Kitchen Safety: ನಿಮ್ಮ ಮನೆಯ ಕಿಚನ್‌ನಲ್ಲಿ ಫ್ರಿಜ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಅಕ್ಕಪಕ್ಕದಲ್ಲೇ ಇಟ್ಟಿದ್ದೀರಾ? ಇದು ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಫ್ರಿಜ್ ಮತ್ತು LPG ಸಿಲಿಂಡರ್ ಅನ್ನು ತುಂಬಾ ಹತ್ತಿರದಲ್ಲಿ ಇಡದಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ. ಯಾಕೆ ಇಲ್ಲಿದೆ ಮಾಹಿತಿ.
ಗ್ಯಾಸ್ ಸಿಲಿಂಡರ್ ಪಕ್ಕದಲ್ಲೇ ಫ್ರಿಜ್ ಇಟ್ಟಿದ್ದೀರಾ?
ಅಡುಗೆಮನೆಯಲ್ಲಿ ಕೆಲವು ವಸ್ತುಗಳ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲಾಂದ್ರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಜಾಗದ ಕೊರತೆಯಿಂದ ಕೆಲವರು ಗ್ಯಾಸ್ ಸಿಲಿಂಡರ್ ಮತ್ತು ಫ್ರಿಜ್ ಅನ್ನು ಹತ್ತಿರದಲ್ಲೇ ಇಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ವ್ಯವಸ್ಥೆ ಅಪಾಯಕ್ಕೆ ಕಾರಣವಾಗಬಹುದು.
ಫ್ರಿಜ್‌ನ ಎಲೆಕ್ಟ್ರಿಕಲ್ ಸ್ಪಾರ್ಕ್ ಅಪಾಯ
ಫ್ರಿಜ್‌ನಲ್ಲಿ ಕಂಪ್ರೆಸರ್ ಸೇರಿದಂತೆ ಹಲವು ವಿದ್ಯುತ್ ಭಾಗಗಳಿರುತ್ತವೆ. ಫ್ರಿಜ್ ಆನ್ ಅಥವಾ ಆಫ್ ಆಗುವ ಸಂದರ್ಭದಲ್ಲಿ ಸಣ್ಣ ಮಟ್ಟಿನ ಎಲೆಕ್ಟ್ರಿಕಲ್ ಸ್ಪಾರ್ಕ್ ಉಂಟಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಸಿಲಿಂಡರ್ ಅಥವಾ ಅದರ ಸಂಪರ್ಕದಿಂದ LPG ಗ್ಯಾಸ್ ಲೀಕ್ ಆಗುತ್ತಿದ್ದರೆ, ಆ ಪ್ರದೇಶದಲ್ಲಿ ಸ್ಪಾರ್ಕ್ ಉಂಟಾದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಗ್ಯಾಸ್ ಸಿಲಿಂಡರ್ ಅನ್ನು ವಿದ್ಯುತ್ ಉಪಕರಣಗಳ ಹತ್ತಿರ ಇಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಫ್ರಿಜ್‌ನಿಂದ ಹೊರಬರುವ ಶಾಖವೂ ಕಾರಣ
ಫ್ರಿಜ್ ಅನ್ನು ತಂಪಾಗಿಡಲು ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಫ್ರಿಜ್‌ನ ಹಿಂಭಾಗದಿಂದ ಶಾಖ ಹೊರಬರುತ್ತದೆ. ಮತ್ತೊಂದೆಡೆ LPG ಸಿಲಿಂಡರ್ ಅನ್ನು ಹೆಚ್ಚಿನ ಶಾಖವಿರುವ ಸ್ಥಳದಲ್ಲಿ ಇಡಬಾರದು. ಅತಿಯಾದ ಉಷ್ಣತೆಯಿಂದ ಸಿಲಿಂಡರ್ ಒಳಗಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಫ್ರಿಜ್‌ನಂತಹ ಶಾಖ ಹೊರಹಾಕುವ ಉಪಕರಣದ ಪಕ್ಕದಲ್ಲಿ ಸಿಲಿಂಡರ್ ಇಡುವುದನ್ನು ತಪ್ಪಿಸುವುದು ಸುರಕ್ಷಿತ ಕ್ರಮವಾಗಿದೆ.
ಫ್ರಿಜ್ ಮತ್ತು ಸಿಲಿಂಡರ್ ನಡುವೆ ಎಷ್ಟು ಅಂತರ?
ಫ್ರಿಜ್ ಮತ್ತು LPG ಸಿಲಿಂಡರ್ ನಡುವೆ ಕನಿಷ್ಠ 5ರಿಂದ 6 ಅಡಿ ಅಂತರ ಇರಿಸುವಂತೆ ಸಲಹೆ ನೀಡಲಾಗಿದೆ. ಸಿಲಿಂಡರನ್ನು ಯಾವಾಗಲೂ ಗಾಳಿ ಸರಾಗವಾಗಿ ಹರಿದಾಡುವ, ಉತ್ತಮ ವೆಂಟಿಲೇಶನ್ ಇರುವ ಜಾಗದಲ್ಲಿ ಇಡಬೇಕು. ನೇರವಾಗಿ ಬಿಸಿಲು ಬೀಳುವ ಅಥವಾ ಗಾಳಿ ಸರಿಯಾಗಿ ಹರಿಯದ ಸ್ಥಳದಲ್ಲಿ ಸಿಲಿಂಡರ್ ಇಡುವುದನ್ನು ತಪ್ಪಿಸಬೇಕು.
ಸಿಲಿಂಡರ್ ಸುತ್ತಲೂ ಏನು ಇಡಬಾರದು?
ಗ್ಯಾಸ್ ಸಿಲಿಂಡರ್ ಸುತ್ತಲೂ ಮೈಕ್ರೋವೇವ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹತ್ತಿರದಲ್ಲಿ ಇಡುವುದನ್ನು ತಪ್ಪಿಸುವುದು ಉತ್ತಮ. ನಿಮ್ಮ ಕಿಚನ್‌ನಲ್ಲಿ ಫ್ರಿಜ್ ಮತ್ತು ಗ್ಯಾಸ್ ಸಿಲಿಂಡರ್ ತುಂಬಾ ಹತ್ತಿರದಲ್ಲಿದ್ದರೆ, ಸುರಕ್ಷಿತ ಅಂತರ ಮತ್ತು ಉತ್ತಮ ವೆಂಟಿಲೇಶನ್ ಇರುವಂತೆ ಅವುಗಳ ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಗಮನಹರಿಸಿ.
ಸುರಕ್ಷತಾ ಸೂಚನೆ: LPG ಸಿಲಿಂಡರ್ ಅಥವಾ ಗ್ಯಾಸ್ ಲೀಕ್‌ಗೆ ಸಂಬಂಧಿಸಿದ ಯಾವುದೇ ಅನುಮಾನವಿದ್ದರೆ, ಬೆಂಕಿ ಅಥವಾ ವಿದ್ಯುತ್ ಸ್ವಿಚ್‌ಗಳನ್ನು ಬಳಸದೆ, ಗ್ಯಾಸ್ ಸರಬರಾಜುದಾರರ/ಟೆಕ್ನೀಶಿಯನ್ ಗಳಿಗೆ ಕರೆಮಾಡಿ ಅಥವಾ ಸುರಕ್ಷತಾ ಸೂಚನೆಗಳನ್ನು ಅನುಸರಿಸಿ.


