ಮಕ್ಕಳಿಗೆ ಅನ್ನ ಕೊಡಲು ಕೂದಲು ಮಾರಿದ ವಿಧವೆ!
ಮಕ್ಕಳಿಗೆ ಅನ್ನ ಕೊಡಲು ಕೂದಲು ಮಾರಿದ ವಿಧವೆ!| ತಮಿಳು ನಾಡಿನ ಸೇಲಂನಲ್ಲಿ ಘಟನೆ| 150ರು.ಗೆ ಕೂದಲು ಮಾರಿದ ವಿಧವೆ| 1.45 ಲಕ್ಷ ಸಂಗ್ರಹಿಸಿಕೊಟ್ಟಸಾರ್ವಜನಿಕರು
ಸೇಲಂ[ಜ.11]: ಹಸಿವು ನೀಗಿಸಲು ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಮಕ್ಕಳು ಮಣ್ಣು ತಿನ್ನುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ತಮಿಳು ನಾಡಿನ ಸೇಲಂನಲ್ಲಿ ವಿಧವೆಯೊಬ್ಬಳು ಮಕ್ಕಳಿಗೆ ಆಹಾರ ನೀಡಿಲು ತಲೆಕೂದಲನ್ನೇ ಮಾರಾಟ ಮಾಡಿದ್ದಾಳೆ.
ಮೈ ತುಂಬಾ ಸಾಲ ಮಾಡಿ ಏಳು ತಿಂಗಳ ಹಿಂದೆ ಪ್ರೇಮಾಳ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಐದು, ಮೂರು ಹಾಗೂ ನಾಲ್ಕು ವರ್ಷದ ಮೂರು ಮಕ್ಕಳನ್ನು ಸಾಕುವ ಅನಿವಾರ್ಯತೆ ಎದುರಾಗಿತ್ತು. ಕಳೆದ ಶುಕ್ರವಾರ ಆಕೆಯ ಕೈಯಲ್ಲಿದ್ದ ಹಣ ಖಾಲಿಯಾಗಿದ್ದು, ಹಣಕ್ಕಾಗಿ ಅಕ್ಕ ಪಕ್ಕದ ಮನೆಯವರಲ್ಲಿ ಕೇಳಿದ್ದಾಳೆ. ಆದರೆ ಎಲ್ಲರೂ ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಕೂದಲು ಖರೀದಿಸುವುದಾಗಿ ವಿಗ್ ತಯಾರಕನೊಬ್ಬ ಬಂದಾಗ, ತನ್ನ ಕೂದಲನ್ನು ಕತ್ತರಿಸಿ 150ರು.ಗೆ ಮಾರಾಟ ಮಾಡಿದ್ದಾಳೆ.
ಇದರಲ್ಲಿ 100ರುಪಾಯಿಯ ಆಹಾರ ಖರೀದಿಸಿ ಉಳಿದ 50 ರುಪಾಯಿಂದ ಕೀಟನಾಶಕ ಖರೀದಿಸಲು ಹೋಗಿದ್ದಾಳೆ. ಈ ವೇಳೆ ಅನುಮಾನಗೊಂಡ ಅಂಗಡಿ ಮಾಲಿಕ ಕೀಟ ನಾಶಕ ನೀಡಲು ನಿರಾಕರಿಸಿದ್ದಾನೆ. ಬಳಿಕ ವಿಷಯುಕ್ತ ಅರಳಿ ಬೀಜಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಆಕೆಯ ಪ್ರಯತ್ನವನ್ನು ಸಹೋದರಿ ತಡೆದಿದ್ದಾಳೆ.
ಪ್ರೇಮಾಳ ಈ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಾಲ ಎಂಬ ಗ್ರಾಫಿಕ್ ಡಿಸೈನರ್ ಬಾಲಾ ಎಂಬರು ಹಂಚಿಕೊಂಡಿದ್ದು, ನೂರಾರು ಮಂದಿ ಆಕೆಯ ಕಷ್ಟಕ್ಕೆ ಮನ ಮಿಡಿದು 1.45 ಲಕ್ಷ ರು. ಸಂಗ್ರಹಿಸಿ ಕೊಟ್ಟಿದ್ದಾರೆ. ಅಲ್ಲದೇ ಬಾಲನ ಸ್ನೇಹಿತರೊಬ್ಬರು ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿದ್ದು, ಆಕೆಯ ಕೆಲಸವನ್ನೂ ಕೊಡಿಸಿದ್ದಾರೆ. ಜನರ ಸಹಕಾರದಿಂದ ಸಂತಸಗೊಂಡ ಆಕೆ, ಇನ್ನೆಂದೂ ಆತ್ಮಹತ್ಯೆ ಮಾಡುವ ಕೆಲಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾಳೆ. ಅಲ್ಲದೇ ಮಕ್ಕಳನ್ನು ಓದಿಸುವುದಾಗಿ ಹೇಳಿದ್ದಾಳೆ.