ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆದರಿಕೆ ಕೇಸ್; ಕೋರ್ಟ್ ಮೊರೆ ಹೋದ ಡಿಕೆ ಶಿವಕುಮಾರ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ತಮ್ಮ ವಿರುದ್ಧ ನಗರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Lok sabha polls 2024 DK Shivakumar threatens voters case in highcourtk rav

 ಬೆಂಗಳೂರು (ಏ.25): ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ತಮ್ಮ ವಿರುದ್ಧ ನಗರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಏ.19ರಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೊರಡಿಸಿದ ಆದೇಶ ಮತ್ತು ಅದನ್ನು ಆಧರಿಸಿ ಆರ್‌ಎಂಸಿ ಯಾರ್ಡ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಡಿ.ಕೆ. ಶಿವಕುಮಾರ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ ಬಿಜೆಪಿ ತಿರಸ್ಕರಿಸಿ: ದೇವನೂರು ಮಹದೇವ

ಅರ್ಜಿಯಲ್ಲಿ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಚಾರಿ ವಿಚಕ್ಷಣಾ ತಂಡದ ಮುಖ್ಯಸ್ಥ ಬಿ.ಕೆ. ದಿನೇಶ್‌ ಕುಮಾರ್‌ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬಂದಿದೆ.

ಏನಿದು ಪ್ರಕರಣ?:ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಡಿ.ಕೆ. ಶಿವಕುಮಾರ್‌, ನಾನು ಬಿಸಿನೆಸ್‌ ಡೀಲ್‌ಗೆ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ಗೆ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂಬುದು ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗೆ (ಡಿ.ಕೆ. ಸುರೇಶ್‌ಗೆ ) ಮತ ನೀಡಿದರೆ ನಿಮ್ಮ ಬೇಡಿಕೆಯನ್ನು ಎರಡು ಮೂರು ತಿಂಗಳಲ್ಲಿ ಈಡೇರಿಸುತ್ತೇನೆ. ಇಲ್ಲವಾದರೆ ನನ್ನನ್ನು ಏನೂ ಕೇಳಬೇಡಿ ಎಂದು ಹೇಳಿಕೆ ನೀಡಿದ್ದರು.ಆ ಕುರಿತ ವಿಡಿಯೋ ಸಹ ಬಹಿರಂಗವಾದ ನಂತರ ದಿನೇಶ್‌ ಕುಮಾರ್‌ ಅವರು ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಏ.19ರಂದು ಖಾಸಗಿ ದೂರು ದಾಖಲಿಸಿದ್ದರು.

ನ್ಯಾಯಾಲಯದ ಆದೇಶದ ಮೇರೆಗೆ ಆರ್‌ಎಂಸಿ ಯಾರ್ಡ್‌ ಠಾಣಾ ಪೊಲೀಸರು, ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು.ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಡಿ.ಕೆ. ಶಿವಕುಮಾರ್‌, ಕಾವೇರಿ ನೀರು ಸರಬರಾಜು ಮತ್ತು ಸಿಎ ನಿವೇಶನ ಮಂಜೂರಾತಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಕೇಳಿದ ಪ್ರಶ್ನೆಗೆ ತಾನು ಉತ್ತರಿಸಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿದರೆ, ಅವರು ನಿಮ್ಮ ಬೇಡಿಕೆ ಪರಿಗಣಿಸುತ್ತಾರೆ. ನಿಮ್ಮ ಬೇಡಿಕೆ ಈಡೇರಿಕೆಗೆ ಸಂಸದರ ನಿಧಿಯಿಂದ ಅನುದಾನ ಕೊಡಿಸಿ, ಕೆಲಸ ಕಾರ್ಯಗಳು ಮಾಡಿಕೊಡುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದು ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.

 

ಡಿ.ಕೆ.ಸುರೇಶ್‌ಗೆ ಮತ ಹಾಕದಿದ್ರೆ ನೀರು ಕೊಡಲ್ಲ: ಡಿ.ಕೆ.ಶಿವಕುಮಾರ್‌

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ/ ಮಾಲೀಕರಿಗೆ ತಾನು ಬೆದರಿಕೆ ಹಾಕಿಲ್ಲ ಹಾಗೂ ಆಮಿಷವೊಡ್ಡಿಲ್ಲ. ಕೇವಲ ತನ್ನನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಲಾಗಿದೆ. ಅದನ್ನು ಪರಿಶೀಲಿಸದೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನೋಟಿಸ್‌ ನೀಡಿ ವಿವರಣೆ ಕೇಳಿದ್ದರು. ತಾನು ವಿವರಣೆ ನೀಡುವ ಮುನ್ನವೇ ದೂರು ಸಲ್ಲಿಕೆಯಾಗಿ, ಎಫ್‌ಐಆರ್‌ ದಾಖಲಿಸಲಾಗಿದೆ. ಆದ್ದರಿಂದ ಎಫ್‌ಐಆರ್‌ ಹಾಗೂ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

Latest Videos
Follow Us:
Download App:
  • android
  • ios