Asianet Suvarna News Asianet Suvarna News

ಮಾಂಸಾಹಾರಿಗಳಿಗಿಂತ ಪುಳ್ಚಾರ್‌ಗಳೇ ಆರೋಗ್ಯವಂತರು: ಆಕ್ಸ್‌ಫರ್ಡ್

ಮಾಂಸಾಹಾರಿಗಳು ಸಸ್ಯಾಹಾರಿಗಳನ್ನು ಸಾಮಾನ್ಯವಾಗಿ ಪುಳ್ಚಾರ್ ಎಂದು ಆಡಿಕೊಳ್ಳುವುದುಂಟು. ಆದರೆ, ಸಸ್ಯಾಹಾರಿಗಳೇ ಹೆಚ್ಚು ಆರೋಗ್ಯವಂತರು ಎನ್ನುತ್ತಿದೆ ಆಕ್ಸ್‌ಫರ್ಡ್‌ನ ಹೊಸ ಅಧ್ಯಯನ ವರದಿ.

vegetarians lead healthier life than meat-eaters study
Author
Bengaluru, First Published Jun 7, 2019, 5:13 PM IST

ಮಾಂಸಾಹಾರ ತಿನ್ನುವವರಿಗೆ ಸಸ್ಯಾಹಾರ ನಾಲಿಗೆಗೆ ತಾಕುವುದಿಲ್ಲ. ಅಲ್ಲದೇ, ಸಸ್ಯಾಹಾರದಲ್ಲೇನಿದೆ ಎಂಬ ಅಸಡ್ಡೆಯೂ, ಸಸ್ಯಾಹಾರಿಗಳು ಬಲಹೀನರು ಎಂಬ ಅಭಿಪ್ರಾಯವೂ ಇರುತ್ತದೆ. ಆದರೆ, ಸಸ್ಯಾಹಾರಿಗಳೇ ಮಾಂಸಾಹಾರಿಗಳಿಗಿಂತ ಹೆಚ್ಚು ಆರೋಗ್ಯವಂತ ಜೀವನ ನಡೆಸುತ್ತಾರೆ ಎಂದು ಆಕ್ಸ್‌ಫರ್ಡ್‌ನ ಹೊಸ ಅಧ್ಯಯನ ಕಂಡುಕೊಂಡಿದೆ. ಅಲ್ಲದೆ, ಹೃದಯ ಸಮಸ್ಯೆಗಳು, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕೂಡಾ ಮಾಂಸಾಹಾರಿಗಳಲ್ಲೇ ಹೆಚ್ಚು ಎಂದು ಅದು ಹೇಳಿದೆ.

ಈ ಅಧ್ಯಯನ ವರದಿಯು ಕ್ಲಿನಿಕಲ್ ನ್ಯೂಟ್ರಿಶನ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಇದು ಈ ವಿಷಯದಲ್ಲಿ ನಡೆಸಿದ ಅತಿ ದೊಡ್ಡ ಅಧ್ಯಯನವಾಗಿದೆ. ಸುಮಾರು 60,310 ಜನರನ್ನು ಅಧ್ಯಯನ ಒಳಗೊಂಡಿತ್ತು. 
ನಿತ್ಯ ಮಾಂಸಾಹಾರಿಗಳು, ಕಡಿಮೆ ಮಾಂಸಾಹಾರಿಗಳು, ಫಿಶ್ ಈಟರ್ಸ್ ಹಾಗೂ ಸಸ್ಯಾಹಾರಿಗಳು ಎಂಬ ನಾಲ್ಕು ವಿಭಾಗ ಮಾಡಿಕೊಂಡು ಅಧ್ಯಯನ ನಡೆಸಿದಾಗ, ಗಂಭೀರ ಕಾಯಿಲೆಗಳ ವಿಷಯದಲ್ಲಿ ಈ ಬೇರೆ ಬೇರೆ ವಿಭಾಗಗಳ ನಡುವೆ ಬೇರೆಯದೇ ಆದ ಫಲಿತಾಂಶ ಬಂದಿದ್ದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 

ಮೆಂತೆ ತಂಬುಳಿ ಮಾಡೋದು ಹೀಗೆ

ನಿತ್ಯ ನಾನ್ ವೆಜ್ ತಿನ್ನುವವರಿಗೆ ಹೋಲಿಸಿದರೆ ಅಪರೂಪಕ್ಕೆ ಮಾಂಸ ತಿನ್ನುವವರಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಉಸಿರಾಟ ಸಮಸ್ಯೆಗಳು ಹಾಗೂ ಇತರೆ ಗಂಭೀರ ಕಾಯಿಲೆಗಳಿಂದ ಮೃತ ಪಡುವವರ ಸಂಖ್ಯೆ ಶೇ.30-45ರಷ್ಟು ಕಡಿಮೆ ಕಂಡುಬಂದಿದೆ. ಮೀನು ತಿನ್ನುವವರಲ್ಲಿ ಕ್ಯಾನ್ಸರ್‌ನಿಂದ ಸಾವು ಶೇ.20ರಷ್ಟು ಕಡಿಮೆಯಿದ್ದರೆ, ಸರ್ಕ್ಯುಲೇಟರಿ ಕಾಯಿಲೆಗಳಿಂದ ಸಾವು ಸಂಭವಿಸುವ ಸಾಧ್ಯತೆ ಶೇ.20 ಹೆಚ್ಚು ಕಂಡುಬಂತು. ಅದೇ ವೆಜಿಟೇರಿಯನ್ಸ್ ಹಾಗೂ ವೇಗನ್ಸ್‌ರಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಲಿಂಫ್ಯಾಟಿಕ್ ಕ್ಯಾನ್ಸರ್ ಹಾಗೂ ಹೆಮಟೋಪೊಯಟಿಕ್ ಟಿಶ್ಯೂ ಕ್ಯಾನ್ಸರ್ ಶೇ.50ರಷ್ಟು ಕಡಿಮೆ ಕಂಡುಬಂದಿದೆ. 

ಇನ್ನು ಲಿಂಗ, ಸಿಗರೇಟ್ ಸೇವನೆ ಚಟ, ದೇಹದ ತೂಕ ಯಾವುದೇ ವ್ಯತ್ಯಾಸವಿದ್ದರೂ, ಮೇಲಿನ ಫಲಿತಾಂಶ ಬದಲಾಗಿಲ್ಲ ಎಂದು ವರದಿ ವಿವರಿಸಿದೆ.

ಸಮೋಸಾ ಮುಂದೆ ಮಂಡಿಯೂರಿದ ಬರ್ಗರ್

ಹಾಗಂತ ಭಾರತೀಯರ ಮೇಲೆ ಈ ಅಧ್ಯಯನ ಮಾಡಿದರೆ ಫಲಿತಾಂಶ ಹೀಗೆಯೇ ಬರುತ್ತದೆ ಎಂದು ಹೇಳಲಾಗುವುದಿಲ್ಲ ಎನ್ನುತ್ತಾರೆ ವೈದ್ಯರು. 'ಭಾರತದಲ್ಲಿ ವೆಜಿಟೇರಿಯನ್ಸ್ ಹಾಗೂ ನಾನ್ ವೆಜಿಟೇರಿಯನ್ಸ್ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಆದರೆ, ಇಲ್ಲಿನ ಸಸ್ಯಾಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಎಣ್ಣೆಯಿಂದ ದೊರೆತ ಫ್ಯಾಟ್ ಹೆಚ್ಚು. ಇದೇ ಕಾರಣಕ್ಕೆ ಇಲ್ಲಿ ಸಸ್ಯಾಹಾರಿಗಳಲ್ಲೂ ಹೃದಯ ಸಮಸ್ಯೆಗಳು, ಬೊಜ್ಜು, ಡಯಾಬಿಟೀಸ್ ಕಾಮನ್,' ಎನ್ನುತ್ತಾರೆ ಮಿಶ್ರಾ. 

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿ ಐಎಆರ್‌ಸಿ ಕೂಡಾ ಮಾಂಸ ಸೇವನೆಯು, ಅದರಲ್ಲೂ ಪ್ರೊಸೆಸ್ಡ್ ಮೀಟ್ ಮನುಷ್ಯರಲ್ಲಿ ಕ್ಯಾನ್ಸರ್ ಸಂಭಾವ್ಯತೆ ಹೆಚ್ಚಿಸುತ್ತದೆ ಎಂದಿತ್ತು. ಈ ಫಲಿತಾಂಶ ಮುಖ್ಯವಾಗಿ ಕರುಳಿನ ಕ್ಯಾನ್ಸರ್‌ಗಾದರೂ, ಪ್ಯಾಂಕ್ರಿಯಾಟಿಕ್ ಹಾಗೂ ಪ್ರೊಸ್ಟೇಟ್ ಕ್ಯಾನ್ಸರ್‌ನ್ನು ಸಹ ಅಧ್ಯಯನ ಒಳಗೊಂಡಿತ್ತು. 

vegetarians lead healthier life than meat-eaters study

ಮಾಲಿನ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳ ಕುರಿತ ಇನ್ನೊಂದು ವರದಿಯಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆಯು ಕ್ಯಾನ್ಸರ್ ಹಾಗೂ ಹೃದಯ ರೋಗಗಳನ್ನು ತಪ್ಪಿಸಲು ಪೋಷಕಾಂಶಯುಕ್ತ ಸಸ್ಯಜನ್ಯ ಆಹಾರವನ್ನು ಹೆಚ್ಚಿಸುವಂತೆ ಜನತೆಗೆ ಕರೆ ನೀಡಿತ್ತು. ಒಟ್ಟಿನಲ್ಲಿ ಸಸ್ಯಾಹಾರ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎಂದಾಯ್ತು. 
 

Follow Us:
Download App:
  • android
  • ios