ಸೂಪರ್‌ಶೀ ದ್ವೀಪ- ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ!
ಯಾವತ್ತಾದರೂ ಈ ಜಂಜಾಟಗಳಿಂದ ದೂರ ಹೋಗಿ ದ್ವೀಪವೊಂದರಲ್ಲಿ ಬೇಕೆಂದಂತೆ ಈಜುತ್ತಾ, ಸ್ವಚ್ಛ ಗಾಳಿ ಕುಡಿಯುತ್ತಾ, ನಕ್ಷತ್ರಗಳ ಎಣಿಸುತ್ತಾ ಮಲಗುವ ಕನಸು ಕಂಡಿದ್ದೀರಾ? ನೀವು ಮಹಿಳೆಯಾಗಿದ್ದರೆ ಇಂಥ ಕನಸಿಗೆ ಪರ್ಫೆಕ್ಟ್ ತಾಣ ಫಿನ್‌ಲ್ಯಾಂಡ್ನ ಸೂಪರ್ ಶೀ ದ್ವೀಪ.
ಎರಡು ಜೆಡೆ ಸೇರಲ್ಲ ಎಂಬ ಮಾತು ಜನಜನಿತ. ಅಂಥದರಲ್ಲಿ ಇಡೀ ಊರಿಗೆ ಊರೇ ಮಹಿಳೆಯರನ್ನು ತುಂಬಿಸಿದರೆ? ಮಹಿಳಾಮಣಿಗಳದೇ ಎಕ್ಸ್ಲೂಸಿವ್ ಪ್ರವಾಸ ತಾಣವಿದ್ದರೆ? ಅದು ಸ್ವರ್ಗವಾಗುತ್ತದೋ, ನರಕವೋ? ಇದನ್ನು ಪ್ರಯೋಗಕ್ಕಿಳಿದು ಉತ್ತರ ಕಂಡುಕೊಳ್ಳುತ್ತಿದ್ದಾರೆ ಫಿನ್‌ಲ್ಯಾಂಡ್‍ನ ಕ್ರಿಸ್ಟಿನಾ ರೋತ್.
ಫಿನ್‌ಲ್ಯಾಂಡ್‌ನ ಈ ದ್ವೀಪದಲ್ಲಿ ಪುರುಷರಿಲ್ಲ. ಪುರುಷರಿಗೆ ಭೇಟಿ ಅನುಮತಿಯೂ ಇಲ್ಲ, ಇದೊಂಥರಾ ಫೆಮಿನಿಸ್ಟ್ ದ್ವೀಪ ಎಂದರೂ ಅಚ್ಚರಿಯಿಲ್ಲ. ಸೂಪರ್ ಶೀ ಎಂಬ ಈ ದ್ವೀಪವು ಜಗತ್ತಿನ ಮಹಿಳೆಯರೆಲ್ಲ ರಜಾ ಮಜಾಕ್ಕಾಗಿ ಒಂದೆಡೆ ಸೇರಲೆಂದೇ ತಯಾರಾಗಿದೆ. ಇಲ್ಲಿ ಬಂದ ಮಹಿಳೆಯರಿಗೆ ಫಿಟ್ನೆಸ್, ವೆಲ್ನೆಸ್, ನ್ಯೂಟ್ರಿಶನ್, ಸ್ವಿಮ್ಮಿಂಗ್, ಮಸಾಜ್ ಎಲ್ಲಕ್ಕೂ ಅನುಕೂಲಗಳಿವೆ. ಇದು ಎಲ್ಲ ವಯಸ್ಸಿನ, ವರ್ಗದ ಮಹಿಳೆಯರಿಗೂ ಸ್ವರ್ಗವಿದ್ದಂತೆ. ತಮ್ಮ ಇನ್ನರ್ ಸೆಲ್ಫ್ ಜೊತೆ ಸಂಪರ್ಕ ಸಾಧಿಸಲು ಹೇಳಿ ಮಾಡಿಸಿದ ತಾಣ ಎನ್ನುತ್ತಾರೆ ರೋತ್.
ಹೋಗಬೇಕೆಂದರೂ ಈ ವಿಶೇಷ ಸ್ಥಳಗಳಿಗೆ ನೀವೆಂದೂ ಹೋಗಲಾರಿರಿ!
ಸೂಪರ್ ಶೀ ಎಂಬುದು ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ನೆಟ್ವರ್ಕ್ ಆಗಿದ್ದು, ಮಹಿಳಾ ವಿಷಯಗಳನ್ನು ಡೀಲ್ ಮಾಡುತ್ತಿತ್ತು. ಈಗ ಇದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗಾಗಿ ಪ್ರವಾಸಿ ತಾಣವನ್ನೇ ನಿರ್ಮಿಸಿದೆ. ಇದನ್ನೇ ತನ್ನ ಹೆಡ್ ಕ್ವಾರ್ಟರ್ಸ್ ಆಗಿಸಿಕೊಂಡಿದೆ. ಯಾವ ಮಹಿಳೆ ಬೇಕಾದರೂ ಇಲ್ಲಿ ಹೋಗಿ ರಿಚಾರ್ಜ್ ಆಗಿ ಬರಬಹುದು. ಇಲ್ಲಿ ಸಪ್ಲೈಯರ್‌ಯಿಂದ ಹಿಡಿದು ಕುಕ್, ಕ್ಲೀನರ್, ಟ್ರೇನರ್‌ವರೆಗೆ ಎಲ್ಲರೂ ಮಹಿಳೆಯರೇ. ಇಲ್ಲಿ ಈ ಮಹಿಳೆಯರ ಕೆಲಸದಲ್ಲಿ ಯಾವ ಬೇಧವೂ ಇಲ್ಲ. ಪ್ರತಿ 10 ಸೂಪರ್ ಶಿಗಳೊಂದಿಗೆ ಈ ಎಲ್ಲ ಮಹಿಳಾ ವರ್ಕರ್‌ಗಳು ಒಂದೇ ಟೇಬಲ್‌ನಲ್ಲಿ ಜೊತೆಯಾಗಿ ಕುಳಿತು ಹರಟುತ್ತಾ ಊಟ ಮಾಡುತ್ತಾರೆ.
ಹಾಗಂತ ಈ ಹರಟೆಯಲ್ಲಿ ಪುರುಷ ದ್ವೇಷಕ್ಕೆ ಜಾಗವಿಲ್ಲ. ಈ ನೆಟ್ವರ್ಕ್ ಮಹಿಳೆಯರನ್ನು ಒಂದುಗೂಡಿಸುವುದಕ್ಕೇ ಹೊರತು, ಪುರುಷರನ್ನು ದ್ವೇಷಿಸುವುದಕ್ಕಲ್ಲ ಎಂಬುದು ರೋತ್ ನಿಲುವು.
"ಈ ದ್ವೀಪವು ಬಾವಲಿಗಳ ಗುಹೆಯಂತೆ ಮಹಿಳೆಯರ ಪಾಲಿಗೆ ಅವರದೇ ಸ್ವಂತದ್ದು. ಗಂಡಸರ ಜೊತೆ ಸುತ್ತಾಡುವಾಗ ಮಹಿಳೆಗೆ ಸೈಡ್‌ಲೈನಿಗೆ ಹೋದಂತೆನಿಸಬಹುದು. ಆದರೆ, ಸೂಪರ್ ಶೀಯಲ್ಲಿ ಆಕೆ ಬೇಕೆಂದಂತೆ ಯೋಚನೆಯಿಲ್ಲದೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಹುದು. ಮನಸೋ ಇಚ್ಚೆ ಬಟ್ಟೆ ಧರಿಸಬಹುದು, ಸುರಕ್ಷತೆಯ ಭಯವಿಲ್ಲದೆ ಅಡ್ಡಾದಿಡ್ಡಿ ಅಡ್ಡಾಡಬಹುದು'' ಎನ್ನುತ್ತಾರೆ ರೋತ್.
ಭೂಮಿ ಮೇಲೆ ಈಕೆ ಕಾಲಿಡದ ದೇಶವಿಲ್ಲ!
ಸುಮಾರು 8.4 ಎಕರೆಗಳಷ್ಟು ದೊಡ್ಡ ದ್ವೀಪದಲ್ಲಿ ಒಂದು ಸಮಯದಲ್ಲಿ 10 ಮಹಿಳೆಯರು ಸಮಯ ಕಳೆಯಲಾಗುವಂತೆ ಸುಂದರ ಕ್ಯಾಬಿನ್‌ಗಳನ್ನು ನಿರ್ಮಿಸಲಾಗಿದೆ. ಈ ಕ್ಯಾಬಿನ್‌ಗಳಲ್ಲಿ ಸ್ಪಾ, ಸಾನಾ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿ ಮಹಿಳೆಯರು ಯೋಗ, ಧ್ಯಾನ, ಕೃಷಿಭೂಮಿಯಿಂದ ಡೈನಿಂಗ್ ರೂಮಿಗೆ ಊಟ, ಕುಕಿಂಗ್ ಕ್ಲಾಸ್, ಫಿಟ್ನೆಸ್ ಕ್ಲಾಸ್‌ಗಳಲ್ಲಿ ಭಾಗವಹಿಸಬಹುದಲ್ಲದೆ, ಸುಂದರವಾದ ಪ್ರಕೃತಿ ಮಡಿಲಿನಲ್ಲಿ ಮಗುವಾಗಿ ಮನದಣಿಯೆ ಮಣಿಯಬಹುದು. ಇಲ್ಲಿನ ಆಹಾರವು 20 ಮೈಲಿಯೊಳಗೆ ಬೆಳೆಯಲಾದ ಆಹಾರಪದಾರ್ಥಗಳಿಂದ ತಯಾರಿಸಿದ್ದು, ಲೋ ಕಾರ್ಬ್, ನೋ ಡೈರಿ ಹಾಗೂ ನೋ ಆಲ್ಕೋಹಾಲ್ ಊಟದ ವಿಶೇಷ.
ಹುಡುಗಿಯರು ಸೋಲೋ ಟ್ರಿಪ್ ಹೋಗುವುದು ಹೇಗೆ?
ಫಿನ್‌ಲ್ಯಾಂಡ್‌ನ ಹೆಲ್ಸೆಂಕಿ ವಿಮಾನ ನಿಲ್ದಾಣದಿಂದ ಕೇವಲ ಒಂದೂವರೆ ಗಂಟೆ ದೂರದಲ್ಲಿರುವ ಬಾಟ್ಲಿಕ್ ಸಮುದ್ರದಲ್ಲಿ ದ್ವೀಪವಿದೆ. ಇಲ್ಲಿ 5 ದಿನಕ್ಕೆ 3000 ಡಾಲರ್‌ನಿಂದ ಹಿಡಿದು 6000 ಡಾಲರ್ ಖರ್ಚಾಗಬಹುದು. ಈಗಾಗಲೇ ಜಗತ್ತಿನಾದ್ಯಂತ ಬಹಳಷ್ಟು ಮಹಿಳೆಯರಿಂದ ದ್ವೀಪಕ್ಕೆ ಬರಲು ಅರ್ಜಿಗಳು ಸಾಗರೋಪಾದಿಯಲ್ಲಿ ಬರುತ್ತಿವೆ ಎನ್ನುತ್ತಾರೆ ಕ್ರಿಸ್ಟಿನಾ.
ಇಲ್ಲಿಗೆ ಹೋಗುವ ಬಯಕೆಯಿದ್ದರೆ ಸೂಪರ್‌ಶಿ ಡಾಟ್ ಕಾಮ್ ವೆಬ್‌ಸೈಟಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.