ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!
ಮಹಾಭಾರತದ ಕಥೆ ತಿಳಿದವರಿಗೆ ಹಿಡಿಂಬಿ ಅಥವಾ ಹಿಡಿಂಬಾ ಹೆಸರು ತಿಳಿದೇ ಇರುತ್ತದೆ. ಹಿಡಿಂಬಿಯನ್ನು ರಾಕ್ಷಸಿ ಎನ್ನಲಾಗುತ್ತದೆ. ಈ ರಾಕ್ಷಸಿಯನ್ನೇ ಪೂಜಿಸುವ ಒಂದು ಮಂದಿರ ಭಾರತದಲ್ಲಿದೆ ಗೊತ್ತಾ? ಅದಕ್ಕೂ ಅರವಿಂದ್ ಸ್ವಾಮಿ ನಟನೆಯ ರೋಜಾ ಚಿತ್ರಕ್ಕೂ ಇದೆ ನಂಟು.
ಮಹಾಭಾರತ ಗೊತ್ತಿರೋರಿಗೆ ಹಿಡಿಂಬೆಯೂ ಗೊತ್ತಿರುತ್ತೆ. ಭೀಮನನ್ನು ವರಿಸುವ ಮಹಾನ್ ರಾಕ್ಷಿಸಿ ಬಗ್ಗೆ ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ಕಲ್ಪನೆಯನ್ನು ಇಟ್ಟುಕೊಂಡಿರುತ್ತಾರೆ. ಇಂಥ ಹಿಡಿಂಬೆಯನ್ನೇ ಒಬ್ಬ ಶಕ್ತಿ ದೇವತೆಯಾಗಿ ಆರಾಧಿಸುವ ಒಂದು ವಿಸ್ಮಯಕರ ದೇವಾಲಯವೂ ಭಾರತದಲ್ಲಿದೆ. ಪ್ರಕೃತಿ ವಿಸ್ಮಯಕ್ಕೆ ಹೆಸರಾಗಿರುವ ಮನಾಲಿಯಲ್ಲಿದೆ ಈ ದೇವಸ್ಥಾನ.
ಈ ದೇವಸ್ಥಾನಕ್ಕೂ 90ರ ದಶಕದಲ್ಲಿ ಸೂಪರ್ ಹಿಟ್ ಆದ ಅರವಿಂದ್ ಸ್ವಾಮಿ, ಮಧು ನಟನೆಯ 'ರೋಜಾ' ಚಿತ್ರಕ್ಕೂ ಇದೆ ನಂಟು. ಈ ಚಿತ್ರ ಬಹುತೇಕ ಈ ದೇವಾಲಯದ ಆಸುಪಾಸು ಚಿತೀಕರಣಗೊಂಡಿದೆ ಎಂದರೆ ಈ ಚಿತ್ರದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲೇ ಬೇಕು ನೀವು.
ಹೌದು. ಮನಾಲಿ ಎಂದಾಕ್ಷಣ ನೆನಪಾಗೋದು ತಂಪಾದ ಚಳಿಯಿಂದ ಕೂಡಿದ ತಾಣ. ಅದಕ್ಕಾಗಿಯೇ ನವ ಜೋಡಿಗಳು ಮದುವೆಯಾದ ನಂತರ ಹನಿಮೂನಿಗೆ ಇಲ್ಲಿಗೇ ಹೋಗುವುದು. ಇಲ್ಲಿಯೇ ಇದೆ ಹಿಡಿಂಬಾ ಮಂದಿರ. ದಟ್ಟವಾದ ಅಭಯಾರಣ್ಯದಲ್ಲಿ ಗಾಢವಾಗಿ ಬೆಳೆದು ನಿಂತಿರುವ ದೈತ್ಯ ದೇವದಾರು ಮರಗಳ ಮಧ್ಯದಲ್ಲಿ ಈ ದೇವಾಲಯವಿದೆ. ಈ ಹಿಡಿಂಬಾ ದೇವಾಲಯ ಕಟ್ಟಿಗೆಯಿಂದ ತಯಾರಿಸಲಾದ ವಿಶಿಷ್ಟ ರೀತಿಯ ಒಂದರ ಮೇಲೊಂದರಂತೆ ಇಡಲಾಗಿರುವ ಮೂರು ಸ್ತರಗಳ ಗೋಪುರದಿಂದ ಅನನ್ಯವಾಗಿ ಕಂಡುಬರುತ್ತದೆ.
ಈ ದೇವಾಲಯ ಆವರಣದಲ್ಲಿರುವ ಶಾಸನದ ಪ್ರಕಾರ, ಈ ದೇವಾಲಯವು 1553 ರಲ್ಲಿ ರಾಜಾ ಬಹಾದ್ದೂರ್ ಸಿಂಗ್ ಎಂಬಾತ ನಿರ್ಮಿಸಿದ್ದಾನೆ. ಮುಖ್ಯ ದೇವತೆಯಾಗಿ ಹಿಡಿಂಬೆಯನ್ನು ಆರಾಧಿಸಲಾದರೂ ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿ, ನವಗೃಹ, ಗಣೇಶ, ದುರ್ಗೆಯರ ವಿಗ್ರಹಗಳೂ ಇಲ್ಲಿವೆ.
ಈ ದೇವಾಲಯದ ಹಿನ್ನೆಲೆ
ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡಿನಲ್ಲಿ ತಿರುಗಾಡುತ್ತಿರುವಾಗ ಹಿಡಿಂಬ ಮತ್ತು ಹಿಡಿಂಬಿ ಎಂಬ ರಾಕ್ಷಸ ಅಣ್ಣ ತಂಗಿಯರು ಇವರನ್ನು ನೋಡುತ್ತಾರೆ. ಹಿಡಿಂಬ ನರಭಕ್ಷಕನಾದ ಕಾರಣ ಆತನಿಗೆ ಸಧೃಢ ದೇಹ ಹೊಂದಿರುವ ಭೀಮನನ್ನು ತಿನ್ನಲು ಬಯಸುತ್ತಾನೆ. ಒಂದು ದಿನ ರಾತ್ರಿ ಕಾಡಿನಲ್ಲಿ ಎಲ್ಲರೂ ಮಲಗಿರುವಾಗ ಭೀಮ ಎಚ್ಚರದಿಂದ ಕಾಯುತ್ತಿರುತ್ತಾನೆ. ಅವಾಗ ಅಣ್ಣನ ಆದೇಶದಂತೆ ಹಿಡಿಂಬಿ ಸುಂದರ ಸ್ತ್ರೀ ರೂಪ ಧರಿಸಿ ಅವರಿದ್ದ ಜಾಗಕ್ಕೆ ತೆರಳುತ್ತಾಳೆ. ಅಲ್ಲಿ ಭೀಮನನ್ನು ನೋಡಿ ಅವಳಿಗೆ ಪ್ರೀತಿ ಹುಟ್ಟುತ್ತದೆ.
ಮೋಹಿತಳಾದ ಹಿಡಿಂಬಿ ಭೀಮನ ಬಳಿ ಎಲ್ಲ ವಿಷಯಗಳನ್ನು ಹೇಳುತ್ತಾಳೆ. ಭೀಮನು ಹಿಡಿಂಬನೊಂದಿಗೆ ಯುದ್ಧ ಮಾಡಿ ಅವನನ್ನು ಸಂಹರಿಸಿ, ಹಿಡಿಂಬೆಯನ್ನೂ ಹತ್ಯೆಗೈಯ್ಯಲು ಮುಂದಾಗುತ್ತಾನೆ. ಆದರೆ ತಾಯಿ ಕುಂತಿ ಆತನನ್ನು ತಡೆದು ಅವಳನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾಳೆ. ಭೀಮನು ಮದುವೆಯಾಗಲು ಒಪ್ಪಿ ಕೇವಲ ಒಂದು ಮಗು ಆಗುವವರೆಗೆ ಮಾತ್ರ ಆಕೆಯೊಂದಿಗೆ ಸಂಸಾರ ಮಾಡುವುದಾಗಿ ಶರತ್ತು ವಿಧಿಸುತ್ತಾನೆ. ಆಕೆಗೆ ಹುಟ್ಟಿದ ಮಗನೆ ಘಟೋದ್ಗಜ. ಮಗ ಹುಟ್ಟಿ ಆತ ಬೆಳೆದು ನಿಂತ ಮೇಲೆ ಹಿಡಿಂಬಾ ಘೋರ ತಪಸ್ಸು ಮಾಡಿ ಹಿಡಿಂಬಾ ದೇವಿಯ ಸ್ಥಾನ ಪಡೆಯುತ್ತಾಳೆ. ಮುಂದೆ ಇಲ್ಲಿನ ಜನರೂ ಹಿಡಿಂಬಿಯನ್ನು ದೇವಿಯನ್ನಾಗಿ ಪೂಜಿಸಲು ಆರಂಭಿಸಿದರು.
ಇಲ್ಲಿ ಹಿಡಿಂಬಿ ದೇವಿಯ ಮೂರ್ತಿಯನ್ನು ಪೂಜಿಸಲಾಗುವುದಿಲ್ಲ. ಬದಲಾಗಿ ದೊಡ್ಡ ಕಲ್ಲಿನ ಮೇಲೆ ಹಿಡಿಂಬಿಯ ಪಾದದ ಗುರುತು ಇದೆ. ಪ್ರತಿವರ್ಷ ಶ್ರಾವಣ ಮಾಸದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಯಾವ ಸಮಯದಲ್ಲೂ ಈ 500 ವರ್ಷದ ಹಿಂದಿನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ನಮಿಸಬಹುದು.