ಈ ಮೋಸ್ಟ್ ಹಾಂಟೆಡ್ ದ್ವೀಪಕ್ಕೆ ಹೋದ್ರೆ ಕಥೆ ಅಷ್ಟೇ....
ದ್ವೀಪ ಅಥವಾ ಐಲ್ಯಾಂಡ್ ಎಂದು ಹೇಳಿದ ಕೂಡಲೇ ಏನೋ ಒಂಥರಾ ಖುಷಿ. ನೀರಿನ ಮಧ್ಯದಲ್ಲಿರುವ ಸಣ್ಣ ಭೂಮಿಯಲ್ಲಿ ಪ್ರಕೃತಿಯ ನಡುವೆ ಎಂಜಾಯ್ ಮಾಡೋದು ಯಾರಿಗಿಷ್ಟವಿಲ್ಲ ಹೇಳಿ? ಆದರೆ ಇಟೆಲಿಯಲ್ಲೊಂದು ದ್ವೀಪವಿದೆ, ಅದರ ಹೆಸರು ಕೇಳಿದರೆ ಜನರು ನೂರು ಮೈಲು ದೂರ ಓಡುತ್ತಾರೆ. ಅಷ್ಟಕ್ಕೂ ಅಲ್ಲೇನಿದೆ ಅಂಥದ್ದು?
ನಿಮಗೆ ಭಯಾನಕ ತಾಣಗಳು ಎಂದರೆ ಇಷ್ಟ ಹಾಗೂ ಐಲ್ಯಾಂಡ್ ಅಂದ್ರೆ ತುಂಬಾನೇ ಇಷ್ಟ ಎಂದಾದರೆ ದೂರದ ಇಟೆಲಿಯಲ್ಲೊಂದು ದ್ವೀಪವಿದೆ. ಅಲ್ಲಿಗೆ ಹೋಗಬಹುದು. ವಿಷ್ಯ ಏನಂದ್ರೆ ಆ ತಾಣ ಒಂದು ನಿಗೂಢ, ರಹಸ್ಯದಿಂದ ಕೂಡಿದೆ. ಅಲ್ಲಿ ಹೋಗಲು ಜನ ಭಯ ಪಡುತ್ತಾರೆ. ಕಾರಣ ಅಲ್ಲಿಗೆ ಹೋದವರು ಹಿಂದಿರುಗಿ ಬಂದ ಉದಾಹರಣೆಗಳೇ ಇಲ್ಲವಂತೆ. ಅಷ್ಟಕ್ಕೂ ಈ ದ್ವೀಪ ಎಲ್ಲಿದೆ? ಅದರ ಕತೆ ಏನು ನೋಡೋಣ...
ಇಟಲಿಯ ಈ ಭಯಾನಕ ದ್ವೀಪದ ಹೆಸರು ಪೊವೆಗಲಿಯಾ. ಈ ಐಲ್ಯಾಂಡ್ ಸದ್ಯ ಜನರ ಸಂಪರ್ಕವೇ ಇಲ್ಲದೆ ಕೇವಲ ಭಯಾನಕ ತಾಣವಾಗಿ ಉಳಿದಿದೆ. ಈ ಐಲ್ಯಾಂಡ್‌ನಲ್ಲಿ ಜನರು ಕಿರುಚಾಡುವ ಶಬ್ಧ ಕೇಳಿಸುತ್ತದೆ. ಕೆಲವು ವರ್ಷಗಳ ಹಿಂದಿನವರೆಗೂ ಈ ತಾಣಕ್ಕೆ ಜನರು ರಜೆ ಮಜಾ ಅನುಭವಿಸಲು ಬರುತ್ತಿದ್ದರು. ಆದರೆ ಇಂದು ಅದೆಲ್ಲಾ ಬದಲಾಗಿದೆ. ಇಂದು ಅಲ್ಲಿ ಕೇವಲ ನಿಶ್ಯಬ್ಧ, ಭಯಾನಕ ನೀರವತೆ ತಾಂಡವವಾಡುತ್ತಿದೆ.
ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!
ಈ ಐಲ್ಯಾಂಡ್‌ನ ಇತಿಹಾಸವನ್ನು ಕೆದಕಿದಾಗ ಈ ಸುಂದರ ತಾಣ ಭಯಾನಕದ ಹಿಂದಿನ ಕಹಿ ಸತ್ಯದ ಬಗ್ಗೆ ಮಾಹಿತಿ ಸಿಗುತ್ತದೆ. ಹಿಂದೆ ಈ ದ್ವೀಪದಲ್ಲಿ ಸಾವಿರಾರು ಜನರನ್ನು ಜೀವಂತವಾಗಿ ಸುಡಲಾಗಿತ್ತು. ಆ ಸಮಯದಲ್ಲಿ ಈ ಐಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳುತ್ತಿದ್ದ ಜನರು ಮತ್ತೆ ಹಿಂದಿರುಗಿ ಬಂದ ವರದಿಯೇ ಇಲ್ಲ. ಈ ಭಯಾನಕ ಐಲ್ಯಾಂಡ್‌ಗೆ ತೆರಳಲು ಪ್ರತಿಯೊಬ್ಬರೂ ಹೆದರುತ್ತಾರೆ.
ದೊಡ್ಡ ಕಾಯಿಲೆಯಂದೇ ಪರಿಗಣಿಸಲಾಗುತ್ತಿದ್ದ ಪ್ಲೇಗಿಗೆ ಔಷಧಿಯೇ ಇಲ್ಲದ ಕಾಲದಲ್ಲಿ ರೋಗ ಪೀಡಿತರನ್ನು ಈ ದ್ವೀಪಕ್ಕೆ ತಂದು ಬಿಡುತ್ತಿದ್ದರಂತೆ. ರೋಗದಿಂದ ಅಸುನೀಗುತ್ತಿದ್ದವರನ್ನು ಇಲ್ಲಿಯೇ ಸುಡಲಾಗುತ್ತಿತ್ತು. ಇಲ್ಲಿ ಹಲವು ಹೆಣಗಳು ತುಂಬಿಕೊಂಡ ಕಾರಣ ಅಲ್ಲಿನ ಜನರಿಗೆ ಲೀಶ್ಮೇನಿಯಾಸಿಸ್ ಎಂಬ ಜ್ವರ ಹರಡಿತ್ತು. ಈ ರೋಗ ಮುಂದೆ ಯಾರಿಗೂ ಹರಡಬಾರದು ಎಂಬ ಕಾರಣದಿಂದಾಗಿ ಒಂದು ಲಕ್ಷದ 60 ಸಾವಿರ ರೋಗಿಗಳನ್ನು ಜೀವಂತವಾಗಿ ಸುಡಲಾಯಿತಂತೆ ಇಲ್ಲಿ! ಆ ದ್ವೀಪಕ್ಕೆ ಜನರು ಹೋಗುವುದನ್ನೇ ಕಡಿಮೆ ಮಾಡಿದ್ದು, ನಂತರ ದ್ವೀಪ ಖಾಲಿಯಾಗಿಯೇ ಉಳಿದಿದೆ.
ನರಕ ಹೇಗಿರುತ್ತೆ? ಇಲ್ಲಿಗೆ ವಿಸಿಟ್ ಮಾಡಿದ್ರೆ ಗೊತ್ತಾಗುತ್ತೆ....
ಕೆಲವು ಸಮಯದ ನಂತರ ಈ ಐಲ್ಯಾಂಡ್‌ಗೆ ಹೋಗುವ ಜನರಿಗೆ ಭೂತ ಕಾಣಲು ಆರಂಭವಾಯಿತು. ಆದರೆ ಇದು ಅವರ ಭ್ರಮೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ 1922ರಲ್ಲಿ ಅಲ್ಲಿ ಮೆಂಟಲ್ ಆಸ್ಪತ್ರೆಯೊಂದನ್ನು ತೆರೆಯಲಾಯಿತು. ಆದರೆ ಈ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೂ ಮೃತರ ಭೂತ ಕಾಣಿಸತೊಡಗಿತು. ಅಷ್ಟೇ ಅಲ್ಲ, ಅಲ್ಲಿ ನರ್ಸ್ ಮತ್ತು ವೈದ್ಯರಿಗೂ ಹಲವು ಚಿತ್ರ ವಿಚಿತ್ರ ಅನುಭವವಾಗತೊಡಗಿತು. ಇದರಿಂದ ಹಲವು ವರ್ಷಗಳ ನಂತರ ಆ ಆಸ್ಪತ್ರೆಯನ್ನೇ ಮುಚ್ಚಲಾಯಿತು. ಅಂದಿನಿಂದ ಈ ದ್ವೀಪಕ್ಕೆ ಯಾರೂ ಹೋಗೋದೇ ಇಲ್ಲ.