- Home
- Life
- Health
- ಇನ್ಮುಂದೆ ಹಾರರ್ ಸಿನಿಮಾ ಮಿಸ್ ಮಾಡ್ಕೊಳ್ಬೇಡಿ, ಭಯಹುಟ್ಟಿಸೋ ಸಿನಿಮಾ ನೋಡಿದ್ರೆ ನೀವಾಗ್ತೀರಿ ಸ್ಟ್ರಾಂಗ್
ಇನ್ಮುಂದೆ ಹಾರರ್ ಸಿನಿಮಾ ಮಿಸ್ ಮಾಡ್ಕೊಳ್ಬೇಡಿ, ಭಯಹುಟ್ಟಿಸೋ ಸಿನಿಮಾ ನೋಡಿದ್ರೆ ನೀವಾಗ್ತೀರಿ ಸ್ಟ್ರಾಂಗ್
Benefits of Watching Horror Movies : ಹಾರರ್ ಸಿನಿಮಾ ನೋಡೋಕೆ ಗಟ್ಟಿ ಗುಂಡಿಗೆ ಬೇಕು. ಆದ್ರೆ ಸಿನಿಮಾ ನೋಡ್ತಾ ನೋಡ್ತಾ ನಿಮ್ಮ ಗುಂಡಿಗೆ ಗಟ್ಟಿಕೂಡ ಆಗುತ್ತೆ. ಹಾರರ್ ಸಿನಿಮಾ ನೋಡಿದ್ರೆ ಸಾಕಷ್ಟು ಲಾಭ ಇದೆ.

ಹಾರರ್ ಸಿನಿಮಾ
ಮಧ್ಯರಾತ್ರಿ, ಮನೆಯವರೆಲ್ಲ ಮಲಗಿದ ಮೇಲೆ, ಭಯಪಡುತ್ತಲೇ ಹಾರರ್ ಸಿನಿಮಾ ನೋಡೋದ್ರಲ್ಲಿ ಒಂಥರಾ ಮಜ ಇದೆ. ಮನಸ್ಸಿನಲ್ಲಿ ಬೆಟ್ಟದಷ್ಟು ಭಯ ಇದ್ರೂ ಕೆಲವರು ಅಲ್ಲಿ ಇಲ್ಲಿ ಸಿನಿಮಾ ಓಡಿಸಿಯಾದ್ರೂ ಹಾರರ್ ಸಿನಿಮಾ ನೋಡ್ತಾರೆ. ಸಾಮಾನ್ಯವಾಗಿ ಭಯ ವ್ಯಕ್ತಿಯನ್ನು ದುರ್ಬಲಗೊಳಿಸುತ್ತೆ, ನಕಾರಾತ್ಮಕ ಪ್ರಭಾವ ಬೀರುತ್ತೆ ಎಂದು ಅಧ್ಯಯನ ಹೇಳುತ್ತದೆ. ಆದ್ರೆ ಸಿನಿಮಾ ನೋಡುವಾಗ ಜನರು ಭಯವನ್ನು ನಿಯಂತ್ರಿಸಲು ಪ್ರಯತ್ನಿಸ್ತಾರೆ. ಇದು ಜನರಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟುಮಾಡುತ್ತದೆ. ಹಾರರ್ ಸಿನಿಮಾ ನಕಾರಾತ್ಮಕ ಪ್ರಭಾವ ಬೀರುವ ಬದಲು ಸಕಾರಾತ್ಮಕ ಪ್ರಭಾವ ಬೀರುತ್ತದೆ.
ಗಟ್ಟಿಯಾಗುವ ಮನುಷ್ಯ
ಹಾರರ್ ಸಿನಿಮಾ ನೋಡೋರು ನೀವಾಗಿದ್ದರೆ ನಿಮ್ಮ ಬೆನ್ನು ತಟ್ಟಿಕೊಳ್ಬಹುದು. ಅಧ್ಯಯನದ ಪ್ರಕಾರ, ಹಾರರ್ ಸಿನಿಮಾ ನಿಮ್ಮನ್ನು ಮಾನಸಿಕವಾಗಿ ಬಲಗೊಳಿಸುತ್ತದೆ. ಹಾರರ್ ಸಿನಿಮಾ ನೋಡುವ ಜನರು ಸಾರ್ವಜನಿಕವಾಗಿ ಬೆರೆಯುವ ಸ್ವಭಾವ ಹೊಂದಿರ್ತಾರೆ. ಜನರೊಂದಿಗೆ ಮಾತನಾಡೋದಲ್ದೆ ತಮ್ಮ ಅನುಭವ ಹಂಚಿಕೊಳ್ತಾರೆ. ಕೊರೊನಾ ಸಂದರ್ಭದಲ್ಲಿ ಹಾರರ್ ಸಿನಿಮಾ ನೋಡಿದ್ದ ಜನರು ಮಾನಸಿಕವಾಗಿ ಹೆಚ್ಚು ಗಟ್ಟಿಯಾಗಿದ್ರೂ ಅಂತ ಡ್ಯಾನಿಶ್ ವಿಶ್ವವಿದ್ಯಾಲಯದ ಅಧ್ಯಯನ ಹೇಳಿದೆ.
ಭಯದ ಮಧ್ಯೆಯೂ ಜನರು ಸಿನಿಮಾ ಯಾಕೆ ನೋಡ್ತಾರೆ?
ಹಾರರ್ ಸಿನಿಮಾ ನೋಡುವಾಗ ಅಲ್ಲಿ ಬರ್ತಿರೋದು ಸತ್ಯವಲ್ಲ ಎಂಬುದು ಮೆದುಳಿಗೆ ಗೊತ್ತಿರುತ್ತದೆ. ಆದ್ರೆ ದೇಹ ನಿಜವೆಂದು ನಂಬಿ ಪ್ರತಿಕ್ರಿಯೆ ನೀಡ್ತಿರುತ್ತದೆ. ಇದ್ರಿಂದ ಮೆದುಳಿನಲ್ಲಿ ಅಡ್ರಿನಾಲಿನ್ ಮತ್ತು ಡೋಪಮೈನ್ನಂತಹ ಹಾರ್ಮೋನು ಬಿಡುಗಡೆಯಾಗುತ್ತವೆ. ಇದು ಭಯದ ಜೊತೆಗೆ ಉತ್ಸಾಹವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಜನರು ಭಯದ ನಡುವೆಯೂ ಸಿನಿಮಾ ನೋಡ್ತಾರೆ.
ಬಲಗೊಳ್ಳುವ ಇಮ್ಯೂನಿಟಿ
ಕೆಲವು ಸಂಶೋಧನೆಗಳ ಪ್ರಕಾರ, ಸೀಮಿತ ಪ್ರಮಾಣದ ಭಯ, ದೇಹಕ್ಕೆ ಒತ್ತಡ ನಿಭಾಯಿಸಲು ಕಲಿಸುತ್ತದೆ. ಹಾರರ್ ಚಲನಚಿತ್ರ ಕೊನೆಗೊಂಡಾಗ, ದೇಹವು ವಿಶ್ರಾಂತಿ ಮೋಡ್ಗೆ ಹೋಗುತ್ತದೆ. ಇದು ಇಮ್ಯೂನ್ ಸಿಸ್ಟಂ ಸಕ್ರಿಯಗೊಳಿಸಲು ಸಹಕಾರಿ. ಸ್ವಲ್ಪ ಭಯ ದೇಹವನ್ನು ಸ್ಟ್ರಾಂಗ್ ಮಾಡುತ್ತದೆ.
ಮೆದುಳಿಗೆ ಟ್ರೈನಿಂಗ್
ಮೆದುಳು ಭಯದಿಂದ ಕಲಿಯುತ್ತದೆ. ಭಯಾನಕ ಸಿನಿಮಾಗಳನ್ನು ನೋಡೋದ್ರಿಂದ ಮೆದುಳು ಅಪಾಯವನ್ನು ಎದುರಿಸಲು ತರಬೇತಿ ನೀಡುತ್ತದೆ. ಅಂತಹ ಜನರು ನಿಜ ಜೀವನದಲ್ಲಿ ಕಷ್ಟಕರ ಸಂದರ್ಭಗಳಲ್ಲಿ ಸುಲಭವಾಗಿ ಭಯಪಡುವುದಿಲ್ಲ. ಅವರ ಮೆದುಳು ಈಗಾಗಲೇ ಭಯವನ್ನು ನಿಭಾಯಿಸಲು ತರಬೇತಿಪಡೆದಿರುತ್ತದೆ.
ಸುಧಾರಿಸುವ ಸಂಬಂಧ
ಭಯದ ಅನುಭವವನ್ನು ಹಂಚಿಕೊಳ್ಳುವಾಗ ಸಂಬಂಧಗಳು ಬಲಗೊಳ್ಳುತ್ತವೆ. ಇದು ಜನರ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ದಂಪತಿ ಅಥವಾ ಸ್ನೇಹಿತರು ಹೆಚ್ಚಾಗಿ ಹಾರರ್ ಸಿನಿಮಾಗಳನ್ನು ಒಟ್ಟಿಗೆ ನೋಡಿ ಆನಂದಿಸ್ತಾರೆ.
ನಿದ್ರೆ ಮೇಲೆ ಪರಿಣಾಮ
ಅಧ್ಯಯನವೊಂದರ ಪ್ರಕಾರ, ನಿದ್ರೆಯ ಮೇಲೂ ಹಾರರ್ ಸಿನಿಮಾ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಹಾರರ್ ಸಿನಿಮಾ ನೋಡಿದ್ಮೇಲೆ ಬೇಗ ಮನುಷ್ಯ ನಿದ್ರೆಗೆ ಜಾರುತ್ತಾನೆ. ಸಿನಿಮಾ ನೋಡುವಾಗ ಮೆದುಳು ಹೆಚ್ಚು ದಣಿದಿರುತ್ತದೆ. ಆದ್ರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ.
ಎಚ್ಚರಿಕೆ ಅಗತ್ಯ
ಹಾರರ್ ಸಿನಿಮಾಗಳು ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಈಗಾಗಲೇ ಆತಂಕ, ಪ್ಯಾನಿಕ್ ಅಟ್ಯಾಕ್ ಅಥವಾ ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅತಿಯಾದ ಹಾರರ್ ಸಿನಿಮಾಗಳನ್ನು ನೋಡುವುದು ಹಾನಿಕಾರಕ. ಇದು ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

