ಪಾರಿವಾಳಗಳು ಬಾಲ್ಕನಿಯಲ್ಲಿ ಗಲೀಜು ಮಾಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಇವುಗಳನ್ನು ಓಡಿಸಲು ಬೆಳ್ಳುಳ್ಳಿ ನೀರು, ವಿಂಡ್ ಚೈಮ್‌ನಂತಹ ಹಲವು ವಿಧಾನಗಳು ವಿಫಲವಾದರೂ, ತೋಟಗಾರಿಕೆ ತಜ್ಞರು ಒಂದು ಸರಳವಾದ ವಸ್ತುವನ್ನು ಬಳಸಿ ಯಶಸ್ವಿಯಾಗಿದ್ದಾರೆ. ಈ ವಿಶೇಷ ವಿಧಾನದಿಂದ ಪಾರಿವಾಳಗಳು ಬರುವುದನ್ನು ತಡೆಯಬಹುದು.

ಪ್ರತಿಯೊಬ್ಬರೂ ತಮ್ಮ ಬಾಲ್ಕನಿಯನ್ನು ಸ್ವಚ್ಛವಾಗಿರಬೇಕೆಂದು ಬಯಸುತ್ತಾರೆ. ಜನರು ಅದನ್ನು ಸುಂದರಗೊಳಿಸಲು ವಿವಿಧ ಸಸ್ಯಗಳನ್ನು ನೆಡುತ್ತಾರೆ. ಆದಾಗ್ಯೂ, ಪಾರಿವಾಳಗಳು ಬಾಲ್ಕನಿಗಳಲ್ಲಿ ಬರುತ್ತವೆ. ಹಕ್ಕಿಗಳಿಗೆ ಧಾನ್ಯ ಹಾಕುವುದರಿಂದ ಪುಣ್ಯ ಬರುತ್ತದೆ ಎಂದು ಹೇಳಲಾಗುತ್ತದೆಯಾದರೂ, ಪಾರಿವಾಳಗಳಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಬರುವುದು ಇದಾಗಲೇ ದೃಢಪಟ್ಟಿವೆ. ಅಷ್ಟೇ ಅಲ್ಲದೇ ಪಾರಿವಾಳಗಳು ಸಿಕ್ಕಾಪಟ್ಟೆ ಹಿಕ್ಕೆ ಹಾಕಿ ಮನೆಯ ಅಂದವನ್ನೇ ಕೆಡಿಸುವುದು ಇದೆ. ಬೇರಾವ ಪಕ್ಷಿಗಳೂ ಮಾಡದಷ್ಟು ಗಲೀಜು ಇದು ಮಾಡುತ್ತದೆ. ಇದೇ ಕಾರಣಕ್ಕೆ ಪಕ್ಷಿ ಪ್ರಿಯರು ಕೂಡ ಪಾರಿವಾಳಗಳಿಂದ ದೂರ ಇರಲು ಬಯಸುತ್ತಾರೆ. ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ, ಪಾರಿವಾಳಗಳಿಂದ ರೋಗ ಉಂಟಾಗುತ್ತದೆ ಎನ್ನುವ ಕಾರಣಕ್ಕೆ, ಅದಕ್ಕೆ ಧಾನ್ಯ ಹಾಕಿದವರ ಮೇಲೆ ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದ ಪಾರಿವಾಳಗಳನ್ನು ನೋಡಿ ಅಯ್ಯೋ ಪಾಪ ಎನ್ನುವವರು ಕೂಡ ಒಂದು ಹಂತದಲ್ಲಿ ಅದನ್ನು ದ್ವೇಷಿಸುವ ಹಾಗೆ ಆಗಿಬಿಡುತ್ತದೆ.

ಪಾರಿವಾಳಗಳ ರಕ್ಷಣೆಯಿಂದ ಸಾಮಾನ್ಯವಾಗಿ ಎಲ್ಲೆಡೆ ಮನೆಯ ಸುತ್ತಲೂ ಬಲೆ ಹಾಕುವುದನ್ನು ನೋಡಬಹುದು. ದೊಡ್ಡ ದೊಡ್ಡ ಕಟ್ಟಡಗಳಲ್ಲಿಯೂ ಈ ಬಲೆ ಹಾಕಿರುತ್ತಾರೆ. ಪಾರಿವಾಳ ಕುಳಿತುಕೊಳ್ಳಬಾರದು ಎನ್ನುವುದು ಇದಕ್ಕೆ ಕಾರಣ. ಆದರೆ ಈ ರೀತಿ ಬಲೆ ಹಾಕಿದರೆ ಅದು ಮನೆಯ ಅಂದವನ್ನೂ ಕೆಡಿಸುವುದು ಇದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸಮನೆ ಕಟ್ಟಿ, ಅದಕ್ಕೆ ಬೇಕಾಗುವ ರೀತಿಯಲ್ಲಿ ಡಿಸೈನ್​ ಮಾಡಿಸಿ, ಬಳಿಕ ಬಲೆ ಹಾಕಿದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು ಇದೆ.

ಎಲ್ಲಾ ಪ್ಲ್ಯಾನ್​ ಫ್ಲಾಪ್​

ತೋಟಗಾರಿಕೆ ತಜ್ಞರಾದ ಅನು ಮತ್ತು ವರುಣ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವುಗಳನ್ನು ಓಡಿಸಲು ಅವರು ಸರಳ ವಿಧಾನವನ್ನು ವಿವರಿಸುತ್ತಾರೆ. ಅನು ಮತ್ತು ವರುಣ್ ತಮ್ಮ ಬಾಲ್ಕನಿಯಿಂದ ಪಾರಿವಾಳಗಳನ್ನು ದೂರವಿಡಲು ಹಲವಾರು ವಿಧಾನಗಳನ್ನು ಪ್ರಯತ್ನಿಸಿದ್ದಾರೆಂದು ಹೇಳಿದ್ದಾರೆ. ಆರಂಭದಲ್ಲಿ ತಮ್ಮ ಬಾಲ್ಕನಿಯಲ್ಲಿ ಕಪ್ಪು ಪಾಲಿಥಿನ್ ಅನ್ನು ನೇತುಹಾಕಲು ಪ್ರಯತ್ನಿಸಿದ್ದೆವು. ಕಪ್ಪು ಪಾಲಿಥಿನ್ ಪಾರಿವಾಳಗಳನ್ನು ಹೆದರಿಸುತ್ತದೆ ಮತ್ತು ಅವು ಅಲ್ಲಿಗೆ ಬರುವುದನ್ನು ನಿಲ್ಲಿಸುತ್ತವೆ ಎಂದು ಭಾವಿಸಿದ್ದೆವು. ಆದರೆ ಅದು ಕೆಲಸ ಮಾಡಲಿಲ್ಲ ಎಂದಿದ್ದಾರೆ. ಇದರ ನಂತರ, ಅವರು ತಮ್ಮ ಬಾಲ್ಕನಿಯಲ್ಲಿ ವಿಂಡ್ ಚೈಮ್ ಅನ್ನು ನೇತುಹಾಕಲು ಪ್ರಯತ್ನಿಸಿದರು. ಆದರೆ ಗಾಳಿಯ ಗಂಟೆಯ ಶಬ್ದ ಕೂಡ ಪಾರಿವಾಳಗಳು ಬರುವುದನ್ನು ನಿಲ್ಲಿಸಲಿಲ್ಲ. ಜನರ ಸಲಹೆಯ ಮೇರೆಗೆ, ಪಾರಿವಾಳಗಳನ್ನು ದೂರವಿಡಲು ಅವರು ತಮ್ಮ ಬಾಲ್ಕನಿಯಲ್ಲಿ ಬೆಳ್ಳುಳ್ಳಿ ನೀರನ್ನು ಸಿಂಪಡಿಸಿದರು. ಆದರೆ ಈ ವಿಧಾನವು ಕೆಲಸ ಮಾಡಲಿಲ್ಲ. ಬೆಳ್ಳುಳ್ಳಿ ಸಿಂಪಡಿಸಿದ ಸ್ವಲ್ಪ ಸಮಯದ ನಂತರ, ಪಾರಿವಾಳಗಳು ಮತ್ತೆ ಅವರ ಬಾಲ್ಕನಿಗೆ ಬರಲು ಪ್ರಾರಂಭಿಸಿದವು. ಯಾರೋ ಹೇಳಿದ್ರು ಎಂದು ಟೇಪ್​ನಲ್ಲಿ ಗಾಯತ್ರಿ ಮಂತ್ರವನ್ನೂ ಹಾಕಿಟ್ಟರಂತೆ. ಅದು ಕೂಡ ವರ್ಕ್​ ಆಗಲಿಲ್ಲ.

ಕೊನೆಯ ವಿಧಾನ ಸಕ್ಸಸ್​

ಇದೆಲ್ಲವನ್ನೂ ಪ್ರಯತ್ನಿಸಿದ ನಂತರ, ಅವರು ಅಂತಿಮವಾಗಿ ಮನೆಯಲ್ಲಿ ಬಿದ್ದಿದ್ದ ಹಳೆಯ ಸಿ.ಡಿಗಳನ್ನು (CD) ಬಳಸಿದರು. ತೋಟಗಾರಿಕೆ ತಜ್ಞರು ಹಗ್ಗದ ಸಹಾಯದಿಂದ ತಮ್ಮ ಬಾಲ್ಕನಿಯಲ್ಲಿ ವಿವಿಧ ಸ್ಥಳಗಳಲ್ಲಿ ಹಳೆಯ ಸಿ.ಡಿಗಳನ್ನು ನೇತುಹಾಕಿದರು ಎಂದು ಹೇಳುತ್ತಾರೆ. ಈ ವಿಧಾನವು ಅದ್ಭುತ ಫಲಿತಾಂಶಗಳನ್ನು ತೋರಿಸಿದೆ. ಸಿಡಿಗಳ ಪ್ರತಿಫಲನದಿಂದಾಗಿ ಪಾರಿವಾಳಗಳು ಅವರ ಬಾಲ್ಕನಿಗೆ ಬರುವುದನ್ನು ನಿಲ್ಲಿಸಿದವು. ವಾಸ್ತವವಾಗಿ, ಸಿ.ಡಿಗಳ ಮೇಲೆ ಬೆಳಕು ಬಿದ್ದಾಗ, ಅವು ಹೊಳೆಯಲು ಪ್ರಾರಂಭಿಸುತ್ತವೆ. ಈ ಹೊಳಪು ಪಾರಿವಾಳಗಳನ್ನು ದೂರವಿಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸರಳ ವಿಧಾನವನ್ನು ಪ್ರಯತ್ನಿಸಬಹುದು. ನೀವು ಹಗ್ಗವನ್ನು ಬಳಸಿ ನಿಮ್ಮ ಬಾಲ್ಕನಿಯಲ್ಲಿ ವಿವಿಧ ಸ್ಥಳಗಳಲ್ಲಿ ಸಿಡಿಗಳನ್ನು ನೇತುಹಾಕಬಹುದು ಅಥವಾ ನೀವು ಅವುಗಳನ್ನು ಡಬಲ್ ಟೇಪ್ ಬಳಸಿ ಗೋಡೆಗಳಿಗೆ ಅಂಟಿಸಬಹುದು. ಈ ಸರಳ ವಿಧಾನವು ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಪಾರಿವಾಳಗಳು ನಿಮ್ಮ ಬಾಲ್ಕನಿಗೆ ಬರುವುದನ್ನು ನಿಲ್ಲಿಸಬಹುದು. ಇದು ನಿಮ್ಮ ಸಸ್ಯಗಳನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸುತ್ತದೆ.