ಕುಗ್ರಾಮದಿಂದ ಮುಂಬೈ ಮಹಾನಗರದವರೆಗೂ ಹೆಣ್ಣಿನ ಮನಸ್ಸು ಬಹಳ ತುಡಿಯುವುದು ಸೀರೆಗೆ. ಚಡ್ಡಿ ಹಾಕ್ಕೊಂಡು ಓಡಾಡೋ ಟೀನ್ ಹುಡ್ಗಿ ಮೂಡ್ ಬಂದಾಗ ಅಮ್ಮನ ಸೀರೆಯನ್ನು ಮೈಮೇಲೆ ಎಳೆದುಕೊಂಡು ಕನ್ನಡಿ ಮುಂದೆ ನಿಲ್ಲೋದುಂಟು.

ಕಾಲ ಕಾಲಕ್ಕೆ ಸೀರೆಯ ಡಿಸೈನ್‌ಗಳು ಬದಲಾಗಿವೆ. ಸ್ಟೈಲ್ ಬದಲಾಗಿದೆ, ಸೀರೆಯ ಜೊತೆಗೆ ಹಾಕುವ ಬ್ಲೌಸ್ ಅಂತೂ ಸಾವಿರಾರು ಡಿಸೈನ್‌ಗಳಿಗೆ ಪಕ್ಕಾಗಿದೆ. ಅಜ್ಜಿ ಉಡ್ತಿದ್ದ ಸೀರೆಯನ್ನೇ ಮೊಮ್ಮಗಳು ಉಟ್ಟರೂ ಅದರಲ್ಲೊಂದು ಸಣ್ಣ ವ್ಯತ್ಯಾಸ ಮಾಡ್ತಾಳೆ. ಪಲ್ಲುವನ್ನು ಬಹು ಸಣ್ಣದಾಗಿ ಮಡಚಿ ಅದನ್ನೇ ಟ್ವಿಸ್ಟ್ ಮಾಡಿ ಹಾಕೊಳ್ತಾಳೆ. ಸೇಫ್ಟಿ ಪಿನ್ ಸಿಗದಿದ್ರೆ ಅದಕ್ಕೂ ಒಂದು ಪ್ಲಾನ್ ಇದೆ. ನೀಟಾಗಿ ಸಣ್ಣಗೆ ಮಡಚಿದ ಪಲ್ಲುವನ್ನೇ ಕೊರಳ ಸುತ್ತ ತಂದು ನೆಕ್‌ಸೆಟ್‌ನಂತೆ ಹಾಕಿಕೊಂಡು ಚೂಪು ನೋಟ ಬೀರುತ್ತಾಳೆ.

ಸಭ್ಯ ಸಾಚಿಯಂಥವರಿಂದ ಹಿಡಿದು ಸಂಜಯ್ ಗರ್ಗ್‌ವರೆಗೆ ಸಾವಿರಾರು ಡಿಸೈನರ್ಸ್‌ಗೆ ತಮ್ಮ ಕ್ರಿಯೇಟಿವಿಟಿ ಅರಳಿಸಲು ಸೀರೆಯಷ್ಟು ಪ್ರಬಲ ಮಾಧ್ಯಮ ಇನ್ನೊಂದಿಲ್ಲ. ಇಷ್ಟೆಲ್ಲ ಪೀಠಿಕೆ ಕೊಡೋದಕ್ಕೂ ಕಾರಣ ಇದೆ. ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಮದ್ವೆ ಹಬ್ಬ. ಸಾಲು ಸಾಲು ಮದ್ವೆಗಳಲ್ಲಿ ಯಾವ್ಯಾವ ನಮೂನಿ ಸೀರೆ ಉಟ್ಟ ಹೆಣ್ಮಕ್ಕಳು. ಅವಳ ಮುಖ ನೋಡಲೋ, ಸೀರೆ ನೋಡಲೋ ಎಂಬ ಸಣ್ಣ ಕನ್‌ಫ್ಯೂಶನ್ ಪಡ್ಡೆಗಳ ಮುಖದಲ್ಲಿ. 

ನಿನ್ನೆ ಮೊನ್ನೆ ಅಂಬಾನಿ ಮಗಳು ಇಶಾ ಅಂಬಾನಿ ಮದುವೆಯ ಸಂಗೀತ್ ಕಾರ‌್ಯಕ್ರಮ. ಕಳೆದ ತಿಂಗಳ ಮದುವಣಗಿತ್ತಿ ದೀಪಿಕಾ ಪಡುಕೋಣೆ ಇಷಾ ಸಂಗೀತ್‌ಗೆ ಬಂದಿದ್ದು ಕೆಂಬಣ್ಣದ ಸೀರೆಯುಟ್ಟು, ಕೈ ತುಂಬ ಬಳೆ ತೊಟ್ಟು. ಆಕ್ಸ್‌ಬ್ಲಡ್ ಕಲರ್‌ನ ಈ ಸೀರೆ ಉದಯಪುರದ್ದೇ. ಫಾಬಿಯಾನ ಎಂಬ ಬಾಲಿವುಡ್ ತಾರೆಗಳ ಫೇವರೆಟ್ ಶಾಪ್‌ನಲ್ಲಿ ಸೀರೆಯ ವಿನ್ಯಾಸ ಕಂಡು ಬೆರಗಾಗಿ ನಮ್ಮೂರ ಚೆಲುವೆ ದೀಪಿಕಾ ಇದನ್ನು ಆರಿಸಿಕೊಂಡರಂತೆ. ಅಷ್ಟೇ ಅಲ್ಲ ಅದಕ್ಕೆ ಮ್ಯಾಚಿಂಗ್ ಆಗುವಂತೆ ಕೈ ತುಂಬ ಬಳೆತೊಟ್ಟು ಮಿಂಚಿದ್ದಾರೆ.

ಲೋಕಲ್ ಭಾಷೆಯಲ್ಲಿ ಹೇಳೋದಾದ್ರೆ ನೆಲ ಗುಡಿಸುವಂಥ ಸೀರೆ ಇದು. ಅಂದರೆ ಮಾಮೂಲಿ ಸೀರೆಗಿಂತ ಉದ್ದದ ನಮ್ಮ ನಿಮ್ಮಂಥವರು ಉಟ್ಟರೆ ಕಾಲು ತೊಡರಿ ಬೀಳುವಂಥ ಸೀರೆ. ಆದರೆ ಉದಯಪುರದ ಅರಮನೆಯಲ್ಲಿ ದೀಪಿಕಾ ಈ ಸೀರೆಯನ್ನುಟ್ಟು ಪಳಗಿದವರಂತೆ ಬ್ಯಾಲೆನ್ಸ್ ಮಾಡಿ ನಡೆದಾಡಿದರು. ರತ್ನಗಂಬಳಿಯ ನೆಲದಲ್ಲಿ ಸೀರೆಗೆ ಮಣ್ಣಾಗುವ ಮಾತೆಲ್ಲಿ? ಮೈಯ ನುಣುಪಿಗೆ ಕಾಂಪಿಟೀಶನ್ ಕೊಡುವಂತೆ ಆಗಾಗ ಜಾರುತ್ತಾ, ಮತ್ತೆ ಮೇಲೇರುವ ರಕ್ತವರ್ಣದ ಸೀರೆಗೆ ಬ್ಯಾಕ್‌ಲೆಸ್ ಬ್ಲೌಸ್.

ದೀಪಿಕಾ ಮಾದಕ ಬೆಡಗನ್ನ ಬಹಳ ಚೆಂದದಲ್ಲಿ ಕಟ್ಟಿಕೊಟ್ಟ ಹೆಗ್ಗಳಿಕೆ ಈ ಬ್ಲೌಸ್‌ಗೆ ಸಲ್ಲಬೇಕು. ಕೊರಳ ಸುತ್ತ ಪಟ್ಟಿಯಂತೆ ಆವರಿಸುವ ಈ ಬ್ಲೌಸ್ ಸ್ಲೀವ್‌ಲೆಸ್ ಆಗಿ ಸೀರೆಯದೇ ಬಣ್ಣದಲ್ಲಿದೆ. ಬಂಗಾರದ ಗುಂಡುಗಳ ಐದೆಳೆ ಚೋಕರ್ ಕತ್ತನ್ನು ಅಲಂಕರಿಸಿದೆ. ಕಿವಿಯಲ್ಲಿ ವಜ್ರದ ಮಿನುಗು ಸೀರೆ ತೊಟ್ಟವಳ ಘನತೆ ಹೆಚ್ಚಿಸುವಂತಿದೆ. 

ವಯಸ್ಸು 43 ದಾಟಿದರೂ ಆಂಟಿ ಅಂದ್ರೆ ಉರ‌್ಕೊಳ್ಳೋ ಬೆಡಗಿ ಶಿಲ್ಪಾ ಶೆಟ್ಟಿ. ‘ನಂಗೆ ಆಂಟಿ ಅಂತೆಲ್ಲ ಕರೆಸಿಕೊಳ್ಳೋದಕ್ಕೆ ಇಷ್ಟ ಆಗಲ್ಲ. ನಾನ್ಯಾವತ್ತಿದ್ರೂ ಟೀನ್ ಗರ್ಲ್’ ಅಂತಾರೆ. ಟೀನ್ ಹುಡುಗಿಗೆ ಕಡಿಮೆ ಇಲ್ಲದ ಹಾಗೆ ಸ್ಟೈಲ್ ಮಾಡೋದು ಇವರಿಗೊತ್ತು. ಈ ಬಾಲಿವುಡ್‌ನ ಯೋಗ ಟೀಚರ್‌ಗೆ ಸೀರೆ ಮೇಲೆ ಎಲ್ಲಿಲ್ಲದ ವ್ಯಾಮೋಹ. ಹಾಗಂತ ಸೀರೆಯನ್ನು ಸೀರೆಯ ಹಾಗೇ ಉಟ್ಟಿದ್ದು ತೀರಾ ಕಡಿಮೆ.

ಲಂಗದ ಬದಲಿಗೆ ಸೀರೆಯ ಮೆಟೀರಿಯಲ್ ನದ್ದೇ ಪ್ಯಾಂಟ್. ತೆಳುವಾದ ಬಳುಕುವ ದೇಹವನ್ನು ಅಲ್ಲಲ್ಲಿ ಅಪ್ಪಿನಿಲ್ಲುವ ಕೆಂಬಣ್ಣದ ಹೂವಿನಷ್ಟೇ ಹಗುರದ ಸೀರೆ. ಒಂದು ಸೈಡಿಂದ ನೋಡಿದ್ರೆ ಫೆರ‌್ರಿಟೇಲ್‌ಗಳಲ್ಲಿ ಬರುವ ಮತ್ಸ್ಯಕನ್ಯೆಯ ಹಾಗೆ. ಇದು ಇಂಡೋ ವೆಸ್ಟರ್ನ್ ಸ್ಟೈಲ್‌ನ ಸೀರೆಯಂತೆ. ಶಿಲ್ಪಾ ಸಿಗ್ನೇಚರ್ ಸ್ಟೈಲೂ ಈ ಮಾದರಿಯ ಸೀರೆಗಳೇ. ಕಡುಗೆಂಪು ಬಣ್ಣದ ಈ ಉಡುಗೆಯನ್ನು ಶಿಲ್ಪಾ ಧರಿಸಿದ್ದು ಡಾನ್ಸ್ ರಿಯಾಲಿಟಿ ಶೋ ಒಂದಕ್ಕೆ.

ಇದು ಶಿವನ್ ಮತ್ತು ನರೇಶ್ ಡಿಸೈನ್ ಮಾಡಿರೋ ಸೀರೆ. ಕಡುಗೆಂಪು ಬಣ್ಣದ ಮೇಲೆ ಅಲ್ಲಲ್ಲಿ ಮೆಟಲ್‌ನ ಗೆರೆಗಳು ಸೀರೆಗೆ ಡಿಫರೆಂಟ್ ಲುಕ್ ಕೊಟ್ಟಿದೆ. ಒನ್ ಶೋಲ್ಡರ್ ಬ್ಲೌಸ್ ಈ ಸೀರೆಗಿದೆ. ಭಾರತೀಯ ಹಾಗೂ ಪಾಶ್ಚಾತ್ಯ ಸ್ಟೈಲ್‌ಗಳೆರಡನ್ನೂ ಬೆರೆಸಿ ರೂಪಿಸಿರೋ ಈ ಬಗೆಯ ಸೀರೆ ಫ್ಯಾಶನ್ ಪ್ರಿಯರಿಗೆ ಬಹಳ ಇಷ್ಟವಾಗೋದ್ರಲ್ಲಿ ಡೌಟೇ ಬೇಡ. ಇದೊಂದು ಅಂತಲ್ಲ. ಶಿಲ್ಪಾ ಶೆಟ್ಟಿ ನೂರಾರು ಇಂಡೋ ವೆಸ್ಟರ್ನ್ ಮಾದರಿಯ ಸೀರೆ ಉಟ್ಟು ಮೆರೆದಿದ್ದಾರೆ.

ಸೀರೆಯಂಥಾ ಪಾರಂಪರಿಕ ಉಡುಪಿನಲ್ಲಿ ಹಲವು ಬಗೆಯ ವಿನ್ಯಾಸ ಮಾಡಿ ಜಗತ್ತಿನ ಗಮನ ಸೆಳೆದ ಹಿರಿಮೆ ಶಿಲ್ಪಾಗೆ ಹಾಗೂ ಅವರ ಸೀರೆಗಳ ಡಿಸೈನರ್ಸ್‌ಗೆ ಸಲ್ಲಬೇಕು. ಈ ಬಗೆಯ ಇಂಡೋ ವೆಸ್ಟರ್ನ್ ಸ್ಟೈಲ್ ಸೀರೆಯಲ್ಲಿ ಬಹಳ ಪ್ರಯೋಗ ಮಾಡಿದ ಇನ್ನೊಬ್ಬ ಚೆಲುವೆ ಕರೀಶ್ಮಾ ಕಪೂರ್. ನೀಲಿ ಕಂಗಳ ನಲವತ್ತನಾಲ್ಕರ ಹರೆಯದ ಚೆಲುವೆ ನ್ಯೂಡ್ ಕಲರ್‌ನ ಸೀರೆಯನ್ನು ಇಂಡೋವೆಸ್ಟರ್ನ್ ಸ್ಟೈಲ್‌ನಲ್ಲಿ ಉಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಬಹಳ ಸಲ. 

ಮಣಿಕರ್ಣಿಕಾ ಬೆಡಗಿ ಕಂಗನಾ ಏರ್‌ಪೋರ್ಟ್ ಸ್ಟೈಲ್ ಗಮನಿಸಿ. ಸರಳವಾದ ಹತ್ತಿಯ ಸೀರೆಯುಟ್ಟು ಗಂಭೀರವಾಗಿ ನಡೆದು ಬರುತ್ತಾರೆ. ಉಳಿದ ಸೆಲೆಬ್ರಿಟಿಗಳೆಲ್ಲ ಏರ್‌ಪೋರ್ಟ್‌ನಲ್ಲಿ ವೆಸ್ಟರ್ನ್‌ವೇರ್‌ನಲ್ಲಿ ಮಿಂಚಿದರೆ ಈಕೆಯದು ವಿಭಿನ್ನ ಸ್ಟೈಲ್. ಹೆಚ್ಚೇನೂ ಎತ್ತರವಿಲ್ಲದ ಕಂಗನಾಗೆ ಕಾಟನ್ ಸೀರೆ ಅಷ್ಟಾಗಿ ಚೆಂದ ಕಾಣುವುದಿಲ್ಲ ಅಂದರೂ ಅದು ಕೊಡುವ ಕಂಫರ್ಟ್ ಫೀಲ್ ಬೇರ‌್ಯಾವ ಉಡುಗೆಯೂ ನೀಡಲ್ಲ ಅನ್ನುವ ಕಾರಣಕ್ಕೆ ಈಕೆ ಹೆಚ್ಚೆಚ್ಚು ಕಾಟನ್ ಸೀರೆ ಉಡುತ್ತಾರೆ. ಸೋನಂ ಕಪೂರ್ ನಾನಾ ವಿನ್ಯಾಸದ ಸೀರೆಯಲ್ಲಿ ಮಿಂಚುತ್ತಿರುತ್ತಾರೆ.

ಇತ್ತೀಚೆಗೆ ಸಂಜಯ್ ಗರ್ಗ್ ಅವರ ‘ರಾ ಮ್ಯಾಂಗೋ’ ಕೈಮಗ್ಗದ ಸೀರೆಗಳ ಮಳಿಗೆಯ ಓಪನಿಂಗ್ ದಿನ ಸೋನಂ ಅಚ್ಚ ಬಿಳಿ ಬಣ್ಣದ ಖಾದಿ ಸೀರೆ ಮೇಲೆ ಕಪ್ಪು, ಬಿಳುಪು ಗೆರೆಗಳ ಉದ್ದುದ್ದ ಗೆರೆಗಳ ಮೊಣಕೈವರೆಗಿನ ಬ್ಲೌಸ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ರು. ಹೀಗೆ ಸೀರೆ ಪ್ರೀತಿ ಮುಂದುವರಿಯುತ್ತೆ. ಬದಲಾದ ಕಾಲದಲ್ಲಿ, ಬದಲಾದ ಸನ್ನಿವೇಶದಲ್ಲಿ ಸೀರೆಯೂ ಬದಲಾದ್ರೆ ತಪ್ಪೇನಿಲ್ಲ, ಅಲ್ವಾ