ಮದ್ವೆಯಾಗಿ ಸಾಧನೆ ಮಾಡೋಕಾಗಲ್ಲ ಅಂದೋರು ಯಾರು, ಹೆಂಡ್ತಿ-ಮಕ್ಕಳಿದ್ದರೂ ನೀಟ್ ಪಾಸಾದ ಯುವಕ!
ಜೀವನದಲ್ಲಿ ಎದುರಾಗೋ ಸಮಸ್ಯೆಗಳು ಒಂದೆರಡಲ್ಲ. ಆದ್ರೆ ಸಾಧಿಸುವ ಮನಸ್ಸೊಂದಿದ್ರೆ ಏನನ್ನಾದ್ರೂ ಸಾಧಿಸಬಹುದು ಅನ್ನೋದನ್ನು ಇಲ್ಲೊಬ್ಬ ವ್ಯಕ್ತಿ ಸಾಬೀತುಪಡಿಸಿದ್ದಾರೆ. 11 ವಯಸ್ಸಿನಲ್ಲೇ ಬಲವಂತದ ಮದುವೆಯಿಂದ ಸಂಸಾರದ ಜಂಜಾಟದಲ್ಲಿ ಸಿಲುಕಿದ್ರೂ, ಎಲ್ಲವನ್ನೂ ನಿಭಾಯಿಸಿಕೊಂಡು ನೀಟ್ ಎಕ್ಸಾಂ ಪಾಸ್ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (NEET) ಭಾರತದಲ್ಲಿ ನಡೆಯುವ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಅದೆಷ್ಟೋ ಮಂದಿಯ ಪಾಲಿಗೆ ಈ ಎಕ್ಸಾಂ ಪಾಸ್ ಮಾಡಿ ಒಳ್ಳೆಯ ಜಾಬ್ ಗಿಟ್ಟಿಸಿಕೊಳ್ಳುವುದು ಕನಸಾಗಿರುತ್ತದೆ. ಆದರೆ ರಾಮ್‌ಲಾಲ್ ಎಂಬ ವ್ಯಕ್ತಿ ಚಿಕ್ಕ ವಯಸ್ಸಿನಲ್ಲಿ ಎದುರಿಸಿದ ಅನೇಕ ತೊಂದರೆಗಳು ಮತ್ತು ಕಷ್ಟಗಳನ್ನು ಎದುರಿಸಿದ ನಂತರವೂ NEET ಬರೆದು, ತೇರ್ಗಡೆಗೊಳಿಸಿದ ನಂತರ ವೈದ್ಯರಾಗಲು ಸಿದ್ಧರಾಗಿದ್ದಾರೆ. ಆದರೆ ವೈದ್ಯರಾಗಲು ಅವರು ಸಾಗಿ ಬಂದ ದಾರಿ ಅಷ್ಟು ಸುಲಭವಾಗಿಲ್ಲ.
ರಾಜಸ್ಥಾನದ ರಾಮ್‌ಲಾಲ್ ಎಂಬ ಯುವಕ NEET 2022 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ತಮ್ಮ 5 ನೇ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ರಾಮಲಾಲ್ ತಮ್ಮ ಕುಟುಂಬ (Family)ದಲ್ಲಿ ಮೊದಲ ವೈದ್ಯ ಎಂದು ಗುರುತಿಸಿಕೊಂಡಿದ್ದಾರೆ. ರಾಮ್‌ಲಾಲ್ ಕೇವಲ 11 ವರ್ಷ ವಯಸ್ಸಿನವರಾಗಿದ್ದಾಗ ಅಂದರೆ 6ನೇ ತರಗತಿಯಲ್ಲಿ ಓದುತ್ತಿದ್ದಾಗ ಮನೆಯಲ್ಲಿ ಬಲವಂತದ ಮದುವೆ (Marriage) ಮಾಡಲಾಯಿತು. ರಾಮ್‌ಲಾಲ್ ತನ್ನ ಪಕ್ಕದ ಹಳ್ಳಿಯ ಹುಡುಗಿಯನ್ನು ಮದುವೆಯಾಗಿದ್ದರು. ಬಲವಂತದ ಬಾಲ್ಯವಿವಾಹ ಮತ್ತು ಅವರ ಅಸ್ಥಿರ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ, ಅವರು ತಮ್ಮ ಅಧ್ಯಯನದ (Study) ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು.
72ನೇ ವಯಸ್ಸಿಗೆ ಕಾಲೇಜು ಡಿಗ್ರಿ: ಶಭಾಷ್ ಮಗನೇ ಎಂದ 99 ರ ಹರೆಯದ ಅಮ್ಮ
ಕಲಿಕೆಗೆ ಹೆಂಡತಿಯಿಂದಲೂ ಪ್ರೋತ್ಸಾಹ
ರಾಮ್‌ಲಾಲ್ ಅಧ್ಯಯನವನ್ನು ಮುಂದುವರಿಸುವ ನಿರ್ಧಾರವು ಅವರ ಕುಟುಂಬಕ್ಕೆ ಇಷ್ಟವಾಗಲಿಲ್ಲ. ಅವರ ತಂದೆ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು. ರಾಮ್‌ಲಾಲ್ ತನ್ನ ಶಾಲಾ ಶಿಕ್ಷಣವನ್ನು ಮುಂದುವರೆಸಿದಾಗ, ಅವರ ಹೆಂಡತಿ 10 ನೇ ತರಗತಿಯ ವರೆಗೆ ಮಾತ್ರ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ರಾಮಲಾಲ್‌ನ ಸಮರ್ಪಣೆಯನ್ನು ನೋಡಿದ ನಂತರ, ವೈದ್ಯನಾಗುವ ಅವನ ಉತ್ಸಾಹಕ್ಕೆ ಪ್ರೋತ್ಸಾಹ ಮಾಡಲು ನಿರ್ಧರಿಸಿದಳು.
ರಾಮ್‌ಲಾಲ್ 10ನೇ ತರಗತಿಯನ್ನು 74 ಶೇಕಡಾ ಅಂಕಗಳೊಂದಿಗೆ ಪೂರ್ಣಗೊಳಿಸಿದರು. ವಿಜ್ಞಾನವನ್ನು ಮುಖ್ಯ ಸಬ್ಚೆಕ್ಟ್ ಆಗಿ ಆರಿಸಿಕೊಂಡರು. ಇದು ವೈದ್ಯರಾಗುವ ಕಡೆಗೆ ಅವರ ಮೊದಲ ಹೆಜ್ಜೆಯಾಗಿದೆ. 2019ರಲ್ಲಿ ರಾಮ್‌ಲಾಲ್ NEET ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನವನ್ನು ಮಾಡಿದರು. ಅವರು ಒಟ್ಟು 720 ಅಂಕಗಳಲ್ಲಿ 350 ಅಂಕಗಳನ್ನು ಗಳಿಸಿದರು. ನಂತರದ ಪ್ರತಿ NEET ಪ್ರಯತ್ನದಲ್ಲಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಿದ ನಂತರ, ರಾಮಲಾಲ್ ಕೋಟಾದಲ್ಲಿ ಕೋಚಿಂಗ್‌ಗೆ ಸೇರಲು ನಿರ್ಧರಿಸಿದರು. NEET 2022 ರಲ್ಲಿ 490 ಅಂಕಗಳನ್ನು ಗಳಿಸಿದರು, ಇದು ಅವರ ಕನಸನ್ನು ನನಸಾಗಿಸಿತು. ಈ ಅಂಕದೊಂದಿಗೆ, ಅವರು ಉತ್ತಮ ವೈದ್ಯಕೀಯ ಕಾಲೇಜಿಗೆ ಸೇರಲು ಸಾಧ್ಯವಾಯಿತು.
ಎಂಜಿನಿಯರ್ ಕೆಲಸ ಬಿಟ್ಟು ಉಬರ್ ಡ್ರೈವರ್ ಆದ ಯುವತಿ, ಸ್ಫೂರ್ತಿದಾಯಕ ಕಥೆ ಇಲ್ಲಿದೆ
ರಾಮ್‌ಲಾಲ್ ಮತ್ತು ಅವರ ಪತ್ನಿ ರಾಜಸ್ಥಾನದ ಚಿತ್ತೋರ್‌ಗಢದ ಘೋಸುಂಡಾ ಪ್ರದೇಶದ ನಿವಾಸಿಗಳಾಗಿದ್ದು, ಈಗ ನೀಟ್ ಪರೀಕ್ಷೆಯನ್ನು ಸಾಧಿಸಿದ ಕಾರಣ ಖುಷಿಯಿಂದ ಇದ್ದಾರೆ. ದಂಪತಿಗೆ ಒಂದು ಮಗುವೂ ಇದು ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಜೀವನದಲ್ಲಿ ಎಂಥಾ ಕಷ್ಟಗಳು ಎದುರಾದರೂ ಸಾಧಿಸುವ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ರಾಮ್‌ಲಾಲ್ ಸಾಬೀತುಪಡಿಸಿದ್ದಾರೆ.