25 ವರ್ಷದ ಯುವತಿಯೊಬ್ಬಳು ವಿಷಕಾರಿ ಕೆಲಸದ ವಾತಾವರಣದಿಂದಾಗಿ 1 ಕೋಟಿ ರೂಪಾಯಿ ಮೌಲ್ಯದ ಉದ್ಯೋಗದ ಆಫರ್ ತಿರಸ್ಕರಿಸಿದ್ದಾಳೆ. ಈ ಘಟನೆಯು, ಇಂದಿನ ಯುವ ಪೀಳಿಗೆಯು ಹಣಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಹೇಗೆ ಆದ್ಯತೆ ನೀಡುತ್ತಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಹಣ ಮುಖ್ಯವೋ, ಮಾನಸಿಕ ನೆಮ್ಮದಿ ಮುಖ್ಯವೋ ಎನ್ನುವ ಪ್ರಶ್ನೆ ಬಂದಾಗ, ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರತಿಕ್ರಿಯೆ ಆಗಿರಬಹುದು. ಹಣವೂ ಬೇಕು, ಮಾನಸಿಕ ನೆಮ್ಮದಿಯೂ ಬೇಕು ಎನ್ನುವುದು ಎಲ್ಲರ ಉತ್ತರವಾಗಿದ್ದರೂ, ಇವೆರಡೂ ಒಂದೇ ಕಡೆ ಇರುವುದು ಕಡಿಮೆ ಸ್ಥಳಗಳಲ್ಲಿ ಮಾತ್ರ. ಆದ್ದರಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದಾಗ, ಮನೆಯ ಪರಿಸ್ಥಿತಿ, ಕುಟುಂಬದ ಜವಾಬ್ದಾರಿ, ಭವಿಷ್ಯದ ಯೋಜನೆಗಳು.... ಎಲ್ಲವೂ ಒಮ್ಮೆಲೆ ಕಣ್ಣೆದುರು ಬಂದು ಹಣವೇ ಮುಖ್ಯ ಎಂದು ಹೇಳುವವರೇ ಹಲವರು. ಆದರೆ, ಮಾನಸಿಕ ನೆಮ್ಮದಿಯೇ ಇಲ್ಲದಾಗ ಹಣ ತೆಗೆದುಕೊಂಡು ಏನು ಮಾಡುವುದು ಎನ್ನುವುದು ಬಹುತೇಕ ಯುವಕ-ಯುವತಿಯರ (Gen Z) ಅಂಬೋಣ. ಅಂಥದ್ದೇ ಒಂದು ಸ್ಟೋರಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮಾನಸಿಕವಾಗಿ ಹಾನಿಕಾರಕ ವಾತಾವರಣದಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ 25 ವರ್ಷದ ವೃತ್ತಿಪರರೊಬ್ಬರು 1 ಕೋಟಿ ರೂಪಾಯಿ ಮೌಲ್ಯದ ಉದ್ಯೋಗದ ಆಫರ್ ತಿರಸ್ಕರಿಸಿರುವುದು ಈಗ ಭಾರಿ ಕುತೂಹಲಕ್ಕೆ ಹಾಗೂ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರವು Gen Zಗಳ ಹಣ, ಮಾನಸಿಕ ಆರೋಗ್ಯ ಮತ್ತು ಯುವ ಉದ್ಯೋಗಿಗಳು ತಮ್ಮ ವೃತ್ತಿಜೀವನದಿಂದ ಏನು ಬಯಸುತ್ತಾರೆ ಎಂಬುದರ ಕುರಿತು ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕಥೆಯನ್ನು ಬೆಂಗಳೂರಿನ ಉತ್ಪನ್ನ ವಿನ್ಯಾಸಕ ಮುಸ್ಕಾನ್ ಅತ್ತರ್ ಹಂಚಿಕೊಂಡಿದ್ದು, ಅದೀಗ ಭಾರಿ ವೈರಲ್ ಆಗಿದೆ. ಯುವ ವೃತ್ತಿಪರರು ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮ ಆದ್ಯತೆಗಳನ್ನು ಎಷ್ಟು ಸ್ಪಷ್ಟವಾಗಿ ಹೊಂದಿಸಿಕೊಂಡಿದ್ದಾರೆ ಎಂಬುದನ್ನು ನೋಡಿ ತಾವು ಪ್ರಭಾವಿತರಾಗಿದ್ದೇವೆ ಎನ್ನುವ ಬಗ್ಗೆ ಅವರು ಹೇಳಿದ್ದಾರೆ.
25ರ ಯುವತಿಯ ಸ್ಟೋರಿ
ಮುಸ್ಕಾನ್ ಅತ್ತರ್ ಲಿಂಕ್ಡ್‌ಇನ್‌ನಲ್ಲಿ ಈ ಕುರಿತು ಬರೆದಿದ್ದಾರೆ, "ನನ್ನ ಸ್ನೇಹಿತೆಯೊಬ್ಬಳು, 25 ನೇ ವಯಸ್ಸಿನಲ್ಲಿ ₹1 ಕೋಟಿ ಕೊಡುಗೆಯನ್ನು ತಿರಸ್ಕರಿಸಿದಳು. ಅವಳು ಹಾನಿಕಾರಕ ವಾತಾವರಣವಿರುವ ಕೆಲಸದ ಸ್ಥಳದಲ್ಲಿ ಕೆಲಸ ಮಾಡಬೇಕಾಗಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಳು.
ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಆಫರ್ ಆಕೆ ತಿರಸ್ಕರಿಸಿದ್ದಳು. ಆದರೆ 25 ನೇ ವಯಸ್ಸಿನಲ್ಲಿ ಅಂತಹ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸುವುದು ಸಹ ಅವಳಿಗೆ ಕಷ್ಟಕರವಾಗಿತ್ತು ಎಂದು ಅವಳು ಹೇಳಿದ್ದಾರೆ. ಕೆಲವರಿಗೆ ಕುಟುಂಬದ ಅಗತ್ಯತೆಗಳು, ಇತರರ ನಿರೀಕ್ಷೆಗಳು ಮತ್ತು ವೈಯಕ್ತಿಕ ಗುರಿಗಳಂತಹ ವಿವಿಧ ಒತ್ತಡಗಳಿಂದಾಗಿ ಇಂಥ ಆಫರ್ ರಿಜೆಕ್ಟ್ ಮಾಡುವ ನಿರ್ಧಾರವು ಕಷ್ಟಕರವಾಗಿರಬಹುದು. ಆದರೆ ಒತ್ತಡ ಸಹಿಸುವುದು ಬೇಕಾಗಿಲ್ಲ ಎನ್ನುವ ಕಾರಣಕ್ಕೆ ಕೆಲವರು ಈ ದಿಟ್ಟ ನಿಲುವನ್ನು ಕೂಡ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಸ್ಕಾನ್ ಹೇಳಿದ್ದಾರೆ.
ಸಂಬಳಕ್ಕಿಂತ ನೆಮ್ಮದಿ ಮುಖ್ಯ
ಕೆಲವು ಯುವ ಉದ್ಯೋಗಿಗಳು ಉದ್ಯೋಗವನ್ನು ಆಯ್ಕೆಮಾಡುವಾಗ ಕೇವಲ ಸಂಬಳಕ್ಕಿಂತ ಹೆಚ್ಚಿನದನ್ನು ಹೇಗೆ ಪರಿಗಣಿಸುತ್ತಿದ್ದಾರೆ ಎಂಬುದನ್ನು ಈ ನಿರ್ಧಾರವು ತೋರಿಸುತ್ತದೆ. ಮುಂದಿನ ಪೀಳಿಗೆಯ ಕೆಲಸ ಮಾಡುವ ಜನರು ತಮಗೆ ಮುಖ್ಯವಾದ್ದದ್ದು ಏನು ಎಂದು ತಿಳಿಸುತ್ತಿದ್ದಾರೆ ಎಂದಿದ್ದಾರೆ ಮುಸ್ಕಾನ್. ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಈ ನಿರ್ಧಾರವನ್ನು ಶ್ಲಾಘಿಸಿದರೆ, ಇತರರು ಇಷ್ಟು ದೊಡ್ಡ ಸಂಬಳವನ್ನು ನಿರಾಕರಿಸಲು ಎಲ್ಲರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
"ಮಾನಸಿಕ ಆರೋಗ್ಯದ ಪರಿಣಾಮವನ್ನು ಜನರು ಈಗ ಅರ್ಥಮಾಡಿಕೊಂಡಿರುವುದು ಸಂತೋಷವಾಗಿದೆ... ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ... ಮತ್ತು ಹೌದು, ಹಣವು ಮುಖ್ಯವಾಗಿದೆ. ನಾನು ಯಾವಾಗಲೂ ಬೇರೆ ಯಾವುದಕ್ಕಿಂತ ಹೆಚ್ಚಾಗಿ ಹಣವನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತೇನೆ, ಕೆಲವೊಮ್ಮೆ ಕೆಲಸದ ಪಾತ್ರ ಅಥವಾ ಕೆಲಸದ ಸಮಯಕ್ಕಿಂತ ಹೆಚ್ಚಾಗಿ. ಆದರೆ ವಿಷಕಾರಿ ವಾತಾವರಣ ಮತ್ತು ವಿಚಿತ್ರ ಕೆಲಸದ ಸ್ಥಳ... ಖಂಡಿತವಾಗಿಯೂ ಅಲ್ಲ!! ಒಂದು ದಶಕದ ಕಾಲ MNCಗಳು ಮತ್ತು PSUಗಳಲ್ಲಿ ಕೆಲಸ ಮಾಡಿದ ನಂತರ ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ, ಆದರೆ 25 ನೇ ವಯಸ್ಸಿನಲ್ಲಿ ಇದನ್ನು ಮಾಡುವುದು ಶ್ಲಾಘನೀಯ ಎಂದು ಒಬ್ಬರು ಬರೆದಿರುವುದು ಭಾರಿ ಗಮನ ಸೆಳೆದಿದೆ.


