ರವಿ ಜಾನೇಕಲ್

ಶಾಲಾ ದಿನಗಳಲ್ಲಿ, ನನ್ನ ಸಹಪಾಠಿಗಳು ರಕ್ಷಾ ಬಂಧನದ ದಿನ ಬಹಳ ಹಿಗ್ಗುತ್ತಿದ್ದರು. ಹಬ್ಬದ ದಿನ ಮುಂಜಾನೆಯೇ ಅವರ ಅಕ್ಕ-ತಂಗಿಯರು ತಮ್ಮಂದಿರಿಗೆಲ್ಲ ಹಣೆಗೆ ವಿಭೂತಿ ಹಚ್ಚಿ, ತಿಲಕವಿಟ್ಟು ಪೂಜಿಸಿ, ಸಿಹಿ ತಿನಿಸಿ ದೊಡ್ಡ ಗಾತ್ರದ ಮಿಂಚುಪಟ್ಟಿಯ ರಾಖಿ ಕೈಗೆ ಕಟ್ಟಿ ಕಳುಹಿಸುತ್ತಿದ್ದರು.

ರಕ್ಷಾಬಂಧನಕ್ಕೆ ಅಣ್ಣ, ತಂಗಿಗೆ ಏನೆಲ್ಲಾ ಗಿಫ್ಟ್ ಕೊಡಬಹುದು?

ಶಾಲೆಯಲ್ಲೆಲ್ಲ ರಾಕಿಗಳದ್ದೇ ಸುದ್ದಿ. ನಮ್ಮ ಅಕ್ಕ ಕಟ್ಟಿದ್ದು ಇದು, ನಮ್ಮ ತಂಗಿ ಕಟ್ಟಿದ್ದು ಇದು, ಏನು ಗಿಫ್ಟ್ ಕೊಟ್ಟೆ, ನೀನೇನು ಕೊಟ್ಟೆ.. ಹೀಗೆ. ಆಗ ಇವರ ಮಧ್ಯೆ ಇದ್ದ ನಾನು ಒಳಗೊಳಗೆ ಸಂಕಟ ಅನುಭವಿಸುತ್ತಿದ್ದೆ. ಯಾರಾದರೂ ನನಗೂ ರಾಖಿ ಕಟ್ಟಿಯಾರು ಎಂದು ಕಾತರದಿಂದ ಎದುರು ನೋಡುತ್ತಿದ್ದೆ. ಆಗೆಲ್ಲ ಅದೆಷ್ಟು ದುಃಖ ಪಟ್ಟಿದ್ದೇನೆಂದರೆ, ಶಾಲೆಯಿಂದ ಮನೆಗೆ ಬಂದು ಅಪ್ಪ-ಅಮ್ಮ ಅಣ್ಣಂದಿರ ಕಣ್ತಪ್ಪಿಸಿ, ಮನೆಯೊಳಗಿದ್ದ ಜೋಳದ ಗಂಟಿನಿಂದ ಸೇರು ಜೋಳ ಶೆಟ್ಟರ ಅಂಗಡಿಗೆ ಹಾಕಿ ಬಂದ ಹಣದಲ್ಲಿ ರಾಖಿ ಖರೀದಿಸಿ, ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡು ದೇವರ ಮನೆಯ ಕತ್ತಲ ಕೋಣೆಗೆ ಹೋಗಿ ನನಗೆ ನಾನೇ ರಾಖಿ ಕಟ್ಟಿಕೊಳ್ಳುತ್ತಿದ್ದೆ. ಯಾರೂ ನೋಡ ತಂಗಿಯೊಬ್ಬಳು ಕತ್ತಲ ಕೊಣೆಯೊಳಗೆ ಹಬ್ಬದ ದಿನದಂದು ಪ್ರತೀ ವರ್ಷ ನನಗೆ ಕಾಣಿಸಿಕೊಳ್ಳುತ್ತಿದ್ದಳು. ಇದಕ್ಕೆ ಕಾರಣ ಇತ್ತು. ನನ್ನ ಬಹಳಷ್ಟು ಗೆಳೆಯರು, ‘ಇವತ್ತು ನಿನಗೆ ರಾಖಿ ಕಟ್ಟಿಲ್ಲೇನಲೇ ಯಾರು?’ ಅಕ್ಕ-ತಂಗಿ ಇಲ್ಲೇನು ನಿನಗ?’ ಎಂದು ಪದೇಪದೆ ಕೇಳಿದಾಗೆಲ್ಲ ಹಿಂಸೆಯಾಗುತ್ತಿತ್ತು.

ದೇವರು ಕೊಟ್ಟ ಅಣ್ಣ ಸದಾ ಅಚ್ಚು ಮೆಚ್ಚು!

ನನ್ನ ಬಾಲ್ಯದ ಗೆಳೆಯನ ಮನೆಗೆ ಹಬ್ಬದ ದಿನದಂದು ಹೋಗುತ್ತಿದ್ದೆ. ನನ್ನ ಗೆಳೆಯನಿಗೆ ಇಬ್ಬರು ಅಕ್ಕಂದಿರು. ನಾನು ಅವರನ್ನು ಅಕ್ಕಾ ಎಂದೇ ಕರೆಯುತ್ತಿದ್ದೆ. ಅವರು ರಕ್ಷಾ ಬಂಧನದ ದಿನ ಸಂಜೆ ಹೊಸ್ತಿಲು ಪೂಜೆ ಮಾಡುವಾಗ ತಮ್ಮನಿಗೆ ರಾಖಿ ಕಟ್ಟುತ್ತಿದ್ದರು. ಚಾಪೆ ಹಾಸಿ ಅದರ ಮೇಲೆ ಅವನನ್ನು ಕೂರಿಸಿ, ಹಣೆಗೆ ವಿಭೂತಿ ಹಚ್ಚಿ, ತಿಲಕವಿಟ್ಟು ಪ್ರೀತಿಯಿಂದ ಪೂಜಿಸುತ್ತಿದ್ದರು. ಇದೆಲ್ಲ ಅವರ ನಡುಮನೆಯ ಕಂಬಕ್ಕೆ ನಿಂತು ನಾನು ನೋಡುತ್ತಿದ್ದೆ. ಅವನಿಗೆ ರಾಖಿ ಕಟ್ಟಲು ಬೇಕಾದ ರಾಖಿ, ಬಿಸ್ಕೆಟ್, ಚಾಕಲೇಟ್‌ಗಳನ್ನು ತರಲು ಅಂಗಡಿಗೆ ನಾನು ಓಡುತ್ತಿದ್ದೆ. ಅಂಗಡಿಯಲ್ಲಿ ರಾಖಿಗಳನ್ನು ಕೊಂಡು ಕೈಯಲ್ಲಿ ಹಿಡಿದು ಬರುವಾಗ ಅವುಗಳನ್ನು ನನ್ನ ಕೈಮೇಲೇಯೇ ಇಟ್ಟುಕೊಂಡು ನೋಡುತ್ತಾ ಬರುತ್ತಿದ್ದೆ.

ರಕ್ಷೆಯ ಬಂಧದಲ್ಲಿರಲಿ ಪವಿತ್ರತೆಯ ಸಾರ!

ಅವನಿಗೆ ರಾಖಿ ಕಟ್ಟಿದ ನಂತರ, ಅದರಲ್ಲಿ ಉಳಿದರೆ ಭಾಗ್ಯ, ಭಾರತಿ ಅಕ್ಕ ಇಬ್ಬರೂ ನನ್ನನ್ನು ಮರೆಯುತ್ತಿರಲಿಲ್ಲ. ಪೂಜೆ ಮಾಡಿ ಕಟ್ಟದಿದ್ದರೂ ನಾನು ನಿಂತ ಜಾಗಕ್ಕೆ ಬಂದು ರಾಖಿ ಕಟ್ಟಿ ಕೈಗೆ ಪಾರ್ಲೆ-ಜಿ ಬಿಸ್ಕೆಟ್ ಇಡುತ್ತಿದ್ದರು. ಹೀಗೆ ಕಟ್ಟಿದ ರಾಖಿ ಅದೆಷ್ಟೋ ವಾರ ಹಾಗೇ ನೋಡಿಕೊಳ್ಳುತ್ತಿದ್ದೆ. ಸ್ನಾನ ಮಾಡಿದರೆ ರಾಖಿ ತೋಯ್ದು ಹರಿದುಹೋಗುತ್ತದೆಯೆಂದು ನೀರು ತಾಕದಂತೆ ಸ್ನಾನ ಮಾಡುತ್ತಿದ್ದೆ. ರಾಖಿ ಉಳಿಸಿಕೊಳ್ಳಲು ಕಬಡ್ಡಿ, ಖೋಖೋ ಆಟಗಳನ್ನು ನಿಲ್ಲಿಸುತ್ತಿದ್ದೆ. ನಾನೊಮ್ಮೆ, ಆಗತಾನೇ ಕೂಲಿ ಮಾಡಿ ಸುಸ್ತಾಗಿ ಬಂದು ಕುಳಿತಿದ್ದ ನಮ್ಮವ್ವನ ತೊಡೆ ಮೇಲೆ ಕುಂತು ಕೇಳಿದ್ದೆ, ‘ಯವ್ವಾ, ನೀನ್ಯಾಕ ಹೆಣ್ಣು ಹಡಿಲಿಲ್ಲ?’ ನಾನು ಹಬ್ಬದ ದಿನವೇ ಈ ಪ್ರಶ್ನೆ ಕೇಳಿದ್ದು ನಮ್ಮವ್ವ ಗೊತ್ತಾಗಿದ್ದಿರಬಹುದು. ಅದಕ್ಕೆ ನಮ್ಮವ್ವ ‘ಅಯ್ಯೋ ನಮ್ಮಪ್ನೆ, ನಾಲ್ಕು ಜನ ನಿಮ್ಮ ಅಣ್ಣನವರೇ ಹುಟ್ಟಿದಾಗ, ಕೊನೆದಾಗಿ ಒಂದು ಹೆಣ್ಣು ಹುಟ್ಟಲಿ ಅಂತ ಬೇಡಿಕೊಳ್ಳದ ದೇವರಿಲ್ಲ, ಕಾಯಿ ಹೊಡೆಸಿ, ಹರಕೆ ಹೊತ್ತಕೊಂಡೆ, ನಿಮ್ಮಪ್ಪಗ ಎದುರು ನಿಂತು ಈ ಸಲ ದೇವರ ದಯೆಯಿಂದ ಹೆಣ್ಣು ಆಗುತ್ತೆ ಅಂತ ಹಟ ಹಿಡಿದೆ. ಕೊನೆಗೂ ಆ ಭಾಗ್ಯ ಸಿಗಲಿಲ್ಲ. ಆದರೆ ಐದನೇ ಮಗನಾಗಿ ಹುಟ್ಟಿದವನೇ ನೀನು’ ಎಂದು ಹೇಳಿದರು. ನಮ್ಮವ್ವನ ಆಸೆ ನನ್ನಿಂದಾಗಿ
ನಿರಾಸೆಯಾಗಿ ಉಳಿಯಿತು. ನನ್ನ ತಾಯಿಗೆ ಮಗಳಿಲ್ಲದ ಕೊರಗು, ನನಗೆ ತಂಗಿಯಿಲ್ಲದ ಕೊರಗು!