ಕುಡಿಯುವ ನೀರಿನ ಬಾಟಲಿಗಳ ಮುಚ್ಚಳದ ಬಣ್ಣಗಳ ಹಿಂದಿನ ರಹಸ್ಯ ಮತ್ತು ಅವುಗಳ ಅರ್ಥವನ್ನು ವಿವರಿಸಲಾಗಿದೆ. ಮುಚ್ಚಳದ ಬಣ್ಣಕ್ಕೂ ನೀರಿನ ಶುದ್ಧತೆಗೂ ಇರುವ ಸಂಬಂಧದ ಬಗ್ಗೆ ತಜ್ಞರ ಸಲಹೆಗಳನ್ನು ಒಳಗೊಂಡಿದೆ.

ನಾವು ಮನೆಯಿಂದ ಹೊರಗೆ ಹೋದಾಗ ದಿನನಿತ್ಯದ ಪ್ರಯಾಣದ ವೇಳೆ ಅಥವಾ ಅಂಗಡಿಗಳಲ್ಲಿ ನಾವು ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ. ಆದರೆ, ಅವುಗಳ ಮೇಲಿನ ಮುಚ್ಚಳಗಳು (Caps) ನೀಲಿ, ಹಸಿರು, ಬಿಳಿ, ನೇರಳೆ, ಕಪ್ಪು, ಬೆಳ್ಳಿ ಅಥವಾ ಚಿನ್ನದ ಬಣ್ಣದಲ್ಲಿರುವುದನ್ನು ಗಮನಿಸಿರುತ್ತೇವೆ. ಬಿಸ್ಲೆರಿ (Bisleri) ಹಸಿರು, ಕಿನ್ಲೆ (Kinley) ಮತ್ತು ಅಕ್ವಾಫಿನಾ (Aquafina) ನೀಲಿ, ಬೇಲಿ (Bailley) ಹಾಗೂ ಕ್ಯಾಂಪಾ ಶ್ಯೂರ್ (Campa Sure) ನೇರಳೆ, ಕ್ಲಿಯರ್ (Clear) ಬಿಳಿ ಹಾಗೂ ವೇದಿಕಾ (Vedica) ಚಿನ್ನದ ಬಣ್ಣದ ಮುಚ್ಚಳಗಳನ್ನು ಹೊಂದಿರುತ್ತವೆ. ಈ ಬಣ್ಣಗಳ ಹಿಂದಿನ ರಹಸ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳು ನಡೆಯುತ್ತಿರುತ್ತವೆ. ಹಾಗಾದರೆ ಇದರ ಹಿಂದಿನ ನಿಜವಾದ ಕಾರಣವೇನು?

ಮುಚ್ಚಳದ ಬಣ್ಣಕ್ಕಿಲ್ಲ ಕಾನೂನು ನಿಯಮ

ಮೊದಲನೆಯದಾಗಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಥವಾ ಬಿಐಎಸ್ (BIS) ನೀರಿನ ಬಾಟಲಿ ಮುಚ್ಚಳಗಳ ಬಣ್ಣಕ್ಕೆ ಯಾವುದೇ ಕಡ್ಡಾಯ ಕಾನೂನು ನಿಯಮವನ್ನು ನಿಗದಿಪಡಿಸಿಲ್ಲ. ಪ್ರಮುಖವಾಗಿ ಕಂಪನಿಗಳು ತಮ್ಮ ಬ್ರ್ಯಾಂಡ್ ಗುರುತಿಗಾಗಿ (Branding) ಹಾಗೂ ಅಂಗಡಿಗಳ ಶೆಲ್ಫ್‌ಗಳಲ್ಲಿ ಗ್ರಾಹಕರನ್ನು ತಕ್ಷಣ ಆಕರ್ಷಿಸಲು ಪ್ರತ್ಯೇಕ ಬಣ್ಣಗಳನ್ನು ಬಳಸುತ್ತವೆ. ಉದಾಹರಣೆಗೆ, ಬಿಸ್ಲೆರಿ ತನ್ನ ವಿಶಿಷ್ಟ ಹಸಿರು ಬಣ್ಣವನ್ನು ಹಾಗೂ ರೈಲ್ ನೀರ್ ಆಕಾಶ ನೀಲಿ ಬಣ್ಣವನ್ನು ಗುರುತಾಗಿ ಬಳಸುತ್ತವೆ.

ಆದಾಗ್ಯೂ, ಮಾರುಕಟ್ಟೆಯಲ್ಲಿ ನೀರಿನ ವಿಧಗಳನ್ನು ಸುಲಭವಾಗಿ ಗುರುತಿಸಲು ಹಲವು ಕಂಪನಿಗಳು ಅನೌಪಚಾರಿಕವಾಗಿ ಕೆಲವು ಬಣ್ಣಗಳ ಸಂಕೇತವನ್ನು ಅನುಸರಿಸುತ್ತವೆ:

ನೀಲಿ ಬಣ್ಣದ ಮುಚ್ಚಳ: ಇದು ಸಾಮಾನ್ಯವಾಗಿ ಶುದ್ಧೀಕರಿಸಿದ ಕುಡಿಯುವ ನೀರು (RO/UV) ಅಥವಾ ನೈಸರ್ಗಿಕ ಸ್ಪ್ರಿಂಗ್ ಹಾಗೂ ಮಿನರಲ್ ವಾಟರ್ ಅನ್ನು ಸೂಚಿಸುತ್ತದೆ.

ಬಿಳಿ ಬಣ್ಣದ ಮುಚ್ಚಳ: ಸಾಮಾನ್ಯವಾಗಿ ಆರ್‌ಒ (RO) ಮೂಲಕ ಸಂಸ್ಕರಿಸಿದ ದೈನಂದಿನ ಕುಡಿಯುವ ನೀರಿಗೆ ಇದನ್ನು ಬಳಸಲಾಗುತ್ತದೆ.

ಹಸಿರು ಬಣ್ಣದ ಮುಚ್ಚಳ: ಕೆಲವು ಕಂಪನಿಗಳು ಬ್ರ್ಯಾಂಡಿಂಗ್‌ಗೆ ಬಳಸಿದರೆ, ಇನ್ನು ಕೆಲವೆಡೆ ಫ್ಲೇವರ್ಡ್ ಅಥವಾ ಹರ್ಬಲ್ ನೀರನ್ನು ಸೂಚಿಸುತ್ತದೆ.

ಕಪ್ಪು ಬಣ್ಣದ ಮುಚ್ಚಳ: ಇದು ಹೆಚ್ಚಾಗಿ ಆಲ್ಕಲೈನ್ (Alkaline - ಅಧಿಕ pH ಮಟ್ಟದ) ಅಥವಾ ಪ್ರೀಮಿಯಂ ಸ್ಪಾರ್ಕ್ಲಿಂಗ್ ನೀರನ್ನು ಸೂಚಿಸುತ್ತದೆ.

ಕೆಂಪು ಬಣ್ಣದ ಮುಚ್ಚಳ: ಎಲೆಕ್ಟ್ರೋಲೈಟ್‌ಗಳು (Electrolytes) ಅಥವಾ ಹೆಚ್ಚುವರಿ ಪೋಷಕಾಂಶಗಳನ್ನು ಒಳಗೊಂಡಿರುವ ನೀರಿಗೆ ಇದನ್ನು ಬಳಸುತ್ತಾರೆ.

ಚಿನ್ನದ ಅಥವಾ ಬೆಳ್ಳಿ ಬಣ್ಣ: ನೈಸರ್ಗಿಕ ಮಿನರಲ್ ವಾಟರ್ ಅಥವಾ ವಿಟಮಿನ್‌ಯುಕ್ತ ಪ್ರೀಮಿಯಂ ನೀರಿನ ಬಾಟಲಿಗಳಿಗೆ ಈ ಬಣ್ಣಗಳನ್ನು ನೀಡಲಾಗುತ್ತದೆ.

ಬಾಟಲಿ ಕ್ಯಾಪ್ ಬಣ್ಣಕ್ಕೂ ಕುಡಿಯುವ ನೀರಿಗೂ ಸಂಬಂಧವಿಲ್ಲ

ಮುಚ್ಚಳದ ಬಣ್ಣವು ನೀರಿನ ಶುದ್ಧತೆಗೆ ಕಾನೂನುಬದ್ಧ ಗ್ಯಾರಂಟಿ ಅಲ್ಲ. ಒಂದೇ ಬಣ್ಣದ ಮುಚ್ಚಳವಿರುವ ಎರಡು ಬಾಟಲಿಗಳಲ್ಲಿ ನೀರಿನ ಮೂಲ ಮತ್ತು ಶುದ್ಧೀಕರಣ ವಿಧಾನ ವಿಭಿನ್ನವಾಗಿರಬಹುದು. ಆದ್ದರಿಂದ ಕುಡಿಯುವ ನೀರಿನ ಬಾಟಲಿ ಖರೀದಿಸುವಾಗ ಕೇವಲ ಮುಚ್ಚಳದ ಬಣ್ಣವನ್ನು ನಂಬದೆ, ಬಾಟಲಿಯ ಮೇಲಿನ ಲೇಬಲ್‌ನಲ್ಲಿ 'Packaged Drinking Water' ಅಥವಾ 'Natural Mineral Water' ಎಂದು ಬರೆದಿದೆಯೇ ಎಂಬುದನ್ನು ಓದಿ ತಿಳಿದುಕೊಳ್ಳಿ. ಜೊತೆಗೆ ಬಾಟಲಿಯ ಮೇಲೆ ಐಎಸ್‌ಐ (ISI) ಮಾರ್ಕ್, FSSAI ಪರವಾನಗಿ ಸಂಖ್ಯೆ, ಉತ್ಪಾದನಾ ದಿನಾಂಕ ಹಾಗೂ ಮುಚ್ಚಳದ ಸೀಲ್ ಸುರಕ್ಷಿತವಾಗಿದೆಯೇ ಎಂಬುದನ್ನು ತಪ್ಪದೇ ಪರಿಶೀಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.