಏರಿದರೆ ರೇಡಿಯೋ ಡೆಲ್ ಮುಂಡೋದ ಹಾಡುಗಳು ಪ್ರಸಾರ ಆಗುತ್ತವೆ. ಆಗ ಕನ್ನಡದ ‘ನೀವೆ ನನ್ನ ತಾಯಿ ತಂದೆ’ ಹಾಡು ಸಹ ಪ್ರಸಾರ ಆಗುತ್ತದೆ.
















