ತನ್ನ ಕೋಣೆಯಲ್ಲಿ ರಾಕ್ಷಸನಿದ್ದಾನೆಂದು ಮಗು ಹೇಳಿದಾಗ ಪೋಷಕರು ಅದನ್ನು ಭ್ರಮೆ ಎಂದು ನಿರ್ಲಕ್ಷಿಸಿದರು. ಆದರೆ, ಮಗುವಿನ ನಿರಂತರ ಭಯಕ್ಕೆ ಕಾರಣ ಹುಡುಕಿದಾಗ, ಕೋಣೆಯ ಗೋಡೆಯೊಳಗೆ ಬೃಹತ್ ಜೇನುಗೂಡು ಇರುವುದು ಪತ್ತೆಯಾಯಿತು. ಈ ಘಟನೆಯು ಮಕ್ಕಳ ಮಾತನ್ನು ಎಂದಿಗೂ ಕಡೆಗಣಿಸಬಾರದು ಎಂಬ ಪಾಠವನ್ನು ಸಾರುತ್ತದೆ.
ಮಕ್ಕಳ ಹಠ ಮಾಡಿದ್ರೆ ರಾಕ್ಷಸ ಬರ್ತಾನೆ, ಪೊಲೀಸರು ಹಿಡ್ಕೊಂಡು ಹೋಗ್ತಾರೆ, ಪಿಶಾಚಿ ತಿಂದುಕೊಂಡು ಹೋಗತ್ತೆ ಅಂತೆಲ್ಲಾ ಮಕ್ಕಳಿಗೆ ಹೇಳೋದು ಸರ್ವೇ ಸಾಮಾನ್ಯ. ಮಕ್ಕಳಿಗೆ ಹೆದರಿಸುವ ಈ ಪರಿ, ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲೆಡೆಗಳಲ್ಲಿಯೂ ಇದದ್ದೇ. ಅದರಲ್ಲಿಯೂ ಈಗ ಕಾರ್ಟೂನ್ನಲ್ಲಿ ದೆವ್ವ, ಭೂತ, ರಾಕ್ಷಸ ಎಲ್ಲವನ್ನೂ ನೋಡುವ ಮಕ್ಕಳು ಅದರದ್ದೇ ಭ್ರಮೆಯಲ್ಲಿ ಮಲಗುವುದೂ ಇದೆ. ಹಾಗೆಂದು ಮಕ್ಕಳು ತಮ್ಮ ಕೋಣೆಯಲ್ಲಿ ಏನೋ ಭಯಾನಕವಾಗಿ ಕಂಡಾಗಲೆಲ್ಲ, ಇದು ಅವರ ಭ್ರಮೆ, ಮೊಬೈಲ್ ನೋಡಿದ್ದು ಹೆಚ್ಚಾಯ್ತು, ಕಾರ್ಟೂನ್ ನೋಡಿದ್ದು ಹೆಚ್ಚಾಯ್ತು ಅಂತೆಲ್ಲಾ ಕೇರ್ಲೆಸ್ ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಮಕ್ಕಳು ಇದರ ಕಲ್ಪನಾಲೋಕದಲ್ಲಿ ಇದ್ದರೂ, ಕೆಲವೊಮ್ಮೆ ಅಲ್ಲಿ ನಡೆಯುವುದೇ ಬೇರೆಯದ್ದು ಏನೋ ಆಗಿರುತ್ತದೆ.
ಅಂಥದ್ದೇ ಒಂದು ಘಟನೆ ಅಮೆರಿಕದ ಉತ್ತರ ಕರೋಲಿನಾದಲ್ಲಿ ನಡೆದಿದೆ. ಸಾಮಾನ್ಯವಾಗಿ ಕೆಲವು ದೇಶಗಳಲ್ಲಿ ಮಗು ಎಷ್ಟೇ ಚಿಕ್ಕದಿದ್ದರೂ ಅದನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಲಾಗುತ್ತದೆ. ಅದೇ ರೀತಿ ಮೂರು ವರ್ಷದ ಮಗು ಸೇಲರ್ ಕ್ಲಾಸ್ನನ್ನು ಪೋಷಕರು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿಸಲಾಗುತ್ತಿತ್ತು. ಈ ಮಗು ದಿನವೂ ಕನಸಿನಲ್ಲಿ ಬೆಚ್ಚಿ ಬೀಳುತ್ತಿತ್ತು. ತನ್ನ ಕೋಣೆಯಲ್ಲಿ ರಾಕ್ಷಸ ಇದ್ದಾನೆ, ವಿಚಿತ್ರ ಸೌಂಡ್ ಮಾಡುತ್ತಾನೆ, ಒಂದು ರೀತಿಯಲ್ಲಿ ಬೆಳಕು ಬರುತ್ತದೆ ಎಂದೆಲ್ಲಾ ಹೇಳುತ್ತಿತ್ತು. ಆದರೆ ಮೊಬೈಲ್, ಟಿವಿ ಗೀಳು ಹಚ್ಚಿಕೊಂಡಿದ್ದ ಆ ಕಂದಮ್ಮನ ಮಾತನ್ನು ಅಪ್ಪ ಆಗಲೀ, ಅಮ್ಮ ಆಶಲೆ ಮಸ್ಸೀಸ್ ಆಗಲೀ ಕೇಳಲೇ ಇಲ್ಲ. ಪ್ರತಿದಿನ ಹಾಗೆ ಹೇಳ್ತಾ ಇದ್ದರೂ, ಇದು ಆಕೆಯ ಭ್ರಮೆ ಎಂದುಕೊಂಡು ಸಮಾಧಾನ ಮಾಡುತ್ತಿದ್ದರು. ಒಮ್ಮೆಯೂ ಆ ಮಗುವಿನ ಕೋಣೆಯಲ್ಲಿ ಮಲಗಿ ಏನದು ಎಂದು ನೋಡುವ ಗೋಜಿಗೂ ಹೋಗಲಿಲ್ಲ.
ರಾಕ್ಷಸರ ಸಿನಿಮಾ ನೋಡ್ತಿದ್ದ ಬಾಲಕಿ
ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಆ ಬಾಲಕಿ ಹೆಚ್ಚಾಗಿ ಮೊನ್‌ಸ್ಟಾರ್ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಳು. ಆದ್ದರಿಂದ ಈಕೆಯ ಭ್ರಮೆ ಅದು ಎಂದು ಹೇಳಿದ ಅಪ್ಪ-ಅಮ್ಮ, ಮಗಳಿಗೆ ಒಂದು ಬಾಟಲ್ ನೀರು ಕೊಟ್ಟು ರಾಕ್ಷಸರು ಬಂದರೆ ನೀರನ್ನು ಸ್ಪ್ರೇ ಮಾಡು ಓಡಿಹೋಗ್ತಾರೆ ಎಂದು ತಮಾಷೆ ಮಾಡಿದ್ದರು. ಆದರೆ ಇಷ್ಟಾದರೂ ಬಾಲಕಿ ಮಾತ್ರ ಭಯಪಡುತ್ತಲೇ ಇದ್ದಳು. ದಿನವೂ ಹೀಗೆಯೇ ಮಗಳು ಹೇಳುತ್ತಿದ್ದರಿಂದ ಅಪ್ಪ-ಅಮ್ಮನಿಗೂ ಡೌಟ್ ಬರಲು ಶುರುವಾಯಿತು. ರಾತ್ರಿ ಅವಳ ಬಳಿ ಮಲಗಿದಾಗ ವಿಚಿತ್ರ ಶಬ್ದಗಳು ಕೇಳಿಸತೊಡಗಿತು. ಕೊನೆಗೆ ಅಪ್ಪ-ಅಮ್ಮ ಇಬ್ಬರೂ ರೂಮಿನಲ್ಲಿ ಸುತ್ತಮುತ್ತಲೂ ಗಮನಿಸಿದಾಗ, ಮನೆಯ ಚಿಮಣಿಯಲ್ಲಿ ಜೇನುನೊಣಗಳು ಗುಂಪು ಸುತ್ತುವುದನ್ನು ನೋಡಿದರು.
ಅಲ್ಲಿ ಇದ್ದದ್ದು ಏನು?
ಅದು ಶತಮಾನಗಳಷ್ಟು ಹಳೆಯದಾಗಿರುವ ಮನೆಯಾಗಿದ್ದರಿಂದ ಅಲ್ಲಿ ಜೇನುನೊಣಗಳು ಗೂಡು ಕಟ್ಟುತ್ತಿದ್ದವು. ಕೊನೆಗೆ, ಕೂಡಲೇ ಅಮ್ಮ, ಕೀಟ ನಿಯಂತ್ರಣ ಕಂಪೆನಿಯನ್ನು ಸಂಪರ್ಕಿಸಿದರು. ಅವರು ಪರಿಶೀಲಿಸಿದಾಗ ಬಾಲಕಿ ಮಲಗುವ ಕೋಣೆಯ ಮೇಲ್ಭಾಗದಲ್ಲಿರುವ ಮರದ ಹಲಗೆಯ ಬಳಿ, ಜೇನುನೊಣಗಳು ಗೂಡು ಕಟ್ಟಲು ಆರಂಭಿಸಿ ಸುಮಾರು 8 ತಿಂಗಳುಗಳೇ ಕಳೆದಿವೆ ಎನ್ನುವುದು ತಿಳಿಯಿತು. ಕೊನೆಗೆ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಒಂದೇ ಒಂದು ಅದೃಷ್ಟ ಎಂದರೆ ಅವು ಬಾಲಕಿಗೆ ಹಾನಿಮಾಡಲಿಲ್ಲ ಎನ್ನುವುದು. ಅಂತೂ ರಾಕ್ಷಸನ ಸ್ಟೋರಿ ಅಲ್ಲಿಗೆ ಸುಖಾಂತ್ಯವಾಗಿದ್ದು, ಈ ಸ್ಟೋರಿ ಪುನಃ ಪುನಃ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಕ್ಕಳ ಮಾತನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎನ್ನುತ್ತಾರೆ.


