ಮುಂಚೆಯಂತೆ 'ಅಮ್ಮ ಬೇಜಾರು' ಅಂತ ಈಗಿನ ಮಕ್ಕಳೇಕೆ ಅಮ್ಮನ ತಲೆ ತಿನ್ನೋಲ್ಲ?
ಕೈಯಲ್ಲಿ ಮೊಬೈಲ್ ಬಂದಿರಲಿಲ್ಲ. ಸಿಕ್ಕ ಸಿಕ್ಕ ಮರ ಹತ್ತುವುದೇ ಮಕ್ಕಳಿಗೆ ಮನೋರಂಜನೆ. ಯಾರೂ ಆಟಕ್ಕಿಲ್ಲವೆಂದರೆ ಅಮ್ಮ ಇರುತ್ತಿದ್ದಳು ತಲೆ ತಿನ್ನಲು. ಅವಳಿಗೂ ಪುರುಸೊತ್ತು ಇರುತ್ತಿತ್ತು. ಆದರೆ, ಈಗಿನ ಮಕ್ಕಳಿಗೆ ಕೈಯಲ್ಲೊಂದು ಮೊಬೈಲ್ ಇದ್ದರೆ ಬೇಜಾರೇ ಆಗೋಲ್ಲ ಅಲ್ವಾ?
- ಜಿ ಎಂ ಕೊಟ್ರೇಶ್
ಮಟಮಟ ಮಧ್ಯಾಹ್ನ, ಎತ್ತು ಮಡುವು ಬೀಳುವಂಥ ಬಿಸಿಲು. ಹಳ್ಳಿ ಜನ ರೈತರಾದ್ದರಿಂದ ಅವರೆಲ್ಲಾ ಹೊಲ ಸೇರಿ ಊರು ಖಾಲಿ ಖಾಲಿ. ಮನೆ ಮುಂದಿನ ಚಪ್ಪರದಡಿಯಿಂದ ನೋಡಿದರೆ ಎದುರು ಬಸಲೀಮರದ ಕಟ್ಟೆ. ಅದರ ಕರಿನೆರಳಲ್ಲಿ ದಣಿವಾರಿಸಿಕೊಳ್ಳುತ್ತಿರುವ ಮೂವರು ಮುದುಕರು, ಎರಡು ದನ, ನಾಲ್ಕು ನಾಯಿ. ಗಾಳಿಯೂ ಬೀಸದೆ, ಮರ-ಗಿಡಗಳ ಎಲೆಗಳೂ ಅಲುಗದೆ ಇಡಿ ಊರೇ ಭಿತ್ತಿ ಮೇಲಿನ ಚಿತ್ರದಂತೆ ತಟಸ್ಥ! ದನಗಳ ಮೆಲುಕು ಹಾಕುತ್ತಿರುವ ಬಾಯಿ, ನಾಲಗೆ ಹೊರಚಾಚಿ ತಲೆ ಆಡಿಸುತ್ತಿರುವ ನಾಯಿ, ದೂರದ ಧೂಳಿನಲ್ಲಿ ಹೊರಳಾಡುತ್ತಿರುವ ಕತ್ತೆ, ಚಪ್ಪರದಡಿ ಗುಯ್ಗುಡುತ್ತಾ ಅತ್ತಿಂದಿತ್ತ ಉಯ್ಯಾಲೆಯಂತೆ ಹಾರಾಡುತ್ತಿರುವ ಗುಂಗಾಡಿ. ಇವಿಷ್ಟೇ ಜಗತ್ತು ಜೀವಂತವಾಗಿದೆ ಎಂದು ತೋರಿಸಲು ಇರುವ ಚಲನೆಗಳು! ಇಂಥ ಸಮಯದಲ್ಲೇ ಅದೆಲ್ಲಿರುತ್ತಿತ್ತೋ ಏನೋ ‘ಯಾಕೋ ಬೇಜಾರು’ ಬಂದು ತಲೆ ಕೆಟ್ಟುಹೋಗುತ್ತಿತ್ತು. ದಿಕ್ಕುಗಾಣದ ಬಂಜರುಭೂಮಿಯಲ್ಲಿ ಮತ್ತೆಂದೂ ಸಿಗದಂತೆ ಕಳೆದುಹೋಗಿಬಿಟ್ಟಿದ್ದೇನೇನೋ ಎಂಬಂಥ ಅನುಭವ! ಈ ‘ಯಾಕೋ ಬೇಜಾರ’ಕ್ಕೂ ಬರೀ ‘ಬೇಜಾರ’ ಕ್ಕೂ ವ್ಯತ್ಯಾಸವಿದೆ. ಬರೀ ಬೇಜಾರ ಮನದ ನೋವಿನ ಬೇಜಾರ, ಜೀವನದ ಸಂಕಷ್ಟದ ಬೇಜಾರ. ಇದು ಜೀವನದುದ್ದಕ್ಕೂ ಇದ್ದದ್ದೇ. ಆದರೆ ಈ ‘ಯಾಕೋ ಬೇಜಾರು’ ಹಾಗಲ್ಲ. ಮಕ್ಕಳ ವಯಸ್ಸಲ್ಲಿ ಆಡಲು ಗೆಳೆಯರು ಸಿಗದೆ, ಮಾಡಲು ಕೆಲಸವಿಲ್ಲದೇ, ಓದಲು ಮನಸ್ಸಿಲ್ಲದೇ, ಸಮಯ ಕಳೆಯಲು ದಾರಿಗಾಣದೆ ಸಾಮಾನ್ಯವಾಗಿ ಉರಿಬಿಸಿಲಿನ ಮಧ್ಯಾಹ್ನ ಆಗುವ ಬೇಜಾರೇ ಈ ‘ಯಾಕೋ ಬೇಜಾರು’. ಜೀವನದ ಜವಾಬ್ದಾರಿಗಳು ಹೆಚ್ಚಿದಂತೆಲ್ಲಾ ಈ ‘ಯಾಕೋ ಬೇಜಾರು’ ಮಾಯವಾಗಿ ಬರೀ ‘ಬೇಜಾರೇ’ ಉಳಿದುಬಿಡುತ್ತದೆ!
ಚಿಕ್ಕಂದಿನಲ್ಲಿ ಇಂಥ ಬೇಜಾರಾದಾಗಲೆಲ್ಲಾ ಸಮಯ ಅತಿಯಾಗಿ ಹಿಗ್ಗುತ್ತಿತ್ತು. ಗೆಳೆಯರೊಟ್ಟಿಗೆ ಆಡುವಾಗ ಅದೇ ವೇಗದಲ್ಲಿ ಕುಗ್ಗುತ್ತಿತ್ತೂ ಕೂಡ. ಅಂದರೆ ‘ಸಮಯ ಹಿಗ್ಗಲೂಬಲ್ಲದು, ಕುಗ್ಗಲೂಬಲ್ಲದು’ ಎಂಬ ಸಾಪೇಕ್ಷ ಸಿದ್ಧಾಂತದ ಸತ್ಯವನ್ನು ಐನ್‌ಸ್ಟೀನ್ ಗಿಂತಲೂ ಸುಲಭವಾಗಿ ಈ ‘ಯಾಕೋ ಬೇಜಾರು’ ನಮಗೆ ಆಗಲೇ ಅರ್ಥ ಮಾಡಿಸಿತ್ತು!
ಆಗೆಲ್ಲಾ ಇಂಥ ಬೇಜಾರಿನ ಬೇಗೆಯನ್ನು ತಾಳದೇ ಮಲಗಿದ್ದ ಅಮ್ಮನನ್ನು ಎಬ್ಬಿಸುತ್ತಾ, ‘ಅಮ್ಮಾ, ಯಾಕೋ ಬೇಜಾರು’ ಎಂದು ರಾಗ ಎಳೆಯುತ್ತಿದ್ದೆ. ಏನಾದರು ಮಾತಾಡಿ ಬೇಜಾರು ಕಳೆಯುವಳೇನೋ, ಕೊನೆ ಪಕ್ಷ ಚಹಾವನ್ನಾದರೂ ಮಾಡಿಕೊಡುವಳೇನೋ ಎಂಬ ನಿರೀಕ್ಷೆ.
‘ಕಾಡಬೇಡ. ಸುಮ್ಮನೆ ಹೊರಗೆ ಹೋಗಿ ಆಡು. ಬೇಜಾರು ಹೋಗುತ್ತದೆ.’ - ಅಮ್ಮನ ಉತ್ತರ.
‘ಆಡಲು ಯಾರೂ ಸಿಗುತ್ತಿಲ್ಲ.’
‘ಸುಮ್ಮನೆ ಮಲಗಿ ನಿದ್ದೆ ಮಾಡು ಬಾ. ಸಂಜೆ ಎಲ್ಲರೂ ಸಿಗುತ್ತಾರೆ, ಆಡುವಂತೆ’.
ಊಹೂ. ಮಧ್ಯಾಹ್ನ ನಿದ್ದೆ ಬರುವ ವಯಸ್ಸೇ ಅದು? ಸಾಧ್ಯವೇ ಇಲ್ಲ.
ಇಂಥ ಸಮಯದಲ್ಲಿ ಬೇಜಾರು ಕಳೆಯಲೆಂದೋ ಏನೋ ತಲೆಯೊಳಗೆ ವಿಚಿತ್ರ ಪ್ರಶ್ನೆಗಳು ಬಂದು ಅವಕ್ಕೆ ಉತ್ತರ ಹುಡುಕಲು ಮನಸ್ಸು ಯತ್ನಿಸುತ್ತಿತ್ತು.
‘ನಾಯಿಗಳೇಕೆ ನಾಲಗೆ ಹೊರಹಾಕಿ ತೇಕುತ್ತಿರುವಂತೆ ಉಸಿರಾಡುತ್ತವೆ?’
‘ದನಗಳು ಏಕೆ ಮೆಲುಕು ಹಾಕುತ್ತವೆ?
‘ಕತ್ತೆಗಳೇಕೆ ಬೂದಿ ಕಂಡರೆ ಬಿದ್ದು ಹೊರಳಾಡುತ್ತವೆ?’ ಅದಕ್ಕೇ ಇರಬೇಕು ನಾವು ಕೊಳಕಾಗಿರುವುದನ್ನು ಕಂಡು ಮೇಷ್ಟ್ರು ‘ನೀವು ಕತ್ತೆಗಳು’ ಎಂದು ಬೈಯುತ್ತಿದ್ದರು. ಅವರು ಬೈದರೆಂದು ನಾವೇನೂ ಬದಲಾಗಲಿಲ್ಲ. ಈಗಲೂ ಕತ್ತೆಯಾಗಿಯೇ ಉಳಿದುಬಿಟ್ಟೆ ಅನಿಸುತ್ತಿರುತ್ತದೆ!
ಒಮ್ಮೆ ಚಿಕ್ಕಂದಿನಲ್ಲಿ ‘ಯಾಕೋ ಬೇಜಾರಿ’ನ ಮಧ್ಯಾಹ್ನವೊಂದರ ವೇಳೆ ನಿಶ್ಚಲವಾಗಿದ್ದ ಜಗತ್ತಿನಲ್ಲಿ ಸಣ್ಣದಾಗಿ ಗಾಳಿ ಬೀಸಿ ಬಸಲೀ ಮರದ ಎಲೆಗಳು ಸ್ವಲ್ಪ ಅಲುಗಾಡಿದವು. ಆಗ ತಕ್ಷಣ ಪ್ರಶ್ನೆಯೊಂದು ಮೂಡಿತು. ‘ಗಾಳಿ ಬೀಸುವುದರಿಂದ ಎಲೆಗಳು ಅಲುಗಾಡುತ್ತವೆಯೋ ಅಥವಾ ಎಲೆಗಳು ಅಲ್ಲಾಡುವುದರಿಂದ ಗಾಳಿ ಬೀಸುತ್ತದೆಯೋ?’ ಏಕೆಂದರೆ ಮರ-ಗಿಡಗಳು ಅಲುಗಾಡುವುದರಿಂದ ಬೀಸಣಿಗೆ ಬೀಸಿದಂತಾಗಿ ಗಾಳಿ ಚಲಿಸುತ್ತದೆ ಅಂದುಕೊಂಡಿದ್ದೆ. ಈಗ ನೋಡಿದರೆ ಗಾಳಿ ದೂರದಲ್ಲಿ ಬೀಸುವ ಸದ್ದು ಕೇಳಿ ಅದು ಈ ಮರದ ಬಳಿ ಬಂದಾಗ ಎಲೆಗಳು ಅಲ್ಲಾಡಿದವು! ಹೌದಲ್ಲಾ? ನಾವು ಕೈ-ಕಾಲು ಆಡಿಸಿದಂತೆ ಮರಗಿಡಗಳಿಗೆ ರೆಂಬೆ-ಕೊಂಬೆಗಳನ್ನು ಆಡಿಸಲು ಆಗುವುದಿಲ್ಲವಲ್ಲಾ? ಹಾಗಾದರೆ ಯಾವುದರಿಂದ ಯಾವುದು.. ಗೊಂದಲವಾಯಿತು.
ಗಂಟಲು ನೋವೆಂದ ಮಗುವಿಗೆ ಐಸ್‌ಕ್ರೀಂ ತಿನ್ನು, ವಿಡಿಯೋ ಗೇಮ್ ನೋಡೆಂದು ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟ ಡಾಕ್ಟರ್!
ಯಾರನ್ನಾದರೂ ಕೇಳಬೇಕು. ಯಾರನ್ನು ಕೇಳುವುದು? ಮನೆಯಲ್ಲಿ ಯಾರನ್ನೇ ಕೇಳಿದರೂ ‘ದೊಡ್ಡ ತಲೆ’ ನಿಂದು ಎಂದು ನಕ್ಕು ಅವಮಾನಿಸುತ್ತಿದ್ದರು. ಹಾಗಾಗಿ ಪ್ರಶ್ನೆ ತಲೆಯಲ್ಲಿ ಹಾಗೇ ಉಳಿಯಿತು.
ಒಮ್ಮೆ ಅಜ್ಜಿಯ ಊರಿಗೆ ಹೋಗಿದ್ದಾಗ ಅರ್ಜೆಂಟು ‘ಚಂಬು ತಗಂಡು’ (ಬಹಿರ್ದಸೆಗೆ) ಹೋಗಬೇಕೆನಿಸಿತು. ಆಗೆಲ್ಲಾ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಎಲ್ಲರೂ ಊರ ಹೊರಗೆ ‘ಚಂಬು ತಗಂಡು’ (ಚೆಂಬು ತೆಗೆದುಕೊಂಡು) ಹೋಗುತ್ತಿದ್ದರು. ನಮ್ಮಂಥ ಚಿಕ್ಕ ಮಕ್ಕಳನ್ನು ದೊಡ್ಡವರು ಕಣಗಳ ಬೇಲಿಸಾಲಿಗೆ ಕರೆದುಕೊಂಡು ಹೋಗುತ್ತಿದ್ದರು. ಅಂದು ಪ್ರಭು ಮಾಮ ನನ್ನ ಕರೆದುಕೊಂಡು ಹೋದ. ಬೇಲಿ ಪಕ್ಕ ಕುಳಿತಿರುವಾಗ ಎದುರಿನ ಹುಣಸೆಮರದ ಎಲೆಗಳು ಅಲುಗಾಡಿದವು. ತಕ್ಷಣ ಅಂದಿನ ಪ್ರಶ್ನೆ ನೆನಪಿಗೆ ಬಂದು ಕೇಳಿಯೇಬಿಟ್ಟೆ...! ‘ಮಾಮ, ಎಲೆಗಳು ಅಲುಗಾಡುವುದರಿಂದ ಗಾಳಿ ಬೀಸುವುದೋ, ಗಾಳಿ ಬೀಸುವುದರಿಂದ ಎಲೆಗಳು ಅಲುಗಾಡುವುದೋ?’
ಅದಕ್ಕೆ ಮಾಮ ‘ಅದು ಯಾಕಾದರೂ ಅಲ್ಲಾಡಲಿ, ಮುಚ್ಚಿಕೊಂಡು ನಿನ್ನ ಕೆಲಸ ನೀನು ಮಾಡಲೇ...’ ಎಂದು ಗದರಿದ. ಅಷ್ಟೊತ್ತಿಗೆ ನನ್ನ ಕೆಲಸ ಮುಗಿದಿತ್ತು. ಆತನಿಗೂ ಯಾಕೋ ಬೇಜಾರಾಗಿರಬೇಕು ಅಂದುಕೊಳ್ಳುತ್ತಾ ಮೇಲೆದ್ದೆ. ಮನೆಗೆ ಬಂದು ಎಲ್ಲರ ಮುಂದೆ ‘ಇವನು ಹೀಗೆ ಕೇಳಿದ’ ಎಂದು ಹೇಳಿ ನಕ್ಕ. ಅವಮಾನವಾದಂತಾಗಿ ಯಾರನ್ನೂ ಏನೂ ಕೇಳಬಾರದು ಅಂದುಕೊಂಡು ಸುಮ್ಮನಾದೆ.
* * *
ಇತ್ತೀಚೆಗೆ ಯಾವುದೋ ವಿದೇಶೀ ತಜ್ಞರ ಸಂಶೋಧನಾ ಲೇಖನವೊಂದನ್ನು ಓದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಆಳವಾದ ಬೇಜಾರು ಆಗುತ್ತಿಲ್ಲ. ಯಾಕೆಂದರೆ ಅವರಿಗೆ ಬೇಜಾರಾಗಲು ಎಲೆಕ್ಟ್ರಾನಿಕ್ ಉಪಕರಣಗಳು-ಮುಖ್ಯವಾಗಿ ಮೊಬೈಲ್-ಬಿಡುತ್ತಿಲ್ಲ. ಮೊಬೈಲ್ ಗೀಳು ಯಾವುದೇ ಬಗೆಯ ವೈರಸ್ ಗಿಂತಲೂ ವೇಗವಾಗಿ ಮತ್ತು ಬಿಗಿಯಾಗಿ ಮಕ್ಕಳನ್ನು ಅಂಟಿಕೊಳ್ಳುತ್ತಿದೆ. ಅವರ ಸುತ್ತ ಮನರಂಜನಾ ಹಾದಿಗಳು ಸುತ್ತುವರಿದು ಸಮಯ ಕಳೆಯುವುದು ಹೇಗೆಂಬ ಪ್ರಶ್ನೆಯೇ ಅವರಿಗೆ ಉದ್ಭವಿಸುತ್ತಿಲ್ಲ. ಅವರ ತಲೆಗೆ ಹೆಚ್ಚಿನ ಕೆಲಸವಿಲ್ಲದಂತಾಗಿದೆ. ಇದು ಅವರ ಚಿಂತನಾ ಶಕ್ತಿಯನ್ನು ಕುಗ್ಗಿಸುತ್ತಿದೆ, ಸೃಜನಶೀಲತೆಯನ್ನು ಕುಂದಿಸುತ್ತಿದೆ ಎಂಬುದು ಆ ಲೇಖನದ ಸಾರಾಂಶ.
ಅದನ್ನು ಓದಿದಾಗ ನನ್ನ ಬಾಲ್ಯದ ‘ಯಾಕೋ ಬೇಜಾರು’ ನೆನಪಾಯಿತು. ಅನೇಕ ಬಾರಿ ಈ ‘ಯಾಕೋ ಬೇಜಾರು’ ನನಗೆ ಚಿತ್ರ ಬಿಡಿಸಲು ಒತ್ತಾಯಿಸಿದೆ. ಬರೆದ ಚಿತ್ರಕ್ಕೆ ಬಣ್ಣ ತುಂಬಲು ಕಲಿಸಿದೆ. ಕಥೆ, ಕವಿತೆ ಬರೆಯಲು ತಿಳಿಸಿದೆ. ಪುಸ್ತಕಗಳನ್ನು ಓದಿಸಿದೆ. ಸಮಯ ಕಳೆಯಲೆಂದೇ ಸ್ನೇಹಿತರೆಲ್ಲ ಸೇರಿ ಕಾಡು ಸುತ್ತಿದ್ದೂ ಇದೆ. ಮಾವಿನ ಕಾಯಿ ಕದ್ದದ್ದೂ ಇದೆ, ಜೇನು ಮುರಿದದ್ದೂ ಇದೆ. ಅಂದರೆ ಈ ‘ಯಾಕೋ ಬೇಜಾರ’ಕ್ಕೆ ಅಷ್ಟು ಶಕ್ತಿ ಇದೆಯೇ? ಹಾಗೇನಿಲ್ಲವಲ್ಲ. ಬೇಜಾರಾಗದಿದ್ದಾಗಲೂ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂದೇ ಮಾಡಿದ್ದೇವೆ. ಆದರೂ ಮಕ್ಕಳ ಬೌದ್ಧಿಕ ಬೆಳಗವಣಿಗೆಗೆ ಹಾಗೂ ಭಾವನಾತ್ಮಕ ವಿಕಾಸಕ್ಕೆ ಈ ‘ಬೇಜಾರಿನ ಪೋಷಕಾಂಶ’ವೂ ಸ್ವಲ್ಪ ಬೇಕು ಎಂಬುದು ಸತ್ಯ.
ಇದನ್ನೆಲ್ಲಾ ಯೋಚಿಸುತ್ತಿರುವಾಗ ಮಗನೂ ಇತ್ತೀಚೆಗೆ ಮೊಬೈಲಿನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ನೆನಪಿಗೆ ಬಂತು. ಆದಷ್ಟು ಅವನು ಮೊಬೈಲ್ ಹೆಚ್ಚು ನೋಡದಂತೆ ಮಾಡಲು ಪ್ರಯತ್ನಿಸುತ್ತಿರುತ್ತೇವೆ. ಅವನು ಈ ಕಾಲದವನು. ಅವನಿಗೆ ಬೇಜಾರಾಗುವುದಿಲ್ಲ, ಬೋರಾಗುತ್ತದೆ! ಮೊಬೈಲ್ ನೋಡುವುದನ್ನು ಬಿಡಿಸಿದಾಗಲೆಲ್ಲಾ ‘ಪಪ್ಪಾ... ಬೋರು. ನನ್ನ ಜೊತೆ ಹೊರಗಡೆ ಆಟವಾಡು ಬಾ’ ಎಂದು ಕಾಡುತ್ತಾನೆ. ಇಲ್ಲಿ ಅವನ ವಯಸ್ಸಿನ ಮಕ್ಕಳು ನಮ್ಮೂರಂತೆ ಹೊರಗಡೆ ನಿರಾತಂಕವಾಗಿ ಆಡಲು ಬರುವುದಿಲ್ಲ. ಮತ್ತೆ ನಾನೇ ಹೋಗಬೇಕು. ಅಥವಾ ಪೇಪರಿನಲ್ಲಿ ವಿಮಾನ, ರಾಕೆಟ್ ಮಾಡಿ ತೋರಿಸಬೇಕು. ಇಲ್ಲದಿದ್ದರೆ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ ಕುಳಿತುಕೊಳ್ಳುತ್ತಾನೆ. ಉತ್ತರಿಸದಿದ್ದರೆ ಅವನ ಗಮನ ಮೊಬೈಲ್ ಕಡೆ ಹೋಗುತ್ತದೆ.
Traditional Game : ನಿಮ್ಮ ಬಾಲ್ಯ ನೆನಪಿಸುವ ಈ ಆಟ ಯಾವುದು ಹೇಳಿ?
‘ಪಪ್ಪಾ ನೋಡು, ಲೈಟ್ ಅಲ್ಲೈತಿ, ಸ್ವಿಚ್ಚು ಇಲ್ಲೈತಿ. ಇಲ್ಲಿ ಸ್ವಿಚ್ ಆನ್ ಮಾಡಿದ್ರೆ ಅಲ್ಲೆಂಗೆ ಲೈಟ್ ಹತ್ತುತೈತಿ?’
ಹೇಗೋ ಅವನಿಗೆ ಅರ್ಥವಾಗುವ ಹಾಗೆ ಉತ್ತರಿಸಿದರೆ ಅಲ್ಲಿಗೆ ಮುಗಿಯುವುದಿಲ್ಲ. ‘ಪಪ್ಪಾ ನೋಡು, ಬೈಕಿಗೆ ಎರಡೇ ವ್ಹೀಲ್ ಇರ್ತಾವಲ್ಲ ಆದ್ರೂ ಯಾಕೆ ಬೀಳಲ್ಲ?’
ಆಗ ನನಗೆ ಮತ್ತೆ ಇವನ ಕೈಗೆ ಮೊಬೈಲ್ ಕೊಡಬೇಕು ಅನಿಸುತ್ತದೆ.
‘ಪಪ್ಪಾ ನೋಡು, ನಮಗೆ ಕಣ್ಣು ಹೆಂಗ ಕಾಣ್ತವೆ? ಅಂದ್ರೆ ಆ ಕುರ್ಚಿ ಅಲ್ಲೈತಿ, ನೀನು ಅಲ್ಲಿ ಐದಿ. ಅಮ್ಮ ಅಲ್ಲಿ ಕುಂತಾಳ ಅಂತ ಹೆಂಗೆ ಗೊತ್ತಾಕತಿ? ನೋಡು, ನನಗೆ ನೀವ್ಯಾರು ಟಚ್ ಇರಲ್ಲ ಆದ್ರೂ ಕಣ್ಣಿಗೆ ಹೆಂಗ ಕಾಣ್ತಿರಿ?’
ಐದೂವರೆ ವರ್ಷದ ಮಗುವಿಗೆ ಇಷ್ಟು‘ವಿವರವಾದ’ ಪ್ರಶ್ನೆ ಬಂದಿದ್ದು ವಿಶೇಷ ಅನಿಸಿತು. ನಾನೂ ಚಿಕ್ಕಂದಿನಲ್ಲಿ ಇದೇ ಪ್ರಶ್ನೆ ಕೇಳಿದಾಗ ನನ್ನ ‘ದಡ್ಡತನ’ಕ್ಕೆ ಎಲ್ಲರೂ ನಕ್ಕುಬಿಟ್ಟಿದ್ದರು. ಇವನಿಗೂ ಹಾಗಾಗಬಾರದು ಎಂದು ಸಾಧ್ಯವಾದಷ್ಟು ಸುಲಭವಾಗಿ ವಿವರಿಸಿದೆ.
ಆದರೆ ಒಂದು ದಿನ ‘ಪಪ್ಪಾ ನೋಡು, ರಾತ್ರಿ ದೇವ್ರು ಯಾಕೆ ಏನೇನೋ ನೆನಪು ಮಾಡ್ತಾನೆ?’ ಎಂದು ಕೇಳಿದ. ಈ ಪ್ರಶ್ನೆ ಕೇಳಿ ನನಗೆ ಸ್ವಲ್ಪ ಗಾಬರಿಯಾಯಿತು. ಇದೆಂಥ ಪ್ರಶ್ನೆ! ಇವನಿಗೇನಾದರೂ ಅಲೌಕಿಕ ಅನುಭವ ಅಗುತ್ತಿರಬಹುದೇ? ಇತ್ತೀಚೆಗೆ ಏನೇನೋ ವಿಚಿತ್ರ ಪ್ರಶ್ನೆಗಳನ್ನೆಲ್ಲಾ ಕೇಳುವುದು ಕಲಿತಿದ್ದಾನೆ ಎಂದು ಹೆಂಡತಿ ಬೇರೆ ಎಚ್ಚರಿಸಿದ್ದಳು!
‘ದೇವ್ರ? ಏನು, ಹೆಂಗ ನೆನಪು ಮಾಡ್ತಾನೆ?’
‘ಅದೇ ಪಪ್ಪಾ, ರಾತ್ರಿ ನೆನಪು ಮಾಡ್ತಾನಲ್ಲ... ಹೆಂಗ ಮಾಡ್ತಾನೆ?’
ನನಗೇಕೋ ಈ ವಿಷಯ ಇಲ್ಲಿಗೆ ನಿಲ್ಲಿಸಬೇಕೆನಿಸಿ ಬೇರೆಡೆ ಅವನ ಗಮನ ಸೆಳೆದೆ. ಆದರೂ ಅವಾಗಾವಾಗ ನೆನಪು ಮಾಡಿಕೊಂಡು ‘ದೇವರು ಮಾಡುವ ನೆನಪಿನ’ ಬಗ್ಗೆ ಕೇಳಿ ನನ್ನ ಬೆಚ್ಚಿಬೀಳಿಸುತ್ತಿದ್ದ.
ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಕನವರಿಸುತ್ತಾ ಎಚ್ಚರಗೊಂಡ. ಎದ್ದವನೇ ನೀರು ಕೇಳಿದ. ಕೊಟ್ಟೆ. ಕುಡಿದವನೇ ‘ಪಪ್ಪಾ... ದೇವ್ರು ನೆನಪ್ ಮಾಡ್ತಿದಾನೆ. ಅದಕ್ಕೆ ನಿದ್ದೆ ಸರಿಯಾಗಿ ಬರವಲ್ದು’ ಅಂದ.
ಆಗ ಅರ್ಥವಾಯಿತು! ಅವನು ಕನಸನ್ನು ‘ದೇವರು ಮಾಡುವ ನೆನಪು’ ಅಂದುಕೊಂಡಿದ್ದ. ಅಂದರೆ ಕನಸು ಎಂಬ ಪದದ ಪರಿಚಯವಿಲ್ಲದ್ದರಿಂದ ಅವನೇ ಕನಸಿಗೆ ಹೊಸ ಅರ್ಥ, ವ್ಯಾಖ್ಯಾನ ಕೊಟ್ಟುಕೊಂಡಿದ್ದ!
ನನಗೆ ದೊಡ್ಡ ಪ್ರಮೇಯವೊಂದಕ್ಕೆ ಉತ್ತರ ಸಿಕ್ಕಂತಾಯಿತು.
ದೇವರಿಗೆ ನೆನಪು ಮಾಡಬೇಡ ಎಂದು ಹೇಳುವೆ, ಆರಾಮಾಗಿ ಮಲಗು ಎಂದು ಹೇಳಿ ಅವನ ಮೇಲೆ ಕೈ ಹಾಕಿಕೊಂಡು ನಾನೂ ನೆಮ್ಮದಿಯಿಂದ ಮಲಗಿದೆ.
ಒಮ್ಮೆ ಮಧ್ಯಾಹ್ನ ನಿದ್ದೆ ಮಾಡಬೇಕೆಂದು ಮಲಗುತ್ತಿದ್ದಾಗ ಓಡಿ ಬಂದು ‘ಪಪ್ಪಾ, ನಮಗೆ ಕಿವಿ ಹೆಂಗೆ ಕೇಳ್ತತಿ?’ ಅಂದ. ಮಲಗಬೇಕು ಈಗ ಕಿರಿಕಿರಿ ಮಾಡಬೇಡ ಎಂದು ಗದರಿದೆ. ‘ಪಪ್ಪ, ಪ್ಲೀಸ್... ನಂಗೆ ಬೋರು. ಇದೊಂದು ಉತ್ತರ ಹೇಳು. ನೀನು ಬಾಯಲ್ಲಿ ಮಾತಾಡೋದು ನನ್ ಕಿವಿಗೆ ಹೆಂಗೆ ಗೊತ್ತಾಕತಿ? ಇಲ್ಲಾಂದ್ರೆ ಕಥೆ ಹೇಳು...’
ನಿಮ್ಮ ಬಾಲ್ಯ ನೆನಪಿಸಿಕೊಳ್ಳಬೇಕಾದರೆ, ಒಮ್ಮೆ ಈ ಫೋಟೋಸ್ ನೋಡಿ!
ನನ್ನ ಪಕ್ಕದಲ್ಲೇ ಮೊಬೈಲ್ ಇತ್ತು. ಯೂಟ್ಯೂಬ್ ಓಪನ್ ಮಾಡಿ ಅವನ ಕೈಗಿತ್ತೆ. ತಪ್ಪು ಮಾಡುತ್ತಿದ್ದೇನೆ ಎಂದು ಗೊತ್ತಿತ್ತು. ಆದರೇನು ಮಾಡುವುದು ನಾನು ಕಚೇರಿಗೆ ಹೋಗುವ ಮುನ್ನ ತುಸುಹೊತ್ತು ನಿದ್ದೆ ಮಾಡಲೇಬೇಕಿತ್ತು.
ಈಗ ಅವನಿಗೆ ‘ಯಾಕೋ ಬೇಜಾರು’ ಆಗುವುದಿಲ್ಲ. ನಾನು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು