ಎರಡು ನಾಗರಹಾವುಗಳು ಮುಖಾಮುಖಿಯಾದ ವಿಡಿಯೋ ವೈರಲ್ ಆಗಿದೆ. ಸಣ್ಣ ನಾಗರಹಾವಿನ ಮೇಲೆ ದೊಡ್ಡ ಹಾವು ಮಿಂಚಿನ ವೇಗದಲ್ಲಿ ದಾಳಿ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಾವುಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಅಪಾಯಕಾರಿ ವಿಷಕಾರಿ ಹಾವುಗಳು ಮುಖಾಮುಖಿಯಾಗುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಎರಡು ನಾಗರಹಾವುಗಳು ಮುಖಾಮುಖಿಯಾಗಿ ನಿಂತಿರುವ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಒಂದೆಡೆ ಸಣ್ಣ ಗಾತ್ರದ ನಾಗರಹಾವು ಹೆಡೆ ಎತ್ತಿಕೊಂಡು ನಿಂತಿರುವುದನ್ನು ಕಾಣಬಹುದು. ಅದರ ಎದುರಲ್ಲೇ ಅದಕ್ಕಿಂತ ಹಲವು ಪಟ್ಟು ದೊಡ್ಡದಾದ ಮತ್ತೊಂದು ನಾಗರಹಾವು ಹೆಡೆ ಬಿಚ್ಚಿಕೊಂಡು ನಿಂತಿದೆ. ಎರಡೂ ಹಾವುಗಳು ಪರಸ್ಪರ ಎದುರುಬದುರಾಗಿ ನಿಂತಿರುವ ಈ ದೃಶ್ಯವೇ ಸಾಕಷ್ಟು ಕುತೂಹಲ ಮೂಡಿಸುತ್ತದೆ.

ಅಷ್ಟರಲ್ಲಿ ದೊಡ್ಡ ಗಾತ್ರದ ನಾಗರಹಾವು ಸಣ್ಣ ಹಾವಿನತ್ತ ತೀಕ್ಷ್ಣವಾಗಿ ನೋಡುತ್ತಾ, ಏಕಾಏಕಿ ಮಿಂಚಿನ ವೇಗದಲ್ಲಿ ದಾಳಿ ಮಾಡುತ್ತದೆ. ಯಾವುದೇ ಮುನ್ಸೂಚನೆ ನೀಡದೆ ಸಣ್ಣ ನಾಗರಹಾವಿನ ತಲೆಯ ಭಾಗಕ್ಕೆ ನೇರವಾಗಿ ಕಚ್ಚುವುದನ್ನು ವಿಡಿಯೋದಲ್ಲಿ ಕಾಣಬಹುದು. ದೊಡ್ಡ ಹಾವಿನ ದಾಳಿಯಿಂದ ಸಣ್ಣ ನಾಗರಹಾವು ತೀವ್ರವಾಗಿ ನರಳಾಡುತ್ತದೆ. ನೋವು ತಾಳಲಾರದೆ ದೇಹವನ್ನು ಮಡಚಿಕೊಳ್ಳುತ್ತಾ ಒದ್ದಾಡುತ್ತಿರುವ ದೃಶ್ಯ ನೋಡುಗರ ಗಮನ ಸೆಳೆಯುತ್ತದೆ.

ದಾಳಿ ನಡೆಸಿದ ಬಳಿಕ ದೊಡ್ಡ ನಾಗರಹಾವು ಸ್ವಲ್ಪ ದೂರ ಸರಿಯುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಸಾಮಾನ್ಯವಾಗಿ ಕಿಂಗ್ ಕೋಬ್ರಾಗಳು ಇತರ ಹಾವುಗಳನ್ನು ಆಹಾರವಾಗಿ ಸೇವಿಸುತ್ತವೆ ಎಂಬುದು ತಿಳಿದಿರುವ ವಿಚಾರ. ಇದೇ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ವಿಡಿಯೋ ನೋಡಿದ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ವಿಡಿಯೋದಲ್ಲಿ ಕಾಣಿಸುವ ಹಾವು ಕಿಂಗ್ ಕೋಬ್ರಾನೇ ಎಂಬುದನ್ನು ದೃಢಪಡಿಸುವ ಮಾಹಿತಿ ಲಭ್ಯವಿಲ್ಲ.

ಇನ್ನು ಘಟನೆ ನಡೆದ ಸ್ಥಳಕ್ಕೆ ವ್ಯಕ್ತಿಯೊಬ್ಬರು ಆಗಮಿಸಿ ದೊಡ್ಡ ಹಾವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನೂ ಕಾಣಬಹುದು. ಮನುಷ್ಯರ ಓಡಾಟ ಗಮನಿಸಿದ ಸಣ್ಣ ನಾಗರಹಾವು ಅಲ್ಲಿಂದ ದೂರ ಸರಿಯಲು ಪ್ರಯತ್ನಿಸುತ್ತದೆ. ಈ ಆಘಾತಕಾರಿ ದೃಶ್ಯಗಳಿರುವ ವಿಡಿಯೋವನ್ನು @rafi_ahmad_maulvi ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಹಾವಿನ ದಾಳಿ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸೂಚನೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿನ ದೃಶ್ಯಗಳ ನಿಖರ ಸ್ಥಳ, ಸಮಯ ಹಾಗೂ ಹಾವುಗಳ ಜಾತಿಯ ಕುರಿತು ಸ್ವತಂತ್ರ ದೃಢೀಕರಣ ಲಭ್ಯವಿಲ್ಲ.

View post on Instagram