ಗುಂ ಡು ಮುಖ, ಗೋಲಿಯಂತಹ ಕಣ್ಣು, ಸೇಬಿನಂತಹ ಕೆನ್ನೆ, ತೊದಲು ಮಾತು, ಹಾಲಿನಂತಹ ಮೈ ಬಣ್ಣ ಹೊಂದಿದ್ದ ೩ ವರ್ಷದ ಮುದ್ದು ಹುಡುಗಿ ತನ್ನ ಗರ್ಭಿಣಿ ತಾಯಿಯ ಸ್ನೇಹಿತೆಯ ಮನೆಗೆ ಹೋಗಿದ್ದಾಗ, ತಾಯಿಯ ಸ್ನೇಹಿತೆಯು ನಿನಗೆ ತಂಗಿ ಬೇಕಾ, ತಮ್ಮ ಬೇಕಾ ಎಂದು ಕೇಳಿದಾಗ, ಏನೂ ಅರಿಯದೆ ಆ ಮುಗ್ಧ ಹುಡುಗಿ ನೀಡಿದ ಉತ್ತರ ನನಗೆ ಅಣ್ಣ ಬೇಕು ಎಂದು.

ಹೊಂಬವ್ವ ಎಂಬ ಮುತ್ತಜ್ಜಿಗೆ, ಹಿರಿಯ ಮೊಮ್ಮಗಳಾಗಿದ್ದ ಇವಳಿಗೆ, ತಂದೆ ತಾಯಿಯ ಹೊರತಾಗಿ, ಬಹಳಷ್ಟು ಜನ ಅಜ್ಜಿ-ತಾತಾ, ಅತ್ತೆ-ಮಾವ, ಚಿಕಪ್ಪ-ಚಿಕಮ್ಮ ಇದ್ದರು. ಎಲ್ಲರಿಗು ಇವಳು ಬಹಳ ಪ್ರಿಯಳಾಗಿದ್ದಳು. ಆದರೆ ಇವಳಿಗಿದ್ದ ಒಂದೇ ಕೊರತೆ ಎಂದರೆ, ‘ಅಣ್ಣ’ ಎಂಬವನ ಪ್ರೀತಿಯ ಅನುಭವ. ಅಣ್ಣನಿದ್ದರೆ ಎಷ್ಟು ಚೆಂದ ಇರುತ್ತಿತ್ತು.. ಬೆನ್ನಿನ ಮೇಲೆ ಕೂಸು ಮರಿ ಮಾಡುತ್ತಿದ್ದ, ಜಗಳವಾಡುತ್ತಿದ್ದ, ಅಮ್ಮನಿಗೆ ತಿಳಿಯದ ಹಾಗೆ ಚಾಕಲೇಟ್ ಕೊಡಿಸುತ್ತಿದ್ದಾ, ಕಥೆ ಹೇಳುತ್ತಿದ್ದ.. ಹೀಗೆ ಸದಾ ಅಣ್ಣ ಎಂಬ ವ್ಯಕ್ತಿಯ ಪ್ರೀತಿಯನ್ನು ಸವಿಯಲು ಹವಣಿಸುತ್ತಿದ್ದಳು.

ರಕ್ಷೆಯ ಬಂಧದಲ್ಲಿರಲಿ ಪವಿತ್ರತೆಯ ಸಾರ!

ಆ ಮುದ್ದು ಹುಡುಗಿ, ದೊಡ್ಡವಳಾಗಿ 10ನೇ ತರಗತಿಯಲ್ಲಿ ಟ್ಯೂಷನ್ ಸೇರಿದಾಗ ಪರಿಚಯವಾದದ್ದು ಆ ಟ್ಯೂಷನ್ನ ಇನ್ವಿಜಿಲೇಟರ್. ಮೊದಲಿನಲ್ಲಿ ಎಲ್ಲ ವಿದ್ಯಾರ್ಥಿಗಳಂತೆ ಆ ಹುಡುಗಿಯೂ ಅವರನ್ನು ಬಾಯಿ ಮಾತಿಗೆ ಅಣ್ಣ ಎನ್ನುತ್ತಿದ್ದಳು. ಆಗ ಅವಳಿಗೆ ತಿಳಿದಿರಲಿಲ್ಲ, ಅವಳು ಎದುರು ನೋಡುತ್ತಿದ್ದಾ ಅಣ್ಣನ ಪ್ರೀತಿ ಇವರಿಂದ ಸಿಗಲಿದೆ ಎಂದು. ದಿನಗಳು ಕಳೆದ ಹಾಗೆ, ಆ ಹುಡುಗಿ ಮತ್ತು ಅವಳ ಅಣ್ಣ ಕಷ್ಟ, ಸುಖ ಎಲ್ಲವನ್ನು ಹಂಚಿಕೊಳ್ಳಲು ಆರಂಭಿಸಿದರು. ಬಹಳಷ್ಟು ಹತ್ತಿರವಾದರು. ಟ್ಯೂಷನ್‌ನ ಎಲ್ಲಾ ವಿದ್ಯಾರ್ಥಿಗಳು ‘ಅಣ್ಣ’ ಎನ್ನುತಿದ್ದರು, ಈ ಹುಡುಗಿಯ ಮೇಲೆ ತಂಗಿ ಎಂಬ ಅತಿಯಾದ ಪ್ರೀತಿ ವಾತ್ಸಲ್ಯ ಅವರಿಗಿತ್ತು. ಪರೀಕ್ಷೆ ಸಮಯದಲ್ಲಂತೂ, ಆ ಹುಡುಗಿ ಹೆಚ್ಚು ಅಂಕ ಬರಲೇಬೇಕೆಂದು ಅವಳ ಯೋಗಕ್ಷೇಮ, ಪರೀಕ್ಷೆ ತಯಾರಿಕೆಯ ಬಗ್ಗೆ ಸದಾ ವಿಚಾರಿಸುತ್ತಿದ್ದರು. 10ನೇ ತರಗತಿಯಿಂದ ಇಂದಿನ ದಿನದವರೆಗೂ ಆ ಅಣ್ಣ ಅವಳ ಬೆನ್ನೆಲುಬಾಗಿ ನಿಂತಿದ್ದಾರೆ.

ಆ ಹುಡುಗಿಯೇ ನಾನು, ಹಾಗು ಆ ಅಣ್ಣ ನೇ, ‘ನನ್ನ ಅಣ್ಣ’ ಸುಬ್ರಮಣಿ.ಎಸ್. ಚಿಕ್ಕ ವಯಸ್ಸಿನಿಂದ ನಾನು ಎದುರುನೋಡುತ್ತಿದ್ದಾ ಅಣ್ಣನ ಅಕ್ಕರೆ ಕೊನೆಗೂ ನನಗೆ ಸಿಕ್ಕಿತು. ನನ್ನ ಕೀರ್ತಿ-ಸ್ಫೂರ್ತಿ, ನನ್ನ ಧೈಯ-ಸ್ಥೈರ್ಯ ಎಲ್ಲವೂ ನನ್ನ ಅಣ್ಣನೇ. ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಿಂತು, ನನ್ನ ಮುಂದಿನ ಕನಸಿನ ಸ್ತಂಭ ನನ್ನ ಅಣ್ಣ. ಅವರು ಸಣ್ಣಗಿದ್ದರೂ ಅವರ ಮನಸು ದೊಡ್ಡದು. ಜೀವನದಲ್ಲಿ ಏನಾದರೂ ಧೈರ್ಯದಿಂದ ಮುನ್ನುಗ್ಗಬೇಕು. ಸ್ವಾರ್ಥಿಯಾಗದೆ, ನಮ್ಮ ಜೊತೆಗಿರುವವರ ಏಳಿಗೆಗೂ ಶ್ರಮಿಸಬೇಕು ಎಂಬ ವಾಕ್ಯಗಳಿಗೆ, ನನ್ನ ಅಣ್ಣನೇ ಪ್ರತ್ಯಕ್ಷ ಸಾಕ್ಷಿ. ಸ್ವಂತ ತಂಗಿಗಿಂತ ಹೆಚ್ಚು ಪ್ರೀತಿ ವಾತ್ಸಲ್ಯ ನೀಡಿದ್ದಾರೆ. ಅಣ್ಣ ಎಂದರೆ ಎರಡನೇ ತಂದೆ ಇದ್ದಂತೆ  ಎಂಬ ಮಾತು ಸಾಬೀತು ಪಡಿಸಿದ್ದಾರೆ. ನಾನು ದುಃಖದಲ್ಲಿದ್ದಾಗೆ ನಗಿಸುವುದು ಹೀಗೆ ಎಂದು ಅವರಿಗೆ ತಿಳಿದಿದೆ. ನನ್ನ ಇಷ್ಟ-ಕಷ್ಟಗಳೆಲ್ಲವನ್ನು ಅರಿತು, ನಿಸ್ವಾರ್ಥ ಪ್ರೀತಿಯನ್ನು ನೀಡುತ್ತಿದ್ದಾರೆ.

ರಕ್ಷಾಬಂಧನಕ್ಕೆ ಅಣ್ಣ, ತಂಗಿಗೆ ಏನೆಲ್ಲಾ ಗಿಫ್ಟ್ ಕೊಡಬಹುದು?

ನನ್ನನು ಬೆನ್ನು ಮೇಲೆ ಹೊತ್ತು ಆಟವಾಡಿಸಲಿಲ್ಲವೆಂದರೇನಂತೆ, ನನ್ನ ಜೀವನದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊರಲು ಸದಾ ಸಿದ್ಧರಾಗಿದ್ದಾರೆ.. ಕಟ್ಟು ಕಥೆ ಹೇಳಿ ಮಲಗಿಸಿಲ್ಲವೆಂದರೇನೆಂತೆ, ಜೀವನ ಕಟ್ಟುವ ಕಥೆ ಹೇಳಿ ನನ್ನ ಸ್ಫೂರ್ತಿದಾಯಕಗೊಳಿಸುತ್ತಾರೆ. ರಕ್ತ ಸಂಬಂಧಕ್ಕಿಂತ ಮನಸ್ಸಿನ ಬಾಂಧವ್ಯವೇ ಹೆಚ್ಚು, ನನಗೆ ನನ್ನ ದೇವರು ಕೊಟ್ಟ ಅಣ್ಣಾ ಸದಾ ಅಚ್ಚು ಮೆಚ್ಚು..