ಜೀವನದ ಮೈಲಿಗಲ್ಲು ಎನಿಸುವಂಥ ಸಂದರ್ಭಗಳನ್ನು ಸಾಧಿಸುವುದು ಪ್ರತಿಯೊಬ್ಬರ ಕನಸು. ಮನೆ ಕಟ್ಟಿಸಿದ ದಿನ ಅಥವಾ ಮದುವೆಯಾದ ಬಳಿಕ ಬದುಕಿನಲ್ಲಿ ಅತಿ ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ ಇಂಥ ಸಾಧನೆಗಳು ಈಡೇರಿದ ಬಳಿಕ, ಖುಷಿಗಿಂತ ಹೆಚ್ಚು ಒತ್ತಡ, ಚಿಂತೆಗಳೇ ಕಾಡುತ್ತವೆ ಎಂದು ಹೊಸ ಅಧ್ಯಯನವೊಂದು ಸಾಬೀತು ಪಡಿಸಿದೆ. 

ಹೌದು, ಭುಪಾ ಹೆಲ್ತ್ ಕ್ಲಿನಿಕ್ ನಡೆಸಿದ ಅಧ್ಯಯನ ವರದಿಯಂತೆ, ಸಂಶೋಧನೆಯಲ್ಲಿ ಪಾಲ್ಗೊಂಡ ಶೇ.86ರಷ್ಟು ಮಂದಿ ಜೀವನದ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಮಾಜ ಸಿಕ್ಕಾಪಟ್ಟೆ ಒತ್ತಡ  ಹಾಕುತ್ತದೆ. ಇದರಿಂದ ಆ ಖುಷಿಯನ್ನು ಸರಿಯಾಗಿ ಅನುಭವಿಸಲೇ ಸಾಧ್ಯವಾಗುವುದಿಲ್ಲ ಎಂದಿದ್ದಾರೆ. 

ತುಂಟ ಮಕ್ಕಳನ್ನು ಬೈಯದೇ ಸಂಭಾಳಿಸಬಹುದಾ!

ಈಗಲಂತೂ ಸೋಷ್ಯಲ್ ಮೀಡಿಯಾದಿಂದಾಗಿ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚು. ಇರಲೊಂದು ಸ್ವಂತ ಸೂರು ಸಾಕೆಂಬುದು ನಮ್ಮ ಬಯಕೆಯಾಗಿದ್ದರೂ, ಆ ಮನೆ ಹೀಗೇ ಇರಬೇಕು, ಇಷ್ಟೇ ದೊಡ್ಡ ಇರಬೇಕು ಇಲ್ಲದಿದ್ದಲ್ಲಿ ಬೆಲೆಯಿಲ್ಲ ಎಂದು ಸೋಷ್ಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳನ್ನು ಗಮನಿಸುವಾಗ ಎನಿಸುತ್ತದೆ. ಹೀಗಾಗಿ, ಸ್ವಂತದ ಮನೆ ಕಟ್ಟಿಸಿದರೂ ಅದರ ಖುಷಿ ನಿಲುಕುವುದೇ ಇಲ್ಲ ಎಂದು ಶೇ.56ರಷ್ಟು ಜನರು ಪ್ರತಿಕ್ರಿಯಿಸಿದದ್ದಾರೆ. ಇನ್ನು ಮದುವೆ ಹಾಗೂ ಮಗುವಿನ ವಿಷಯದಲ್ಲೂ ಇದು ಹೀಗೇ ಆಗುತ್ತದೆ. ಮದುವೆ ಗ್ರ್ಯಾಂಡ್  ಆಗಿಯೇ ನಡೆಯಬೇಕು, ಪತ್ನಿ ಸುರಸುಂದರಿಯೇ ಆಗಿರಬೇಕು, ಹನಿಮೂನ್‌ಗೆ ವಿದೇಶಕ್ಕೇ ಹೋಗಬೇಕು ಎಂಬಂಥ ಒತ್ತಡಗಳು ಅನವಶ್ಯಕವಾಗಿ ಹುಟ್ಟಿಕೊಂಡು ಮಾನಸಿಕವಾಗಿ ನುಜ್ಜುಗುಜ್ಜು ಮಾಡಿಬಿಡುತ್ತವೆ ಎಂಬುದು ಸಾರಾಂಶ. 

ಅದೂ ಅಲ್ಲದೆ, ತಮ್ಮ ಸಾಧನೆಯನ್ನು ಜನರು ಸೋಷ್ಯಲ್ ಮೀಡಿಯಾಗಳಲ್ಲಿ ಇತರರ ಸಾಧನೆಯೊಂದಿಗೆ ಹೋಲಿಸಿಕೊಳ್ಳಲು ತೊಡಗುತ್ತಾರೆ. ಹೀಗಾಗಿ ಪ್ರಮೋಶನ್ ಸಿಕ್ಕರೂ, ಮಗುವಾದರೂ, ಮದುವೆಯಾದರೂ ಅಂದುಕೊಟ್ಟ ಮಟ್ಟಿನ ಸಂತೋಷ ಸಿಗುವುದೇ ಇಲ್ಲ. ನಿರೀಕ್ಷೆಗಳು ಮತ್ತಷ್ಟು ಹೆಚ್ಚಿಕೊಂಡು ಸಂತೋಷ ಪಡಬೇಕಾದ  ಸಂದರ್ಭದಲ್ಲಿ ದುಃಖ ಪಡುವಂತೆ ಆಗುತ್ತದೆ. ಪ್ರತಿ ಹತ್ತರಲ್ಲಿ ಒಬ್ಬರು ಈ ಅವಸ್ಥೆ ಪಡುತ್ತಾರೆ. ಇನ್ನು ಶೇ.13ರಷ್ಟು ಮಂದಿ ತಮ್ಮ ಸಂತಸ, ಸಾಧನೆ ಇತರರದಷ್ಟು ದೊಡ್ಡದಲ್ಲ ಎಂಬ ಕೀಳರಿಮೆಯಿಂದ ಸೋಷ್ಯಲ್ ಮೀಡಿಯಾಗಳಲ್ಲಿ ವಿಷಯವನ್ನು ಹಂಚಿಕೊಳ್ಳುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. 

ಕೊನೆಗೂ ಪ್ರೀತಿಯಲ್ಲಿ ಗೆದ್ದಿದ್ದು ನಾನಾ? ಅವನಾ?

ಹೌದಲ್ಲವೇ, ಸೋಷ್ಯಲ್ ಮೀಡಿಯಾದಿಂದಾಗಿ ನಮ್ಮ ಬದುಕು 24/7 ಹೋಲಿಕೆಯಲ್ಲೇ ಕಳೆದುಹೋಗುತ್ತದೆ. ಹೀಗಾಗಿ, ಬದುಕಿನಲ್ಲಿ ಒಳ್ಳೆಯದು ಘಟಿಸಿದಾಗಲೂ ನಮ್ಮ ಮನದಲ್ಲಿ ಮೊದಲು ಮೂಡುವ ಪ್ರಶ್ನೆ, ಇನ್ನೊಬ್ಬರಿಗಿಂತಲೂ ಒಳ್ಳೆಯದಾ ಎಂಬುದೇ ಆಗಿರುತ್ತದೆ. ಇದು ಸೌಂದರ್ಯದ ವಿಷಯದಲ್ಲೂ ಸತ್ಯ. ನಮ್ಮಲ್ಲಿ ಸೆಲೆಬ್ರಿಟಿಗಳ ತರಾ ದೇಹ, ಮೈಕಾಂತಿ ಹೊಂದುವ ಒತ್ತಡಕ್ಕೂ ಸೋಷ್ಯಲ್ ಮೀಡಿಯಾಗಳು ದೂಡುತ್ತವೆ. ಈ ನಿರಂತರ ಒತ್ತಡಗಳು ನಮ್ಮಲ್ಲಿ ಖಿನ್ನತೆಯನ್ನು ತರುತ್ತವೆ. 

ನೆಗಟಿವಿಯಿಂದ ದೂರವಾಗೋದು ಹೇಗೆ?

ಸಾಮಾಜಿಕ ಮಾಧ್ಯಮಗಳನ್ನು ಕೇವಲ ಇತರರೊಂದಿಗೆ ಸಂಪರ್ಕ ಸಾಧಿಸಲು ಅಷ್ಟೇ ಬಳಸಬೇಕು. ಉಳಿದಂತೆ ಸೋಷ್ಯಲ್ ಮೀಡಿಯಾಗಳು ಖುಷಿ ಕೊಡುವುದಕ್ಕಿಂತಾ ಕಿರಿಕಿರಿ ಮಾಡುವುದೇ ಹೆಚ್ಚು. ಜೀವನದ ಮೈಲಿಗಲ್ಲುಗಳನ್ನು ಸಾಧಿಸುವ ಮುನ್ನ ಹಾಗೂ ನಂತರದ ಘಟ್ಟಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ  ಸೋಷ್ಯಲ್ ಮೀಡಿಯಾಗಳಿಂದ ಸಾಧ್ಯವಾದಷ್ಟು ದೂರ ಉಳಿದು ಫಿಟ್‌ನೆಸ್, ಓದು, ನಿದ್ರೆ ಎಂದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನಿಸಬೇಕು. ಜನರೊಂದಿಗೆ ನೇರಾನೇರ ಮಾತುಕತೆ ನಡೆಸಬೇಕು. ಸಕಾರಾತ್ಮಕ ಚಿಂತನೆಗಳನ್ನು ಒಳಬಿಟ್ಟುಕೊಳ್ಳಬೇಕು. ಮತ್ತು ಎಲ್ಲಕ್ಕಿಂತಾ ಮುಖ್ಯವಾಗಿ ಯಾರೂ ಪರ್ಫೆಕ್ಟ್ ಅಲ್ಲವೆಂಬುದನ್ನು ನೆನಪಿಡಬೇಕು.