ಬೆಳಗಾಗೆದ್ದು ದೇವರಿಗೆ ಕೈ ಮುಗಿಯದೆ, ಪೊರಕೆಗೆ ಕೈ ಮುಗಿಯುತ್ತಿದ್ದದ್ದೇಕೆ?

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಆತ್ಮಚರಿತ್ರೆಯ ಆಯ್ದಪುಟಗಳ ಸಂಕಲನ ಬಿಡುಗಡೆಯಾಗುತ್ತಿದೆ. ಅಂಕಿತ ಪುಸ್ತಕ ಹೊರತರುತ್ತಿರುವ ಈ ಪುಸ್ತಕವನ್ನು ಸ್ವತಃ ಬರಗೂರು ರಾಮಚಂದ್ರಪ್ಪ ಅವರೇ ಆಯ್ದ ಅನುಭವ ಕಥನ ಎಂದು ಬರೆದಿದ್ದಾರೆ. ಆ ಕುರಿತ ಕೆಲವು ಮಾಹಿತಿ ಇಲ್ಲಿದೆ.

Release of a collection of selected pages of the autobiography of Writer Baraguru Ramachandrappa Vin

ಕೊಂಡೆತಿಮ್ಮನಹಳ್ಳಿಯಲ್ಲಿ ನಾನೊಂದು ಚಿಕ್ಕ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಬೇರೆ ಊರಿನಿಂದ ಶಾಲೆಗೆ ಬರುತ್ತಿದ್ದ ರಂಗಾರೆಡ್ಡಿಯಾದಿಯಾಗಿ ಕೆಲ ವಿದ್ಯಾರ್ಥಿಗಳು ಒಮ್ಮೊಮ್ಮೆ ನನ್ನ ಮನೆಯಲ್ಲೇ ಮಲಗುತ್ತಿದ್ದರು. ಬೆಳಗ್ಗೆ ಎದ್ದಕೂಡಲೇ ಕಾಣುವ ಜಾಗದಲ್ಲಿರುವಂತೆ ನಾನು ಪೊರಕೆಯನ್ನು ಇಟ್ಟಿರುತ್ತಿದ್ದೆ. ಆರಂಭದ ದಿನಗಳಲ್ಲಿ ರಾತ್ರಿ ಮಲಗುವ ಮುಂಚೆ ಪೊರಕೆಯ ಮಹತ್ವ ಹೇಳುತ್ತಿದ್ದೆ. ಪೊರಕೆಯನ್ನು ಸಾಮಾನ್ಯವಾಗಿ ಅಪಶಕುನವೆಂದು ಭಾವಿಸಿ, ಬೆಳಗ್ಗೆ ಎದ್ದಕೂಡಲೇ ನೋಡಬಾರದೆಂಬ ನಂಬಿಕೆ ಪ್ರಚಲಿತವಾಗಿತ್ತು. ನಾನು ‘ಈ ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ. ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಗ್ಗೆ ಎದ್ದಕೂಡಲೇ ಮನೆ, ಮನೆ ಹೊರಗೆಲ್ಲವನ್ನೂ ಸ್ವಚ್ಛ ಮಾಡುವ ಪೊರಕೆಯ ‘ದರ್ಶನ’ ಮಾಡಿ ಕೈಮುಗಿಯಬೇಕು. ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ’ ಎಂದು ವಿವರಿಸಿ ಮನವರಿಕೆ ಮಾಡಿಕೊಟ್ಟಿದ್ದೆ.

ನಾನೇ ಮೊದಲು ಪೊರಕೆಗೆ ಕೈಮುಗಿಯುತ್ತಿದ್ದೆ. ಮೇಷ್ಟ್ರು ಕೈಮುಗಿದಾಗ ವಿದ್ಯಾರ್ಥಿಗಳು ಕೂಡ ಮುಗಿಯಲೇಬೇಕಲ್ಲ. ಮುಗಿದರು. ಬರಬರುತ್ತ ಮೂಢನಂಬಿಕೆ ಹೋಗಿ, ನನ್ನ ಮೇಲಿನ ನಂಬಿಕೆ ಬಲವಾಗಿ ಪೊರಕೆಗೆ ಕೈಮುಗಿಯುವುದನ್ನು ಸಹಜವೆಂಬಂತೆ ಪಾಲಿಸತೊಡಗಿದರು. ಹೀಗೆ ಆರಂಭವಾದ ನನ್ನ ಪರ್ಯಾಯ ಚಿಂತನೆ ಮುಂದೆ ಬೆಳೆಯುತ್ತ ಹೋದಂತೆ ಅದಕ್ಕೊಂದು ತಾತ್ವಿಕ ರೂಪ ಲಭ್ಯವಾಗತೊಡಗಿತು. ಒಬ್ಬೊಬ್ಬ ಸಾಹಿತಿಯೂ ತನ್ನ ಪರಿಸರದಿಂದ ಪ್ರೇರಣೆ ಪಡೆಯುವುದು ಸಹಜ. ಹಸಿರು ನಿಸರ್ಗ, ಹರಿವ ನದಿ, ತುಂಬಿದ ಕಡಲು, ಶ್ರೀಗಂಧ, ಪಕ್ಷಿಗಳ ಕಲರವ - ಮುಂತಾದ ಪರಿಸರದ ಮಧ್ಯೆ ಬೆಳೆದವರು ಅವುಗಳನ್ನು ಒಳಗೊಳ್ಳುತ್ತ, ಹೊಗಳುತ್ತ, ರೂಪಕವಾಗಿಸುತ್ತ ಬರೆಯುವುದು ಸ್ವಾಭಾವಿಕ ಕ್ರಿಯೆ. ಅಂಥ ಅಭಿವ್ಯಕ್ತಿ ರೂಪಗಳನ್ನು ಓದಿದ ನನಗೆ ನಮ್ಮೂರಲ್ಲಿ ಅಂಥ ಪರಿಸರ ಇಲ್ಲವಲ್ಲವೆಂಬ ಕೊರಗು ಇತ್ತು.

ಮುಂಚೆಯಂತೆ 'ಅಮ್ಮ ಬೇಜಾರು' ಅಂತ ಈಗಿನ ಮಕ್ಕಳೇಕೆ ಅಮ್ಮನ ತಲೆ ತಿನ್ನೋಲ್ಲ?

ನಮ್ಮೂರಲ್ಲಿ ಶ್ರೀಗಂಧದ ಮರಗಳಿಲ್ಲ. ಅವುಗಳ ಗಂಧಗಾಳಿಯೂ ಗೊತ್ತಿಲ್ಲ. ಹೆಚ್ಚು ಇರುವುದು ಜಾಲಿಯ ಮರ. ಜೊತೆಗೆ ಒಂದಿಷ್ಟು ಹೊಂಗೆಮರ. ಕೋಗಿಲೆಯನ್ನಂತೂ ನೋಡಿಲ್ಲ; ಅದರ ಕಂಠ ಕೇಳಿಲ್ಲ. ಇಲ್ಲಿರುವುದು ಕಾಗೆಗಳ ಗುಂಪು. ಒಂದಷ್ಟು ಗುಬ್ಬಚ್ಚಿ. ನದಿಯಂತೂ ಇಲ್ಲವೇ ಇಲ್ಲ; ಇರುವ ಹಳ್ಳದಲ್ಲಿ ನೀರು ಹರಿದು ಎಷ್ಟೋ ಕಾಲವಾಗಿದೆ. ಕಡಲಂತೂ ದೂರ; ಇರುವ ಕೆರೆ ತುಂಬುವುದೇ ಕಡಿಮೆ. ಬಿರುಕು ಬಿಟ್ಟ ಕೆರೆ ನೆಲವೇ ಹೆಚ್ಚು. ‘ಇಲ್ಲ’ ಎಂದು ಕೊರಗುವ ಬದಲು ‘ಇದೆ’ ಎನ್ನುವುದೇ ಸಾಹಿತ್ಯದ ವಸ್ತು ಯಾಕಾಗಬಾರದು? ನಿಸರ್ಗ ರಮ್ಯ ಕವಿತೆಗಳ ಜೊತೆಗೇ ಕುವೆಂಪು ಅವರು ‘ಗೊಬ್ಬರ’ ಕುರಿತು ಬರೆಯಲಿಲ್ಲವೆ? ‘ಸೃಷ್ಟಿಯಲ್ಲಿ ಯಾವುದೂ ವಿಫಲವಲ್ಲ’ ಎಂದು ಬೇಂದ್ರೆಯವರು ಹೇಳಿಲ್ಲವೆ? ಹೌದು. ನನಗೆ ನಮ್ಮಲ್ಲಿ ‘ಇಲ್ಲದ್ದು’ ಮುಖ್ಯವಾಗದೆ ‘ಇದ್ದದ್ದು’ ಮುಖ್ಯವಾಗಬೇಕು. ‘ನಮ್ಮಲ್ಲಿ ಇರುವ ಜಾಲಿಯ ಮರ, ಕಾಗೆ, ಕೆರೆ, ಹಳ್ಳಗಳೂ ಮಹತ್ವಪೂರ್ಣವೆಂದು ನಾನು ಭಾವಿಸಬೇಕು. ಈ ಭಾವನೆಯನ್ನು ಬಿತ್ತಿ ಬೆಳೆಯಬೇಕು’ - ಎಂದು ನಿರ್ಧರಿಸಿದೆ.

ನನ್ನ ದೃಢ ನಿರ್ಧಾರಕ್ಕೆ ತಾತ್ವಿಕ ನೆಲೆಯ ನುಡಿಗಟ್ಟು ಕೊಡತೊಡಗಿದೆ. ಇದು ಮೇಲರಿಮೆ - ಕೀಳರಿಮೆಗಳನ್ನು ಮೀರಿದ ಸೃಷ್ಟಿ ಸಮತೆಯ ಸಿದ್ಧಾಂತವೂ ಹೌದು. ಸಮ ಸಮಾಜದ ರೂಪಕ ಧ್ವನಿಯೂ ಹೌದು. ಸಂದರ್ಭಾನುಸಾರ ಉಚಿತ ಸಮಯ ಸಿಕ್ಕಾಗಲೆಲ್ಲ ದೃಢವಾಗಿ ಹೀಗೆ ಹೇಳತೊಡಗಿದೆ- ‘ನಮ್ಮದು ಶ್ರೀಗಂಧದ ಕರ್ನಾಟಕ ಮಾತ್ರವಲ್ಲ; ಜಾಲೀಮರಗಳ ಕರ್ನಾಟಕವೂ ಹೌದು, ಕೋಗಿಲೆಗಳ ಕರ್ನಾಟಕ ಮಾತ್ರವಲ್ಲ, ಕಾಗೆಗಳ ಕರ್ನಾಟಕವೂ ಹೌದು; ಕಾವೇರಿ ಕೃಷ್ಣೆಯರ ಕರ್ನಾಟಕ ಮಾತ್ರವಲ್ಲ, ನೀರು ಹರಿಯದ ಹಳ್ಳ ಕೊಳ್ಳಗಳ ಕರ್ನಾಟಕವೂ ಹೌದು; ಕಡಲಿನ ಕರ್ನಾಟಕ ಮಾತ್ರವಲ್ಲ; ಬಿರುಕು ಬಿಟ್ಟ ಬತ್ತಿದ ಕೆರೆಗಳ ಕರ್ನಾಟಕವೂ ಹೌದು’. ನನ್ನ ಈ ಮಾತುಗಳು ಕರ್ನಾಟಕವಷ್ಟೇ ಅಲ್ಲ ಒಟ್ಟು ಸಮಾಜದ ಸಾಮಾಜಿಕ- ಆರ್ಥಿಕ ಸನ್ನಿವೇಶದ ರೂಪಕವಾಗುತ್ತ, ನಿರ್ಲಕ್ಷಿತ ವಲಯಕ್ಕೆ ಸಮತೆ, ಘನತೆಗಳನ್ನು ಒದಗಿಸುವ ತಾತ್ವಿಕ ರೂಪವಾಗಿದ್ದವು. ವಾಚ್ಯಾರ್ಥವನ್ನು ಮೀರಿ ಬೆಳೆಯತೊಡಗಿದವು. ಮುಂದೆ ಕನ್ನಡದಲ್ಲಿ ಕಾಗೆಗಳನ್ನು ಕುರಿತ ಅನೇಕ ಕವಿತೆಗಳು ರಚನೆಯಾದವು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಶ್ರೀಗಂಧ, ಕೋಗಿಲೆ, ಕಾವೇರಿ, ಕೃಷ್ಣೆ, ಕಡಲುಗಳನ್ನು ನಾನು ಗೌಣಗೊಳಿಸುತ್ತಿಲ್ಲ. ಇವೆಲ್ಲವೂ ನಮ್ಮ ನಾಡಿನ ಹೆಮ್ಮೆಯ ರೂಪಗಳು. ಇವುಗಳ ಜೊತೆಗೆ ಬೇರೆ ರೂಪಿಕೆಗಳೂ ಇವೆಯೆಂಬುದನ್ನು ಮರೆಯಬಾರದು; ಅವುಗಳನ್ನು ನಿರ್ಲಕ್ಷಿಸಬಾರದು.

ಮುಂದುವರೆದು ನಾನು ‘ಕಾಗೆಯ ಕಾರುಣ್ಯ’ದ ಬಗ್ಗೆ ಮಾತಾಡತೊಡಗಿದೆ. ನಮ್ಮ ಸಾಮಾಜಿಕ ಸೌಹಾರ್ದಕ್ಕೆ ‘ಕಾಗೆಯ ಕಾರುಣ್ಯ’ ಎಷ್ಟು ಮುಖ್ಯ ಎಂದು ಪ್ರತಿಪಾದಿಸತೊಡಗಿದೆ. ಯಾವುದೀ ಕಾಗೆಯ ಕಾರುಣ್ಯ? ನೋಡಿ; ಕೋಗಿಲೆಯು ಮೊಟ್ಟೆ ಇಡುತ್ತದೆಯೇ ಹೊರತು, ತಾನೇ ಕಾವಿಗೆ ಕೂತು ಮರಿ ಮಾಡುವುದಿಲ್ಲ. ಕೋಗಿಲೆ ಇಟ್ಟ ಮೊಟ್ಟೆಯ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆ. ಕಾಗೆಯು ಮೊಟ್ಟೆ ಮೇಲೆ ಕಾವಿಗೆ ಕೂರದಿದ್ದರೆ ಮರಿ ಹೊರಬರುವುದಿಲ್ಲ. ಆದ್ದರಿಂದ ಕಾಗೆಯೇ ಕೋಗಿಲೆಯ ಸಂತತಿಯನ್ನು ಬೆಳೆಸುವ ಚಾಲಕ ಶಕ್ತಿ. ಅಲ್ಲದೆ ಹಂಚಿಕೊಂಡು ತಿನ್ನುವ ಕಾಗೆಯದು ಬಳಗ ಬಂಧುತ್ವ. ಇದು ಕಾಗೆಯ ಕಾರುಣ್ಯ.

ನಮ್ಮ ಸಮಾಜಕ್ಕೆ ಕಾಗೆಯ ಕಾರುಣ್ಯವು ಒಂದು ಆದರ್ಶ ಮಾದರಿಯಾದರೆ, ಅದು ಸಮತೆ ಮಮತೆಗಳ ಮನಸ್ಸನ್ನು ರೂಪಿಸುತ್ತದೆ. ಜಾತಿ ಭೇದ ಮತ್ತು ಧರ್ಮದ್ವೇಷದ ವಾತಾವರಣವನ್ನು ತಿಳಿಗೊಳಿಸಲು ಮನುಷ್ಯರ ಮನಸ್ಸಿನಲ್ಲಿ ಕಾಗೆಯ ಕಾರುಣ್ಯ ಬೆಳಗಬೇಕು. ಆಗ ಮೇಲು-ಕೀಳುಗಳನ್ನು ಮೀರಿದ ಸೌಹಾರ್ದ ಸಮಾಜ ರೂಪುಗೊಳ್ಳುತ್ತದೆ. ಅನಂತಮೂರ್ತಿಯವರು ನನ್ನದೇ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತಾಡುತ್ತ ‘ನಾವು ಬರಗೂರ್‌ಗೆ ಅನ್ಯಾಯ ಮಾಡಿದ್ವಿ. ನಾವೇ ಬಂಡಾಯ ಇವರದೇನು ಅಂದ್ಕೊಂಡ್ವಿ’ ಎಂದು ಕಳಕಳಿಯಿಂದ ಮಾತಾಡಿದ್ದರು. ನಾನು ಮಾತಾಡುತ್ತ ತಮಾಷೆ ಧಾಟಿಯಲ್ಲಿ, ‘ನನಗೆ ಅನ್ಯಾಯವಾಯ್ತು ಅಂತ ಗೊತ್ತಾಗೋಕೆ ಅನಂತಮೂರ್ತಿಯವರಿಗೆ 80 ವರ್ಷ ಮೀರಬೇಕಾಯ್ತು. ನನಗೆ ಅರವತ್ತೈದು ಮೀರಬೇಕಾಯ್ತು’ ಎಂದೆ. ಅನಂತಮೂರ್ತಿಯವರು ನಸುನಕ್ಕರು. ನನ್ನ ಮಾತಿಗೆ ಬೇಸರ ಮಾಡಿಕೊಳ್ಳಲಿಲ್ಲ. ‘ನಿಜ ಕಣಯ್ಯ’ ಎಂದರು.

Latest Videos
Follow Us:
Download App:
  • android
  • ios