ಸಹೋದರತೆಯ ಸುಂದರ ಬಾಂಧವ್ಯಕ್ಕೆ ಮೆರುಗು ನೀಡುವಂಥ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಸಹೋದರಿಯೂ ತನ್ನ ಸಹೋದರನಿಗೆ ಭ್ರಾತೃತ್ವದ ಸಂಕೇತವಾಗಿ ಕಟ್ಟುವ ಪವಿತ್ರರಕ್ಷಾ ಕಂಕಣ. ಸಹೋದರಿಯು ಹೊಸ ಬಟ್ಟೆ ಧರಿಸಿ, ಸಹೋದರನಿಗೆ ಆರತಿ ಎತ್ತಿ, ತಿಲಕವನ್ನಿಟ್ಟು ಸಿಹಿ ತಿನಿಸಿ, ಅವನ ಕೈಗೆ ರಾಖಿ ಕಟ್ಟಿ, ಆತನಿಗೆ ಆರೋಗ್ಯ,
ಯಶಸ್ಸು, ಶ್ರೇಯಸ್ಸು, ನೆಮ್ಮದಿ ಲಭಿಸಿ ಅಭಿವೃದ್ಧಿ ಕಾಣುವಂತಾಗಲಿ ಎಂದು ಪ್ರಾರ್ಥಿಸಿ ರಾಖಿ ಕಟ್ಟುತ್ತಾಳೆ.

ರಕ್ಷಾಬಂಧನಕ್ಕೆ ಅಣ್ಣ, ತಂಗಿಗೆ ಏನೆಲ್ಲಾ ಗಿಫ್ಟ್ ಕೊಡಬಹುದು?

ಅದರಲ್ಲಿ ಅವಳ ನಂಬಿಕೆ, ಭರವಸೆ, ಬಾಂಧವ್ಯ ಅಡಕವಾಗಿರುತ್ತದೆ. ಸಹೋದರನೂ ಸದಾ ನಿನ್ನ ರಕ್ಷಣೆ ಮಾಡುತ್ತಾ ಕಷ್ಟ ಕಾಲದಲ್ಲಿ ನೆರವಾಗುತ್ತೇನೆ. ಅದು ನನ್ನ ಕರ್ತವ್ಯವೂ ಆಗಿದೆ ಎನ್ನುವ ಭರವಸೆಯೊಂದಿಗೆ ಉಡುಗೊರೆಯನ್ನಿತ್ತು ಹಾರೈಸುತ್ತಾನೆ. ಒಡಹುಟ್ಟಿದವರಿಗೆ ಮಾತ್ರ ರಕ್ಷಾ ಬಂಧನ ಮೀಸಲಲ್ಲ. ಪ್ರತೀ ಹೆಣ್ಣೂ ತನ್ನ ರಕ್ಷಣೆಗಾಗಿ ತಾನು ನಂಬಿರುವ ಮತ್ತು ವಿಶ್ವಾಸವಿಡುವ ವ್ಯಕ್ತಿಗೆ ರಾಖಿ ಕಟ್ಟುತ್ತಾಳೆ.

ನಮ್ಮ ಸಂಸ್ಕೃತಿಯ ಎಲ್ಲಾ ಹಬ್ಬಗಳಿಗೂ ಅದರದ್ದೇ ವಿಶೇಷತೆ , ಪೌರಾಣಿಕ ಹಿನ್ನೆಲೆ ಇದೆ. ಮಹಾಭಾರತದಲ್ಲಿ ಒಮ್ಮೆ ಕೃಷ್ಣನ ಬೆರಳಿನಿಂದ ರಕ್ತ ಬರುವುದನ್ನು ಕಂಡ ದ್ರೌಪದಿ ಕ್ಷಣವೂ ಯೋಚಿಸದೆ ತನ್ನ ಸೀರೆ ಸೆರಗಿನ ತುಂಡನ್ನು ಕೃಷ್ಣನ ಮಣಿಕಟ್ಟಿಗೆ ಕಟ್ಟುತ್ತಾಳೆ. ಅದನ್ನು ನೋಡಿ ಭಾವುಕನಾದ ಕೃಷ್ಣನು, ನಿನ್ನ ಕಷ್ಟ ಕಾಲದಲ್ಲಿ ಸದಾ ನಿನ್ನ ಜೊತೆಗಿರುತ್ತೇನೆ ಎನ್ನುವ ಪ್ರಮಾಣಿಸುತ್ತಾನೆ. ಅದರಂತೆ ಕೌರವ ರಿಂದ ಕಷ್ಟಕ್ಕೆ ಸಿಲುಕಿದ ದ್ರೌಪದಿಯನ್ನು ಕೃಷ್ಣ ರಕ್ಷಿಸಿದ್ದು ನಿದರ್ಶನ. ರಕ್ಷಾ ಬಂಧನಕ್ಕೆ ಧರ್ಮ-ಜಾತಿಯ ಭೇದ ಭಾವವಿಲ್ಲ. ನಡೆ-ನುಡಿ ಕರ್ತವ್ಯಗಳಲ್ಲಿ ಪರಿಶುದ್ಧತೆಯ ಭಾವ ಅಡಗಿರಬೇ ಕೆಂಬುದೇ ರಕ್ಷಾಬಂಧನದ ಸಾರ.

ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದೂ, ಪಶ್ಚಿಮ ಭಾರತದಲ್ಲಿ ನಾರಿಯಲ್ ಪೂರ್ಣಿಮೆ, ದಕ್ಷಿಣ ಭಾರತದೆಡೆ ಸನಾತನ ಸಂಪ್ರದಾಯದಂತೆ ನೂತನ ಜನಿವಾರ ಧಾರಣೆ ಮಾಡಿ, ನೂಲು ಹುಣ್ಣಿಮೆ ಎಂಬ ಹೆಸರಿನಿಂದ ಆಚರಿಸುತ್ತಾರೆ. ಶ್ರಾವಣ ಪೂರ್ಣಿಮೆಯ ಈ ದಿನ ಅತ್ಯಂತ ಮಂಗಳಕರವೆಂಬುದು ಪ್ರತೀತಿ.