Asianet Suvarna News Asianet Suvarna News

ಹೋಗಬೇಕೆಂದರೂ ಈ ವಿಶೇಷ ಸ್ಥಳಗಳಿಗೆ ನೀವೆಂದೂ ಹೋಗಲಾರಿರಿ!

ಜಗತ್ತಿನಲ್ಲಿ ಕೆಲ ಪ್ರದೇಶಗಳು- ಅವುಗಳಿಂದ ನಿಮಗೆ ಅಪಾಯವೆಂದು ಪ್ರವೇಶ ನಿಷೇಧವಾಗಿದ್ದರೆ, ಮತ್ತೆ ಕೆಲವು ನಿಮ್ಮಿಂದ ಅವುಗಳಿಗೆ ಅಪಾಯವಾಗುತ್ತದೆಂದು ನಿಷೇಧಗೊಂಡಿವೆ. ಇನ್ನೂ ಕೆಲವು ರಾಜರಹಸ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಜನರ ಕಣ್ಣಿಂದ ದೂರದಲ್ಲಿಡಲಾಗಿದೆ. 

6 Forbidden Destinations You Can Never Visit
Author
Bangalore, First Published Aug 4, 2019, 2:47 PM IST

ಜಾಗತೀಕರಣ ಹಾಗೂ ತಂತ್ರಜ್ಞಾನ ಅಭಿವೃದ್ಧಿಯನ್ನು ನೋಡಿದರೆ ಈ ಭೂಮಿ ಮೇಲೆ ಮನುಷ್ಯ ನೋಡದ್ದು, ಹೋಗಲಾರದ್ದು ಏನಾದರೂ ಇದೆ ಎಂದು ನಂಬುವುದೇ ಕಷ್ಟ. ಆದರೆ, ಇನ್ನೂ ಕೆಲವು ನಿಗೂಢತೆಗಳು ನಿಗೂಢಗಳಾಗಿಯೇ ಉಳಿದಿವೆ. ಕೆಲವನ್ನು ನಾವೇ ಕಾಯ್ದುಕೊಂಡಿದ್ದು, ಕೆಲವು ಭೇದಿಸಲಾರದ್ದು. ಮಾನವ ನಿರ್ಮಿತ ಸ್ಥಳಗಳು, ಕಟ್ಟಡಗಳಿಂದ ಹಿಡಿದು ನಿಸರ್ಗ ನಿರ್ಮಿತ ಪ್ರದೇಶಗಳವರೆಗೆ ಕೆಲವೊಂದು ತಾಣಗಳು ಕುತೂಹಲ ಕಾಯ್ದುಕೊಂಡಿವೆ. ವೈಜ್ಞಾನಿಕ, ಪ್ರಾಕೃತಿಕ, ಧಾರ್ಮಿಕ, ಸುರಕ್ಷತೆ ಮುಂತಾದ ಕಾರಣಗಳಿಂದ ಅವುಗಳತ್ತ ಭೇಟಿ ನಿಷೇಧವಾಗಿದೆ. ಅಂಥ ಕೆಲವು ವಿಶಿಷ್ಠ ಸ್ಥಳಗಳು, ವಿಶೇಷ ಕಟ್ಟಡಗಳು ಯಾವುವು ನೋಡೋಣ. 

ಹಾವುಗಳ ದ್ವೀಪ, ಬ್ರೆಜಿಲ್

ಬ್ರೆಜಿಲ್‌ನ ತೀರ ಪ್ರದೇಶ ಸಾಯೋ ಪಾಲೋದಿಂದ 93 ಮೈಲಿಗಳ ದೂರದಲ್ಲಿದೆ ಈ ಭಯಾನಕ ಸ್ನೇಕ್ ಐಲ್ಯಾಂಡ್. ಇಲ್ಲಿ ಹೋಗಲು ಯಾರಿಗೂ ಅನುಮತಿ ಇಲ್ಲ. ಒಂದು ವೇಳೆ ಅನುಮತಿ ಕೊಟ್ರೂ ನೀವಿಲ್ಲಿ ಕಾಲಿಡಲಾರಿರಿ. ಏಕೆಂದರೆ ಅಲ್ಲಿ ಕಾಲಿಡಲು ಜಾಗವೇ ಇಲ್ಲ. ಪ್ರತಿ 10 ಚದರ ಅಡಿಗೂ 1ರಿಂದ 5 ಹಾವುಗಳು ಇದ್ದೇ ಇರುತ್ತವೆ! ಅದರಲ್ಲೂ ಕಚ್ಚಿದರೆ ಮಾಂಸವೇ ಕಿತ್ತು ಬರುವಂಥ ವಿಷ ಪೂಸುವ ಅತಿ ಅಪಾಯಕಾರಿ ಹಾವುಗಳು ಇಲ್ಲಿವೆ. 

ಲಾಸ್‌ಕಾಕ್ಸ್ ಗುಹೆಗಳು, ಫ್ರಾನ್ಸ್

ಮನುಷ್ಯನ ಇತಿಹಾಸ ಕೆದಕುತ್ತಾ ಹೋದರೆ ಈ ಬಗ್ಗೆ ಉತ್ತಮ ಹೊಳಹುಗಳನ್ನು ನೀಡುವಂಥ ಸ್ಥಳವೊಂದು ಫ್ರಾನ್ಸ್‌ನಲ್ಲಿದೆ. ಇಲ್ಲಿನ ಲಾಸ್‌ಕಾಕ್ಸ್ ಗುಹೆಗಳಲ್ಲಿ 20,000 ವರ್ಷಗಳಷ್ಟು ಹಳೆಯ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ಪೇಂಟಿಂಗ್‌ಗಳನ್ನು ಕಾಣಬಹುದು. ಇಲ್ಲಿ ದನ, ಎಮ್ಮೆ, ಬೆಕ್ಕು ಮುಂತಾದ ಪ್ರಾಣಿಗಳ ಚಿತ್ರಗಳನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಅಲ್ಲದೆ, ನಾಲ್ಕು ಎತ್ತುಗಳ ಚಿತ್ರವಿದ್ದು, ಅದರಲ್ಲೊಂದು 17 ಅಡಿ ಎತ್ತರವಿದೆ. ದುರದೃಷ್ಟವೆಂದರೆ ಗುಹೆಗಳು ಫಂಗಸ್ ಹಾಗೂ ಕಪ್ಪು ಥಂಡಿ ಕಲೆಗಳಿಂದ ಹಾಳಾಗುತ್ತಿವೆ. ಇದು ಮನುಷ್ಯನ ಆರೋಗ್ಯಕ್ಕೂ ಒಳ್ಳೆಯದಲ್ಲ, ಜೊತೆಗೆ, ಪ್ರವಾಸಿಗರ ಭೇಟಿಯಿಂದ ಈ ಪೇಂಟಿಂಗ್‌ಗಳು ಹಾಳಾಗುತ್ತಿವೆ ಎಂಬುದನ್ನು ಕಂಡುಕೊಂಡ ಫ್ರಾನ್ಸ್ ಸರಕಾರ 1960ರಿಂದ ಈ ಗುಹೆಗಳಿಗೆ ಮನುಷ್ಯರ ಭೇಟಿ ನಿಷೇಧಿಸಿದೆ. 

ಪಾಸ್‌ಪೋರ್ಟ್, ವೀಸಾ... ಅಬ್ಬಬ್ಬಾ ಅದೆಷ್ಟು ವಿಧ!

ಉತ್ತರ ಸೆಂಟಿನೆಲ್ ದ್ವೀಪ, ಭಾರತ

ಅಂಡಮಾನ್ ದ್ವೀಪಗಳಲ್ಲಿ ಒಂದಾದ ನಾರ್ಥ್ ಸೆಂಟಿನಲ್ ಐಲ್ಯಾಂಡನ್ನು 60,000 ವರ್ಷಗಳಿಂದಲೂ ಇಲ್ಲಿನ ಆದಿವಾಸಿ ಬುಡಕಟ್ಟು ಜನಾಂಗ ತಮ್ಮದಾಗಿಸಿ ಇಟ್ಟುಕೊಂಡಿದ್ದಾರೆ. ಇವರು ಆಧುನಿಕತೆಯನ್ನು ಸಂಪೂರ್ಣ ವಿರೋಧಿಸುತ್ತಾರೆ. ಅಲ್ಲದೆ, ಹೊರಗಿನ ಜನರೊಂದಿಗೆ ಯಾವುದೇ ಸಂವಹನ ಬಯಸುವುದಿಲ್ಲ. ಯಾರಾದರೂ ಇಲ್ಲಿಗೆ ಭೇಟಿ ನೀಡಲೆತ್ನಿಸಿದರೆ ಅಥವಾ ಇವರನ್ನು ಮಾತನಾಡಿಸಲು ಪ್ರಯತ್ನಿಸಿದರೆ ಅಂಥವರ ಮೇಲೆ ಹಿಂಸಾಚಾರಕ್ಕಿಳಿಯುತ್ತಾರೆ. 2004ರಲ್ಲಿ ಸುನಾಮಿಯಾದ ಬಳಿಕ ಭಾರತೀಯ ಕೋಸ್ಟ್ ಗಾರ್ಡ್‌ಗಳು ಹೆಲಿಕಾಪ್ಟರ್‌ನಲ್ಲಿ ಈ ಕಾಡನ್ನು ವೀಕ್ಷಿಸಲೆತ್ನಿಸಿದಾಗ ಸ್ಥಳೀಯ ಆದಿವಾಸಿಗಳು ಬಿಲ್ಲುಬಾಣ ಹಿಡಿದು ಹೆಲಿಕಾಪ್ಟರ್ ಮೇಲೆ ದಾಳಿ ಮಾಡಿದ್ದರು. 
ಇವರ ಸಂಸ್ಕೃತಿ ಉಳಿಸಲು ಹಾಗೂ ಅವರಷ್ಟೇ ಈ ದ್ವೀಪದಲ್ಲಿರಲು ಬಯಸುವ ಹಕ್ಕನ್ನು ಗೌರವಿಸಿ ಭಾರತ ಸರ್ಕಾರ ಇಲ್ಲಿಗೆ ಹೊರಗಿನವರ ಭೇಟಿ ನಿಷೇಧಿಸಿದೆ. 

ಟೋಂಬ್ ಆಫ್ ಕ್ವಿನ್ ಶಿ ಹಾಂಗ್, ಚೀನಾ

ಚೀನಾದ ಈ ಟೆರಾ ಕೋಟಾ ವಾರಿಯರ್ಸ್ ಟೋಂಬ್ ಜಗತ್ಪ್ರಸಿದ್ಧ ಪ್ರವಾಸಿ ತಾಣ. ಆದರೆ, ಇಲ್ಲಿ ಪ್ರವಾಸಿಗರು ಕೇವಲ 2000 ಯೋಧರ ಪ್ರತಿಮೆಗಳನ್ನಷ್ಟೇ ನೋಡಬಹುದು. ಇನ್ನೂ 6000ದಷ್ಟು ಪ್ರತಿಮೆಗಳು ಹಾಗೂ ಇತರೆ ಹಲವು ರಹಸ್ಯಗಳನ್ನು ದೊಡ್ಡ ಭೂಮಿಯಡಿಗಿನ ಸಮಾಧಿಯಲ್ಲಿ ಮುಚ್ಚಿಡಲಾಗಿದೆ. ಇದು ಪ್ರವಾಸಿಗರಿಗೆ ಸೇರಿದಂತೆ ಸರ್ವರಿಗೂ ನಿಷಿದ್ಧ. ಚೀನಾದ ಮೊದಲ ರಾಜ ಕ್ವಿನ್ ಶಿ ಹಾಂಗ್ ಸಮಾಧಿ ಸ್ಥಳವಾದ ಇಲ್ಲಿ ಯುದ್ಧದಲ್ಲಿ ಮಡಿದ ಸೈನಿಕರ ಸುಮಾರು 8000 ಪ್ರತಿಮೆಗಳು ಭೂಮಿಯಡಿಗೆ ದೊರೆತಿವೆ. ಈ ಪ್ರತಿಮೆಗಳು ಮುಟ್ಟಿದರೆ ಬಾಂಬ್ ಸಿಡಿಯುತ್ತವೆ ಎಂಬ ವದಂತಿ ಹಬ್ಬಿದೆ. ಈ ಸಮಾಧಿಗಳಲ್ಲಿ ಪಾದರಸವನ್ನು ಅತಿಯಾಗಿ ಬಳಸಲಾಗಿದ್ದು, ಸರಿಯಾದ ಮುನ್ನೆಚ್ಚರಿಕೆ ಇಲ್ಲದೆ ಒಳಗೆ ಹೋದರೆ ಜನರು ವಿಷದಿಂದ ಸಾಯಬಹುದು ಎನ್ನಲಾಗುತ್ತದೆ. 

ಕೋಕಾ ಕೋಲಾ ರೆಸಿಪಿ ವಾಲ್ಟ್, ಯುನೈಟೆಡ್ ಸ್ಟೇಟ್ಸ್

ನೀವು ಪತ್ತೇದಾರಿಕೆ ಮಾಡಿ ಎಂಥೆಂಥ ರಹಸ್ಯಗಳನ್ನು ಬೇಕಾದರೂ ಬೇಧಿಸಬಹುದು. ಆದರೆ, ಕೋಕಾ ಕೋಲಾ ರೆಸಿಪಿ ಏನೆಂದು ಮಾತ್ರ ತಿಳಿಯಲಾರಿರಿ. ಅಟ್ಲಾಂಟಾದಲ್ಲಿರುವ ವಾಲ್ಟ್‌ನಲ್ಲಿ ಈ ರಹಸ್ಯ ಫಾರ್ಮುಲಾವನ್ನಿಟ್ಟು ಲಾಕ್ ಮಾಡಿ ಕಾಯಲು ಬಂದೂಕುಧಾರಿ ಗಾರ್ಡ್‌ಗಳನ್ನೂ ಬಿಡಲಾಗಿದೆ. 6.6 ಅಡಿ ಎತ್ತರದ ವಾಲ್ಟ್‌ನೊಳಗೆ ಮೆಟಲ್ ಬಾಕ್ಸ್‌ನಲ್ಲಿ ಹತ್ತು ಹಲವು ರೀತಿಯ ಲಾಕಿಂಗ್ ಸಿಸ್ಟಮ್ ಇಟ್ಟು ಕೋಕಾ ಕೋಲಾ ರೆಸಿಪಿ ಮುಚ್ಚಿಡಲಾಗಿದೆ. ಕೀಪ್ಯಾಡ್ ಹ್ಯಾಂಡ್ ಸ್ಕ್ಯಾನರ್ ಮೂಲಕ ಮಾತ್ರ ಇದನ್ನು ತೆರೆಯಬಹುದು. 

ಈ ಸರೋವರದ ಬಳಿ ವರ್ಷ ಪೂರ್ತಿ ಬೇಸಿಗೆ!

ಸ್ವಾಲ್‌ಬಾರ್ಡ್ ಗ್ಲೋಬಲ್ ಸೀಡ್ ವಾಲ್ಟ್, ನಾರ್ವೆ

ಸ್ಪಿಟ್ಸ್‌ಬರ್ಗನ್‌ನ ದ್ವೀಪವೊಂದರಲ್ಲಿ ಮಂಜಿನ ಮಧ್ಯೆ ನಿರ್ಮಿತವಾಗಿರುವ ಈ ಬೀಜಗಳ ಸ್ಟೋರೇಜ್ ಕಟ್ಟಡದೊಳಗೆ ನೀವು ಕಿಂಡಿಯಲ್ಲಿ ಇಣುಕಲೂ ಅನುಮತಿ ಇಲ್ಲ. ಇಲ್ಲಿ ಜಗತ್ತಿನಾದ್ಯಂತದ ಪ್ರಮುಖ ಗಿಡಮರಗಳ ಸುಮಾರು 840,000 ಸ್ಯಾಂಪಲ್ ಬೀಜಗಳನ್ನು ಕಾಪಿಟ್ಟುಕೊಳ್ಳಲಾಗಿದೆ. ಜಗತ್ತಿಗೇನಾದರೂ ಪ್ರಳಯವೋ ಮತ್ತೊಂದೋ ಆಗಿ ಎಲ್ಲವನ್ನೂ ಕಳೆದುಕೊಂಡಾಗ ಮತ್ತೆ ಬೀಜದಿಂದ ಬೆಳೆಯುವ ಉದ್ದೇಶದಿಂದ ಪ್ರಮುಖ ಆಹಾರಗಳನ್ನು ಬೆಳೆವ ಸಸ್ಯಗಳ ಬೀಜಗಳನ್ನು ಈ ಸೀಡ್‌ಬ್ಯಾಂಕ್‌ನಲ್ಲಿ ಸಂರಕ್ಷಿಸಿಡಲಾಗಿದೆ. ಫೈನಲ್ ಬ್ಯಾಕಪ್ ಎಂದೇ ಕರೆಸಿಕೊಳ್ಳುವ ಇವುಗಳಿರುವ ಕಟ್ಟಡಕ್ಕೆ ಬೆರಳೆಣಿಕೆಯ ಜನರಿಗೆ ಮಾತ್ರ ಪ್ರವೇಶಾನುಮತಿ ಇದೆ.  

ಯುನೈಟೆಡ್ ಸ್ಟೇಟ್ಸ್‌ನ ಬೊಹೆಮಿಯನ್ ಗ್ರೋವ್, ಏರಿಯಾ 51, ಜಪಾನ್‌ನ ಐಸ್ ಗ್ರ್ಯಾಂಡ್ ಶ್ರೈನ್, ಆಸ್ಟ್ರೇಲಿಯಾದ ಹರ್ಡ್ ದ್ವೀಪ, ಇಟಲಿಯ ಪೊವೆಗ್ಲಿಯಾ, ಐಸ್‌ಲ್ಯಾಂಡ್‌ನ ಸರ್ಟ್ಸಿ ಐಲ್ಯಾಂಡ್, ವ್ಯಾಟಿಕನ್ ಸಿಟಿಯ ಸೀಕ್ರೆಟ್ ಆರ್ಕೈವ್ಸ್, ಜೆರುಸಲೇಂನ ಡೋಮ್ ಆಫ್ ದ ರಾಕ್ ಸೇರಿದಂತೆ ಇನ್ನೂ ಹತ್ತು ಹಲವು ಪ್ರದೇಶಗಳು ಕಾರಣಾಂತರಗಳಿಂದ ಮನುಷ್ಯರಿಗೆ ನಿಷೇಧಗೊಂಡಿವೆ. 

Follow Us:
Download App:
  • android
  • ios