ಸಂಗಾತಿಯೊಂದಿಗೆ ಸಂಬಂಧ ಹಳಸಿ ಹೋದರೆ ವೈಯಕ್ತಿಕ ಮಾತ್ರವಲ್ಲ, ಔದ್ಯೋಗಿಕ, ಸಾಮಾಜಿಕ ಬದುಕೂ ಹದಗೆಟ್ಟು ಬಿಡುತ್ತದೆ. ಆದರೆ, ಎಷ್ಟೋ ಜನ ಈ ಹಳಸಲು ಬದುಕಿಗೇ ಎಷ್ಟು ಒಗ್ಗಿ ಹೋಗಿ ಬಿಟ್ಟಿರುತ್ತಾರೆಂದರೆ ಅವರಿಗೆ ತಮ್ಮ ಸಂಬಂಧದ ಹಾದಿ ದಿಕ್ಕು ತಪ್ಪಿರುವ ಅರಿವೇ ಆಗಿರುವುದಿಲ್ಲ. ಹೀಗೆ ಸಂಬಂಧ ಕೆಟ್ಟು ಹೋಗಿದ್ದೇ ಗೊತ್ತಾಗಲಿಲ್ಲವೆಂದ ಮೇಲೆ ಅದನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುವುದಾದರೂ ಹೇಗೆ? ಅದಕ್ಕೆಂದೇ ಸಂಬಂಧ ಕೆಟ್ಟ ಸೂಚನೆಗಳು ಯಾವುವೆಂದು ಇಲ್ಲಿದೆ ನೋಡಿ.

ಸಂವಹನ ಕೊರತೆ
ಸಂಗಾತಿಗಳಿಬ್ಬರ ನಡುವೆ ಮಾತು ನಿರರ್ಗಳವಾಗಿ ಸಾಗದಿದ್ದಾಗ ಒಬ್ಬರನ್ನೊಬ್ಬರು ಅರಿವ ಬಗೆಯಾದರೂ ಏನು? ಮನಸ್ಸು ಬಿಚ್ಚಿ ಮಾತನಾಡದೇ ಅದೇ ಅಭ್ಯಾಸವಾಗಿ ಬಿಟ್ಟರೆ, ನಂತರ ಮಾತಾಡಬೇಕೆಂದರೂ ಆಗದು. ನಿಮ್ಮ ಮನಸ್ಸು ಏನೆಂದು ಸಂಗಾತಿಗೆ ಗೊತ್ತಿಲ್ಲವಾದರೆ, ಯಾವ ವಿಷಯಕ್ಕೆ ಸಿಟ್ಟು ಬಂದಿದೆ, ದುಃಖವಾಗಿದೆ ಮುಂತಾದ ವಿಷಯಗಳನ್ನೂ ಗುರುತಿಸಲಾಗದು. ನಿಮಗೆ ಸಂಗಾತಿಯೊಡನೆ ಮನಸು ಬಿಚ್ಚಿ ಮಾತನಾಡಲು ಆಗದೆ ಹೋದರೆ, ಅಲ್ಲಿ ಸಂಬಂಧ ಹಳಸುತ್ತಿರುವ ವಾಸನೆ ಮೂಗಿಗೆ ಬಡಿಯಬೇಕು. 

ಪತ್ನಿಯಿಂದ ಪತಿ ಬಯಸುವುದೇನು ಗೊತ್ತಾ?

ಅವಮಾನಿಸುವುದು, ವ್ಯಂಗ್ಯವಾಡುವುದು
ನಿಮ್ಮ ಸಂಗಾತಿಯನ್ನು ಕಾಡಿಸುವುದು, ರೇಗಿಸುವುದು, ತಮಾಷೆ ಮಾಡುವುದು ಎಲ್ಲವೂ ಚೆಂದವೇ. ಆದರೆ, ತಮಾಷೆ ಭರದಲ್ಲಿ ಅವರ ಅಂದ, ಅಭ್ಯಾಸ, ಬುದ್ಧಿವಂತಿಕೆ ಮುಂತಾದವುಗಳನ್ನು ಆಡಿಕೊಳ್ಳುವುದು ಖಂಡಿತಾ ಅವರಿಗೆ ಖುಷಿ ನೀಡುವುದಿಲ್ಲ. ಬದಲಾಗಿ, ಅವಮಾನ ಎನಿಸುತ್ತದೆ. ಅದರಲ್ಲೂ ಸಂಬಂಧಿಕರು, ಸ್ನೇಹಿತರ ಮುಂದೆ ವ್ಯಂಗ್ಯವಾಡಿದರೆ ಹೆಚ್ಚಿನ ನೋವಾಗುತ್ತದೆ. ಇನ್ನೊಂದೆಡೆ, ನಿಮ್ಮ ಸಂಗಾತಿ ಪದೇ ಪದೆ ನಿಮ್ಮನ್ನು ಅವಮಾನಿಸುತ್ತಿದ್ದರೆ, ಅದನ್ನು ಅವರಿಗೆ ಹೇಳಲಾಗದೆ ಮುಚ್ಚಿಟ್ಟುಕೊಂಡು ಕೊರಗುವುದು ಕೂಡಾ ಮತ್ತಷ್ಟು ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. 

ಕೊನೆ ಮೊದಲಿಲ್ಲದ ಜಗಳ
ಸಂಬಂಧದಲ್ಲಿ ಜಗಳವಾಡುವುದು ಸಾಮಾನ್ಯ. ಹಾಗಂತ ಜಗಳದ ಬಳಿಕ ಆ ಕುರಿತು ಮಾತನಾಡಿ ಅದಕ್ಕೊಂದು ಪರಿಹಾರ ಹುಡುಕದೆ ಬೆಳೆಸಿಕೊಂಡು ಹೋದರೆ ಖಂಡಿತಾ ನಿಮ್ಮ ಬದುಕಿನ ರೈಲು ಹಳಿ ತಪ್ಪಲಿದೆ.

ಗೆಳೆಯರು, ಕುಟುಂಬದ ಎಚ್ಚರಿಕೆ 
ನಿಮ್ಮ ಆಪ್ತರು ನಿಮ್ಮ ಸಂಬಂಧ ಹದಗೆಡುತ್ತಿರುವ ಕುರಿತು ಎಚ್ಚರಿಕೆ ನೀಡುತ್ತಿದ್ದಾರೆಂದರೆ ಅದರಲ್ಲಿ ಸತ್ಯವಿರಬೇಕೆಂದು ತಿಳಿಯುವುದು ಒಳಿತು. ತಕ್ಷಣ ಎಲ್ಲಿ ತಪ್ಪಾಗುತ್ತಿದೆ ಎಂದು ಕಂಡುಕೊಂಡು ಸರಿಪಡಿಸಿಕೊಳ್ಳಲು ಯತ್ನಿಸಿ.

ಒಬ್ಬರಿಗೊಬ್ಬರು ಅಮುಖ್ಯರಾದಾಗ
ಸದಾ ಕಾಲ ಸಂಗಾತಿ ನಿಮಗೆ ಎಲ್ಲಕ್ಕಿಂತ ಮುಖ್ಯವೆನಿಸಬೇಕು. ಬದುಕಿನಲ್ಲಿ ಬೇರೆ ಸಂಗತಿಗಳೂ ಮುಖ್ಯವಿರಬಹುದು. ಆದರೆ, ಅವುಗಳು ನಿಮ್ಮ ಪ್ರಿಯಾರಿಟಿ ಲಿಸ್ಟ್ ನ ಎರಡನೇ ಸಂಖ್ಯೆಯಿಂದ ಕೆಳಗಿರಬೇಕು. ನಿಮಗೆ ಸಂಗಾತಿ ಎಲ್ಲಕ್ಕಿಂತ ಮುಖ್ಯವೆನಿಸಿದಿದ್ದರೆ ಅದೂ ಕೂಡಾ ಸಂಬಂಧ ಕೆಟ್ಟಿರುವುದರ ಸೂಚಕವೇ.

ಬ್ರೇಕಪ್ ಬಳಿಕ ಮಾಡಬಾರದ 9 ಕೆಲಸಗಳು

ಏಕಾಂತ ದೊರೆತೊಡನೆ ಅಯ್ಯಬ್ಬಾ ಎನಿಸಿದರೆ
ಪ್ರೀತಿಯಲ್ಲಿ ಪ್ರೇಮಿಯ ಸಾಂಗತ್ಯಕ್ಕಿಂತ ಸುಖ ಇನ್ನೊಂದಿಲ್ಲ. ವೈಯಕ್ತಿಕ ಸ್ಪೇಸ್ ಇರಬೇಕು ನಿಜ. ಹಾಗಂತ ಸಂಗಾತಿ ಎದ್ದುಹೋದರೆ ಸಾಕಪ್ಪಾ ಎನಿಸಬಾರದು. ನಿಮಗೆ ಅವರ ಕಂಪನಿ ಬೇಡವೆಂದಾದಲ್ಲಿ ಜೊತೆಗಿರುವುದಾದರೂ ಏತಕ್ಕೆ

ನೀವು ಖುಷಿ ಕಳೆದುಕೊಂಡಿದ್ದರೆ
ಬದುಕಿನಲ್ಲಿ ನಮಗಾಗಿ ಒಬ್ಬರಿದ್ದಾರೆ ಎಂದಾಗ ಇರುವ ಖುಷಿಯೇ ಬೇರೆ. ಅದು ಕೊಡುವ ಧೈರ್ಯ, ನೆಮ್ಮದಿಯೇ ಬೇರೆ. ಆದರೆ, ಸಂಗಾತಿಯಿದ್ದೂ ನೀವು ಎಂದಿಗೂ ಖುಷಿಯಾಗಿಲ್ಲವಾದರೆ, ಇದರಿಂದ ಯಾವ ಕೆಲಸವೂ ನೆಮ್ಮದಿ ನೀಡುತ್ತಿಲ್ಲವಾದರೆ ಆಗ ನೀವು ನಿಮ್ಮ ಸಂಬಂಧ ಹದಗೆಟ್ಟಿರುವ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು.