ರಾಷ್ಟ್ರೀಯ ಕ್ರೀಡಾ ದಿನದಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದ್ದಾರೆ. ದೇಶವಾಸಿಗಳನ್ನು ಫಿಟ್ ಆಗಿಸಿ ಆರೋಗ್ಯಯುತ ದೇಶ ಹೊಂದುವ ಕನಸಿನ ಬೀಜವನ್ನು ಬಿತ್ತಿದ್ದಾರೆ. ಈ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಸಲು ದೇಶದ ಮೂಲೆಮೂಲೆಗಳಿಂದಲೂ ಜನ ಉತ್ಸುಕರಾಗಿದ್ದಾರೆ. ಹಾಗಿದ್ದರೆ, ನೀವು ಇದಕ್ಕಾಗಿ ಏನು ಮಾಡಬಹುದು? ನಿಮ್ಮನ್ನು ನೀವು ಆರೋಗ್ಯವಾಗಿಟ್ಟುಕೊಳ್ಳಲು ಪ್ರತಿ ದಿನ ಒಂದಿಷ್ಟು ಗುರಿಗಳನ್ನು ಹಾಕಿಕೊಳ್ಳಬಹುದು. ಆರೋಗ್ಯವೆಂದರೆ ಕೇವಲ ದೈಹಿಕ ಸದೃಢತೆಯಲ್ಲ, ಮಾನಸಿಕ ಸಬಲತೆ ಕೂಡಾ. 

ದೇಶದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಳಮುಖವಾಗಿ ಸಾಗುತ್ತಿದೆ. ಅದನ್ನು ತಡೆಗಟ್ಟಿ ಪರಿಸ್ಥಿತಿಯನ್ನು ರಿವರ್ಸ್ ಮಾಡಲು ಎಷ್ಟೇ ಪ್ರಯತ್ನಗಳನ್ನು ಹಾಕುತ್ತಿದ್ದರೂ ಯಾವುದೂ ಕೆಲಸ ಮಾಡುತ್ತಿಲ್ಲ. ಇದಕ್ಕಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದುದೇನೆಂದರೆ, ಬದಲಾವಣೆ ವೈಯಕ್ತಿಕ ಮಟ್ಟದಿಂದಲೇ ಆರಂಭವಾಗುವುದು ಎಂದು. ಪ್ರತಿಯೊಬ್ಬರೂ ಅವರವರ, ನಂತರ ಕುಟುಂಬದ, ಸ್ನೇಹಿತರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡರೂ ಸಾಕಲ್ಲವೇ? ಪ್ರತಿ ದಿನ ಆರೋಗ್ಯಕ್ಕಾಗಿ ಒಂದಿಷ್ಟು ಸಮಯ ವಿನಿಯೋಗಿಸಿ. ಇದನ್ನೇ ಆಟವಾಗಿಸಿಕೊಂಡು ಗೆಳೆಯರಿಗೂ ಚಾಲೆಂಜ್ ಮಾಡಿ.

ಪ್ರತಿದಿನ ನಿಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಾಲ್ಕು ವಿಧಾನಗಳು
1. ಬ್ರಿಸ್ಕ್ ವಾಕಿಂಗ್. ನಮ್ಮ ದೇಶದಲ್ಲಿ ಪ್ರತಿ ನೂರರಲ್ಲಿ 5 ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆಗೆ ನಿಮ್ಮ ಕೊಡುಗೆ ಇಲ್ಲದಂತೆ ನೋಡಿಕೊಳ್ಳಿ. ವೇಗದ ನಡಿಗೆಯು ಪ್ರತಿ ಮೈಲಿಗೆ 80-150 ಕ್ಯಾಲೋರಿಗಳನ್ನು ಬೇಡುತ್ತದೆ. ಪ್ರತಿದಿನ 30 ನಿಮಿಷ ವೇಗದ ನಡಿಗೆ ಕೈಗೊಳ್ಳಿ. ಇದರಿಂದ ಹೃದಯದ ಕಾಯಿಲೆಗಳ ಸಂಭಾವ್ಯತೆಯನ್ನು ಶೇ.30ರಷ್ಟು ಕಡಿಮೆ ಮಾಡಬಹುದು.

2. 5ನೇ ಫ್ಲೋರ್‌ನಲ್ಲಿ ಮನೆಯಿದೆಯೇ? ಅಥವಾ ಕಚೇರಿಯಲ್ಲಿ ಮೂರನೇ ಮಹಡಿಯಲ್ಲಿ ನಿಮ್ಮ ಡೆಸ್ಕ್ ಇದೆಯೇ? ಹಾಗಿದ್ದರೆ ಲಿಫ್ಟ್ ಇರುವುದನ್ನು ಮರೆತುಬಿಡಿ. ಮೆಟ್ಟಿಲನ್ನು ಹತ್ತಿಳಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮೆಟ್ಟಿಲಿನ ಅಭ್ಯಾಸಕ್ಕೆ ಜಾಗಿಂಗ್‌ಗಿಂತ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬಲ್ಲದು.

3. ಡ್ಯಾನ್ಸ್ ಮಾಡಿ. ಒಳ್ಳೆಯ ಮ್ಯೂಸಿಕ್ ಹಾಕಿಕೊಂಡು ನಿಮ್ಮ ಪಾಡಿಗೆ ನೀವು ಮನಸೋಇಚ್ಛೆ ಕುಣಿಯುವುದರಿಂದ ಕ್ಯಾಲೋರಿ ಕರಗುವುದಷ್ಟೇ ಅಲ್ಲ, ಇದೊಂದು ಉತ್ತಮ ಒತ್ತಡ ನಿವಾರಣಾ ತಂತ್ರ ಕೂಡಾ. 30 ನಿಮಿಷದ ಡ್ಯಾನ್ಸ್‌ನಿಂದ 200 ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. 

ನಿಮಗೆ ಬಿಪಿ ಇದ್ಯಾ? ಇಲ್ಲದಿದ್ದರೂ ಓದಿ ಇದನ್ನೊಮ್ಮೆ

4. ನಿಮ್ಮದು ಕುಳಿತಲ್ಲೇ ಇರುವ ಜೀವನಶೈಲಿಯಾಗಿದ್ದರೆ, 8 ಗಂಟೆಗಳ ಕಾಲ ಕುಳಿತಲ್ಲೇ ಕೆಲಸ ಮಾಡಬೇಕಾದ ವರ್ಕ್ ಲೈಫ್ ಇದ್ದರೆ, ಎರಡು ಗಂಟೆಗೊಮ್ಮೆ ಎದ್ದು ಓಡಾಡುವ ಅಭ್ಯಾಸ ಮಾಡಿಕೊಳ್ಳಿ. 
ಪ್ರತಿದಿನ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಾಲ್ಕು ವಿಧಾನಗಳು

1. ಬೆಳಗ್ಗೆ ಎದ್ದೊಡನೆ ಕೆಲ ನಿಮಿಷಗಳ ಕಾಲ ಧ್ಯಾನ ರೂಢಿಸಿಕೊಳ್ಳಿ. ಮನಸ್ಸನ್ನು ಸಂಪೂರ್ಣ ಒಳ್ಳೆಯ ಯೋಚನೆಗಳಿಂದ ತುಂಬಿಸಿಕೊಳ್ಳಿ ಹಾಗೂ ಇಡೀ ದಿನ ನೀವು ನಗುನಗುತ್ತಾ ಪಾಸಿಟಿವ್ ಆಗಿ ಯೋಚಿಸುತ್ತಾ ಕಳೆಯುವುದಾಗಿ ಹೇಳಿಕೊಳ್ಳಿ.
2. ನಿಮ್ಮ ಪ್ರೀತಿಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಿ. ಸುತ್ತಲೂ ಪ್ರೀತಿ, ಬೆಂಬಲ ನೀಡುವವರು ಇದ್ದಾರೆಂದು ಮನಸಿಗನಿಸಿದಾಗ, ಅದೇ ಮಾನಸಿಕ ಆರೋಗ್ಯಕ್ಕೆ ಬೇಕಾದ ಎನರ್ಜಿ ನೀಡುತ್ತದೆ. 
3. ಒಂದು ಗ್ರ್ಯಾಟಿಟ್ಯೂಡ್ ಜರ್ನಲ್ ಇಟ್ಟುಕೊಳ್ಳಿ. ಪ್ರತಿದಿನ ನೀವು ನಿಮ್ಮ ಜೀವನದಲ್ಲಿ ಯಾವುದಕ್ಕೆಲ್ಲ ಕೃತಜ್ಞರಾಗಿದ್ದೀರಿ ಎಂಬುದನ್ನು ಬರೆದಿಡಿ. ಹಿಂದಿನ ದಿನ ಮನಸ್ಸಿಗೆ ಖುಷಿ ಕೊಟ್ಟ ವಿಷಯ ಬರೆಯಿರಿ. ನಿಮ್ಮ ವರ್ತನೆ ನಿಮಗೇ ಖುಷಿ ನೀಡಿದ ಸಂದರ್ಭ ಬರೆದಿಡಿ. ಸ್ವಲ್ಪ ದುಃಖದ ಸಂದರ್ಭದಲ್ಲಿ ಈ ಜರ್ನಲ್ ನಿಮ್ಮ ಸಹಾಯಕ್ಕೊದಗುತ್ತದೆ. ಬದುಕು ಈಗ ಕಷ್ಟವಾಗಿದ್ದರೂ, ಒಳ್ಳೆಯ ಸಮಯ ಬಂದೇ ಬರುತ್ತದೆ ಎಂಬ ಭರವಸೆ ನೀಡುತ್ತದೆ. 

4. ಸೋಷ್ಯಲ್ ಮೀಡಿಯಾ ಸ್ವಚ್ಛತಾ ಆಂದೋಲನ ಮಾಡಿ. ಸೆಲೆಬ್ರಿಟಿ ಗಾಸಿಪ್, ಮೆಮೆಗಳು, ನೆಗೆಟಿವ್ ಸ್ಟೇಟಸ್ ಹಾಕುವವರು- ಎಲ್ಲದರಿಂದ ಮುಕ್ತರಾಗಿ. ಬದುಕಿನಲ್ಲಿ ನೀವು ಎಷ್ಟೆಲ್ಲ ಮಾಡಿದ್ದೀರಿ, ಇ್ನೂ ಏನೆಲ್ಲ ಮಾಡಲಿವೆ ಎಂಬ ಕುರಿತು ಆತ್ಮವಿಮರ್ಶೆಗೆ 15 ನಿಮಿಷ ಸಮಯ ಕೊಟ್ಟುಕೊಳ್ಳಿ. ಬದುಕಿಗೆ ಶಿಸ್ತು ಹಾಗೂ ಗುರಿಯಿದ್ದಾಗ ಅದು ನೆಮ್ಮದಿಯನ್ನು ನೀಡುತ್ತದೆ.