ಕೆಲವರು ಇಷ್ಟವಾಗುವುದಕ್ಕೆ ಕಾರಣಗಳೇ ಬೇಕಿರುವುದಿಲ್ಲ. ಅಕಾರಣವಾಗಿ ಇಷ್ಟವಾಗಿ ಬಿಡುತ್ತಾರೆ. ಸಂಬಂಧಗಳೇ ಹಾಗೆ. ಇದಮಿತ್ಥಂ ಎಂದು ಹೇಳಲು ಸಾಧ್ಯವಾಗುವುದೇ ಇಲ್ಲ. ವ್ಯಾಖ್ಯಾನಕ್ಕೆ, ಪದಗಳಿಗೆ ನಿಲುಕದ್ದು ಪ್ರೀತಿ.
ನೋಡಿಯೊ ನೋಡದೆಯೊ ಕೆಲವರು ಕೆಲವರಿಗೆ ಇಷ್ಟವಾಗುತ್ತಾರೆ. ಮೊದಲ ಭೇಟಿಯಲ್ಲಿಯೇ ಕೆಲವರು ಸ್ನೇಹಿತರಾಗುತ್ತಾರೆ. ಅವರನ್ನು ಕೂರಿಸಿಕೊಂಡು ಯಾಕೆ ಇಷ್ಟ? ಯಾಕೆ ಸ್ನೇಹವಾಗಿದ್ದು ಅಂತ ಕೇಳಿನೋಡಿ.
ಬಹುತೇಕರು ಗೊತ್ತಿಲ್ಲ ಅಂತಾರೆ. ಕಾರಣವೇ ಇಲ್ಲ ಅಂತಾರೆ. ದಟ್ಸ್ ಗುಡ್! ಬಹುತೇಕ ಬಾರಿ ಹೀಗೆ ಇಷ್ಟವೊಂದು ಚಿಗುರುವುದಕ್ಕೆ ಕಾರಣಗಳಿರುವುದಿಲ್ಲ. ಆ ಚಿಗುರು ಮರವಾಗುತ್ತಲ್ಲ ಆಗ ಜೊತೆಗಿರುವುದಕ್ಕೆ ಕಾರಣಗಳನ್ನು ಹುಡುಕುತ್ತದೆ ಸಂಬಂಧ. ಲಾಭಗಳನ್ನು ಕೇಳುತ್ತೆ!
ಹಲವರು ವಾದಿಸುವುದುಂಟು ಸಂಬಂಧಗಳಿಗೆ ಕಾರಣವೇ ಇರಬಾರದು ಅಂತ. ಈ ವಿಷಯದಲ್ಲಿ ಅವರು ಕೊಡುವ ಕಾರಣಗಳೂ ಹೌದು ಅನ್ನಿಸುತ್ತವೆ. ಆದರೆ ಅವರು ಅದೇ ಸಂಬಂಧಗಳನ್ನು ಮರವಾಗಿಸಿಕೊಳ್ಳಲಿಕ್ಕೆ ಕಾರಣಗಳನ್ನು ಹುಡುಕಿಕೊಳ್ಳಲಾರರು! ಉತ್ತರ ನೀಡಲಾರರು!
ನೀನು ಬೇಡ್ವೆ ಬೇಡ ಅಂತ ಹೊರಟವರನ್ನು ಹಿಡಿದು ಕೇಳಿದರೆ ಸಾವಿರ ಕಾರಣಗಳನ್ನು ಕೊಡುತ್ತಾರೆ. ಬಿಟ್ಟು ಹೋಗುವುದಕ್ಕೆ ಕಾರಣಗಳಿರುವಾಗ ಜೊತೆಗಿರುವುದಕ್ಕೂ ಕಾರಣಗಳು ಇರಬೇಕು ತಾನೇ? ಇದ್ದೆ ಇರುತ್ತವೆ. ಆದರೆ ನಾವೊಂದು ಆದರ್ಶಕ್ಕೆ ಬಿದ್ದವರಂತೆ ಕಾರಣವೇ ಇಲ್ಲವೆನ್ನುತ್ತೇವೆ ಅಷ್ಟೇ.
ಕಾರಣಗಳೆಂದರೆ ಅವಳ ಮೂಗು, ಕೆನ್ನೆ, ರೂಪು. ಇವನ ಸಿಕ್ಸ್ ಪ್ಯಾಕ್, ಹಣ, ಹುದ್ದೆ ಮುಂತಾದವುಗಳಷ್ಟೇ ಅಲ್ಲ, ರೂಪು, ಹಣವೂ ಕೂಡ ಕಾರಣವಾಗದೇ ಇರುತ್ತದಾ? ಎಂದರೆ, ಹೆಚ್ಚು ಬಾರಿ ಹೌದು ಮತ್ತು ಕಡಿಮೆ ಬಾರಿ ಅಲ್ಲ. ಆದರೆ ಅದರಾಚೆ ನೂರಾರು ಕಾರಣಗಳಿವೆ. ಇನ್ನೇನು ವಿಚ್ಚೇದನದ ಹೊಸ್ತಿಲಿಗೆ ಬಂದು ನಿಂತಿದ್ದ ದಂಪತಿಗಳು ಮಗುವಿನ ಕಾರಣಕ್ಕೆ ಮತ್ತೆ ಕೈ ಹಿಡಿದುಕೊಳ್ಳುತ್ತಾರೆ, ಮಗುವಿನ ಕಾರಣಕ್ಕೆ ಮತ್ತೆ ಪ್ರೀತಿಯ ಸೌಧ ಕಟ್ಟಿಕೊಳ್ಳುತ್ತಾರೆ.
ಅವನ ಬಳಿ ಇನ್ನೆಲಿಯೂ ಸಿಗದ ಕಂಫರ್ಟ್‌ನೆಸ್ ಇದೆ, ಅವಳು ಜೊತೆ ಇದ್ರೆ ಮತ್ತೇನು ಬೇಡ ಅನಿಸುತ್ತೆ. ಅವನು ಸೇಫ್ ಅನ್ನಿಸುತ್ತಾನೆ, ಈಕೆ ತುಸು ಮುಂಗೋಪಿಯಾದರೂ ಅವಳಿಗೆ ನನ್ನ ಬಗ್ಗೆ ಕೇರ್ ಇದೆ. ನನ್ನ ದೌರ್ಬಲ್ಯಗಳನ್ನು ಆಕೆ ಅರ್ಥಮಾಡಿಕೊಂಡಿದ್ದಾಳೆ, ಈತ ಒರಟ ನಿಜ, ಆದರೆ ಮಗುವಿನಂತಹವನು.
ಈಕೆ ನನ್ನ ಅಪ್ಪ ಅಮ್ಮನ್ನ ಚೆನ್ನಾಗಿ ನೋಡಿಕೊಳ್ತಾಳೆ, ಆತ ನಮ್ಮನೆಗೆ ಒಂದಿಷ್ಟು ಆಶ್ರಯವಾಗ್ತಾನೆ. ಅವನಿಗೆ ಸೊಸೈಟಿಯಲ್ಲಿ ಒಂದೊಳ್ಳೆ ಹೆಸರಿದೆ, ಈಕೆಯಲ್ಲಿ ಒಬ್ಬ ತಾಯಿ ಮನಸ್ಸಿದೆ. ಆತನಿಗೆ ನಾನು ಅಂದ್ರೆ ಪ್ರಾಣ, ಇವಳು ಎಷ್ಟು ಜಗಳ ಕಾದರೂ ಮರುಕ್ಷಣಕ್ಕೆ ಮಗುವಾಗುತ್ತಾಳೆ... ಇಂತಹ ಅದೆಷ್ಟೊ ಕಾರಣಗಳು ಒಟ್ಟಿಗೆ ಸಾಗಲು ಸಾಲು ಸಾಲಾಗಿ ಮುಂದೆ ನಿಂತಿರುತ್ತವೆ. ಮನಸ್ಸು ಬಿಚ್ಚಿ ಅವುಗಳನ್ನು ನೋಡಬೇಕು, ನೆನಯಬೇಕು, ನೆನದು ಮುಂದೆ ಸಾಗಬೇಕು.
ಕಾರಣವೊಂದು ಸತ್ತು ಹೋದ ಮೇಲೆ ಸಂಬಂಧವೊಂದು ಕಡಿದು ಬೀಳುತ್ತದಾ? ಇಲ್ಲ, ಅದು ಅಷ್ಟು ಸುಲಭವಲ್ಲ.
ಕೇವಲ ಒಂದೇ ಒಂದು ಕಾರಣಕ್ಕಾಗಿ ಸಂಬಂಧ ಜೀವಿಸಿರುವುದಿಲ್ಲ. ಎಂದೊ ಒಮ್ಮೆ ಒಟ್ಟುಗೂಡಿಸಿಕೊಂಡ ಮೂರು ಕಾರಣಗಳನ್ನಿಟ್ಟುಕೊಂಡು ಜೀವನಪೂರ್ತಿ ಸಲಹುವುದಿಲ್ಲ. ಕಾರಣ, ಬಯಕೆಗಳು ಬದಲಾಗುತ್ತಾ ಹೋಗುತ್ತವೆ. ಸುಮ್ಮನೆ ಏನೂ ಇಲ್ಲದೆ ಜೊತೆಗಿದ್ದೀನಿ ಅನ್ನುವುದರಲ್ಲಿ ಸುಳ್ಳಿದೆ ಅನಿಸುತ್ತದೆ. ಸಂಬಂಧವೊಂದು ಹುಟ್ಟುವುದಕ್ಕೆ ಕಾರಣಗಳು ಇಲ್ಲದಿರಬಹುದು. ಆದರೆ ಅದು ತುಂಬಾ ದಿನ ಮುಂದುವರೆಯಲಿಕ್ಕೆ ಕಾರಣಗಳು ಇರಬೇಕು. ಸುಂದರವಾದ ಕಾರಣಗಳಿದ್ದಲ್ಲಿ ಅದರಿಂದ ಬಂಧವೂ ಅಚ್ಚುಕಟ್ಟು.
