ಭಾರತದಲ್ಲಿ ವಯಸ್ಕ ಅವಿವಾಹಿತ ಜೋಡಿಗಳು ಹೋಟೆಲ್ ಅಥವಾ OYO ರೂಮ್‌ಗಳಲ್ಲಿ ತಂಗುವುದು ಸಂಪೂರ್ಣ ಕಾನೂನುಬದ್ಧವಾಗಿದೆ. ಇಬ್ಬರು ವಯಸ್ಕರು ತಮ್ಮ ಒಪ್ಪಿಗೆಯಿಂದ ಒಟ್ಟಿಗೆ ತಂಗಿದ್ದರೆ, ಪೊಲೀಸರು ಯಾವುದೇ ಬಲವಾದ ಕಾರಣವಿಲ್ಲದೆ ಅವರಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ. ರೂಮ್ ಬುಕ್ ಮಾಡುವಾಗ 'Couples Allowed' ಮತ್ತು 'Local ID Accepted' ಫಿಲ್ಟರ್‌ಗಳನ್ನು ಪರಿಶೀಲಿಸುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಅಥವಾ ದಂಪತಿ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯಲು ಹೋಟೆಲ್ ಅಥವಾ OYO ರೂಮ್‌ಗಳನ್ನು ಬುಕ್ ಮಾಡುವುದು ತುಂಬಾ ಸಾಮಾನ್ಯ. ಆದರೆ ಮದುವೆಯಾಗದ ಜೋಡಿಗಳು (Unmarried Couples) ಹೋಟೆಲ್‌ನಲ್ಲಿ ಒಟ್ಟಿಗೆ ತಂಗುವುದು ಕಾನೂನುಬದ್ಧವೇ ಎಂಬ ಭಯ ಅಥವಾ ಗೊಂದಲ ಹಲವರಲ್ಲಿ ಇರುತ್ತದೆ. ಪೊಲೀಸ್ ದಾಳಿ ಅಥವಾ ಹೋಟೆಲ್ ಸಿಬ್ಬಂದಿಯ ಕಿರುಕುಳದ ಭಯದಿಂದ ಅನೇಕರು ಆತಂಕಕ್ಕೊಳಗಾಗುತ್ತಾರೆ. ಹಾಗಾದರೆ ಭಾರತೀಯ ಕಾನೂನಿನ ಪ್ರಕಾರ ಹೋಟೆಲ್ ಅಥವಾ OYO ರೂಮ್‌ಗಳಲ್ಲಿ ತಂಗಲು ಗ್ರಾಹಕರಿಗೆ ಇರುವ ಹಕ್ಕುಗಳು ಯಾವುವು?

OYO ಅಥವಾ ಹೋಟೆಲ್‌ನಲ್ಲಿ ತಂಗುವುದು ಕಾನೂನುಬಾಹಿರವೇ?

ಮೊದಲನೆಯದಾಗಿ ಭಾರತದಲ್ಲಿ ಯಾವುದೇ ವಯಸ್ಕ ಜೋಡಿಗಳು ಹೋಟೆಲ್‌ನಲ್ಲಿ ಒಟ್ಟಿಗೆ ತಂಗುವುದನ್ನು ಕಾನೂನು ತಡೆಯುವುದಿಲ್ಲ. ಭಾರತದ ಸಂವಿಧಾನದ ಪ್ರಕಾರ, ಯುವಕನಿಗೆ 21 ವರ್ಷ ಹಾಗೂ ಯುವತಿಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಅವರು ತಮ್ಮ ಸ್ವಂತ ಇಚ್ಛೆಯಂತೆ ಒಟ್ಟಿಗೆ ಜೀವಿಸಬಹುದು. ವಯಸ್ಕರಾದ ಇಬ್ಬರು ಅವಿವಾಹಿತ ವ್ಯಕ್ತಿಗಳು ಹೋಟೆಲ್ ರೂಮ್ ಬುಕ್ ಮಾಡುವುದನ್ನು ಅಥವಾ ಒಟ್ಟಿಗೆ ತಂಗುವುದನ್ನು ದೇಶದ ಯಾವುದೇ ಕಾನೂನು ನಿಷೇಧಿಸುವುದಿಲ್ಲ.

ಸ್ಥಳೀಯ ಐಡಿ (Local ID) ನಿಯಮಗಳೇನು?

ಹಲವು ಬಾರಿ ಜೋಡಿಗಳಿಗೆ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಒಂದೇ ನಗರದ ಗುರುತಿನ ಚೀಟಿ (Local ID) ತೋರಿಸಿದಾಗ ಹೋಟೆಲ್‌ನವರು ರೂಮ್ ನೀಡಲು ನಿರಾಕರಿಸುತ್ತಾರೆ. ಆದರೆ ನಿಯಮಗಳ ಪ್ರಕಾರ ಯಾವುದೇ ಹೋಟೆಲ್ ಆಡಳಿತ ಮಂಡಳಿ ಸ್ಥಳೀಯ ಐಡಿಯನ್ನು ನಿರಾಕರಿಸುವಂತಿಲ್ಲ (ಅವರ ಸ್ವಂತ ಹೋಟೆಲ್‌ನ ಕೆಲವು ಖಾಸಗಿ ಪಾಲಿಸಿಗಳಲ್ಲಿ ಇದಕ್ಕೆ ನಿರ್ಬಂಧ ಇಲ್ಲದಿದ್ದರೆ). ಸದ್ಯ OYO ಸೇರಿದಂತೆ ದೇಶದ ಬಹುತೇಕ ಪ್ರಮುಖ ಹೋಟೆಲ್ ಸಂಸ್ಥೆಗಳು ತಮ್ಮ ಪಾಲಿಸಿಯಲ್ಲಿ ಸ್ಥಳೀಯ ಐಡಿಗಳನ್ನು ಸ್ವೀಕರಿಸುವುದಾಗಿ ಸ್ಪಷ್ಟಪಡಿಸಿವೆ. ಆದರೂ ಆನ್‌ಲೈನ್‌ನಲ್ಲಿ ರೂಮ್ ಬುಕ್ ಮಾಡುವಾಗ 'Couples Allowed' (ಜೋಡಿಗಳಿಗೆ ಅನುಮತಿ) ಮತ್ತು 'Local ID Accepted' ಫಿಲ್ಟರ್‌ಗಳನ್ನು ಪರಿಶೀಲಿಸಿ ಬುಕ್ ಮಾಡುವುದು ಉತ್ತಮ.

ಪೊಲೀಸರು ನಿಮಗೆ ಕಿರುಕುಳ ನೀಡಬಹುದೇ?

ಹೋಟೆಲ್ ರೂಮ್‌ಗಳಲ್ಲಿ ತಂಗುವ ಜೋಡಿಗಳಿಗೆ ಪೊಲೀಸರ ದಾಳಿಯ (Police Raid) ಭಯ ಹೆಚ್ಚಾಗಿ ಕಾಡುತ್ತದೆ. ಕಾನೂನಿನ ಪ್ರಕಾರ ಇಬ್ಬರು ವಯಸ್ಕರು ತಮ್ಮ ಒಪ್ಪಿಗೆಯಿಂದ ಹೋಟೆಲ್ ರೂಮಿನಲ್ಲಿ ತಂಗಿದ್ದರೆ, ಪೊಲೀಸರು ಯಾವುದೇ ಬಲವಾದ ಕಾರಣವಿಲ್ಲದೆ ಅವರಿಗೆ ಕಿರುಕುಳ ನೀಡಲು ಅಥವಾ ಬಂಧಿಸಲು ಸಾಧ್ಯವಿಲ್ಲ. ಮುಚ್ಚಿದ ಕೋಣೆಯೊಳಗೆ ಇಬ್ಬರ ಒಪ್ಪಿಗೆಯೊಂದಿಗೆ ಒಟ್ಟಿಗೆ ಸಮಯ ಕಳೆಯುವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಒಂದು ವೇಳೆ ಅಲ್ಲಿ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳು (ಉದಾಹರಣೆಗೆ ಮಾದಕವಸ್ತು ಜಾಲ, ವೇಶ್ಯಾವಾಟಿಕೆ ಇತ್ಯಾದಿ) ನಡೆಯುತ್ತಿವೆ ಎಂಬ ಬಲವಾದ ಅನುಮಾನವಿದ್ದಾಗ ಮಾತ್ರ ಪೊಲೀಸರು ಕಾನೂನು ರೀತ್ಯ ತನಿಖೆ ನಡೆಸಬಹುದು. ನಿಮ್ಮ ಒಪ್ಪಿಗೆಯಿಲ್ಲದೆ ಪೋಷಕರಿಗೆ ಫೋನ್ ಮಾಡುವ ಬೆದರಿಕೆ ಹಾಕಿ ಹೆದರಿಸುವ ಹಕ್ಕು ಪೊಲೀಸರಿಗಿಲ್ಲ.