Asianet Suvarna News Asianet Suvarna News

ಇರುಳು ಕಂಡ ಬಾವಿಗೆ ಹಗಲು ಬೀಳುವ ಜೀವನ ಶೈಲಿಯ ಕಾಣಿಕೆ ಮಧುಮೇಹ

ಮಧುಮೇಹದ ಬಗ್ಗೆ ಎಲ್ಲವೂ ಎಲ್ಲ ವಿದ್ಯಾವಂತರಿಗೆ ಗೊತ್ತು. ಆದರೂ ಹೆಚ್ಚಿನ ವಿದ್ಯಾವಂತರೇ ಇದಕ್ಕೆ ತುತ್ತಾಗುತ್ತಿರುವುದು ಹೇಗೆ?

Lifestyle Causing Diabetes

ಸಂಘ ಜೀವಿಗಳಾದ ಮಾನವರು ಉತ್ತಮ ಆಹಾರ ಆರೋಗ್ಯದ ಕಡೆ ಗಮನ ನೀಡದೆ ಮತ್ತು ಅನುಕರಣ ಜೀವನ ಶೈಲಿಯಿಂದಾಗಿ ಇರಳು ಕಂಡ ಬಾವಿಗೆ ಹಗಲು ಬೀಳುವಂತಾಗಿದೆ. ನಮ್ಮ ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಭವಿಷ್ಯದಲ್ಲಿ ಅನೇಕ ರೋಗಗಳು ನಮ್ಮನ್ನು ಗುರಿಯನ್ನಾಗಿಸಿಕೊಂಡು ಬಂದಪ್ಪಳಿಸುತ್ತಿವೆ ಎನ್ನುವುದರ ಅರಿವಿದ್ದರೂ ಮತ್ತೆ ಅದನ್ನೇ ಪುನರಾವರ್ತಿಸುತ್ತಿದ್ದೇವೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಅವುಗಳ ದುಷ್ಪರಿಣಾಮ ನಮ್ಮ ದೇಹದ ಮೇಲೆ ಬೀರಲಾರಂಭಿಸಿದಾಗ ಚಿಕಿತ್ಸೆಗಾಗಿ ಓಡಾಡುತ್ತೇವೆ. ಅಂಥ ರೋಗಗಳಲ್ಲಿ ಮಧುಮೇಹವೂ ಒಂದು ಎನ್ನುವುದು ಕೇವಲ ಈ ಲೇಖನದಿಂದ ಮಾತ್ರ ತಿಳಿಯತಕ್ಕ ವಿಷಯವಲ್ಲ! ಮಧುಮೇಹದ ಬಗ್ಗೆ ಎಲ್ಲವೂ ಎಲ್ಲ ವಿದ್ಯಾವಂತರಿಗೆ ಗೊತ್ತು. ಆದರೂ ಹೆಚ್ಚಿನ ವಿದ್ಯಾವಂತರೇ ಇದಕ್ಕೆ ತುತ್ತಾಗುತ್ತಿರುವುದು ಹೇಗೆ?

ಸಮಾಜದ ಸ್ವಾಸ್ಥ್ಯ ಕಾರಣವಾಗಬೇಕಾಗಿದ್ದ ನಮ್ಮ ಜೀವನ ಶೈಲಿ ಹಂತಹಂತವಾಗಿ ಅನಾರೋಗ್ಯ ಸಮಾಜವನ್ನು ನಿರ್ಮಾಣ ಮಾಡುತ್ತಿದೆ, ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಬೇಕಾದ ಆಹಾರವೇ ರೋಗಗಳಿಗೆ ಕಾರಣವಾಗುತ್ತಿವೆ ಎನ್ನುವುದು ಮರೆಮಾಚಲ್ಪಟ್ಟಿಲ್ಲ. ಮಾರುಕಟ್ಟೆಗೆ ನಿತ್ಯ ಬರುವ ಒಂದಿಲ್ಲೊಂದು ವಸ್ತುಗಳು ನಮ್ಮ ದೈಹಿಕ ಶ್ರಮವನ್ನು ಕಡಿಮೆ ಮಾಡುತ್ತಿವೆ. ಆದರೂ ಅದರಿಂದ ನಮ್ಮ ದೇಹ ಕ್ರಿಯಾಶೀಲತೆಯಿಂದ ವಂಚಿತವಾಗುತ್ತಿದೆ, ಪರಿಣಾಮ ಮಧುಮೇಹದಂತ ರೋಗಗಳು ನಮ್ಮನ್ನು ಅರಿಸಿಕೊಂಡು ಬರುತ್ತಿವೆ. ಇದರ ಅರಿವು ಪ್ರತಿಯೊಬ್ಬರಿಗೂ ಇದ್ದಾಗ್ಯೂ ಅದನ್ನೇ ಅಪ್ಪೊಪ್ಪಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸಕ್ಕಿಂತಲೂ ಹೆಚ್ಚಿನದು.

ನಾವು ಮಾಡುತ್ತಿರುವ ಮಾನಸಿಕ ಒತ್ತಡದ ಕೆಲಸ, ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿ, ಸಮರ್ಪಕವಲ್ಲದ ಊಟ ಇವೇ ಮುಖ್ಯವಾಗಿ ಮಧುಮೇಹಕ್ಕೆ ಮುಖ್ಯಕಾರಣವಾಗಿವೆ. ಮೇಲಾಗಿ ಈ ಕಾರಣಗಳು ಒಂದಕ್ಕೊಂದು ಪೂರಕವಾಗಿದ್ದು ಒಂದರಿಂದ ಇನ್ನೊಂದು ಜನ್ಮತಾಳುತ್ತವೆ. ನಗರ ಪ್ರದೇಶದಲ್ಲಿನ ಕೆಲಸಗಳು ಮಾನಸಿಕ ಒತ್ತಡದಿಂದ ಕೂಡಿವೆ. ಶಿಫ್ಟ್ ಲೆಕ್ಕಾಚಾರದಲ್ಲಿ ಕೆಲಸ ನಿರ್ವಹಿಸಬೇಕಾಗಿರುವುದರಿಂದ ಹಗಲು ರಾತ್ರಿ ಕೆಲಸ ಮಾಡಬೇಕಾಗಿದೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾಗಿ ಖಾಯಿಲೆಗಳು ಬರಬಹುದು. ಅದು ಮಧುಮೇಹವೂ ಆಗಿರಬಹುದು.

ದೇಶದ ಸಂಪತ್ತಾದ ಯುವ ಜನಾಂಗವೂ ಸೇರಿದಂತೆ ಬಹುತೇಕ ನೌಕರ ವರ್ಗ ಕೆಲಸದ ಒತ್ತಡಕ್ಕೆ ಸಿಲುಕಿದೆ. ಈಗಾಗಲೇ ದೇಶದ ಹುಟ್ಟಿದ ಮಗುವಿನಿಂದ ಯುವ ಜನಾಂಗದ ಆದಿಯಾಗಿ ಬಹುತೇಕ ಜನರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಮತ್ತು ಯುವ ಜನಾಂಗದಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ರೋಗ ಪೀಡಿತ ದೇಶದ ನಿರ್ಮಾಣ ಮುನ್ಸೂಚನೆ. ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅನಿವಾರ್ಯ. ಆದರೆ, ಅದಕ್ಕೊಂದು ಮಿತಿ ಅನಿವಾರ್ಯ. ಅತಿಯಾದರೆ ಕಷ್ಟವಾಗುತ್ತದೆ. ಪ್ರತಿಯೊಬ್ಬರು ದುಡಿಯಲೇ ಬೇಕು. ಇಂದಿನ ನಮ್ಮ ದುಡಿಮೆ ಭವಿಷ್ಯದ ಆರೋಗ್ಯಸಂಪತ್ತಿಗೆ ಯಾವುದೇ ತೊಂದರೆ ಆಗದಂತಿರಲಿ.

ನಗರಗಳಲ್ಲಿ ಯುವ ಜನಾಂಗ ಸೇರಿದಂತೆ ನೌಕರ ವರ್ಗ ತಮ್ಮ ಆಹಾರ ಕ್ರಮವನ್ನೇ ಬದಲಾಯಿಸಿಕೊಂಡಿರುವುದು ಮಧುಮೇಹದಂತ ಖಾಯಿಲೆಗಳಿಗೆ ಕಾರಣವಾಗಿರುತ್ತದೆ. ಕೆಲಸ ಮತ್ತು ಓಡಾಟಕ್ಕೆ ಸಮಯ ಸಾಕಾಗದಿರುವುದು ಊಟದ ಮೇಲೆ ಬೀರುತ್ತಿರುವ ಪರಿಣಾಮವಾಗಿ ರಾಗಿ ಮುದ್ದೆ, ಜೋಳದ ರೊಟ್ಟಿಯಂತ ಸತ್ವಯುವ ಆಹಾರ ಅಡುಗೆಮನೆಯಿಂದ ಹೊರಬಿದ್ದಿವೆ. ಪಾಲಿಶ್ ಮಾಡಿದ ಅಕ್ಕಿ, ನೂಡಲ್ಸ್, ಜಂಕ್‌ಫುಡ್, ಫಾಸ್ಟ್ ಫುಡ್, ಇನ್‌ಸ್ಟಂಟ್ ಫುಡ್‌ಗಳು ಅವುಗಳ ಸ್ಥಾನವನ್ನು ಆವರಿಸಿಕೊಂಡಿವೆ.

ಇಂಥ ರೆಡಿ ಟು ಈಟ್ ಅಥವಾ ಎರಡೇ ನಿಮಿಷದಲ್ಲಿ ತಯ್ಯಾರಾಗುವ ಆಹಾರಗಳಲ್ಲಿ ಕಾರ್ಬೋಹೈಡ್ರೆಟ್ ಅತೀಹೆಚ್ಚಿರುತ್ತದೆ. ದೇಹದಲ್ಲಿ ಕಾರ್ಬೋಹೈಡ್ರೆಟ್ ಪ್ರಮಾಣ ಹೆಚ್ಚಾದರೆ ಮಧುಮೇಹಕ್ಕೆ ಕಾರಣವಾಗುತ್ತದೆ. ಇಂಥ ಅಸಮರ್ಪಕ ಆಹಾರ ಪದ್ಧತಿ ಇಂದು ನಮ್ಮ ಜೀವನದ ಭಾಗವಾಗುವುದನ್ನ ತಡೆಯಬೇಕಾಗಿದೆ. ಸಣ್ಣ ಸಣ್ಣ ಕೆಲಸಕ್ಕೂ ಬೈಕ್‌ಗಳನ್ನು ಅಲಂಬಿಸುವುದು, ಅಥವಾ ಇನ್ನೊಬ್ಬರನ್ನು ಅವಲಂಬಿಸುವುದರಿಂದ ದೇಹ ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದೆ. ನಡೆಯಲು ಸದೃಢವಾದ ಕಾಲುಗಳು ಕ್ಲಚ್,ಗೇರ್, ಬ್ರೇಕ್‌ಗೆ ಸಿಮೀತವಾಗಿವೆ. ಅಸಮರ್ಪಕ ಆಹಾರ ವಿಧಾನ ಚಟುವಟಿಕಿಗಳಿಂದ ದೂರವಾದ ದೇಹದಲ್ಲಿ ಜಾಡ್ಯ ಆವರಿಸಿ ಮಧುಮೇಹದಂತ ರೋಗಗಳಿಗೆ ಕಾರಣವಾಗುತ್ತದೆ.

ಗ್ರಾಮೀಣ ಪ್ರದೇಶದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರಲ್ಲಿ ಮಧುಮೇಹದಂತ ಖಾಯಿಲೆಗಳು ಕಾಣಸಿಗುವುದಿಲ್ಲ. ಕಾರಣ, ಅವರು ಸೇವಿಸುವ ಆಹಾರ ಸಮೃದ್ಧವಾಗಿರುತ್ತದೆ ಮತ್ತು ಮನೆಯಲ್ಲೆ ತಯಾರಾಗುತ್ತದೆ. ಜಮೀನನಲ್ಲಿ ದುಡಿಯುವುದರಿಂದ ದೈಹಿಕವಾಗಿ ಶ್ರಮವಹಿಸುತ್ತಾರೆ. ನಿತ್ಯ ಕಿಲೋ ಮಿಟರ್ ನಡೆಯುತ್ತಾರೆ. ಅವರು ಮಾಡುವ ಕೆಲಸದಲ್ಲಿ ಮಾನಸಿಕ ಒತ್ತಡಕ್ಕಿಂತ ದೈಹಿಕ ಒತ್ತಡ ಹೆಚ್ಚಾಗಿರುತ್ತದೆ ಮತ್ತು ಆ ದೈಹಿಕ ಒತ್ತಡ ಸ್ವಲ್ಪ ಸಮಯದ ವಿಶ್ರಾಂತಿ ನಂತರ ಮಾಯವಾಗುತ್ತದೆ.

ಹೆಣ್ಣಾಗಲಿ, ಗಂಡಾಗಲಿ ಆರ್ಥಿಕ ಸ್ವಾವಲಂಬಿಗಳಾಗಿ ಬದುಕಬೇಕಾದರೆ ಹಣದ ಅವಶ್ಯಕತೆ ಇದೆ. ಹಣ ಬೇಕಾದರೆ ದುಡಿಯಬೇಕು. ಹೀಗೆ ದುಡಿಯುವ ಅಬ್ಬರದಲ್ಲಿ ನಮ್ಮ ಮುಂದಿನ ಆರೋಗ್ಯವನ್ನು ಕಳೆದುಕೊಳ್ಳುವುದು ಮೂರ್ಖತನವಾದೀತು. ಇದು ಕೇವಲ ನಮ್ಮ ಆರೋಗ್ಯದ ಪ್ರಶ್ನೆಯಲ್ಲ. ದೇಶದಲ್ಲಿ ಎಲ್ಲರೂ ರೋಗಿಗಳಾದರೆ, ಇಡೀ ದೇಶವೇ ರೋಗಪೀಡತವಾಗುವುರಿಂದ ಯಾವುದೇ ರಂಗದಲ್ಲೂ ಅಭಿವೃದ್ಧಿ ಕಾಣಲಾಗದು.

Follow Us:
Download App:
  • android
  • ios