ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಅವರ ಪಾಡ್‌ಕಾಸ್ಟ್ ‘ವಿ ದ ವುಮೆನ್’ನಲ್ಲಿ ಜಯಾ ಬಚ್ಚನ್ ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ.
ಜಯಾ ಬಚ್ಚನ್ ತನ್ನ ವಿಶಿಷ್ಟ ಮಾತುಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಈ ಸೀನಿಯರ್ ನಟಿ; ಅದಕ್ಕೆ ವ್ಯಕ್ತವಾಗುವ ವಿರೋಧಗಳಿಗೆಲ್ಲ ಕ್ಯಾರೇ ಅನ್ನೋರಲ್ಲ.
ಕೆಲವು ಸಮಯದ ಹಿಂದೆ ಸಂಸತ್‌ನಲ್ಲಿ, ಆಗ ಉಪರಾಷ್ಟ್ರಪತಿಗಳಾಗಿದ್ದ ಜಗದೀಪ್ ಧಂಕರ್ ಅವರು, ಜಯಾ ಹೆಸರಿನ ಜೊತೆಗೆ ಪತಿ ಅಮಿತಾಭ್ ಹೆಸರನ್ನು ಸೇರಿಸಿ ಕರೆದಾಗ ಜಯಾ ಕಿಡಿಕಿಡಿಯಾಗಿದ್ದರು. ‘ಗಂಡನ ಬಗ್ಗೆ ಹೆಮ್ಮೆ ಗೌರವ ಇದೆ. ಆದರೆ ನನ್ನ ಅಸ್ಮಿತೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಕೊಡಿ’ ಎಂದು ನಿಷ್ಠುರವಾಗಿ ಹೇಳಿದ್ದರು. ‘ಸರ್ಟಿಫಿಕೆಟ್‌ನಲ್ಲಿ ನಿಮ್ಮ ಹೆಸರಿನ ಜೊತೆಗೆ ಅಮಿತಾಬ್ ಹೆಸರೂ ಇದೆಯಲ್ಲಾ?’ ಅಂದಿದ್ದಕ್ಕೂ ಅವರ ಬಳಿ ಉತ್ತರವಿತ್ತು. ಆಮೇಲೆ ಇದು ಒಂದಿಷ್ಟು ಮಂದಿಗೆ ಲೇವಡಿಯ ವಿಷಯವಾಯಿತು. ಹೆಚ್ಚಿನವರು ಅವರ ಮಾತಿನ ಹಿಂದಿನ ಮರ್ಮ ಅರ್ಥ ಮಾಡಿಕೊಳ್ಳಲಿಲ್ಲ. ಹೆಣ್ಣಾಗಲಿ, ಗಂಡಾಗಲಿ ಸಾರ್ವಜನಿಕವಾಗಿ ಅವರನ್ನು ಇನ್ನೊಬ್ಬರ ಮೂಲಕ ಗುರುತಿಸುವ ಪ್ರವೃತ್ತಿಯ ಬಗ್ಗೆ ಅವರು ಪ್ರಶ್ನೆ ಮಾಡಿದ್ದರು.
ಜಾಗತಿಕವಾಗಿ ಹೆಣ್ಣನ್ನು ಗಂಡಿನ ಮೂಲಕ ಗುರುತಿಸುವ ಪ್ರವೃತ್ತಿಯ ಇತಿಹಾಸ ಎಲ್ಲಿದೆಯೋ ಗೊತ್ತಿಲ್ಲ, ಆದರೆ ಇಂಥ ಅಬದ್ಧಗಳ ಬಗ್ಗೆ ದನಿ ಎತ್ತಿದ ಕೂಡಲೇ ಅವರನ್ನು ಗಂಡು ವಿರೋಧಿ, ಸೋ ಕಾಲ್ಡ್ ಸ್ತ್ರೀವಾದಿ ಇತ್ಯಾದಿ ಹಣೆಪಟ್ಟಿಗಳಿಂದ ಲೇವಡಿ ಮಾಡುತ್ತಾರೆ. ಆ ಮೂಲಕ ಇಂಥಾ ದನಿಯನ್ನು ಅಲ್ಲೇ ಹೂತು ಹಾಕುವ ಸೂಕ್ಷ್ಮ ಕ್ರೌರ್ಯವೂ ಚಾಲ್ತಿಯಲ್ಲಿದೆ.
ಮದುವೆ ಔಟ್‌ಡೇಟೆಡ್
.. ಜಯಾ ಬಚ್ಚನ್ ಅವರ ‘ಮದುವೆ ಔಟ್‌ಡೇಟೆಡ್’ ಅನ್ನೋ ಮಾತಿನ ಹಿಂದೆ ಇಂಥಾ ಅರ್ಥವ್ಯಾಪ್ತಿಯೂ ಇರಬಹುದೇನೋ.
ನವ್ಯಾ ನವೇಲಿ ಅನ್ನೋ ಅಮಿತಾಬ್ ಬಚ್ಚನ್ ಮೊಮ್ಮಗಳು ಆಗಾಗ ತಾಯಿ ಶ್ವೇತಾ ಬಚ್ಚನ್, ಅಜ್ಜಿ ಜಯಾ ಜೊತೆಗೆ ಪಾಡ್‌ಕಾಸ್ಟ್ ಮಾಡುತ್ತಿರುತ್ತಾರೆ. ಇದರಲ್ಲಿ ಜಯಾ ಬಚ್ಚನ್ ಮುಕ್ತವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಒಂದು ಸಂಬಂಧದಲ್ಲಿ ದೈಹಿಕ ಆಕರ್ಷಣೆ ಜೊತೆಗೆ ಹೊಂದಾಣಿಕೆ ಅನ್ನೋದು ಬಹಳ ಮುಖ್ಯ. ನಮ್ಮ ಕಾಲದಲ್ಲಿ ಸಂಬಂಧಗಳ ವಿಚಾರಕ್ಕೆ ಬಂದರೆ ಹೊಸತನಕ್ಕೆ, ಪ್ರಯೋಗಶೀಲತೆಗೆ ಅವಕಾಶ ಇರಲಿಲ್ಲ. ಆದರೆ ಈಗ ಹಾಗಲ್ಲ. ಈಗ ಅವರಿಗೆ ಎಲ್ಲ ಸ್ವಾತಂತ್ರ್ಯವೂ ಇದೆ, ಹಾಗಿರುವಾಗ ಅವರ್ಯಾರೆ ಹೊಸ ಬಗೆಯ ಬದುಕಿಗೆ ತೆರೆದುಕೊಳ್ಳಬಾರದು, ಏಕೆಂದರೆ ಒಂದು ಸಂಬಂಧ ತನ್ನ ಆರ್ದ್ರತೆಯನ್ನು ಬಹುಕಾಲದವರೆಗೆ ಉಳಿಸಿಕೊಳ್ಳಲು ಅದೂ ಮುಖ್ಯ’ ಅಂದಿದ್ದಾರೆ.
ಇನ್ನೊಂದೆಡೆ ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಅವರ ಪಾಡ್‌ಕಾಸ್ಟ್ ‘ವಿ ದ ವುಮೆನ್’ನಲ್ಲಿ ಜಯಾ ಬಚ್ಚನ್ ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ. ಅಲ್ಲವರು
‘ಮದುವೆ ಅನ್ನೋದು ಔಟ್ ಡೇಟೆಡ್ ಕಾನ್ಸೆಪ್ಟ್’ ಎಂದು ಹೇಳಿ, ತನ್ನ ಮೊಮ್ಮಗಳು ನವ್ಯಾ ನವೇಲಿ ನಂದ ಇದೀಗ 28ರ ಹರೆಯಕ್ಕೆ ಕಾಲಿಡುತ್ತಿದ್ದು, ಆಕೆ ಮದುವೆ ಆಗೋದು ತನಗೆ ಸುತಾರಾಂ ಇಷ್ಟವಿಲ್ಲ ಅಂದುಬಿಟ್ಟಿದ್ದಾರೆ.
ಮೊಮ್ಮಗಳು ನವ್ಯಾ ಮದುವೆ ಆಗೋದು ನನಗಿಷ್ಟವಿಲ್ಲ
‘ಈ ಕಾಲದ ಹೆಣ್ಣುಮಕ್ಕಳಿಗೆ ಸಲಹೆ ನೀಡಲು ನಾನು ತುಂಬ ಹಿರಿಯಳಾದೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಅನ್ನೋದನ್ನೆಲ್ಲ ನಾನು ಹೇಳಿದರೆ ಸರಿಯಾಗದು. ಯಾಕೆಂದರೆ ಈ ಕಾಲದ ಮಕ್ಕಳು ಬಹಳ ಸ್ಮಾರ್ಟ್ ಇದ್ದಾರೆ. ಲೈಫನ್ನು ಎನ್‌ಜಾಯ್ ಮಾಡಿ ಅಂತಷ್ಟೇ ಹೇಳಬಲ್ಲೆ. ನಾನು ಮದುವೆಯಾಗಿ ಸಕ್ರಿಯ ವೃತ್ತಿ ಬದುಕಿನಿಂದ ಹೊರಗುಳಿದೆ. ನನ್ನ ಮಗಳು ಶ್ವೇತಾ ಸಹ ನನ್ನದೇ ಹಾದಿ ಹಿಡಿದಳು. ಆದರೆ ನನ್ನ ಮೊಮ್ಮಗಳು ನವ್ಯಾ ಮದುವೆ ಆಗೋದು ನನಗಿಷ್ಟವಿಲ್ಲ’ ಎಂದು ನಿರ್ಭೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಯಾ ಬಚ್ಚನ್ ಮಾತುಗಳು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಬದಲಾದ ಸ್ಥಿತ್ಯಂತರದ ಕಾಲಘಟ್ಟಕ್ಕೆ ತಕ್ಕಂತೆ ಅವರ ಮಾತುಗಳಿವೆ. ಒಂದು ಕಾಲಕ್ಕೆ ಮದುವೆ ಅನ್ನೋದು ಗಂಡು ಹೆಣ್ಣಿನ ಸಂಬಂಧಕ್ಕೆ ಕಾನೂನಿನ ಮುದ್ರೆಯಂತಿತ್ತು. ಆಗ ಅದು ಅನಿವಾರ್ಯವಾಗಿತ್ತು. ಆದರೆ ಈಗ ಹೆಣ್ಣು, ಗಂಡಿನ ಸಂಬಂಧದಲ್ಲಿ ಬಂಧನಕ್ಕಿಂತಲೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕಾನೂನಿನ, ಸಂಪ್ರದಾಯದ ಅಂಕಿತದಡಿ ಜೊತೆಗಿರಬೇಕಾದ ಅನಿವಾರ್ಯತೆ ಅವರಿಗಿಲ್ಲ. ಹೀಗಿರುವಾಗ ಜಯಾ ಬಚ್ಚನ್ ಮಾತು ಹೆಚ್ಚು ಪ್ರಸ್ತುತವಾಗುತ್ತದೆ.


