ಲೋಕಸಭಾ ಚುನಾವಣೆ 2024: ಸೊಲ್ಲಾಪುರ: ಬಿಜೆಪಿ ಯುವ ಉಪಾಧ್ಯಕ್ಷ v/s ಶಿಂಧೆ ಪುತ್ರಿ
ಬಿಜೆಪಿಯಿಂದ ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷ ರಾಮ್ ಸಾತ್ಪುಥೆಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್‌ನಲ್ಲಿ ಈ ಬಾರಿ ಸುಶೀಲ್ ಕುಮಾರ್ ಶಿಂಧೆ ತಮ್ಮ ಪುತ್ರಿ ಪ್ರಣೀತಿಯ ಬಳಿ ಉಮೇದುವಾರಿಕೆ ಹಾಕಿಸಿದ್ದಾರೆ. ಈ ನಡುವೆ ಬಿಜೆಪಿಯನ್ನು ಸೋಲಿಸಬೇಕೆಂಬ ದೃಷ್ಟಿಯಿಂದ ವಿಬಿಎ ಮತ್ತು ಎಂಐಎಂ ಪಕ್ಷದ ಅಭ್ಯರ್ಥಿಗಳು ಕಡೇ ದಿನ ನಾಮಪತ್ರ ಹಿಂಪಡೆದಿರುವುದು ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.
ಸೊಲ್ಲಾಪುರ(ಏ.25): ಯುಪಿಎ ಅವಧಿಯಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಶೀಲ್ ಕುಮಾರ್ ಶಿಂಧೆ ಅವರ ತವರು ಕ್ಷೇತ್ರ ಸೊಲ್ಲಾಪುರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯಿಂದ ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷ ರಾಮ್ ಸಾತ್ಪುಥೆಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್‌ನಲ್ಲಿ ಈ ಬಾರಿ ಸುಶೀಲ್ ಕುಮಾರ್ ಶಿಂಧೆ ತಮ್ಮ ಪುತ್ರಿ ಪ್ರಣೀತಿಯ ಬಳಿ ಉಮೇದುವಾರಿಕೆ ಹಾಕಿಸಿದ್ದಾರೆ. ಈ ನಡುವೆ ಬಿಜೆಪಿಯನ್ನು ಸೋಲಿಸಬೇಕೆಂಬ ದೃಷ್ಟಿಯಿಂದ ವಿಬಿಎ ಮತ್ತು ಎಂಐಎಂ ಪಕ್ಷದ ಅಭ್ಯರ್ಥಿಗಳು ಕಡೇ ದಿನ ನಾಮಪತ್ರ ಹಿಂಪಡೆದಿರುವುದು ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.
ಹೇಗಿದೆ ಬಿಜೆಪಿ ಅಲೆ?
ಬಿಜೆಪಿಯು 2014ರಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದರೂ ತನ್ನ ಹಾಲಿ ಸಂಸದರನ್ನು ಬದಲಾಯಿಸುವ ಜಾಯಮಾನವನ್ನು 2024ರಲ್ಲೂ ಮುಂದುವರೆಸಿದೆ. ಆದರೂ ಈ ಬಾರಿ ಬಿಜೆಪಿಯು ಮಾಲ್ಶಿರಾಸ್ ಕ್ಷೇತ್ರದಲ್ಲಿ ಶಾಸಕರಾಗಿರುವ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಉಪಾಧ್ಯಕ್ಷರಾಗಿರುವ ಪ್ರಭಾವಿ ನಾಯಕ ರಾಂ ಸಾತ್ಪುಥೆಯವರಿಗೆ ಟಿಕೆಟ್ ನೀಡಿದೆ. ಅವರು ಸ್ಥಳೀಯವಾಗಿ ಪ್ರಭಾವವನ್ನು ಹೊಂದಿದ್ದು, ಶೇ.60ರಷ್ಟು ಯುವ ಮತದಾರರನ್ನು ನವನವೀನ ಮಾದರಿಗಳಲ್ಲಿ ಸೆಳೆಯುತ್ತಿದ್ದಾರೆ. ಇದರ ಜೊತೆಗೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿಯೇ ಬಂದು ಇತ್ತೀಚೆಗೆ ರ್‍ಯಾಲಿ ನಡೆಸಿರುವುದು ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಆದರೆ ಕಡೇ ಕ್ಷಣದಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಅಖಿಲ ಭಾರತ ಮುಸ್ಲಿಂ ಲೀಗ್ ಮತ್ತು ವಂಚಿತ್ ಬಹುಜನ್ ಅಘಾಡಿಯ ಮೈತ್ರಿ ಅಭ್ಯರ್ಥಿಗಳು ಕಡೇ ದಿನ ನಾಮಪತ್ರವನ್ನು ಹಿಂಪಡೆದಿರುವುದು ಇವರಿಗೆ ಹಿನ್ನಡೆ ತಂದಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ಕಳೆದ ನಾಲ್ಕು ಸುತ್ತಿನಲ್ಲಿ ಎರಡು ಬಾರಿ ಸತತವಾಗಿ ಗೆದ್ದ ಪಕ್ಷವು ಮೂರನೇ ಬಾರಿ ಸೋಲು ಕಾಣುವ ಇತಿಹಾಸ ಹೊಂದಿದೆ. ಹೀಗಾಗಿ ಕಡೇ ಕ್ಷಣದಲ್ಲಿ ಉಂಟಾಗಿರುವ ರಾಜಕೀಯ ಸ್ಥಿತ್ಯಂತರವನ್ನು ಮೀರಿ ಗೆಲುವು ಸಾಧಿಸಲು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರು ತಮ್ಮ ರಾಜಕೀಯ ಚಾಕಚಕ್ಯತೆಯನ್ನು ಓರೆಗೆ ಹಚ್ಚಬೇಕಾದ ಅಗತ್ಯವಿದೆ.
ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್ ಅಜೆಂಡಾ ಬಟಾಬಯಲು: ಅಮಿತ್ ಶಾ
ಶಿಂಧೆ ಬದಲು ಪುತ್ರಿ ಕಣಕ್ಕೆ:
ಕಾಂಗ್ರೆಸ್‌ನಲ್ಲಿ ಬಹಳ ದೀರ್ಘಕಾಲದ ನಂತರ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದು ತಮ್ಮ ಪುತ್ರಿಯನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ತಮ್ಮ ವಯೋಸಹಜ ಕಾರಣ ಒಂದೆಡೆಯಿದ್ದರೆ ಮತ್ತೊಂದೆಡೆ ಸತತ ಎರಡು ಬಾರಿ ಸೋಲುಂಡಿರುವ ಹತಾಷೆಯೂ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲೇಬೇಕೆಂದು ಜಿದ್ದಿಗೆ ಬಿದ್ದವರಂತೆ ತಮ್ಮ ಕ್ಷೇತ್ರವನ್ನು ಪುತ್ರಿಗೆ ಬಿಟ್ಟುಕೊಟ್ಟು ಕ್ಷೇತ್ರದಲ್ಲಿ ಅಧಿಕವಾಗಿರುವ ಯುವ ಸಮುದಾಯವನ್ನು ಸೆಳೆಯಲು ಯೋಜನೆ ರೂಪಿಸಿದ್ದಾರೆ. ಶಿಂಧೆ ಪುತ್ರಿ ಪ್ರಣೀತಿ ಅವರೂ ಸಹ ಸೊಲ್ಲಾಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿಯಿಂದ ಶಾಸಕರಾಗಿದ್ದು ಜನಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ಮುಂಚಿನಿಂದಲೂ ತಂದೆಯ ಪರವಾಗಿ ಪ್ರಚಾರ ನಡೆಸಿ ಜಿಲ್ಲಾದ್ಯಂತ ಜನಸಂಪರ್ಕವನ್ನು ಇಟ್ಟುಕೊಂಡಿರುವುದು ಅವರಿಗೆ ಚುನಾವಣೆಯಲ್ಲಿ ನೆರವು ನೀಡುವ ಸಾಧ್ಯತೆಯಿದೆ. ಕಳೆದೆರಡು ಬಾರಿಯಿಂದ ಸೋತಿರುವ ತವರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಶಿಂಧೆಗೆ ತಮ್ಮ ಪುತ್ರಿ ನೆರವಾಗಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.
ಸ್ಪರ್ಧೆ ಹೇಗೆ?
ನಾಮಪತ್ರ ಹಿಂಪಡೆಯುವ ಕಡೆಯ ದಿನ ಅಚ್ಚರಿಯ ರೀತಿಯಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್ ಅಭ್ಯರ್ಥಿ ಹಾಗೂ ವಂಚಿತ ಬಹುಜನ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಹುಲ್ ಗಾಯಕ್‌ವಾಡ್ ಉಮೇದುವಾರಿಕೆ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಕಳೆದ ಬಾರಿ ಎರಡೂ ಪಕ್ಷ ಒಮ್ಮತದಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಬರೋಬ್ಬರಿ 1.7 ಲಕ್ಷ ಮತಗಳನ್ನು ಪಡೆದಿದ್ದು, ಗೆಲುವಿನ ಅಂತರಕ್ಕಿಂತ ಇವರು ಪಡೆದ ಮತಗಳೇ ಹೆಚ್ಚಿದ್ದವು. ಮೇಲಾಗಿ ಇವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಕ್ಕಿಂತ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಮತ ವಿಭಜನೆಯಾಗಬಾರದು ಎಂಬ ಉದ್ದೇಶದಿಂದ ಸ್ಪರ್ಧೆ ಮಾಡದಿರಲು ತೀರ್ಮಾನ ಮಾಡಿರುವುದಾಗಿ ಹೇಳಿಕೆ ನೀಡಿರುವುದು ಮೇ.7ರಂದು ನಡೆಯುವ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಲಿದೆ ಎಂಬುದನ್ನು ತಿಳಿಯಲು ಜೂ.4ರವರೆಗೂ ಕಾಯಬೇಕಿದೆ.
ಜಾತಿ, ಆರ್ಥಿಕ ಗಣತಿ ತಡೆಯಲು ಯಾವ ಶಕ್ತಿಗಳಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಸೊಲ್ಲಾಪುರ ಕ್ಷೇತ್ರವು ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಪಂಢರಾಪುರವನ್ನು ಒಳಗೊಂಡಿದ್ದು ಪಂಢರೀನಾಥನ ಕೃಪೆ ಯಾರಿಗೆ ಮೀಸಲಾಗಲಿದೆ ಎಂಬುದೇ ಕುತೂಹಲವಾಗಿದೆ.
ಸ್ಟಾರ್ ಕ್ಷೇತ್ರ: ಸೊಲ್ಲಾಪುರ (ಮೀಸಲು)
ರಾಜ್ಯ: ಮಹಾರಾಷ್ಟ್ರ
ವಿಧಾನಸಭಾ ಕ್ಷೇತ್ರಗಳು: 6
ಮತದಾನದ ದಿನ: ಮೇ.7
ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ- ರಾಮ್ ಸಾತ್ಪುಥೆ
ಕಾಂಗ್ರೆಸ್- ಪ್ರಣೀತಿ ಶಿಂಧೆ
ಬಿಎಸ್‌ಪಿ- ಬಬ್ಲು ಸಿದ್ರಾಮ್
2019ರ ಫಲಿತಾಂಶ:
ಗೆಲುವು: ಬಿಜೆಪಿ- ಡಾ. ಜೈಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ
ಸೋಲು: ಕಾಂಗ್ರೆಸ್- ಸುಶೀಲ್ ಕುಮಾರ್ ಶಿಂಧೆ