ಅಕ್ಕಿ ನೀರು ಕೂದಲು ಉದುರುವಿಕೆ ತಡೆಯಲು ಸಹಾಯಕ. ಅಕ್ಕಿಯಲ್ಲಿರುವ ಜೀವಸತ್ವಗಳು, ಖನಿಜಗಳು ಕೂದಲನ್ನು ಪೋಷಿಸುತ್ತವೆ. 

ಮಹಿಳೆಯರು ತಮ್ಮ ಕೂದಲಿನ ಆರೈಕೆಗಾಗಿ ಅನೇಕ ಮನೆಮದ್ದುಗಳನ್ನು ಬಳಸುತ್ತಾರೆ. ಅಷ್ಟೇ ಏಕೆ, ಸೀರಮ್ ಅಥವಾ ಇತರ ಕೂದಲಿನ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳೆನ್ನೆಲ್ಲಾ ಬಳಸಿದ ನಂತರವೂ ಕೂದಲು ಉದುರುವಿಕೆಯ ಸಮಸ್ಯೆ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಇದರೊಂದಿಗೆ ಧೂಳು, ಮಣ್ಣು, ಮಾಲಿನ್ಯ ಮತ್ತು ಇತರ ಹಲವು ಕಾರಣಗಳಿಂದ ಕೂದಲು ಉದುರುವಿಕೆಯ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗಾಗಿ ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು ಅಕ್ಕಿ ನೀರನ್ನು ಬಳಸಿ. ದಿನ ನಿತ್ಯ ನಾವು ಊಟಕ್ಕೆ ಅಕ್ಕಿಯನ್ನು ಬಳಸುವುದರಿಂದ ಅಕ್ಕಿ ನೀರು ಕೂಡ ನಮಗೆ ನಿತ್ಯ ಲಭ್ಯ. ಇನ್ನು ನಿಮ್ಮ ಕೂದಲಿಗೆ ಅಕ್ಕಿ ನೀರನ್ನು ಹೇಗೆ ಬಳಸಬೇಕೆಂದು ನೋಡೋಣ ಬನ್ನಿ...

ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಕೂದಲು ಉದುರುವುದು, ಮಂದವಾಗುವುದು, ಸೀಳುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಇವುಗಳನ್ನೆಲ್ಲಾ ತಡೆಯಲು ಅಕ್ಕಿ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ವಾರಕ್ಕೆ ಎರಡು ಬಾರಿ ಹುದುಗಿಸಿದ ಅಕ್ಕಿ ನೀರನ್ನು ಬಳಸುವುದರಿಂದ ಕೂದಲು ಆರೋಗ್ಯಕರವಾಗಿ ಮತ್ತು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಸೂಚಿಸಲಾಗಿದೆ.

ಅಕ್ಕಿಯಲ್ಲಿ ಅನೇಕ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಈ ಎಲ್ಲಾ ಗುಣಗಳು ಕೂದಲಿಗೆ ಪ್ರಯೋಜನಕಾರಿ. ಹಾಗೆಯೇ ಕೂದಲನ್ನು ಪೋಷಿಸುವಲ್ಲಿ ಸಹಾಯ ಮಾಡುತ್ತವೆ ಮತ್ತು ಕೂದಲನ್ನು ದಪ್ಪ, ಉದ್ದ ಮತ್ತು ಮೃದುವಾಗಿಸುತ್ತವೆ. ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.

ಮೊದಲನೇಯ ವಿಧಾನ
ನಿಮಗೆ ಬೇಕಾಗಿರುವುದು
*ಅರ್ಧ ಬಟ್ಟಲು ಅಕ್ಕಿ
*1 ಲೀಟರ್ ನೀರು

ಹೀಗೆ ಬಳಸಿ.. 
* ಅಕ್ಕಿಯನ್ನು ನೀರಿನಲ್ಲಿ ನೆನೆಸಿ.
* ಒಂದು ಜರಡಿಯ ಸಹಾಯದಿಂದ ಅಕ್ಕಿ ಮತ್ತು ನೀರನ್ನು ಬೇರ್ಪಡಿಸಿ.
* ಇದರ ನಂತರ ನಿಮ್ಮ ಕೂದಲನ್ನು ಈ ನೀರಿನಿಂದ ತೊಳೆಯಿರಿ.
* ಹೀಗೆ ವಾರದಲ್ಲಿ 2 ರಿಂದ 3 ದಿನ ಮಾಡಿ. ಬಹಳ ಬೇಗ ಫಲಿತಾಂಶ ಕಂಡುಕೊಳ್ಳುವಿರಿ.

ಎರಡನೇಯ ವಿಧಾನ 
ನಿಮಗೆ ಬೇಕಾಗಿರುವುದು 
ಒಂದು ಕಪ್ ಅಕ್ಕಿ 
ಎರಡು ಕಪ್ ನೀರು 
ಲ್ಯಾವೆಂಡರ್ ಅಥವಾ ರೋಸ್ಮರಿ ಎಣ್ಣೆ (ಇದ್ದರೆ ಬಳಸಿ)

ಹೀಗೆ ಬಳಸಿ... 
* ಒಂದು ಬಟ್ಟಲಿನಲ್ಲಿ ಒಂದು ಕಪ್ ಅಕ್ಕಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ತಕ್ಷಣ ಎರಡು ಕಪ್ ನೀರು ಸುರಿದು ಅರ್ಧ ಗಂಟೆ ನೆನೆಸಿಡಿ. ನಂತರ ಈ ನೀರನ್ನು ಮತ್ತೊಂದು ಪಾತ್ರೆಯಲ್ಲಿ ಸೋಸಿ.

* ಅಕ್ಕಿಯನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿದರೆ, ಆ ನೀರನ್ನು 'ಹುದುಗಿಸಿದ ನೀರು' ಎಂದು ಕರೆಯಲಾಗುತ್ತದೆ. ಈ ನೀರು ನೆತ್ತಿ ಮತ್ತು ಕೂದಲಿಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಹುದುಗಿಸಿದ ನೀರನ್ನು ರೆಫ್ರಿಜರೇಟರ್‌ನಲ್ಲಿ ಒಂದು ವಾರದವರೆಗೆ ಸಂಗ್ರಹಿಸಬಹುದು.

* ಅಕ್ಕಿ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಅಥವಾ ರೋಸ್ಮರಿ ಎಣ್ಣೆಯನ್ನು ಸೇರಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

* ಈ ಮೊದಲೇ ಹೇಳಿದ ಹಾಗೆ ಅಕ್ಕಿ ನೀರಿನಲ್ಲಿ ವಿಟಮಿನ್ ಬಿ ಮತ್ತು ಇ ಸಮೃದ್ಧವಾಗಿದೆ. ಜೊತೆಗೆ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂನಂತಹ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.


ಹಚ್ಚುವ ವಿಧಾನ 
ಮೊದಲಿಗೆ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಅಥವಾ ಕಂಡಿಷನರ್ ಬಳಸಿ ತೊಳೆಯಿರಿ. ತಲೆ ಸ್ವಲ್ಪ ಒಣಗಲು ಬಿಡಿ. ನಂತರ, ಅಕ್ಕಿ ನೀರನ್ನು ನಿಮ್ಮ ಕೈಗಳಿಂದ ತೆಗೆದುಕೊಂಡು ನೆತ್ತಿ ಮತ್ತು ಕೂದಲಿಗೆ ಹಚ್ಚಿ. ನೀವು ಅಕ್ಕಿ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ ನಿಮ್ಮ ತಲೆಯ ಮೇಲೆ ಸಿಂಪಡಿಸಬಹುದು. ಐದು ನಿಮಿಷಗಳ ನಂತರ, ನಿಮ್ಮ ಬೆರಳುಗಳಿಂದ ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ಕಾಲು ಗಂಟೆ ಒಣಗಲು ಬಿಡಿ ಮತ್ತು ನಂತರ ನಿಮ್ಮ ತಲೆಯನ್ನು ತಾಜಾ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ.