Asianet Suvarna News Asianet Suvarna News

ಹೊಸತನಕ್ಕೊಂದು ಹೊಸ ಪದ, ಕಪ್ಪಣ್ಣ

ಕಪ್ಪಣ್ಣ ಅಂದರೆ ಬೆಂಗಳೂರು ಸಾಂಸ್ಕೃತಿಕ ಜಗತ್ತು ಪ್ರೀತಿಯಿಂದ ಆದರಿಸುವ ಹೆಸರು. ಕನ್ನಡ ಸುಗಮ ಸಂಗೀತಕ್ಕೆ ತಾರಾಮೌಲ್ಯ ತಂದುಕೊಟ್ಟ‘ಕನ್ನಡವೇ ಸತ್ಯ’ ಶೀರ್ಷಿಕೆ ಮತ್ತು ಐಡಿಯಾ ಕಪ್ಪಣ್ಣ ಅವರದು ಅನ್ನೋದು ಹಲವರಿಗೆ ತಿಳಿದಿಲ್ಲ. ರಂಗ ಸಂಘಟಕನಾಗಿ, ಸಾಂಸ್ಕೃತಿಕ ರಂಗದ ರಾಯಭಾರಿಯಾಗಿ ದಶಕಗಳಿಂದ ದಣಿವರಿಯದೇ ದುಡಿಯುತ್ತಿರುವ ಕಪ್ಪಣ್ಣ ಅವರಿಗೀಗ 75.

Kappanna As a stage organizer, ambassador of the cultural stage Vin
Author
First Published Feb 26, 2023, 2:20 PM IST

- ಬಿ.ಆರ್‌.ಲಕ್ಷ್ಮಣರಾವ್‌

ಕಪ್ಪಣ್ಣ ಎಂದರೆ ಹೊಸತನ. ಯಾವುದೇ ನಾಟಕವಿರಲಿ, ಉತ್ಸವವಿರಲಿ, ಸಾಂಸ್ಕೃತಿಕ ಕಾರ್ಯಕ್ರಮವಿರಲಿ, ಅಭಿನಂದನಾ ಸಮಾರಂಭವಿರಲಿ, ಅದರ ಹೆಸರಿನಿಂದ ಮೊದಲುಗೊಂಡು, ಅದರ ಆಯೋಜನೆ ಹಾಗೂ ರಂಗಸಜ್ಜಿಕೆಯವರೆಗೆ ಎಲ್ಲದರಲ್ಲೂ ಅರ್ಥಪೂರ್ಣವಾದ, ಅತ್ಯಂತ ಪ್ರಸ್ತುತವಾದ ಹೊಸತನ ಬೇಕೆಂದರೆ, ಅದಕ್ಕೆ ಎಲ್ಲರಿಗೂ ಕಪ್ಪಣ್ಣಅವರೇ ಬೇಕು. ಹೀಗಾಗಿ ನವನವೀನತೆಗೆ ಪರ್ಯಾಯ ಪದ ನಮ್ಮ ಕಪ್ಪಣ್ಣನವರು ಎಂದರೆ ತಪ್ಪಲ್ಲ.

ನನಗೆ ಕಪ್ಪಣ್ಣನವರ ನಿಕಟ ಪರಿಚಯವಾದದ್ದು ಸುಗಮ ಸಂಗೀತದ ದಿಗ್ಗಜರಲ್ಲೊಬ್ಬರಾದ ಸಿ.ಅಶ್ವತ್ಥ್‌ ಅವರ ಮೂಲಕ. ಅಶ್ವತ್ಥ್‌ ಅವರ ಬಹುತೇಕ ಎಲ್ಲ ಕಾರ್ಯಕ್ರಮಗಳ ಆಯೋಜನೆಗೂ ಅವರ ಅತ್ಯಾಪ್ತ ಗೆಳೆಯರಲ್ಲಿ ಒಬ್ಬರಾಗಿದ್ದ ಕಪ್ಪಣ್ಣನವರು ಇದ್ದೇ ಇರುತ್ತಿದ್ದರು. ಜೊತೆಗೆ ಅವರ ಗಾಯನದ ಕಾರ್ಯಕ್ರಮಗಳಲ್ಲಿ ಕೇಳುಗರಾಗಿ ಕಪ್ಪಣ್ಣನವರ ಹಾಜರಿ ಕಡ್ಡಾಯವಾಗಿತ್ತು. ಹೀಗಾಗಿ ನಾವು ಆಗಿಂದಾಗ್ಗೆ ಭೇಟಿ ಆಗುತ್ತಲೇ ಇದ್ದೆವು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಹೀಗೆ ಭೇಟಿಯಾದ ಸಂದರ್ಭಗಳಲ್ಲಿ ಒಂದು ಸದಾ ಸ್ಮರಣೀಯವಾಗಿದೆ. 2005ನೇ ಇಸವಿ. ಬೆಂಗಳೂರಿನ ಅರಮನೆ ಮೈದಾನದಲ್ಲಿ ತಮ್ಮ ಕನ್ನಡ ಭಾವಗೀತೆಗಳ ಗಾಯನದ ಕಾರ್ಯಕ್ರಮವೊಂದನ್ನು ನಡೆಸಿಕೊಡಬೇಕೆಂಬ ಹಂಬಲ ಅಶ್ವತ್ಥ್‌ ಅವರಲ್ಲಿ ಮೂಡಿತು. ಆವರೆಗೆ ಅಲ್ಲಿ ಕೇವಲ ವಿದೇಶಿ ಗಾಯಕರ ಹಾಗೂ ಜನಪ್ರಿಯ ಹಿಂದಿ ಚಿತ್ರಗೀತೆಗಳ ಹಿನ್ನೆಲೆ ಗಾಯಕರ ಸಂಗೀತ ಸಂಜೆಗಳಷ್ಟೇ ನಡೆದಿದ್ದವು. ಸಾವಿರಾರು ಕೇಳುಗರು ಅಲ್ಲಿ ಜಮಾಯಿಸುತ್ತಿದ್ದರು.

‘ಅಲ್ಲಿ ನಮ್ಮ ಭಾವಗೀತೆಗಳು ಮೊಳಗುವುದು ಯಾವಾಗ ರೀ?’ ಎಂಬುವುದು ಅಶ್ವತ್ಥರ ಹಳಹಳಿಕೆಯಾಗಿತ್ತು. ಲಕ್ಷಾಂತರ ರೂಪಾಯಿಗಳ ಬಂಡವಾಳವನ್ನು ಬಯಸುವ ಅಂಥದೊಂದು ಕಾರ್ಯಕ್ರಮವನ್ನು ಆಯೋಜಿಸಲು ಅಶ್ವತ್ಥ್‌ ಅವರ ಅಭಿಮಾನಿಗಳಾದ ಮೂವರು ಉದ್ಯಮಿ ಮಿತ್ರರು ಮುಂದೆ ಬಂದರು. ಅವರು ಎನ್‌.ಪ್ರಭಾಕರ ರಾವ್‌ (ಪ್ರಭಣ್ಣ), ಬಿ.ಜಿ.ಮಂಜುನಾಥ್‌ (ಮಂಜಣ್ಣ) ಮತ್ತು ಕೆ.ಆರ್‌. ರಂಗನಾಥ್‌ (ರಂಗಣ್ಣ). ಸದರಿ ಕಾರ್ಯಕ್ರಮದ ರೂಪುರೇಷೆಗಳನ್ನು ಕುರಿತು ಚರ್ಚಿಸಲು ಒಂದು ಸಂಜೆ ನನ್ನ ಪ್ರಸಿದ್ಧ ಛಾಯಾಚಿತ್ರಗ್ರಾಹಕ ತಮ್ಮನಾದ ಶಂಕರ್‌ ಚಿಂತಾಮಣಿಯ ಮನೆಯಲ್ಲಿ ಸಭೆ ಕರೆಯಲಾಯಿತು.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಅದರಲ್ಲಿ ಅಶ್ವತ್ಥ್‌ ಅವರ ಜೊತೆಗೆ ಈ ‘ಅಣ್ಣ ತ್ರಯರು’, ಕವಿಮಿತ್ರ ಎಚ್‌.ಎಸ್‌ ವೆಂಕಟೇಶಮೂರ್ತಿ ಮತ್ತು ನಾನು ಇದ್ದೆವು. ಕೊಂಚ ತಡವಾಗಿ ಕಪ್ಪಣ್ಣನವರೂ ಬಂದು ಸೇರಿಕೊಂಡರು. ಕಾರ್ಯಕ್ರಮಕ್ಕೆ ಏನು ಹೆಸರಿಡಬೇಕೆಂದು ಚರ್ಚೆಯಾಯಿತು. ‘ಸಿ.ಅಶ್ವತ್ಥ್‌ ಭಾವಗೀತೆಗಳ ಸಂಜೆ’ ಎಂಬ ಹೆಸರು ಪ್ರಸ್ತಾಪಗೊಂಡಿತು. ಆಗ ಕಪ್ಪಣ್ಣನವರು ಹೀಗೆಂದರು, ‘ಹಾಗೆ ಕಾರ್ಯಕ್ರಮವನ್ನು ಸೀಮಿತಗೊಳಿಸುವುದು ಬೇಡ. ಕನ್ನಡವೇ ಸತ್ಯ ಎಂಬ ಹೆಸರಿಡೋಣ. ಆಗ ಒಂದು ವಿಶಾಲವಾದ ಭಿತ್ತಿ ಕಾರ್ಯಕ್ರಮಕ್ಕೆ ಒದಗುತ್ತೆ. ಜೊತೆಗೆ ರಾಷ್ಟ್ರಕವಿ ಕುವೆಂಪು ಅವರನ್ನು ನೆನಪಿಸಿಕೊಂಡಂತೆಯೂ ಆಗುತ್ತೆ’. ಆ ಸಲಹೆಯು ಕರತಾಡನೆಯೊಂದಿಗೆ ಎಲ್ಲರ ಒಪ್ಪಿಗೆ ಪಡೆಯಿತು. ಕಾರ್ಯಕ್ರಮದ ಆಯೋಜನೆ ಮತ್ತು ರಂಗಸಜ್ಜಿಕೆಯ ಜವಾಬ್ದಾರಿ ಎಂದಿನಂತೆ ಕಪ್ಪಣ್ಣನವರ ಹೆಗಲಿಗೇರಿತು.

ಮುಂದೆ ನಡೆದದ್ದು ಇತಿಹಾಸ. 2005ರ ಏಪ್ರಿಲ್‌ 3ರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮ ಕನ್ನಡ ಸುಗಮ ಸಂಗೀತದ ಮಟ್ಟಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಒಂದು ಅಭೂತಪೂರ್ವ ಕಾರ್ಯಕ್ರಮವಾಗಿ ಯಶಸ್ವಿಯಾಯಿತು. ಸುಮಾರು ಒಂದು ಲಕ್ಷ ಕೇಳುಗರು ಪ್ರವಾಹದೋಪಾದಿಯಲ್ಲಿ ಅರಮನೆ ಮೈದಾನಕ್ಕೆ ಹರಿದುಬಂದು ಅದು ಅಕ್ಷರಶಃ ತುಂಬಿ ತುಳುಕಿತು. ಕನ್ನಡ ಸುಗಮ ಸಂಗೀತಕ್ಕೆ ಒಂದು ತಾರಮೌಲ್ಯ ಪ್ರಾಪ್ತವಾಯಿತು. ಆ ಐತಿಹಾಸಿಕ ಕಾರ್ಯಕ್ರಮದ ಆ ಮಟ್ಟಿನ ಅನಿರೀಕ್ಷಿತ ಯಶಸ್ಸಿನಲ್ಲಿ ಕಪ್ಪಣ್ಣನವರ ಪ್ರಮುಖ ಪಾತ್ರವೂ ಸಹ ಮರೆಯಲಾಗದ್ದು.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ವೈ.ಕೆ.ಮುದ್ದುಕೃಷ್ಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಅವರು ಹಂಪಿ, ಬನವಾಸಿ, ಬಾದಾಮಿ ಮುಂತಾದ ಐತಿಹಾಸಿಕ ತಾಣಗಳಲ್ಲಿ ಏರ್ಪಡಿಸಿದ್ದ ಉತ್ಸವಗಳ ಕವಿಗೋಷ್ಠಿಗಳಲ್ಲಿ ನಾನು ಭಾಗವಹಿಸಿದ್ದೆ. ಆಗ ಅಲ್ಲಿನ ರಂಗಸಜ್ಜಿಕೆಗಳು ಹಾಗೂ ದೀಪಾಲಂಕಾರಗಳಲ್ಲಿ ಕಪ್ಪಣ್ಣನವರ ಕಲಾತ್ಮಕತೆ ಹಾಗೂ ನವೀನ ಕಲ್ಪನೆಗಳಿಗೆ ನಾನು ನಿಜಕ್ಕೂ ಮಾರುಹೋಗಿದ್ದೆ.

ನನ್ನ 75ನೇ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ತು ವೈ.ಕೆ ಮುದ್ದುಕೃಷ್ಣ ಅವರ ನೇತೃತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದರ ರಂಗಸಜ್ಜಿಕೆ ಹಾಗೂ ಆಯೋಜನೆಯೂ ಕಪ್ಪಣ್ಣನವರದ್ದೇ ಆಗಿತ್ತು. ಆ ದೃಶ್ಯವೈಭವ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಇನ್ನು ಕರ್ನಾಟಕದ ಜನಪದ ಕಲಾವಿದರ ಪಾಲಿಗಂತೂ ಕಪ್ಪಣ್ಣನವರು ಸದಾ ‘ಇವ ನಮ್ಮವ’ನೇ ಆಗಿದ್ದಾರೆ. ಅವರು ದೇಶ, ವಿದೇಶಗಳಲ್ಲಿ ಆಯೋಜಿಸಿರುವ ಜನಪದ ಕಲಾಮೇಳಗಳು ಅಸಂಖ್ಯಾತ.

ಕಪ್ಪಣ್ಣನವರು ನನ್ನ ಆತ್ಮೀಯ ಮಿತ್ರರಲ್ಲಿ ಒಬ್ಬರಾಗಿರುವುದು ನನ್ನ ಸುಯೋಗ. ಅವರು ಇದ್ದಲ್ಲಿ ಹಾಡು, ಕುಣಿತ, ನಗೆ, ಕೇಕೆ ಸಾಂಕ್ರಾಮಿಕ. ಅವರು ತಮ್ಮ ಮನೆಯನ್ನೇ ‘ಕಪ್ಪಣ್ಣ ಅಂಗಳ’ ಎಂಬ ಹೆಸರಿನಲ್ಲಿ ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ್ದಾರೆ. ಅಲ್ಲಿ ಒಂದಲ್ಲ ಒಂದು ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅವರ ಮನೆಯಲ್ಲಿ ಅವರ ಶ್ರೀಮತಿ ಲಲಿತಮ್ಮನವರ ಕೈರುಚಿಯನ್ನು ನಾನು ಹಲವಾರು ಬಾರಿ ಸವಿದಿದ್ದೇನೆ. ಆ ದಂಪತಿಗಳ ಸರಳ ಸಜ್ಜನಿಕೆ ಹಾಗೂ ಆದರಾತಿಥ್ಯಗಳ ಫಲಾನುಭವಿಯಾಗಿದ್ದೇನೆ.

ಕಪ್ಪಣ್ಣನವರಿಗೆ ಇದೀಗ 75 ತುಂಬಲಿದೆ. ಆದರೆ ಅವರ ಜೀವನೋತ್ಸಾಹವಾಗಲೀ, ಕ್ರಿಯಾಶೀಲತೆಯಾಗಲೀ, ಕಲ್ಪನಾ ವಿಲಾಸವಾಗಲೀ ಕಿಂಚಿತ್ತೂ ಕುಂದಿದಂತೆ ನನಗೆ ತೋರಿಲ್ಲ. ಅವರು ಹೀಗೆಯೇ ತುಂಬು ಆರೋಗ್ಯದಿಂದ ಇನ್ನೂ ತುಂಬಾ ಕಾಲ ನಮ್ಮೊಂದಿಗಿರಲಿ, ಕರ್ನಾಟಕದ ಸಾಂಸ್ಕೃತಿಕ ಲೋಕವನ್ನು ಜಗತ್ತಿನಾದ್ಯಂತ ಶ್ರೀಮಂತಗೊಳಿಸುತ್ತಿರಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

Follow Us:
Download App:
  • android
  • ios