ಬದುಕು ಅನಿಶ್ಚಿತ ಪಯಣ. ಯಾರು ಯಾವಾಗ ಏಳುತ್ತಾರೆ, ಯಾವಾಗ ಬೀಳುತ್ತಾರೆ ಎಂಬುದನ್ನು ದೃಢವಾಗಿ ಹೇಳಲಾಗದು. ಯಶಸ್ಸಿಗೆ ನಿಶ್ಚಿತ ದಾರಿಗಳಿಲ್ಲ. ಆದರೆ, ಯಶಸ್ವೀ ವ್ಯಕ್ತಿಗಳೆಲ್ಲರ ಪಯಣದ ಹಾದಿ ಹಿಂತಿರುಗಿ ನೋಡಿದರೆ ಅಲ್ಲಿ ಅವರು ಪಾಲಿಸಿದ ಒಂದಿಷ್ಟು ನಿಯಮಗಳು ಬಹುತೇಕ ಒಂದೇ ಆಗಿರುತ್ತವೆ. ಹಾಗಿದ್ದರೆ, ಈ ನಿಮಯಗಳು ಯಶಸ್ಸಿನ ಗುರಿಯ ಹಾದಿಯನ್ನು ಸುಗಮಗೊಳಿಸಬಲ್ಲವು ಎಂಬುದು ನಿಜ ಎಂದಾಯಿತಲ್ಲವೇ?

1.ಇನ್ನೊಬ್ಬರ ಅನಿಸಿಕೆಗಳು ನಿಮ್ಮ ಬದುಕನ್ನು ನಿಯಂತ್ರಿಸದಿರಲಿ. ಇನ್ನೊಬ್ಬರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕಿಂತ ನೀವು ನಿಮ್ಮ ಬಗ್ಗೆ ಏನು ಯೋಚಿಸುವಿರಿ ಎಂಬುದೇ ಮುಖ್ಯ. ನಿಮಗೆ ಹಾಗೂ ನಿಮ್ಮ ಬದುಕಿಗೆ ಏನು ಮುಖ್ಯವೋ ಅದನ್ನೇ ನೀವು ಮಾಡಬೇಕೇ ಹೊರತು, ಬೇರೆಯವರು ಬಯಸಿದ್ದಲ್ಲ. 

2. ಹಳೆಯ ಸೋಲುಗಳು ಹಿಂಬಾಲಿಸದಿರಲಿ. ಭೂತ ಕಾಲವು ಎಂದಿಗೂ ಭವಿಷ್ಯವನ್ನು ನಿರ್ಧರಿಸಿಬಿಡಲಾರದು. ಭವಿಷ್ಯಕ್ಕಾಗಿ ಈಗೇನು ಮಾಡುವಿರಿ ಎಂಬುದು, ಸೋಲುಗಳನ್ನು ದಾಟಿ ಸಾಗುವ ಮನಸಿಚ್ಛೆಯೇ ಎಲ್ಲಕ್ಕಿಂತ ಮುಖ್ಯ. 

3. ನಿಮಗೇನು ಬೇಕು ಎಂಬುದರ ಕುರಿತ ಅನಿಶ್ಚಿತತೆಯಿಂದ ಹೊರಬನ್ನಿ. ಮುಂದೆ ಎಲ್ಲಿ ಹೋಗಬೇಕೆಂಬುದು ತಿಳಿದಿಲ್ಲವಾದರೆ, ಯಾವಾಗಲೂ ಇದ್ದಲ್ಲೇ ಇರುವಿರಿ. ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಮೊದಲು ನಿರ್ಧರಿಸಿ. ನಂತರ ಅದನ್ನು ಪಡೆಯುವುದನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿ. 

ಕೆಲಸ ಬಿಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ....

4. ಗುರಿ ಸಾಧಿಸಲು ಯಾವತ್ತೂ ತಡವಾಗುವುದಿಲ್ಲ. ಗಿಡವೊಂದನ್ನು 20 ವರ್ಷಗಳ ಹಿಂದೆ ನೆಟ್ಟಿದ್ದರೆ ಅದು ಸರಿಯಾದ ಸಮಯವಾಗುತ್ತಿತ್ತು ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ಆ 20 ವರ್ಷದ ಹಿಂದೆ ಬಿಟ್ಟರೆ, ಗಿಡ ನೀಡಲು ಮತ್ತೊಂದು ಸರಿಯಾದ ಸಮಯವಿದೆ- ಅದು ಇಂದೇ. ಬದುಕಿನಲ್ಲಿ ಯಾವಾಗಲೂ ಎರಡು ಪ್ರಮುಖ ಆಯ್ಕೆಗಳಿರುತ್ತವೆ. ಬದುಕು ಇದ್ದಂತೆಯೇ ಒಪ್ಪಿಕೊಂಡು ಬಿಡುವುದು. ಇಲ್ಲವೇ, ಅದನ್ನು ಬದಲಾಯಿಸಲು ಬೇಕಾದ ಜವಾಬ್ದಾರಿ ಹೊರಲು ತಯಾರಾಗುವುದು. 

5. ಹೇಗೆ, ಯಾವಾಗ ಸಾಯಬೇಕೆಂಬುದನ್ನು ನಾವು ನಿರ್ಧರಿಸಲಾರೆವು. ಆದರೆ ಹೇಗೆ ಬದುಕಬೇಕೆಂದು ಆಯ್ಕೆ ಮಾಡಿಕೊಳ್ಳಲು ಪ್ರತಿ ದಿನವೂ ಒಂದು ಅವಕಾಶವಿರುತ್ತದೆ.  ಹೀಗಾಗಿ, ಹೇಗೆ ಬದುಕಬೇಕೆಂದು ಇಂದೇ ನಿರ್ಧರಿಸಿ. 

6. ಯಾವಾಗಲೂ ಸರಿ ಹೆಜ್ಜೆಯನ್ನೇ ಇಡಬೇಕೆಂದಿಲ್ಲ. ಯಶಸ್ಸಿಗಾಗಿ ಗುರಿ ಇಡಿ. ಆದರೆ ಅದಕ್ಕಾಗಿ ತಿಳಿಯದೆ ತಪ್ಪು ಮಾಡುವುದರಲ್ಲಿ ತಪ್ಪಿಲ್ಲ. ಏಕೆಂದರೆ ತಪ್ಪುಗಳೂ ಹಲವು ಪಾಠಗಳನ್ನು ಕಲಿಸುತ್ತವೆ. 

7. ಪಲಾಯನವಾದಗಳು ಬೇಡವೇ ಬೇಡ. ಸಮಸ್ಯೆಯಿಂದ ದೂರ ಓಡಿ ಹೋಗುವುದಕ್ಕಿಂತ, ನಿಂತು ಆ ಸಮಸ್ಯೆಗೆ ಪರಿಹಾರ ಹುಡುಕುವುದು ಹೆಚ್ಚು ಸರಿಯಾದ ನಡೆ. ಸಮಸ್ಯೆಯತ್ತ ಮುಖ ಮಾಡಿ, ಅವುಗಳ ಬಗ್ಗೆ ಮಾತನಾಡಿ, ಜನರನ್ನು ಕ್ಷಮಿಸಿ, ಅರ್ಹರನ್ನು ಪ್ರೀತಿಸಿ. 

PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್

8. ನಿರ್ಧಾರ ತೆಗೆದುಕೊಳ್ಳುವ ಬದಲು ಎಲ್ಲ ವಿಷಯಕ್ಕೂ ಒಂದು ಕಾರಣ ಹುಡುಕಿಕೊಂಡು ಮಾತನಾಡುವುದು, ಎಲ್ಲಕ್ಕೂ ಎಕ್ಸ್‌ಕ್ಯೂಸ್ ಕೊಟ್ಟುಕೊಳ್ಳುವುದು ಬಿಟ್ಟುಬಿಡಿ. ಹೆಚ್ಚಿನ ಬಹು ಕಾಲದ ಸೋಲುಗಳೆಲ್ಲವೂ ಹೀಗೆ ನಿಮಗೆ ನೀವು ಎಕ್ಸ್‌ಕ್ಯೂಸ್ ಕೊಟ್ಟುಕೊಂಡೇ ಆದಂತವು ಎಂಬುದನ್ನು ನೆನಪಿಡಿ.

9. ಸಕಾರಾತ್ಮಕ ಕಣ್ಣುಗಳಿಲ್ಲವಾದರೆ ಎಂದಿಗೂ  ಖುಷಿಯಾಗಿರಲು ಸಾಧ್ಯವಿಲ್ಲ. ಅದಕ್ಕೇ ಅಲ್ಲವೇ ದೃಷ್ಟಿಯಂತೆ ಸೃಷ್ಟಿ ಎನ್ನುವುದು? ಬದುಕು ನಿಮಗೆ ನೀಡಿರುವ ಒಳ್ಳೆಯದೆಲ್ಲದರ ಬಗ್ಗೆಯೂ ಕೃತಜ್ಞತೆ ಇರಲಿ. 

10. ವರ್ತಮಾನದಲ್ಲಿ ಬದುಕಿ. ಬದುಕಿನಲ್ಲಿ ದೊಡ್ಡದೆಲ್ಲವೂ ಸಣ್ಣ ಸಣ್ಣ ಸಂಗತಿಗಳು ಸೇರಿಯೇ ಆಗುವುದು. ಹಾಗಾಗಿ, ಭವಿಷ್ಯದಲ್ಲಿ ದೊಡ್ಡದೇನನ್ನೋ ನಿರೀಕ್ಷಿಸುವಿರಾದರೆ, ಇಂದಿನ ಸಣ್ಣ ಸಣ್ಣ ಗೆಲುವುಗಳನ್ನು ಅಪ್ಪಿಕೊಳ್ಳಿ.