ಹಣ್ಣುಗಳಿಂದ ಆರೋಗ್ಯಕ್ಕೆ ನೂರೆಂಟು ಲಾಭಗಳಿವೆ. ಹಣ್ಣುಗಳನ್ನು ತಿನ್ಬೇಡಿ ಅಂತ ಯಾವ ವೈದ್ಯರೂ ಸಾಮಾನ್ಯವಾಗಿ ಹೇಳೋದಿಲ್ಲ. ಆದರೆ ಇದೀಗ ಲಿಚೀ ಹಣ್ಣುಗಳಿಂದ ದೂರವಿರಿ ಅಂತಿದ್ದಾರೆ ವೈದ್ಯರು. ಹೌದು, ಬಿಹಾರದಲ್ಲಿ ಅಕ್ಯೂಟ್ ಎನ್ಸಫಲೈಟಿಸ್ ಸಿಂಡ್ರೋಮ್‌ನಿಂದ ಜೀವ ಕಳೆದುಕೊಂಡ ಮಕ್ಕಳ ಸಂಖ್ಯೆ 108 ಮುಟ್ಟಿದೆ. ಈ ಮಕ್ಕಳೆಲ್ಲರೂ ಲಿಚೀ ಹಣ್ಣನ್ನು ಸೇವಿಸಿದ್ದರು ಎಂಬುದನ್ನು ಗಮನಿಸಿರುವ ವೈದ್ಯರು, ಆ ಹಣ್ಣಿನ ಸೇವನೆ ಬೇಡ, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಲಿಚಿ ಸೇವಿಸಲೇಬೇಡಿ ಎಂದು ಎಚ್ಚರಿಸಿದ್ದಾರೆ. 

ಮಕ್ಕಳ ಸಾವಿನ ಬಗ್ಗೆ ಮಾನತಾಡುತ್ತಾ ಸ್ಕೋರ್ ಕೇಳಿದ ಸಚಿವ

ಏನಿದು ಅಕ್ಯೂಟ್ ಎನ್ಸಫಲೈಟಿಸ್ ಸಿಂಡ್ರೋಮ್‌?
ಮೆದುಳು ಊತ ಹಾಗೂ ಸಂಬಂಧಿಸಿದ ಸಮಸ್ಯೆಗಳು ಎನ್ಸಫಲೈಟಿಸ್ ಲಕ್ಷಣ. ಇದರಿಂದಾಗಿ ಜ್ವರ ಬರುವುದು, ವಾಂತಿ, ಗೊಂದಲ, ಕತ್ತು ಅಲುಗಿಸಲಾಗದಿರುವುದು, ಶಕ್ತಿಹೀನತೆ, ಹಸಿವಾಗದಿರುವುದು, ನೆನಪು ಹೋಗುವುದು, ಭ್ರಮೆ, ವರ್ತನೆಯಲ್ಲಿ ಪೂರ್ಣ ಬದಲಾವಣೆ, ಮಾತಾಡಲು, ಕೇಳಲು ಸಮಸ್ಯೆ, ಕೋಮಾದಂತ ತೊಂದರೆಗಳು ಕಾಣಿಸಿಕೊಳ್ಳಬಹುದು. ಈ ಕಾಯಿಲೆಯು ವೈರಸ್‌ನಿಂದ ಹರಡುತ್ತದೆ. ಸಾಮಾನ್ಯವಾಗಿ ಶಿಶುವಿಗೆ ವೈರಲ್ ಫೀವರ್ ಬಂದ ಬಳಿಕ ಎನ್ಶಫಲೈಟಿಸ್ ಕಾಣಿಸಬಹುದು. ಈ ಸಂದರ್ಭದಲ್ಲಿ ಮಗುವು ಇಡೀ ದಿನ ಅಳುತ್ತಿರುವುದು, ದೇಹ ಸೆಟೆದುಕೊಂಡಿರುವುದು, ನೆತ್ತಿಯ ಭಾಗದಲ್ಲಿ ಊತ ಮುಂತಾದ ಲಕ್ಷಣಗಳನ್ನು ತೋರಿಸುತ್ತದೆ. 

ಲಿಚೀಯಿಂದ ಹೇಗೆ ಎನ್ಸಫಲೈಟಿಸ್ ಬರುತ್ತದೆ?
ಬಿಹಾರದಲ್ಲಿ ಮಕ್ಕಳ ಸಾವಿಗೆ ಖಾಲಿ ಹೊಟ್ಟೆಯಲ್ಲಿ ಲಿಚೀ ಹಣ್ಣು ಸೇವನೆ, ಅತಿಯಾದ ಬಿಸಿಲಿನಿಂದ ಡಿಹೈಡ್ರೇಶನ್ ಹಾಗೂ ಹ್ಯುಮಿಡಿಟಿಯು ಎನ್ಸಫಲೈಟಿಸ್‌ಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಲಿಚೀಯಲ್ಲಿ ಹೈಪೋಗ್ಲೈಸಿನ್ ಎ ಎಂಬ ವಿಷವಸ್ತುವಿದ್ದು, ಅದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಅದು ರಕ್ತದಲ್ಲಿ ಸಕ್ಕರೆಯನ್ನು ಪೂರ್ತಿ ಕಡಿಮೆಗೊಳಿಸುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಮೊದಲೇ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಇರುವ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಮತ್ತೆ ಮತ್ತೆ ಲಿಚೀ ಸೇವಿಸಿದಾಗ ಅದು ಅತಿಯಾದ ಸುಸ್ತು, ತಲೆ ತಿರುಗುವಿಕೆ, ನೆನಪಿನ ಶಕ್ತಿ ಕಳೆದುಕೊಳ್ಳುವುದು, ಗೊಂದಲದಲ್ಲಿಡುವುದು  ಹಾಗೂ ಸಾವಿಗೂ ಕಾರಣವಾಗಬಹುದು. ಇನ್ನು ಎನ್ಸಫಲೈಟಿಸ್ ಲಕ್ಷಣಗಳು ಕಂಡುಬಂದರೆ ವೈದ್ಯರು ಮೊದಲು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸಲು ಚಿಕಿತ್ಸೆ ನೀಡುತ್ತಾರೆ. ಹಾಗಾಗಿ, ಲಿಚೀಗೂ ಎನ್ಸಫಲೈಟಿಸ್‌ಗೂ ಸಂಬಂಧವಿರಬಹುದು ಎನ್ನಲಾಗಿದೆ. ಆದರೆ, ಈ ಸಂಬಂಧ ಇನ್ನೂ ನಿಖರ ಅಧ್ಯಯನಗಳ ಅಗತ್ಯವಿದೆ. ಸಧ್ಯ ಖಾಲಿ ಹೊಟ್ಟೆಯಲ್ಲಿ ಲಿಚೀ ಸೇವನೆ ಬೇಡ ಎಂದಷ್ಟೇ ವೈದ್ಯರು ಹೇಳುತ್ತಿರುವುದು. 

ಈ ಹಣ್ಣು ಮಹಾ ಮದ್ದು

ಹಾಗಂತ ಲಿಚೀ ಏನು ಪೂರ್ಣ ಕೆಟ್ಟ ಹಣ್ಣಲ್ಲ!
ಲಿಚೀಯು ಹೇರಳ ವಿಟಮಿನ್‌, ಮಿನರಲ್ಸ್, ಎಪಿಕೆಟೆಚಿನ್ ಹಾಗೂ ರೂಟಿನ್‌ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯಕ್ಕೆ ಸಾಕಷ್ಟು ಲಾಭಕಾರಿ. ಅದರಲ್ಲೂ ಚರ್ಮದ ಆರೋಗ್ಯ ಹೆಚ್ಚಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಲಿಚೀ ನಿಸ್ಸೀಮ. ಕ್ಯಾನ್ಸರ್ ತಡೆದು, ತೂಕ ಇಳಿಸಿಕೊಳ್ಳಲೂ ಸಹಕಾರಿ. ಹೆಲ್ದೀ ಡಯಟ್ ಭಾಗವಾಗಿ ಮಿತಿಯಲ್ಲಿ ಲಿಚೀ ಸೇವನೆ ಮಾಡಬೇಕೆಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.