ಅಮಿತಾ ರಂಜಿತ್‌ನನ್ನು ವಿವಾಹವಾದ ಮೊದಲ ರಾತ್ರಿ ರಂಜಿತ್ ಒಂದು ವಿಪರೀತದ ಬೇಡಿಕೆ ಇಟ್ಟ. ಅದು ಅವರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡುವುದು. ಅಮಿತಾಗೆ ಇಷ್ಟವಿಲ್ಲವಾದರೂ ಇದು ರಂಜಿತ್‌ನ ಮೊದಲ ಬೇಡಿಕೆ. ಅಲ್ಲದೆ, ಆಗಷ್ಟೇ ವಿವಾಹವಾಗಿರುವಾಗ ಬೇಡವೆಂದರೆ ಏನಂದುಕೊಳ್ಳುವನೋ ಎಂಬ ಅಂಜಿಕೆ. ಧೈರ್ಯ ಮಾಡಿ ಬೇಡವೆಂದಾಗ ನೋಡಿ ಡಿಲೀಟ್ ಮಾಡುವುದಾಗಿ ಹೇಳಿ ಪ್ಲೀಸ್ ಪ್ಲೀಸ್ ಎಂದು ಗೋಗರೆದ ರಂಜಿತ್.

ಪುಟ್ಟ ಹುಡುಗರೇಕೆ ಪೋರ್ನ್ ನೋಡ್ತಾರೆ?

ಮನಸ್ಸಿಲ್ಲದ ಮನಸ್ಸಿನಿಂದಲೇ ತಲೆಯಾಡಿಸಿದಳು ಅಮಿತಾ. ರಂಜಿತ್‌ನ ಫೋನ್ ಕ್ಯಾಮೆರಾ ಸೈಲೆಂಟಾಗಿ ಎಲ್ಲವನ್ನೂ ರೆಕಾರ್ಡ್ ಮಾಡಿತು. ಆದರೆ, ರಂಜಿತ್ ಆಡಿದ ಮಾತು ನಡೆಸಿಕೊಡಲಿಲ್ಲ. ಅವನದನ್ನು ಡಿಲಿಟ್ ಮಾಡಲೂ ಇಲ್ಲ, ಹೊಸ ಹೊಸ ವಿಡಿಯೋಗಳನ್ನು ಮಾಡುವುದನ್ನೂ ನಿಲ್ಲಿಸಲೂ ಇಲ್ಲ. ಬೇಡವೆಂದರೆ ಹಳೆಯ ವಿಡಿಯೋವನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಲೀಕ್ ಮಾಡುವುದಾಗಿ ಬೆದರಿಸತೊಡಗಿದ. ಈ ಬಗ್ಗೆ ಪೋಷಕರ ಬಳಿ ಹೇಳಿದರೆ ಅವರು ಮಗಳಿಗೇ ಬೈದರು. ಅತ್ತೆ ಮಾವ ತಮಗೆ ಸಂಬಂಧಿಸಿದ್ದಲ್ಲ ಎಂದರು. ದಾಂಪತ್ಯ ಮುರಿದು ಬೀಳುವ ಭಯದಿ ತೆಪ್ಪಗಿದ್ದ ಅಮಿತಾ ಕಡೆಗೊಂದು ದಿನ ಧೈರ್ಯ ಒಗ್ಗೂಡಿಸಿಕೊಂಡು ಕಾನೂನಿನ ಮೊರೆ ಹೋಗಿ, ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿದಳು. 

ಜೆಸ್ಸಿಕಾ ಹಾಗೂ ಜಿಷ್ಣುವಿನದು ಬೇರೆಯದೇ ಕತೆ. ದಾಂಪತ್ಯ ಏಕತಾನತೆ ತರಲು, ಅದನ್ನು ಮುರಿಯಲು ಅವರು ತಮ್ಮ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ನೋಡಲು ತೀರ್ಮಾನಿಸಿದರು. ಅದನ್ನು ವೀಕ್ಷಿಸುವುದು ಕೆಲ ದಿನಗಳ ಕಾಲ ಅವರಿಗೆ ಏನೋ ಹೊಸ ಉತ್ಸಾಹ ನೀಡಿತು. ಆದರೆ, ಜೆಸ್ಸಿಕಾ ಫೋನ್ ರಿಪೇರಿಗೆ ಬಂದಿತೆಂದು ಮೊಬೈಲ್ ಶಾಪ್‌ಗೆ ಕೊಟ್ಟು ವಾಪಸ್ ತರುವ ಹೊತ್ತಿಗಾಗಲೇ ಆ ವಿಡಿಯೋಗಳೆಲ್ಲವೂ ಹಲವು ಪಡ್ಡೆ ಹುಡುಗರ ಫೋನ್ ಸೇರಿದ್ದವು!

ಇತ್ತೀಚೆಗಷ್ಟೇ ದಿಲ್ಲಿಯ ವ್ಯಕ್ತಿಯೊಬ್ಬ ಪೋರ್ನ್ ವಿಡಿಯೋ ವೀಕ್ಷಿಸುವಾಗ ತನ್ನದೇ ಖಾಸಗಿ ಕ್ಷಣಗಳು ಅಲ್ಲಿ ಪಬ್ಲಿಕ್ ಆಗಿದ್ದನ್ನು ನೋಡಿ ದಂಗಾಗಿ ಹೋಗಿದ್ದನ್ನು ನೀವೂ ಓದಿರಬಹುದು. ತನಗಾಗಿ ಎಂದು ಸ್ಮಾರ್ಟ್ ಟಿವಿಯಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋಗಳವು. ಆದರೆ ಹ್ಯಾಕರ್‌ಗಳು ಸ್ಮಾರ್ಟ್ ಟಿವಿಯೊಳಗಿನ ವಿಡಿಯೋಗಳನ್ನೆಲ್ಲ ಕದ್ದು ಬೇಕಾಬಿಟ್ಟಿ ಬಳಸಿಕೊಂಡಿದ್ದರು.

ಖಾಸಗಿ ಕ್ಷಣಗಳನ್ನು ದಾಖಲಿಸುವ ಚಟ!

ಹೀಗೆ, ಖಾಸಗಿ ಕ್ಷಣಗಳನ್ನು ದಾಖಲಿಸುವುದು ಹೊಸತೇನೂ ಅಲ್ಲ. 2017ರಲ್ಲಿ ನಡೆದ ಸರ್ವೆಯೊಂದರ ಪ್ರಕಾರ, ಭಾರತದ ಶೇ.19ರಷ್ಟು ಪಾರ್ಟಿಸಿಪೆಂಟ್‌ಗಳು ತಾವು ತಮ್ಮ ದಾಂಪತ್ಯದ ಸರಸವನ್ನು ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಟೈಮ್ಸ್ ಗ್ರೂಪ್ ನಡೆಸಿದ ಸರ್ವೆಯಲ್ಲಿ 'ನಿಮ್ಮ ಸಂಗಾತಿ ಆಪ್ತ ಕ್ಷಣಗಳನ್ನು ದಾಖಲಿಸಬೇಕೆಂದು ಬಯಸಿದರೆ ನೀವು ಒಪ್ಪುವಿರಾ' ಎಂಬ ಪ್ರಶ್ನೆಗೆ ಶೇ.79ರಷ್ಟು ಜನರು ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ಇಲ್ಲಿಯೂ ಶೇ.21ರಷ್ಟು ಜನ ಹೀಗೆ ವಿಡಿಯೋ ಮಾಡಲು ಅಭ್ಯಂತರ ಇಲ್ಲದವರಿದ್ದಾರೆ ಎಂದಾಯಿತು. 

ಪ್ರೀತಿ, ಪ್ರೇಮ, ಮುತ್ತು ಮತ್ತು ದೋಖಾ...?

ತಜ್ಞರೇನಂತಾರೆ?

ತಜ್ಞರ ಪ್ರಕಾರ, ಜನರು ತಮ್ಮ ಪಾರ್ಟ್‌ನರ್‌ನ್ನು ಸಂತೋಷಗೊಳಿಸುವ ಸಲುವಾಗಿ ತಮ್ಮ ಸುರಕ್ಷತೆಯನ್ನೇ ಕಡೆಗಣಿಸಿ, ಇಂಥ ಕ್ಷಣಗಳ ವಿಡಿಯೋ ದಾಖಲೀಕರಣಕ್ಕೆ ಒಪ್ಪುತ್ತಾರೆ. ಒಪ್ಪದಿದ್ದಲ್ಲಿ ಸಂಗಾತಿಯ ಮೇಲೆ ಅಪನಂಬಿಕೆ ಸೂಚಿಸಿದಂತಾಗುತ್ತದೆಂಬ ಭಯ ಹಲವರದ್ದಾದರೆ, ಕೆಲವರಿಗೆ ಅವರ ಪಾರ್ಟ್ನರ್ ಹೇಳದೆಯೇ ಇಂಥ ವಿಡಿಯೋ ಮಾಡಿರುತ್ತಾರೆ. ಸಂಬಂಧದಲ್ಲಿ ಸಂತೋಷ ಹುಡುಕುವ ಭರದಲ್ಲಿ ಸುರಕ್ಷತೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಮತ್ತೆ ಕೆಲವರು ನೆಗ್ಲಿಜೆನ್ಸ್‌ನಿಂದಾಗಿ ಇಂಥ ವಿಡಿಯೋಗಳನ್ನು ಪಾಸ್ವರ್ಡ್ ರಕ್ಷಣೆಯಲ್ಲಿಡುವುದನ್ನು ಮರೆಯುವ, ಡಿಲೀಟ್  ಮಾಡುವುದನ್ನು ಮುಂದೆ ಹಾಕುವ ವರ್ತನೆಯಿಂದಾಗಿ ಅಪಾಯ ಎಳೆದುಕೊಳ್ಳುತ್ತಾರೆ ಎನ್ನುತ್ತಾರೆ ಮಾನಸಿಕ ತಜ್ಞರು.

ಇದು ಹೊಸ ಚಟವಲ್ಲ!

ಹೀಗೆ ತಮ್ಮ ಸೆಕ್ಸ್ ವಿಡಿಯೋವನ್ನು ತಾವೇ ನೋಡುವ ಚಟ ಇಂದು ನಿನ್ನೆಯದಲ್ಲ. ಇದಕ್ಕಾಗಿ ಸ್ಮಾರ್ಟ್ ಫೋನ್‌ಗಳನ್ನು ದೂರಬೇಕಾಗಿಲ್ಲ. ಗ್ರೀಕ್ ಪದ ಕಟೋಟ್ರೋನೋಫಿಲಿಯಾ- ಎಂದರೆ ಕನ್ನಡಿಯಲ್ಲಿ ಲೈಂಗಿಕ ವರ್ತನೆಯನ್ನು ಗಮನಿಸುತ್ತಾ ಮಜಾ ಅನುಭವಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಮುಂಚೆ ಕನ್ನಡಿಯಿದ್ದಲ್ಲಿ ಈಗ ಫೋನ್ ಕ್ಯಾಮೆರಾ ಬಂದಿದೆಯಷ್ಟೇ. 
ಎಚ್ಚರಿಕೆ ಅಗತ್ಯ ಜನರಿಗೆ ಸೆಕ್ಷುಯಲ್ ಫ್ಯಾಂಟಸಿಗಳು, ಹುಚ್ಚುಚ್ಚು ಕನಸುಗಳಿರಬಹುದು. ಆದರೆ, ಅದನ್ನು ಒತ್ತಾಯಪೂರ್ವಕವಾಗಿ ನಡೆಸುವುದು ತಪ್ಪು. ನಿಮ್ಮ ಖಾಸಗಿತನಕ್ಕೆ ಧಕ್ಕೆ ಬರುತ್ತದೆಂದು ಅನಿಸಿದರೆ, ಖಂಡಿತಾ ನೀವು ಸಂಗಾತಿಯ ಬೇಡಿಕೆಗಳನ್ನು ತಿರಸ್ಕರಿಸಬಹುದು. ಅಲ್ಲದೆ, ಒಂದು ವೇಳೆ ರೆಕಾರ್ಡ್ ಮಾಡಿದಿರಾದರೂ ನೋಡಿದ ತಕ್ಷಣ ಡಿಲೀಟ್ ಮಾಡುವುದು ಬುದ್ಧಿವಂತಿಕೆ. 

ಇನ್ನು ದಾಂಪತ್ಯದ ಹೊರತಾಗಿ ಲೈಂಗಿಕ ಚಟುವಟಿಕೆಗಳ ವಿಡಿಯೋ ಖಡಾಖಂಡಿತವಾಗಿ ಬೇಡವೇ ಬೇಡ. ತಪ್ಪು ಎನಿಸಿದರೆ, ಅಪ್ರಾಪ್ತರಾದರೆ ಅಂಥ ಚಟುವಟಿಕೆಗಳಿಂದಲೇ ದೂರವಿರುವುದು ಒಳಿತು.  ಒಂದು ವೇಳೆ ಅಸಹಾಯಕರಾಗಿ ನಿಮ್ಮ ವಿಡಿಯೋ ದಾಖಲೆಯಾಗಿಯೇ ಬಿಟ್ಟಿತು ಎಂದುಕೊಳ್ಳಿ, ಅದನ್ನು ಸಾರ್ವಜನಿಕಗೊಳಿಸುವ ಬೆದರಿಕೆಗಳು ಬಂದರೆ ತಕ್ಷಣ ಪೋಲೀಸರ ಮೊರೆ ಹೋಗಿ.