Egg Dosa Recipe: ಬೆಳಗಿನ ಉಪಹಾರಕ್ಕೆ ಪ್ರತಿದಿನ ಒಂದೇ ರೀತಿಯ ದೋಸೆ, ಇಡ್ಲಿ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ರುಚಿಕರ ಎಗ್ ದೋಸೆ ಟ್ರೈ ಮಾಡಿ. ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಎಗ್ ದೋಸೆ ಹೊರಗೆ ಕ್ರಿಸ್ಪಿಯಾಗಿದ್ದು, ಒಳಗೆ ಮೃದುವಾದ ಮೊಟ್ಟೆಯ ಲೇಯರ್‌ನಿಂದ ಸಖತ್ ರುಚಿಯಾಗಿರುತ್ತದೆ.

Egg Dosa Recipe: ಬೆಳಗಿನ ಉಪಹಾರಕ್ಕೆ ಪ್ರತಿದಿನ ಒಂದೇ ರೀತಿಯ ದೋಸೆ, ಇಡ್ಲಿ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ರುಚಿಕರ ಎಗ್ ದೋಸೆ ಟ್ರೈ ಮಾಡಿ. ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಎಗ್ ದೋಸೆ ಹೊರಗೆ ಕ್ರಿಸ್ಪಿಯಾಗಿದ್ದು, ಒಳಗೆ ಮೃದುವಾದ ಮೊಟ್ಟೆಯ ಲೇಯರ್‌ನಿಂದ ಸಖತ್ ರುಚಿಯಾಗಿರುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿ ಬಿಸಿಯಾಗಿ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ಎಗ್ ದೋಸೆಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ ಹಿಟ್ಟು – 1 ಕಪ್

ಗೋಧಿ ಹಿಟ್ಟು – ½ ಕಪ್

ಮೊಟ್ಟೆ – 2

ಈರುಳ್ಳಿ – ½ ಕಪ್, ಸಣ್ಣಗೆ ಹೆಚ್ಚಿದ್ದು

ಹಸಿಮೆಣಸಿನಕಾಯಿ – 2, ಸಣ್ಣಗೆ ಹೆಚ್ಚಿದ್ದು

ಕೊತ್ತಂಬರಿ ಸೊಪ್ಪು – 2 ಟೇಬಲ್‌ಸ್ಪೂನ್

ಕಾಳು ಮೆಣಸು ಪುಡಿ – ½ ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ತುಪ್ಪ – ಅಗತ್ಯಕ್ಕೆ ತಕ್ಕಷ್ಟು

ಎಗ್ ದೋಸೆ ಮಾಡುವ ವಿಧಾನ

ಹಂತ 1: ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಉಪ್ಪು ಸೇರಿಸಿ ನೀರು ಹಾಕುತ್ತಾ ಮೃದುವಾದ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ.

ಹಂತ 2: ಮತ್ತೊಂದು ಬಟ್ಟಲಿನಲ್ಲಿ 2 ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬಡಿದುಕೊಳ್ಳಿ.

ಹಂತ 3: ಮೊಟ್ಟೆಯ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕಾಳು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 4: ಈಗ ದೋಸೆ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ತಯಾರಿಸಿಟ್ಟ ದೋಸೆ ಹಿಟ್ಟನ್ನು ಹಾಕಿ ತೆಳುವಾಗಿ ಹರಡಿಕೊಳ್ಳಿ.

ಹಂತ 5: ದೋಸೆಯ ಮೇಲೆ ಮೊಟ್ಟೆಯ ಮಿಶ್ರಣವನ್ನು ಸಮವಾಗಿ ಹರಡಿ. ಬೇಕಿದ್ದರೆ ಮೇಲೆ ಸ್ವಲ್ಪ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಬಹುದು.

ಹಂತ 6: ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮೊಟ್ಟೆ ಚೆನ್ನಾಗಿ ಸೆಟ್ ಆಗುವವರೆಗೆ ಕಾಯಿರಿ.

ಹಂತ 7: ನಂತರ ದೋಸೆಯನ್ನು ನಿಧಾನವಾಗಿ ಒಂದು ಬದಿಯಿಂದ ಮಡಚಿ, ಸ್ವಲ್ಪ ತುಪ್ಪ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

ಹಂತ 8: ದೋಸೆ ಗೋಲ್ಡನ್ ಬ್ರೌನ್ ಆಗಿ ಕ್ರಿಸ್ಪಿಯಾದ ಬಳಿಕ ತಟ್ಟೆಗೆ ತೆಗೆದುಕೊಳ್ಳಿ. ಹಂತ 9: ಬಿಸಿಬಿಸಿಯಾದ ಎಗ್ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.

ರುಚಿ ಹೆಚ್ಚಿಸಲು ಈ ಟಿಪ್ಸ್‌ ಪಾಲಿಸಿ

ಎಗ್ ದೋಸೆಯನ್ನು ಮಧ್ಯಮ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಹೊರಭಾಗ ಕ್ರಿಸ್ಪಿಯಾಗಿ, ಒಳಗೆ ಮೃದುವಾದ ಮೊಟ್ಟೆಯ ಲೇಯರ್ ಸಿಗುತ್ತದೆ. ಕೊನೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬೇಯಿಸುವುದರಿಂದ ದೋಸೆಯ ರುಚಿ ಮತ್ತು ಸುವಾಸನೆ ಮತ್ತಷ್ಟು ಹೆಚ್ಚುತ್ತದೆ.

ಸರಳ ಪದಾರ್ಥಗಳಿಂದ ತಯಾರಾಗುವ ಈ ಎಗ್ ದೋಸೆ ಬಳಗಿನ ಉಪಹಾರ ಮಾತ್ರವಲ್ಲದೆ, ಸಂಜೆ ಲಘು ಆಹಾರವಾಗಿಯೂ ಸವಿಯಬಹುದು.