ಹಬ್ಬಿದಾ ಮಲೆ ಮಧ್ಯದೊಳಗೆ ಹರಡಿ ನಿಂತ ಅಮ್ಮನಘಟ್ಟ!

ಮಲೆನಾಡಿನ ಸೊಬಗು, ಸಿರಿ, ವೈಯ್ಯಾರ ಹೊತ್ತ ಅಮ್ಮನಘಟ್ಟ ಜೇನುಕಲ್ಲಮ್ಮನ ವಾಸಸ್ಥಾನ. ಇಲ್ಲಿ ಹೆಬ್ಬಂಡೆ ಸೀಳಿ ಹಿಡಿ ಬಂಡೆಯಾಗಿ ಉದ್ಭವವಾಗಿದ್ದಾಳೆ ತಾಯಿ ರೇಣುಕಾದೇವಿ. 

Ammanaghatta a temple in the midst of nature

ರೇಶ್ಮಾ ರಾವ್

ಹಸಿರು ಸೀರೆ ಉಟ್ಟ ಹಾದಿ, ಸುತ್ತ ಎತ್ತರದ ಹರಿದ್ವರ್ಣದ ಬೆಟ್ಟಗಳು, ಈ ಹಬ್ಬಿದಾ ಮಲೆ ಮಧ್ಯದೊಳಗೆ ಹರಡಿ ನಿಂತ ಬೃಹತ್ ಬಂಡೆಯ ಮಡಿಲಲ್ಲಿ ಮಹಾಮಹಿಮಳಾದ ರೇಣುಕಾದೇವಿ ಅಮ್ಮನವರ ವಾಸ. ಸುಡು ಬಿಸಿಲಿನಲ್ಲೂ ತಂಪಾಗಿಡುವ, ನಂಬಿ ಬಂದ ಭಕ್ತರಿಗೆ ನೆರಳು ನೀಡುವ, ಜಡಿಮಳೆಯಲ್ಲಿ ನೀರಿನ ಪಸೆ ತಾಕದಂತೆ ನೋಡಿಕೊಳ್ಳುವ ಪ್ರಕೃತಿ ನಿರ್ಮಿತ ಬಂಡೆಯೇ ಇಲ್ಲಿ ದೇವಸ್ಥಾನಕ್ಕೆ ಚಾವಣಿ, ಚಪ್ಪರ, ಗೋಡೆ ಎಲ್ಲ. 

ಈ ಸುಂದರ, ಕಾರಣಿಕ ದೇಗುಲ ಇರುವುದು ಹೊಸನಗರ ತಾಲೂಕಿನ ಕೊಡೂರು ಹೋಬಳಿಯ ಜೇನುಕಲ್ಲಮ್ಮ ಬೆಟ್ಟದಲ್ಲಿ. ಅಮ್ಮನವರಿರುವ ಗುಡಿಯ ಮೇಲಿನ ಬಂಡೆಯ ತುಂಬಾ ಜೇನುಗೂಡುಗಳೇ ತುಂಬಿರುತ್ತಿದ್ದುದರಿಂದ ಇದಕ್ಕೆ ಜೇನುಕಲ್ಲಮ್ಮ ಎಂಬ ಹೆಸರು ಬಂದಿದೆ. ಇಲ್ಲಿನ ಅಮ್ಮನವರ ಶಕ್ತಿಗೆ ಅಪಾರ ಭಕ್ತಗಣವಿದೆ. ಚರ್ಮದ ಸಮಸ್ಯೆಗಳು, ವೈವಾಹಿಕ ತೊಂದರೆಗಳು, ಮಗುವಿನ ಆರೋಗ್ಯ ಸಮಸ್ಯೆಗಳು, ಬಾವಿ, ಬೋರ್ವೆಲ್ ತೋಡಿಸುವವರು ಹೀಗೆ ಅನೇಕರು ಅಮ್ಮನವರಲ್ಲಿ ನೂರಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾರೆ. ಬಹುತೇಕರು ಕೆಲ ದಿನಗಳಲ್ಲೇ ಅಮ್ಮನ ಪವಾಡಕ್ಕೆ ಬೆರಗಾಗಿ ಭಕ್ತಿಯಿಂದ ಕೈ ಮುಗಿಯುತ್ತಾರೆ. 

Ammanaghatta a temple in the midst of nature

ಅಮ್ಮನಿಗೆ ಮಕ್ಕಳು ಬಂದು ಉಡಿ ತುಂಬುವುದು ಇಲ್ಲಿ ಸಾಮಾನ್ಯ. ಅಂಥ ಯಾವುದೇ ಹೆಣ್ಣುಮಗಳನ್ನು ಅಮ್ಮ ಬರಿಗೈಲಿ ಹಿಂತಿರುಗಿ ಹೋಗಲು ಬಿಡದೇ ಆಕೆಗೆ ಬಾಗೀನ ಸೇರಿ ಇತರೆ ಮಂಗಳಕರ ವಸ್ತುಗಳನ್ನು ನೀಡಿಯೇ ಕಳುಹಿಸುತ್ತಾಳೆ. 

ರೂಪ್‌ಕುಂಡ್ ಎಂಬ ಅಸ್ಥಿಪಂಜರದ ಸರೋವರದ ಸೌಂದರ್ಯ...

ಹಿನ್ನೆಲೆ ಏನು?

ಜೇನುಕಲ್ಲಮ್ಮ ಗುಡಿಯ ಎದುರಿನಲ್ಲಿ ದೊಡ್ಡದೊಂದು  ಗುಡ್ಡ ಕಾಣಿಸುತ್ತದೆ. ಮುಂಚೆ ಅಮ್ಮನವರು ಅಲ್ಲಿ ನೆಲೆಸಿದ್ದುದರಿಂದ ಅದನ್ನು ಹಳೆಯಮ್ಮನ ಘಟ್ಟ ಎನ್ನಲಾಗುತ್ತದೆ. ಸುಮಾರು 2000 ವರ್ಷಗಳಿಂದಲೂ ಅಲ್ಲಿ ಅಮ್ಮನವರಿಗೆ ಪೂಜೆ ನಡೆಯುತ್ತಿತ್ತು. ಜಾತ್ರೆಗಳು, ಪೂಜೆ ನಡೆಯುತ್ತಿದ್ದುದಕ್ಕೆ ಈಗಲೂ ಅಲ್ಲಿ ಕುರುಹುಗಳನ್ನು ಕಾಣಬಹುದು. ಒಂದು ದಿನ ಮುಟ್ಟಾದ ಹೆಂಗಸೊಬ್ಬರು ದೇವಸ್ಥಾನಕ್ಕೆ ಬಂದಿದ್ದರಿಂದ ಮೈಲಿಗೆಯಾಯಿತೆಂದು ಕೋಪಗೊಂಡ ಅಮ್ಮನವರು, ರಾತ್ರೋರಾತ್ರಿ ಬೆಟ್ಟವಿಳಿದು ಕೆಳಗಿನ ಕೊಳದಲ್ಲಿ ಸ್ನಾನ ಮಾಡಿ ಎದುರಿಗಿದ್ದ ಈ ಕಲ್ಲಿನ ಬೆಟ್ಟ ಹತ್ತಿ ಬಂಡೆಯನ್ನು ಸೀಳಿ, ಉದ್ಭವ ಮೂರ್ತಿಯಾಗಿ ಇಲ್ಲಿ ಕುಳಿತಿದ್ದಾರೆ ಎಂಬುದು ದೇವಸ್ಥಾನದ ಐತಿಹ್ಯ. ಇಲ್ಲಿನ ಬೆಟ್ಟದ ಮೇಲೆ ಅಮ್ಮನವರು ರಥದಲ್ಲಿ ಬರುವಾಗ ಸೀಳಿದ ಬಂಡೆ, ಪಾದದ ಗುರುತು, ಶಾಪದಿಂದ ಕಲ್ಲಾದ ಪತಿಪತ್ನಿ ಮುಂತಾದವನ್ನು ಕಾಣಬಹುದು. ಅಲ್ಲದೆ ಅಮ್ಮನವರ ಪತಿ ಜಮದಗ್ನಿ ಋಷಿ ತಪಸ್ಸು ಮಾಡಿದ, ಪುತ್ರ ಪರಶುರಾಮ ತಪಸ್ಸು ಮಾಡುತ್ತಿದ್ದ ಎನ್ನಲಾದ ಗುಹೆಗಳನ್ನು ಕಾಣಬಹುದು. 

ಅಪಚಾರವಾದ್ರೆ ಏಳುವ ಜೇನು ಹುಳಗಳು

ಈಗಲೂ ದೇಗುಲಕ್ಕೆ ಏನಾದರೂ ಅಪಚಾರವಾದರೆ, ನಂಬಿದವರು ನುಡಿದಂತೆ ನಡೆಯದಿದ್ದರೆ ಇಲ್ಲಿನ ಬಂಡೆಯ ಮೇಲೆ ಜೇನುಹುಳುಗಳು ಏಳುತ್ತವೆ ಎಂಬ ನಂಬಿಕೆಯಿದೆ. ಈ ದೇವಸ್ಥಾನಕ್ಕೆ ಸ್ವಂತ ಜಾಗವಿಲ್ಲ. ಎಲ್ಲವೂ ಭಕ್ತಗಣ ಕೊಟ್ಟ ಕಾಣಿಕೆಯಿಂದಲೇ ನಡೆಯುತ್ತದೆ. ಈಚಿನ ವರ್ಷಗಳಲ್ಲಿ ದೇವಸ್ಥಾನದವರೆಗೂ ರಸ್ತೆ ಹಾಗೂ ಅನ್ನದಾಸೋಹಕ್ಕೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ನಿತ್ಯ ಅನ್ನದಾನ, ವೀಕ್ಷಣಾ ಗೋಪುರ ಸೇರಿದಂತೆ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಬೇಕಿದೆ. ಅವನ್ನೆಲ್ಲ ಅಮ್ಮನೇ ನೋಡಿಕೊಳ್ಳುತ್ತಾಳೆ ಎನ್ನುವುದು ಅರ್ಚಕ ಭಾಸ್ಕರ ಜೋಯಿಸ್ ಅವರ ನಂಬಿಕೆ. ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಜಾತ್ರೆಗಳು ನಡೆಯುತ್ತವೆ. ಆಗ ಅನ್ನದಾಸೋಹ ಇರುತ್ತದೆ. ಅದು ಬಿಟ್ಟರೆ ಅಮ್ಮನವರ ನಿತ್ಯಪೂಜೆ ಸಾಂಗವಾಗಿ ನಡೆಯುತ್ತದೆ. 

ಇಲ್ಲಿ ಅಮ್ಮ ಭಕ್ತರಿಗೆ ಬೇಕಾದುದನ್ನು ನೀಡಿ ತನಗೆ ಬೇಕಾದುದನ್ನು ಕೇಳಿ ಪಡೆಯುತ್ತಾಳೆ. ಈಚೆಗೆ ಒಮ್ಮೆ ಹೀಗಾಯಿತಂತೆ. ಅಮ್ಮನಿಗೆ ಅಲಂಕಾರ  ಮಾಡುವಾಗ ಗೆಜ್ಜೆ ಇಲ್ಲ ಎಂದು ಕಂಡುಬಂತು. ಅಂದೇ ಶಿವಮೊಗ್ಗದ ಮಹಿಳೆಯೊಬ್ಬರು ಹೊಸ ಗೆಜ್ಜೆ ಖರೀದಿಸಿದ್ದರಂತೆ. ಆಕೆಗೆ ರಾತ್ರಿ ಮಲಗಿದಾಗ ಸ್ವಪ್ನದಲ್ಲಿ ಬಂದ ಅಮ್ಮನವರು, ನೀನು ಮಾತ್ರ ಹೊಸ ಗೆಜ್ಜೆ ತೆಗೆದುಕೊಂಡೆ, ನನಗಿಲ್ಲವೇ ಎಂದು ಕೇಳಿದರಂತೆ. ಮರುದಿನವೇ ಹೊಸಗೆಜ್ಜೆಯೊಂದಿಗೆ ದೇಗುಲಕ್ಕೆ ಓಡಿ ಬಂದ ಆಕೆ, ಅಮ್ಮನಿಗೆ ಗೆಜ್ಜೆ ತೊಡಿಸಿದ್ದಾರೆ. ದೇವರಲ್ಲಿ ಶಕ್ತಿಯಿದೆ, ನಮ್ಮಲ್ಲೇ ಭಕ್ತಿ ಕುಂದಿದೆ ಎಂದು ನೊಂದು ನುಡಿಯುತ್ತಾರೆ ಅಮ್ಮನ ಪವಾಡಗಳನ್ನು ವಿವರಿಸಿದ ಅರ್ಚಕ ಭಾಸ್ಕರ ಜೋಯಿಸ್. 

ಅಮ್ಮನ ಭಕ್ತರನ್ನು ಮಾತನಾಡಿಸಿದರೆ, ವರ್ಷಗಳಿಂದ ಹೋಗದ ಚಿಮುಕಲು ಇಲ್ಲಿ ಭೇಟಿ ನೀಡಿದ ಮರುದಿನವೇ ಹೋದದ್ದು, ಮಕ್ಕಳಾಗದವರಿಗೆ ಮಕ್ಕಳಾದದ್ದು, ಮಗುವಿನ ಆರೋಗ್ಯ ಸಮಸ್ಯೆ ಮಾಯವಾದದ್ದು, ಎಷ್ಟು ಕೊರೆದರೂ ನೀರು ಸಿಗದಿದ್ದ ಬೋರ್‌ವೆಲ್‌ನಲ್ಲಿ ಇಲ್ಲಿನ ಪ್ರಸಾದ ತೆಗೆದುಕೊಂಡು ಹಾಕಿದ ಬಳಿಕ ನೀರು ಬಂದಿದ್ದು ಸೇರಿದಂತೆ ನೂರಾರು ಕತೆಗಳಿವೆ. ಭಕ್ತರಿಗೆ ಮಾತ್ರವಲ್ಲ, ಚಾರಣಪ್ರಿಯರಿಗೂ ಮನ ತಣಿಸುವ ಸವಾಲಿನ ಹಾದಿ, ಛಾಯಾಗ್ರಾಹಕರ ಕ್ಯಾಮೆರಾದ ಹೊಟ್ಟೆ ತುಂಬಿಸಬಲ್ಲ ಪ್ರಕೃತಿಯ ಸೊಬಗು ಇಲ್ಲಿದೆ. 

ತಲುಪುವುದು ಹೇಗೆ?

ಶಿವಮೊಗ್ಗದಿಂದ ಹೊಸನಗರ ಹೋಗುವ ರೋಡಿನಲ್ಲಿ ಕೋಡೂರು ಹೋಬಳಿ ಸಿಗುತ್ತದೆ. ಅಲ್ಲಿಂದ ಬಲಬದಿಗೆ ಮೂರು ಕಿ.ಮೀ. ಒಳರಸ್ತೆಯಲ್ಲಿ ಸಾಗಿದರೆ ಜೇನುಕಲ್ಲಮ್ಮ ದೇವಸ್ಥಾನ ಸಿಗುತ್ತದೆ. 

Latest Videos
Follow Us:
Download App:
  • android
  • ios