ಈಕೆ ಸುಖವಿಂದರ್ ಕೌರ್. 35ರ ಹರೆಯದ ಹೆಣ್ಮಗಳು. ಬೆಳಗ್ಗೆ ಐದು ಗಂಟೆಗೆ ಸರಿಯಾಗಿ ಆಸ್ಟ್ರೇಲಿಯಾದ ಕಾಳ್ಗಿಚ್ಚು ಸಂತ್ರಸ್ತರ ಸೇವೆಗೆ ಸಿದ್ಧರಾಗಿರುತ್ತಾಳೆ. ಆಸ್ಟ್ರೇಲಿಯಾದಲ್ಲಿರುವ ಸಿಖ್ಖ್ ಸ್ವಯಂಸೇವಕರ ಜೊತೆಗೆ ಕ್ಯಾಂಪ್‌ಗೆ ಹೋದರೆ ರಾತ್ರಿ ಹನ್ನೊಂದು ಹನ್ನೆರಡರವರೆಗೆ ಈಕೆಯ ಸೇವೆ ಮುಂದುವರಿಯುತ್ತದೆ. ನಡು ನಡುವೆ ದುಃಖ ಉಕ್ಕಿ ಬಂದರೂ ಸಾವರಿಸಿಕೊಂಡು ಕೆಲಸ ಮಾಡುತ್ತಲೇ ಇರುತ್ತಾಳೆ.

ಕೆಲವು ದಿನಗಳ ಹಿಂದೆ ಈಕೆಗೊಂದು ಫೋನ್ ಕಾಲ್ ಬಂದಿತ್ತು, ಭಾರತದಿಂದ. ಸುಖವಿಂದರ್ ಭಾರತ ಬಿಟ್ಟು ಆಸ್ಟ್ರೇಲಿಯಾದಲ್ಲಿ ನೆಲೆಸಿ 10 ವರ್ಷಗಳಾಗಿವೆ. ತಾಯ್ನೆಲವನ್ನೊಮ್ಮೆ ನೋಡಬೇಕು ಅಂತ ಮನಸ್ಸು ಹಂಬಲಿಸುತ್ತಿದ್ದರೂ, ಈವರೆಗೆ ತನ್ನ ದೇಶಕ್ಕೆ ಹೋಗೋದು ಸಾಧ್ಯವಾಗಿಲ್ಲ. ಆದರೆ ಆ ಕರೆ ಬಂದ ಮೇಲೆ ಆಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು, ತನ್ನ ಒಡ ಹುಟ್ಟಿದ ಸೋದರಿ ಕೋಮಾಕ್ಕೆ ಜಾರಿರುವ ಆಘಾತಕರ ಸುದ್ದಿಯದು. ಸುಖವಿಂದರ್ ಕೂಡಲೇ ಟಿಕೆಟ್ ಬುಕ್ ಮಾಡ್ತಾಳೆ. ಬಾಲ್ಯದ ದಿನಗಳನ್ನು ನೆನೆದು ದುಃಖ ಉಕ್ಕಿ ಹರಿಯುತ್ತದೆ. ಇದಾಗಿ ಕೆಲವೇ ಹೊತ್ತಲ್ಲಿ ಮತ್ತೊಂದು ಆಘಾತಕರ ಸುದ್ದಿ ಕಿವಿಗೆ ಬೀಳುತ್ತದೆ. ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ ನೂರಾರು ಜನ ಬಲಿಪಶುವಾದ, ಸಾವಿರಾರು ಪ್ರಾಣಿಗಳು ಜೀವಂತ ದಹನವಾದ ಹೃದಯ ವಿದ್ರಾವಕ ಸುದ್ದಿಯದು. ಆಸ್ಟ್ರೇಲಿಯಾದ ಹಲವು ಜನ ನೆರವಿಗೆ ನಿಂತರು. ಈಕೆಯ ಪಂಜಾಬಿ ಮೂಲದ ಗೆಳೆಯರೂ ಕಾಳ್ಗಿಜ್ಜಿಗೆ ಬಲಿಯಾದವರ ನೆರವಿಗೆ ಧಾವಿಸಿದರು.
 

ಸುಖವಿಂದರ್ಗೆ ಈಗ ಗೊಂದಲ, ಅಲ್ಲಿ ಒಡಹುಟ್ಟಿದ ಸೋದರಿ ಕೋಮಾಕ್ಕೆ ಜಾರಿದ್ದಾಳೆ. ಮುಂದೆ ಅವಳ ಕತೆ ಏನೋ ಗೊತ್ತಿಲ್ಲ. ಇಲ್ಲಿ ಅವಳಂಥಾ ನೂರಾರು ಜನ ಬೀದಿಗೆ ಬಿದ್ದಿದ್ದಾರೆ, ನೋವುಣ್ಣುತ್ತಿದ್ದಾರೆ. ಏನು ಮಾಡೋದು?
ಮನಸ್ಸು ಗಟ್ಟಿ ಮಾಡಿಕೊಂಡು ಸುಖವಿಂದರ್ ಟಿಕೆಟ್ ಕ್ಯಾನ್ಸಲ್ ಮಾಡಿದಳು. ತನ್ನ ಪಂಜಾಬಿ ಗೆಳೆಯರಿಗೆ ಕರೆ ಮಾಡಿ ತಾನೂ ನಿಮ್ಮ ಜೊತೆಗೆ ಕೈ ಜೋಡಿಸುವುದಾಗಿ ಹೇಳಿದಳು. ಸಂತ್ರಸ್ತರಿಗಾಗಿ ಅಡುಗೆ ಕೆಲಸಕ್ಕೆ ನಿಂತಳು.
ಸದ್ಯಕ್ಕೀಗ ಈಕೆಯ ಕೆಲಸ ಸಿಖ್ಖ್ ವಾಲೆಂಟಿಯರ್ಗಳ ಜೊತೆಗೆ ಸೇರಿ ಸಂತ್ರಸ್ತರಿಗೆ ಆಹಾರ ಸಿದ್ಧಪಡಿಸುವುದು. ಬೆಳಗ್ಗೆ 5 ಗಂಟೆಗೆ ಈಕೆಯ ಕೆಲಸ ಶುರುವಾಗುತ್ತೆ. ಮಧ್ಯರಾತ್ರಿ ಹನ್ನೊಂದೂವರೆ ಹನ್ನೆರಡರವರೆಗೂ ದುಡಿಯುತ್ತಲೇ ಇರುತ್ತಾರೆ.

'ಆರಂಭದಲ್ಲಿ ದಿನಕ್ಕೆ ನೂರು ಜನ ಬರುತ್ತಿದ್ದರು. ಕ್ರಮೇಣ ನಮ್ಮ ವ್ಯಾನ್‌ನತ್ತ ಬರುವವರ ಸಂಖ್ಯೆ ಸಾವಿರ ಮುಟ್ಟಿತು. ಮನೆ ಕಳೆದುಕೊಂಡವರೆಲ್ಲ ಇಲ್ಲಿಗೇ ಬಂದು ಊಟ ಮಾಡುತ್ತಾರೆ. ಹಾಗಾಗಿ ದಿನಕ್ಕೆ ಸಾವಿರ ಊಟ ರೆಡಿ ಮಾಡಬೇಕಾಗುತ್ತದೆ.' ಅಂತಾರೆ ಕೌರ್.
 
 
ಇದ್ಯಾಕೆ ಇವರ ವ್ಯಾನ್‌ನ ಬಳಿ ಇಷ್ಟೊಂದು ಜನ ಊಟಕ್ಕೆ ಬರುತ್ತಾರೆ ಅಂತ ಬಂದವರನ್ನೇ ಕೇಳಿದರೆ ಉತ್ತರ - ಈ ಹೆಣ್ಮಗಳು ಮಾಡುವ ಅಡುಗೆ ಬಹಳ ರುಚಿಯಾಗಿರುತ್ತದೆ. ಆರೋಗ್ಯಕರವಾಗಿರುತ್ತದೆ ಅನ್ನೋದು. ತನ್ನ ಊಟ ಇಷ್ಟೊಂದು ಜನಕ್ಕೆ ಇಷ್ಟವಾಗುತ್ತಿರುವುದಕ್ಕೆ ಕೌರ್ ದೇವರಿಗೆ ಕೃತಜ್ಞತೆ ಅರ್ಪಿಸುತ್ತಾರೆ. 'ನನ್ನ ಕೈ ಅಡುಗೆ ಇಷ್ಟೊಂದು ಜನಕ್ಕೆ ಇಷ್ಟವಾಗುತ್ತಿದೆ, ಅನ್ನೋದಕ್ಕಿಂತ ಖುಷಿ ಇನ್ನೇನಿದೆ. ನನ್ನಿಂದ ರುಚಿಯಾದ ಅಡುಗೆ ಮಾಡಲು ಸಾಧ್ಯವಾಗಿಸಿದ ನಿನಗೆ ಥ್ಯಾಂಕ್ಯೂ' ಅಂತಾರೆ.
 

'ನನ್ನ ಆತ್ಮಸಾಕ್ಷಿ ಹೇಳುತ್ತಿತ್ತು, ನಾನೀಗ ಇರುವ ನೆಲದಲ್ಲಿ ಇಂಥಾ ಪರಿಸ್ಥಿತಿ ಇರುವಾಗ ಬಿಟ್ಟು ಹೋಗುವುದು ಮಾನವೀಯತೆ ಅಲ್ಲ ಅಂತ. ಅಲ್ಲಿ ಒಬ್ಬಳು ಸಹೋದರಿಯಾದರೆ ಇಲ್ಲಿ ನೂರಾರು ಜನ ಸಹೋದರಿಯರು ಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೀಗ ನನ್ನ ಸಹಾಯದ ಅಗತ್ಯ ಇದೆ. ಹಾಗಂತ ಇದು ಕರ್ತವ್ಯ ಅಷ್ಟೇ, ನಾನೇನು ಮಹಾ ಮಾನವೀಯ ಕೆಲಸ ಮಾಡಿದ್ದೇನೆ ಅಂತ ನನಗನಿಸುವುದಿಲ್ಲ.'

- ಸುಖವಿಂದರ್ ಕೌರ್