ಗೈನಕಾಲಜಿಸ್ಟ್ ಬಳಿ ಹೋಗುವುದೆಂದರೆ ಹಲವು ಹುಡುಗಿಯರಿಗೆ, ಮಹಿಳೆಯರಿಗೆ ಭಯ, ಆತಂಕ. ಅದೂ ಮೊದಲ ಬಾರಿ ಹೋಗಬೇಕೆಂದರೆ ತಲೆಯಲ್ಲಿ ನೂರೆಂಟು ಪ್ರಶ್ನೆಗಳು. ಸಾಮಾನ್ಯವಾಗಿ ಮುಟ್ಟಿನ ಸಮಸ್ಯೆಗಳು, ಪ್ರಗ್ನೆನ್ಸಿ ಸಮಸ್ಯೆಗಳು, ಯೋನಿಯಲ್ಲಿ ಇನ್ಫೆಕ್ಷನ್, ಉರಿಮೂತ್ರ, ಮೆನೋಪಾಸ್ ಇವೇ ಮೊದಲಾದ ಸಮಸ್ಯೆಗಳಿಗಾಗಿ ಮಹಿಳೆಯರು ಸ್ತ್ರೀರೋಗ ತಜ್ಞರ ಬಳಿ ಹೋಗುವುದು. ಹಾಗಾಗಿ, ಏನು ಪರೀಕ್ಷೆ ಮಾಡುತ್ತಾರೋ ಏನೋ, ಏನು ಹೇಳಬೇಕು, ಏನು ಹೇಳಬಾರದು ಗೊಂದಲ... ಹೀಗೆ ಗೈನಕಾಲಜಿಸ್ಟ್ ಬಳಿ ಹೋಗುತ್ತಿದ್ದೀರಾದರೆ ಈ ವಿಷಯಗಳನ್ನು ತಿಳಿದುಕೊಳ್ಳಿ.

ಸುಸ್ತಾ? ಹೀಗಾಗಿರಬಹುದು ನೋಡಿ

1. ನೀವು ಮುಜುಗರ ಅನುಭವಿಸುವ ಅಗತ್ಯವಿಲ್ಲ

ನಿಮಗೆ ಈ ಭೇಟಿ ಮೊದಲ ಬಾರಿಯಾಗಿರಬಹುದು. ಆದರೆ, ವೈದ್ಯರು ನಿಮ್ಮ ಸಮಸ್ಯೆಗಳಂಥ ಸಮಸ್ಯೆಗಳನ್ನು ಪ್ರತಿದಿನ ಹಲವಾರು ನೋಡುತ್ತಿರುತ್ತಾರೆ. ಅವರಿಗೆ ಯಾವುದೂ ಅಸಂಗತವಲ್ಲ. ಇಷ್ಟೆಲ್ಲ ತಿಳಿದೂ ನಿಮಗೆ ಕಂಫರ್ಟ್ ಎನಿಸುತ್ತಿಲ್ಲವೆಂದರೆ ಪರವಾಗಿಲ್ಲ. ಕಂಫರ್ಟ್ ಎನಿಸದಿರುವುದೂ ನಾರ್ಮಲ್. ಆದರೆ, ಇದು ನಿಮ್ಮ ಒಳ್ಳೆಯದಕ್ಕಾಗಿಯೇ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ. ವೈದ್ಯಕೀಯವಾದ, ಆರೋಗ್ಯ ಸಂಬಂಧಿ ವಿಷಯಗಳಲ್ಲಿ ಯಾವುದೂ ವೈದ್ಯರಿಗೆ ವಿಚಿತ್ರ, ವಿಶೇಷ ಎನಿಸುವುದಿಲ್ಲ. 

2. ಜೊತೆಗೊಬ್ಬರನ್ನು ಕರೆದೊಯ್ಯಿರಿ.
ಸ್ತ್ರೀರೋಗ ತಜ್ಞರ ಬಳಿ ಹೋಗುವಾಗ ನಿಮ್ಮ ಕುಟುಂಬದವರನ್ನು ಅಥವಾ ಆಪ್ತ ಗೆಳತಿಯನ್ನು ಜೊತೆಗೆ ಕರೆದೊಯ್ಯುವುದು ಉತ್ತಮ. ಅದರಲ್ಲೂ ಅವರಿಗೆ ಮೊದಲು ಗೈನಕಾಲಜಿಸ್ಟ್ ಬಳಿ ಹೋಗಿ ಅಭ್ಯಾಸವಿದ್ದರೆ ಒಳ್ಳೆಯದು. ನಿಮಗೂ ಧೈರ್ಯ ಬರುತ್ತದೆ. ಅವರೂ ಸರಿಯಾಗಿ ವಿಚಾರಿಸುತ್ತಾರೆ. 

ಯೋನಿ ಬಗ್ಗೆ ನಿಮಗೆ ಗೊತ್ತಿರದ ವಿಷ್ಯಗಳು

3. ಪ್ರಾಮಾಣಿಕತೆ ಅತ್ಯಗತ್ಯ
ನಿಮಗೆ ಮೊದಲ ಬಾರಿಯಾದರೂ ಸಹ ವೈದ್ಯರೇನು ನಿಮ್ಮ ಸಮಸ್ಯೆ ಕೇಳಿ ಕಣ್ಣು ಬಾಯಿ ಬಿಡುವುದಿಲ್ಲ. ಅವರಿಗೆ ಅದು ಹೊಸತಲ್ಲ. ಹೀಗಾಗಿ, ನಿಮ್ಮ ಲೈಂಗಿಕ ಜೀವನದ ಕುರಿತೇ ಇರಬಹುದು, ಪೀರಿಯಡ್ಸ್ ಬಗ್ಗೆಯೇ ಇರಬಹುದು, ಸಮಸ್ಯೆಗೆ ಸಂಬಂಧಿಸಿದ ಎಲ್ಲವನ್ನೂ ವೈದ್ಯರ ಬಳಿ ವಿವರವಾಗಿ ಹೇಳಿ. ಆಗ ಮಾತ್ರ ಸರಿಯಾದ ಚಿಕಿತ್ಸೆ ನೀಡಲು ಅವರಿಗೆ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಆರೋಗ್ಯ ಮೊದಲು ಎಂಬುದನ್ನು ನೆನಪಿಡಿ. 

4. ಅಲ್ಲಿ ಕೆಳಗೆ ಹೇಗೆ ಕಾಣುತ್ತೆ ಎಂಬುದರ ಬಗ್ಗೆ ಗೈನಕಾಲಜಿಸ್ಟ್‌ಗಳು ಯೋಚಿಸುವುದಿಲ್ಲ
ನೀವಲ್ಲಿ ವ್ಯಾಕ್ಸ್ ಮಾಡಿದ್ದೀರಾ, ಶೇವ್ ಮಾಡಿದ್ದೀರಾ ಅಥವಾ ಪೊದೆ ಬೆಳೆಸಿದ್ದೀರಾ ಎಂಬುದ್ಯಾವುದೂ ವೈದ್ಯರಿಗೆ ಮುಖ್ಯವಾಗುವುದಿಲ್ಲ. ಅಂಥದ್ದನ್ನು ಅವರು ಸಾವಿರ ನೋಡಿರುತ್ತಾರೆ. ಒಂದು ವೇಳೆ ಪರೀಕ್ಷಿಸಬೇಕಾಗಿ ಬಂದರೆ ವೈದ್ಯರು ನಿಮ್ಮ ಸಮಸ್ಯೆಯನ್ನು ನೋಡುತ್ತಾರೆಯೇ ಹೊರತು ಅಲ್ಲಿ ಹೇಗಿದೆ ಎಂದಲ್ಲ.

5. ಸ್ವಚ್ಛತೆ ಕಾಪಾಡಿಕೊಳ್ಳಿ
ಶೇವ್ ಮಾಡದಿದ್ದರೂ ಪರವಾಗಿಲ್ಲ ಎಂದ ಮಾತ್ರಕ್ಕೆ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಡಿ ಎಂದಲ್ಲ. ಸ್ವಚ್ಛತೆ ಯಾವತ್ತಿಗೂ ಮುಖ್ಯವೇ. ಸ್ತ್ರೀರೋಗ ತಜ್ಞರ ಬಳಿ ಭೇಟಿ ನೀಡುವ ಮೊದಲು ನಿಮ್ಮ ಖಾಸಗಿ ಅಂಗಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ.

6. ವೈದ್ಯರು ಖಾಸಗಿತನ ಕಾಪಾಡುವ ಪ್ರಮಾಣ ಮಾಡಿರುತ್ತಾರೆ
ನೀವು 18 ವರ್ಷ ದಾಟಿದ್ದೀರೆಂದರೆ, ನಿಮ್ಮ ಯಾವುದೇ ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ವೈದ್ಯರು ಪ್ರಮಾಣ ಮಾಡಿರುತ್ತಾರೆ. ಹಾಗೀಗಿ, ನಿಮ್ಮ ವೈಯಕ್ತಿಕ ವಿಷಯಗಳು ಸೋರಿಕೆಯಾಗುವ ಭಯ ಅಗತ್ಯವಿಲ್ಲ. 18 ವರ್ಷದೊಳಗಿನವರು ಮಾತ್ರ ಜೊತೆಗೊಬ್ಬರನ್ನು ಕರೆದುಕೊಂಡು ಹೋಗಲೇಬೇಕು. ಹಾಗೂ ವೈದ್ಯರು ಅವರ ಬಳಿ ವಿಷಯಗಳನ್ನು ಹೇಳುತ್ತಾರೆ.

ಕಾಲುಂಗರು ಹಾಕಿದ್ರೆ ಕಂಟ್ರೋಲ್ ಆಗುತ್ತೆ ಬಿಪಿ

7. ಜೆನೈಟಲ್ ಎಕ್ಸಾಮಿನೇಶನ್ ಸಾಮಾನ್ಯ ವಿಷಯ
ಸ್ತ್ರೀರೋಗ ತಜ್ಞರಿಗೆ ಜೆನೈಟಲ್ ಎಕ್ಸಾಮಿನೇಶನ್ ಸಾಮಾನ್ಯ ವಿಷಯ. ಅಗತ್ಯವಿದ್ದಾಗ ಅವರು ನಿಮ್ಮ ಕೆಳಗಿನ ಖಾಸಗಿ ಅಂಗಗಳನ್ನು ಪರೀಕ್ಷಿಸುತ್ತಾರೆ. ಯೋನಿ ಕೂಡಾ ದೇಹದ ಉಳಿದ ಅಂಗಗಳಂತೆಯೇ ಒಂದು ಎಂಬುದನ್ನು ನೆನಪಿಡಿ ಹಾಗೂ ಆರಾಮಾಗಿ ಅವರಿಗೆ ಪರೀಕ್ಷೆ ಮಾಡಲು ಸಹಕರಿಸಿ.

8. ಪೀರಿಯಡ್ಸ್ ಸಂದರ್ಭದಲ್ಲಿ ಕೂಡಾ ಗೈನಕಾಲಜಿಸ್ಟ್ ಭೇಟಿಯಾಗಬಹುದು
ಕೆಲವೊಮ್ಮೆ ಅಪಾಯಿಂಟ್‌ಮೆಂಟ್ ತೆಗೆದುಕೊಂಡ ಬಳಿಕ ಪೀರಿಯಡ್ಸ್ ಆಗಬಹುದು. ಆಗ ಸಾಧ್ಯವಾದರೆ ಅಪಾಯಿಂಟ್‌ಮೆಂಟ್ ಪೋಸ್ಟ್‌ಪೋನ್ ಮಾಡಿ. ಆದರೆ, ಎಮರ್ಜೆನ್ಸಿ ಇದ್ದರೆ ಮಾತ್ರ ಬೇರೇನೂ ಯೋಚಿಸದೆ ವೈದ್ಯರನ್ನು ಭೇಟಿ ಮಾಡಿ.