ಇನ್ನೊಂದು ಸಂತೆಗೆ ಹೊರಟ ಸಜ್ಜನ, ‘ಸಂವಾದ’ ಮಿತ್ರಕೂಟದ ರೂವಾರಿ ಶ್ರೀನಿವಾಸ ವೈದ್ಯ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಶ್ರೀನಿವಾಸ್ ವೈದ್ಯ ಅವರು ಬೆಂಗಳೂರಿನಲ್ಲಿ ಇತ್ತೀಚಿಗೆ ನಿಧನರಾದರು. ಅವರ ಕುರಿತಾದ ಪುಟ್ಟ ಲೇಖನವೊಂದು ಇಲ್ಲಿದೆ.
ಜಿ. ವಿ. ಅರುಣ
ಶ್ರೀನಿವಾಸ ವೈದ್ಯರು ಜಯನಗರದಲ್ಲಿ ವಾಸಕ್ಕೆ ಬಂದಾಗ ಅವರು ಮಾಡಿದ ಮೊದಲ ಕೆಲಸವೆಂದರೆ ತಮ್ಮ ಸ್ನೇಹ ವಲಯವನ್ನು ಬೆಳೆಸಿಕೊಳ್ಳುವುದು. ಧಾರವಾಡದಲ್ಲಿ ಓದುತ್ತಿರುವಾಗ ಸ್ನೇಹಿತರಾಗಿದ್ದ ಡಾ.ದೇಶಪಾಂಡೆ ಅವರು ಹತ್ತಿರದಲ್ಲೇ ವಾಸಿಸುತ್ತಿದ್ದರು. ಇವರು ಖ್ಯಾತ ಆಂಗ್ಲ ಲೇಖಕಿ ಶಶಿ ದೇಶಪಾಂಡೆ ಅವರ ಪತಿ. ಅನಂತರ ಪರಿಚಿತರ ಮೂಲಕ ಜಿ. ವೆಂಕಟಸುಬ್ಬಯ್ಯನವರನ್ನು ಸಂಪರ್ಕಿಸಿದರು. ಪ್ರತಿದಿನ ಬೆಳಗ್ಗೆ ಜಿವಿಯವರೊಡನೆ ವಾಯುವಿಹಾರಕ್ಕೆ ಬರುತ್ತಿದ್ದ ನಿವೃತ್ತ ಮುಖ್ಯಎಂಜಿನಿಯರ್ ಎ. ವಿ. ಶಂಕರರಾವ್, ಲೋಹತಂತ್ರಜ್ಞ ನಾಗೇಶರಾವ್, ಸುಚಿತ್ರಾ ಫಿಲಂ ಸೊಸೈಟಿಯ ಶ್ರೀ ನರಹರಿರಾವ್, ಕೈಗಾರಿಕೋದ್ಯಮಿ ಡಾ.ಸುಂದರಮೂರ್ತಿ, ಬಾಟನಿ ಪ್ರಾಧ್ಯಾಪಕ ಪ್ರೊ. ಎಲ್ವಿಗಿ, ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅನಂತರಾವ್ (ಈಗ ಆಸ್ಪ್ರೇಲಿಯಾದಲ್ಲಿದ್ದಾರೆ). ಅವರುಗಳೊಂದಿಗೆ ವೈದ್ಯರು ಹಾಗು ಡಾ.ದೇಶಪಾಂಡೆ ಅವರು ಸೇರಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ.
ಬಹಳ ಬೇಗ ಸ್ನೇಹವನ್ನು ಸಂಪಾದಿಸುವ ಗುಣವುಳ್ಳ ವೈದ್ಯ ಮತ್ತು ಜಿವಿಯವರು ಉಳಿದವರನ್ನೆಲ್ಲ ಬಹಳಬೇಗ ಒಟ್ಟಿಗೆ ಬೆಸೆದುಬಿಟ್ಟರು. ಅವರೆಲ್ಲರೂ ತಮ್ಮತಮ್ಮ ಕ್ಷೇತ್ರಗಳಲ್ಲಿ ಬಹುಶ್ರುತರು. ಹಾಗಾಗಿ ಬೆಳಗಿನ ಉದ್ಯಾನವನದ ಮಾತುಕತೆಗಳು ಉತ್ಕೃಷ್ಟಮಟ್ಟದ್ದಾಗಿರುತ್ತಿದ್ದವು. ಏರುದನಿಯಲ್ಲಿ ನಡೆಯುತ್ತಿದ್ದ ಇವರ ಸಂವಾದ, ವಾದ, ವಿವಾದಗಳನ್ನು ಕೇಳಲೆಂದೇ ಅನೇಕರು ಹತ್ತಿರದಲ್ಲಿ ನಿಂತಿರುತ್ತಿದ್ದರು. ವಾಯುವಿಹಾರದಿಂದ ಹಿಂದಿರುಗುವಾಗ ಮಿತ್ರಕೂಟದ ಪ್ರಭಾವದಿಂದ ಎಲ್ಲರ ಮುಖದಲ್ಲೂ ಉಲ್ಲಾಸ, ಉತ್ಸಹಗಳು ಹೊರಹೊಮ್ಮುತ್ತಿದ್ದವು.
ಶ್ರೀನಿವಾಸ ವೈದ್ಯರು ಈ ವೇದಿಕೆಯ ಸದಸ್ಯರಾದ ಮೇಲೆ ಪ್ರತಿತಿಂಗಳು ಒಂದು ದಿನ ಹೊಟೆಲ್ಲಿಗೆ ತಿಂಡಿಗೆ ಹೋಗುವುದು ಪ್ರಾರಂಭವಾಯಿತು. ಆಗ ಅವರೊಡನೆ ಶಶಿ ದೇಶಪಾಂಡೆ, ಸುಹಾಸಿನಿ ವೈದ್ಯರು ಸೇರಿಕೊಳ್ಳುತ್ತಿದ್ದರು. ಈ ಮಿತ್ರಕೂಟದಲ್ಲಿ ನಡೆಯುತ್ತಿದ್ದ ಸಂವಾದಕ್ಕೆ ಒಂದು ಅಕಾಡೆಮಿಕ್ ರೂಪ ಕೊಡಲು ವೈದ್ಯರ ಯೋಜನೆಯಂತೆ ‘ಸಂವಾದ ಟ್ರಸ್ಟ್’ಅನ್ನು ಪ್ರಾರಂಭಿಸಲಾಯಿತು. ಪ್ರತಿ ತಿಂಗಳು ವೈವಿಧ್ಯಮಯವಾದ ಉತ್ಕೃಷ್ಟಭಾಷಣದ ಕಾರ್ಯಕ್ರಮಗಳು ನಡೆಯತೊಡಗಿದವು. ಯಾವ ವಿಷಯದ ಮೇಲೆ, ಯಾರಿಂದ ಭಾಷಣ ಮಾಡಿಸಬೇಕು ಎಂಬುದರ ಚರ್ಚೆಯೇ ರೋಚಕವಾಗಿರುತ್ತಿದ್ದವು. ಅಲ್ಲಿ ಕೇಳಬರುತ್ತಿದ್ದ ಮುಖ್ಯಧ್ವನಿಗಳು ಎಂದರೆ ವೈದ್ಯರದು ಹಾಗೂ ಜಿವಿಯವರದು.
ವೈದ್ಯರಿಗೆ ಹಳೆಯ ಹಿಂದಿ ಚಿತ್ರಗೀತೆಗಳ ಮೇಲೆ ಅಪಾರ ಒಲವು. ಅವುಗಳ ಬಗ್ಗೆ ಅವರು ಮಿತ್ರಕೂಟದಲ್ಲಿ ತಿಳಿಸುತ್ತಿದ್ದರು. ಅದೇ ರೀತಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಅವರಿಗೆ ಅಕ್ಕರೆ. ಹಿಂದೂಸ್ಥಾನಿ ಸಂಗೀತದ ಗಂಧಗಾಳಿಯನ್ನು ತಿಳಿಯದ ಜಿವಿಯವರಿಗೆ ಕೊನೆಗೂ ವೈದ್ಯರು ಅದನ್ನು ಇಷ್ಟಪಡುವಂತೆ ಮಾಡುವುದರಲ್ಲಿ ಯಶಸ್ವಿಯಾಗಿಬಿಟ್ಟರು. ಇದರ ಪರಿಣಾಮವಾಗಿ ಸಂವಾದ ಟ್ರಸ್ಟಿನ ಕಾರ್ಯಕ್ರಮದಲ್ಲಿ ಯುಗಾದಿಗೆ ಕರ್ನಾಟಕ ಸಂಗೀತ ಹಾಗೂ ದೀಪಾವಳಿಗೆ ಹಿಂದೂಸ್ಥಾನಿ ಸಂಗೀತದ ಕಾರ್ಯಕ್ರಮಗಳು ಸೇರಿಕೊಂಡುಬಿಟ್ಟವು.
ಜಾನಪದ ವೇದಗಳಿಗಿಂತ ಪುರಾತನ: ಡಾ. ರಾಜೇಶ್ವರಿದೇವಿ
ಆಗಾಗ ವೈದ್ಯರು ಜಿವಿಯವರೊಡನೆ ಹಲವು ವಿಚಾರಗಳನ್ನು ಗಹನವಾಗಿ ಚರ್ಚಿಸುತ್ತಿದ್ದರು. ಅವರು ತಮ್ಮ ‘ಶ್ರಾದ್ಧ’ ಲೇಖನವನ್ನು ಮನೆಯಲ್ಲಿ ಓದಿದಾಗ, ಕುಳಿತಿದ್ದ ನಮ್ಮೆಲ್ಲರ ಕಣ್ಣಲ್ಲೂ ನೀರು; ಗದ್ಗದಿತರಾದ ಜಿವಿಯವರು ವೈದ್ಯರನ್ನು ತಬ್ಬಿಕೊಂಡುಬಿಟ್ಟಿದ್ದರು.
ನನಗೆ ವೈದ್ಯರು ಕೊಟ್ಟಿದ್ದ ಎರಡು ಕೆಲಸಗಳು ಚೆನ್ನಾಗಿ ನೆನಪಿವೆ. ಒಂದು ಉದ್ಯಾನದಲ್ಲಿ ವೈದ್ಯ - ಜಿವಿ ಅವರ ಹಲವು ಚಿತ್ರಗಳನ್ನು ತೆಗೆದುಕೊಡುವುದು. ಮತ್ತೊಂದು ಅವರ ಮಿತ್ರಕೂಟದ ಮಾತುಕತೆಗಳನ್ನು ಉದ್ಯಾನದಲ್ಲೇ ಧ್ವನಿಮುದ್ರಿಸಿಕೊಳ್ಳುವುದು. ಧ್ವನಿಮುದ್ರಣವನ್ನು ಪ್ರಾರಂಭಿಸಿದಾಗ ಎಲ್ಲರು ಎಚ್ಚರಿಕೆಯಿಂದ ಮಾತನಾಡಲು ತೊಡಗಿದ್ದರಿಂದ ಅಂದೇ ಅದು ಕೊನೆಯಾಯಿತು!
ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ, ವಿಶಿಷ್ಟಲೇಖಕ ಶ್ರೀನಿವಾಸ ವೈದ್ಯರ ಹಾಗೂ ಜಿವಿ ಅವರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿರುವ ಹೆಮ್ಮೆ, ಧನ್ಯತೆ ನನ್ನದಾಗಿದೆ. ಮಿತ್ರಕೂಟದ ಬಹಳಷ್ಟುಸದಸ್ಯರು ಈಗ ಇಲ್ಲಿಲ್ಲ. ಅವರೆಲ್ಲರೂ ಇರುವಲ್ಲಿಯೇ ಹೊಸ ಮಿತ್ರಕೂಟವು ಆರಂಭವಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಈಗ ಅಲ್ಲಿಗೆ ಶ್ರೀನಿವಾಸ ವೈದ್ಯರು ಹೋಗಿದ್ದಾರೆ.